ಸಂಪಾದಕೀಯ: ಶಾಲೆಗಳಿಗೆ ಸೌಕರ್ಯ ಕಲ್ಪಿಸಿ

Editorial
Editorial
Published on

ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ವ್ಯವಸ್ಥೆ ಎದುರಿಸುತ್ತಿರುವ ಮೂಲಸೌಕರ್ಯಗಳ ಕೊರತೆ ಪ್ರಜಾಸತ್ತಾತ್ಮಕ ಸಮಾಜಕ್ಕೆ ಶೋಭೆ ತರುವಂತಹುದಲ್ಲ. ರಾಜ್ಯದಲ್ಲಿರುವ ಒಟ್ಟು 46,112 ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಪೈಕಿ 22,078 ಶಾಲೆಗಳ ಕಟ್ಟಡಗಳು ಶಿಥಿಲಾವಸ್ಥೆಯಲ್ಲಿದ್ದು, ಲಕ್ಷಾಂತರ ವಿದ್ಯಾರ್ಥಿಗಳ ಸುರತೆಗೆ ಆತಂಕ ಒಡ್ಡುತ್ತಿರುವುದು ಕಳವಳಕಾರಿ ಸಂಗತಿ. 36,338ಕ್ಕೂ ಹೆಚ್ಚು ಕ್ಲಾಸ್‌ರೂಂಗಳಿಗೆ ತಕ್ಷಣದ ದುರಸ್ತಿ ಹಾಗೂ ಮರುನಿರ್ಮಾಣದ ಅಗತ್ಯವಿದೆ. ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿಯಲ್ಲಿ ಗರಿಷ್ಠ ಅಂದರೆ 1,572 ಕೊಠಡಿಗಳು ಅಪಾಯಕಾರಿ ಸ್ಥಿತಿಯಲ್ಲಿದ್ದರೆ, ಬೆಳಗಾವಿ, ರಾಯಚೂರು, ಮೈಸೂರು ಮುಂತಾದ ಜಿಲ್ಲೆಗಳ ಸ್ಥಿತಿಯೂ ಭಿನ್ನವಾಗಿಲ್ಲ. ರಾಜ್ಯದ ಸುಮಾರು 18,196 (ಸುಮಾರು ಶೇ. 40) ಶಾಲೆಗಳಲ್ಲಿ ಆಟದ ಮೈದಾನಗಳೇ ಇಲ್ಲದಿರುವುದು ಮಗುವಿನ ಸರ್ವಾಂಗೀಣ ವಿಕಾಸಕ್ಕೆ ದೊಡ್ಡ ತೊಡಕಾಗಿದೆ.

ಶಿಕ್ಷಣ ಕ್ಷೇತ್ರಕ್ಕೆ ರಾಜ್ಯ ಬಜೆಟ್‌ನಲ್ಲಿ ಒಟ್ಟು ವೆಚ್ಚದ ಸುಮಾರು ಶೇ. 10ರಷ್ಟು ಅಂದರೆ 44,000 ಕೋಟಿ ರೂ.ಗೂ ಅಧಿಕ ಅನುದಾನ ಮೀಸಲಿಡಲಾಗುತ್ತಿದೆ ಎಂದು ಸರ್ಕಾರ ಹೇಳಿಕೊಳ್ಳುತ್ತದೆ. ಆದರೆ, ಈ ಬೃಹತ್ ಪ್ರಮಾಣದ ಸಾರ್ವಜನಿಕ ಹಣ ಎಲ್ಲಿಗೆ ತಲುಪುತ್ತಿದೆ ಎಂಬ ಪ್ರಶ್ನೆ ಮೂಡುವುದು ಸಹಜ. ಸಾವಿರಾರು ಕೋಟಿ ರೂ. ವೆಚ್ಚ ಮಾಡುತ್ತಿದ್ದರೂ ಶಾಲೆಗಳ ಮೂಲಸೌಕರ್ಯದ ಚಿತ್ರಣ ಬದಲಾಗದಿರುವುದು ಆಡಳಿತಾತ್ಮಕ ವೈಫಲ್ಯ ಹಾಗೂ ಕ್ರಿಯಾ ಯೋಜನೆಗಳ ಕೊರತೆಯನ್ನು ತೋರಿಸುತ್ತದೆ. ಸುರಕ್ಷಿತ ಕಟ್ಟಡ, ಕುಡಿಯುವ ನೀರು, ಶೌಚಾಲಯ ಹಾಗೂ ಆಟದ ಮೈದಾನಗಳಂತಹ ಕನಿಷ್ಠ ಅಗತ್ಯಗಳನ್ನು ಪೂರೈಸಲು ಸಾಧ್ಯವಾಗದಿರುವುದು ಶಿಕ್ಷಣ ಹಕ್ಕು ಕಾಯ್ದೆಯ ಮೂಲ ಆಶಯಕ್ಕೆ ಸಂಪೂರ್ಣ ವಿರುದ್ಧವಾಗಿದೆ. ಕೇವಲ ವಿದ್ಯಾರ್ಥಿಗಳ ಸಂಖ್ಯೆಯನ್ನು ನೆಪವಾಗಿಟ್ಟುಕೊಳ್ಳದೆ ಅಥವಾ ಹೊಸ ಯೋಜನೆಗಳನ್ನು ಪ್ರಕಟಿಸುವುದಕ್ಕೆ ಸೀಮಿತವಾಗದೆ, ಪ್ರತಿಯೊಂದು ಮಗುವಿಗೂ ಭದ್ರವಾದ ಕೊಠಡಿ, ಮೂಲಸೌಕರ್ಯ ಒದಗಿಸುವುದು ಸರ್ಕಾರದ ಕರ್ತವ್ಯ.
ಶಾಲೆ ಎಂದರೆ ನಾಲ್ಕು ಗೋಡೆಗಳ ಕಟ್ಟಡವಲ್ಲ; ಅದು ಮಗುವಿನ ಮಾನಸಿಕ, ದೈಹಿಕ ಮತ್ತು ಸಾಮಾಜಿಕ ವಿಕಾಸದ ಪ್ರಮುಖ ಕೇಂದ್ರ. ಮಳೆಗೆ ಸೋರುವ, ಬಿಸಿಲಿಗೆ ಬಿರುಕು ಬಿಡುವ, ಯಾವುದೇ ಕ್ಷಣದಲ್ಲಿ ಕುಸಿದುಬೀಳಬಹುದಾದ ಕಟ್ಟಡದ ಕೆಳಗೆ ಭಯದ ನೆರಳಿನಲ್ಲಿ ಮಕ್ಕಳು ಕುಳಿತು ಕಲಿಯಬೇಕಾದ ವಾತಾವರಣ ಸೃಷ್ಟಿಯಾಗಿರುವುದು ಅತ್ಯಂತ ಶೋಚನೀಯ. ಆಟದ ಮೈದಾನಗಳ ಕೊರತೆಯಿಂದಾಗಿ ಗ್ರಾಮೀಣ ಮತ್ತು ನಗರ ಪ್ರದೇಶದ ಬಡ ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಗಳಿಂದ ವಂಚಿತರಾಗುತ್ತಿದ್ದಾರೆ. ಖಾಸಗಿ ಶಾಲೆಗಳೊಂದಿಗೆ ಪೈಪೋಟಿ ನಡೆಸಿ ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳಬೇಕು ಎಂದು ಬಯಸುವ ಆಡಳಿತ ವ್ಯವಸ್ಥೆ, ಕನಿಷ್ಠ ಮೂಲಸೌಕರ್ಯಗಳನ್ನೂ ಒದಗಿಸದಿದ್ದರೆ ಪೋಷಕರು ಸರ್ಕಾರಿ ಶಾಲೆಗಳಿಂದ ವಿಮುಖರಾಗುವುದನ್ನು ತಡೆಯಲು ಸಾಧ್ಯವಿಲ್ಲ. ಈ ಸಮಸ್ಯೆಗೆ ಸರ್ಕಾರ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ. ಕಾಗದದ ಮೇಲಿನ ಪ್ರಸ್ತಾವನೆಗಳು ಅಥವಾ ಖಾಸಗಿ ಸಂಸ್ಥೆಗಳ ನೆರವಿಗಾಗಿ ಕಾಯದೆ, ತುರ್ತು ನಿಧಿಯನ್ನು ಮೀಸಲಿಟ್ಟು ಆದ್ಯತೆಯ ಮೇರೆಗೆ ಶಾಲಾ ಕೊಠಡಿಗಳನ್ನು ಮರುನಿರ್ಮಾಣ ಮಾಡಬೇಕು. ಯಾವುದೇ ಅನಾಹುತ ಸಂಭವಿಸುವ ಮುನ್ನವೇ ಶಿಕ್ಷಣ ಇಲಾಖೆ ಜಾಗೃತಗೊಂಡು, ರಾಜ್ಯದ ಪ್ರತಿಯೊಂದು ಸರ್ಕಾರಿ ಶಾಲೆಯನ್ನೂ ಸುರಕ್ಷಿತ ಹಾಗೂ ಗುಣಮಟ್ಟದ ಕಲಿಕಾ ಕೇಂದ್ರವನ್ನಾಗಿ ಪರಿವರ್ತಿಸಲು ಬದ್ಧತೆ ಪ್ರದರ್ಶಿಸಬೇಕಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net