

ಕರ್ನಾಟಕಕ್ಕೆ ಮೇ 28ರಂದು ಮುಂಗಾರು ಪ್ರವೇಶವಾಗುವ ಸಾಧ್ಯತೆ ಇದೆ. ಹವಾಮಾನ ಸ್ಥಿತಿ ಉತ್ತಮವಾಗಿರುವ ಹಿನ್ನೆಲೆಯಲ್ಲಿ ಮೇ 28ರಂದು ಕೇರಳಕ್ಕೆ ಮುಂಗಾರು ಪ್ರವೇಶವಾಗಲಿದ್ದು, ಅದೇ ದಿನ ರಾಜ್ಯಕ್ಕೆ ಆಗಮಿಸಲಿದೆ. ಇಡೀ ದೇಶದಲ್ಲಿ ಜೂನ್ ಮೊದಲ ವಾರದ ಹೊತ್ತಿಗೆ ಮುಂಗಾರು ಆವರಿಸಿಕೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದಿಂದ ಸೂಕ್ತ ಸಿದ್ಧತೆ ಅಗತ್ಯ. ಬಿತ್ತನೆ ಬೀಜ, ರಸಗೊಬ್ಬರದ ಲಭ್ಯತೆಯನ್ನು ಖಾತ್ರಿ ಪಡಿಸಬೇಕು. ಕೃಷಿ ಸಲಕರಣೆ ಬಾಡಿಗೆ, ಕಾರ್ವಿುಕರ ಕೂಲಿ, ಬಿತ್ತನೆ ಬೀಜ ಬೆಲೆ ಏರಿಕೆಯಿಂದ ಆರ್ಥಿಕ ಸಂಕಷ್ಟದ ನೋವಿನಲ್ಲಿಯೇ ಮುಂಗಾರು ಬಿತ್ತನೆಗೆ ರೈತರು ಸಜ್ಜಾಗಿದ್ದು, ರೈತರಿಗೆ ಸಕಾಲದಲ್ಲಿ ಸೌಲಭ್ಯ ಕಲ್ಪಿಸುವುದು ಮತ್ತು ಸರಿಯಾದ ಮಾಹಿತಿಯನ್ನು ಒದಗಿಸುವುದು ಅತ್ಯಗತ್ಯ. ಬಿತ್ತನೆ ಬೀಜ, ಗೊಬ್ಬರದ ಬೇಡಿಕೆ ಅನುಸಾರ ಸೂಕ್ತ ಪ್ರಮಾಣದಲ್ಲಿ ದಾಸ್ತಾನು ವ್ಯವಸ್ಥೆ ಆಗಬೇಕು.
ಪ್ರತಿವರ್ಷ ರಾಜ್ಯದ ಹಲವು ಜಿಲ್ಲೆಗಳಲ್ಲಿ ಬಿತ್ತನೆ ಬೀಜದ ಕೊರತೆ ಕಂಡುಬರುತ್ತಿದ್ದು, ಖರೀದಿಗಾಗಿ ರೈತರು ತಮ್ಮೆಲ್ಲ ಕೆಲಸಗಳನ್ನು ಬದಿಗೊತ್ತಿ ಸರದಿಸಾಲಿನಲ್ಲಿ ಪರದಾಡುವುದನ್ನು ತಪ್ಪಿಸಬೇಕು. ಇದಲ್ಲದೆ, ನಕಲಿ ಬೀಜಗಳ ಹಾವಳಿ ಮತ್ತು ಕಳಪೆ ಗೊಬ್ಬರದ ಮಾಫಿಯಾದ ಮೇಲೆ ಯಾವುದೇ ನಿಯಂತ್ರಣವಿಲ್ಲದೆ, ಅವು ರೈತರನ್ನು ವಂಚಿಸುತ್ತಿವೆ. ಇಂಥ ಕೃತ್ಯಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಕೃಷಿ ವಿಶ್ವವಿದ್ಯಾಲಯಗಳು, ಕೃಷಿ ವಿಜ್ಞಾನ ಕೇಂದ್ರಗಳು ರೈತರತ್ತ ತೆರಳಿ ಮಾರ್ಗದರ್ಶನ ಮಾಡಬೇಕು. ಅಲ್ಲದೆ, ಮುಂಗಾರು ಸಂಬಂಧಿತ ಸಂಭಾವ್ಯ ಅನಾಹುತಗಳನ್ನು ತಡೆಯಲು ಸಹ ಜಿಲ್ಲಾಡಳಿತಗಳು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು.
ಮುಂಗಾರು ಮತ್ತು ಹಿಂಗಾರು ಮಳೆ ಇಲ್ಲದೆ ದೇಶದ ಕೃಷಿಯನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಅದರಲ್ಲೂ, ಬೇಳೆಕಾಳು, ಎಣ್ಣೆಕಾಳು ಹಾಗೂ ಇತರ ವಾಣಿಜ್ಯ ಬೆಳೆಗಳಿಗೂ ಮುಂಗಾರು ಮಳೆಯೇ ಪ್ರಶಸ್ತ. ಮಾತ್ರವಲ್ಲ, ಜೂನ್ನಿಂದ ಸೆಪ್ಟೆಂಬರ್ ಅವಧಿಯಲ್ಲಿ ದೇಶಾದಲ್ಲಾಗುವ ಮಳೆಯಿಂದಲೇ ಭಾರತದ ಶೇಕಡ 75ರಷ್ಟು ಜಲಬೇಡಿಕೆ ಪೂರ್ತಿಗೊಳ್ಳುತ್ತದೆ. ಮತ್ತು ಶೇಕಡ 50ಕ್ಕಿಂತ ಅಧಿಕ ಬೆಳೆಗಳು ಕಟಾವುಗೊಳ್ಳುತ್ತವೆ. ಹೆಚ್ಚು ನೀರು ಬೇಕಾಗುವ ಭತ್ತ, ಹತ್ತಿ, ಬೇಳೆಕಾಳು, ಸೊಯಾಬಿನ್ ಸೇರಿದಂತೆ ಹಲವು ಬೆಳೆಗಳು ಹೆಚ್ಚಾಗಿ ಮುಂಗಾರಿನ ಅವಧಿಯಲ್ಲೇ ಬರುತ್ತವೆ. ಕೃಷಿ ಆರ್ಥಿಕತೆ ಎಂಬುದು ಬಹುವೈಶಾಲ್ಯದ ಮತ್ತ ಅಷ್ಟೇ ಶಕ್ತಿಶಾಲಿಯಾದ ಅಭಿವೃದ್ಧಿ ಸಾಧನ. ಆದರೆ, ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಬಾಹ್ಯಪ್ರಯತ್ನ ಎಷ್ಟೇ ಮಾಡಿದರೂ, ಅದರ ಸಂಪೂರ್ಣ ಪ್ರಯೋಜನ ಸಿಗುವುದು ಉತ್ತಮ ಮುಂಗಾರು ದೇಶಾದ್ಯಂತ ವ್ಯಾಪಿಸಿಕೊಂಡಾಗ ಮಾತ್ರ.
ದೇಶದ ಶೇಕಡ 47ರಷ್ಟು ಜನಸಂಖ್ಯೆ ಕೃಷಿ ಮೇಲೆ ಅವಲಂಬಿತವಾಗಿದೆ (ಕೆಲವೇ ದಶಕಗಳ ಮುನ್ನ ಈ ಸಂಖ್ಯೆ ಶೇ. 70ರಷ್ಟಿತ್ತು). ಹೀಗಾಗಿ ಭಾರತದ ಸಮೃದ್ಧಿಗೆ ಅದರಲ್ಲೂ ಹಳ್ಳಿಗಳು ನೆಮ್ಮದಿಯಿಂದ ಇರಲು ಮಾನ್ಸೂನ್ ನವಚೈತನ್ಯದಂತೆ ಕಾರ್ಯನಿರ್ವಹಿಸುತ್ತಿದೆ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಪ್ರಕಾರ, ಜಿಡಿಪಿಯ ಶೇಕಡ 15 ಕೃಷಿ ಕ್ಷೇತ್ರವನ್ನೇ ಅವಲಂಬಿಸಿದೆ. ಈ ಬಾರಿ ಮುಂಗಾರು ಉತ್ತಮವಾಗಿ ಇರಲಿದೆ ಎಂದು ಹವಾಮಾನ ಇಲಾಖೆ ಸ್ಪಷ್ಟಪಡಿಸಿರುವುದರಿಂದ, ರೈತರು ಕೊಂಚ ನಿರಾಳರಾಗಿದ್ದಾರೆ. ಮುಂಗಾರು ಯಶಸ್ವಿಯಾದರೆ ಗ್ರಾಮೀಣ ಭಾರತ ಹಲವು ಸಮಸ್ಯೆಗಳಿಂದ ಮುಕ್ತವಾಗುತ್ತದೆ. ಅಷ್ಟೇ ಅಲ್ಲ ಕೃಷಿ ಆರ್ಥಿಕತೆಯ ಮೂಲಕ ಸ್ವಾವಲಂಬನೆಯತ್ತಲೂ ದಾಪುಗಾಲು ಹಾಕುತ್ತದೆ.