

ತೇವಾಂಶ ಭರಿತ ಮೋಡ ಸೇರಿ ಹವಾಮಾನದಲ್ಲಾದ ದಿಢೀರ್ ಬದಲಾವಣೆಯಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಆಗಸ್ಟ್ 4ರಿಂದ 10ರವರೆಗೆ ಉತ್ತಮ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ತುಮಕೂರು, ಚಿಕ್ಕಬಳ್ಳಾಪುರ, ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರದಲ್ಲಿ ಮುಂದಿನ ಎರಡು ದಿನ ಜೋರು ಮಳೆಯಾಗುವ ಸಾಧ್ಯತೆ ಇರುವುದರಿಂದ ಇಲಾಖೆ ಯೆಲ್ಲೋ ಅಲರ್ಟ್ ಜಾರಿ ಮಾಡಿದೆ. ಮುಂಗಾರು ಆರಂಭದಿಂದಲೇ ಮಳೆ ಸಂಬಂಧಿ ಅನಾಹುತಗಳಿಂದ ಕೆಲವಡೆ ಜೀವಹಾನಿ ಸಂಭವಿಸಿದ್ದರೆ, ಹಲವು ಜಿಲ್ಲೆಗಳಲ್ಲಿ ಆಸ್ತಿಪಾಸ್ತಿ ಹಾನಿಯಾಗಿದೆ. ಈಗ ಮತ್ತೆ ಮಳೆ ಅಬ್ಬರ ಹೆಚ್ಚಿದರೆ ಬೆಳೆಗಳಿಗೂ ಆಪತ್ತು. ಅಧಿಕ ಮಳೆಯಿಂದಾಗಿ ಹಲವು ಜಿಲ್ಲೆಗಳಲ್ಲಿ ಈಗಾಗಲೇ ಕೃಷಿ ಚಟುವಟಿಕೆಗಳು ಸ್ತಬ್ಧಗೊಂಡಿವೆ. ರಾಜಧಾನಿ ಬೆಂಗಳೂರಿನ ರಸ್ತೆಗಳ ಸ್ಥಿತಿ ದಯನೀಯವಾಗಿದ್ದು, ಗುಂಡಿಗಳೇ ರಾರಾಜಿಸುತ್ತ, ಅಪಾಯಕ್ಕೆ ಆಹ್ವಾನ ನೀಡುತ್ತಿವೆ.
ರಾಜ್ಯದಲ್ಲಿ ಈ ಬಾರಿ ವಾಡಿಕೆಗಿಂತ ಅಧಿಕ ಮುಂಗಾರು ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿತ್ತು. ಅದರಂತೆ ಆಗಸ್ಟ್ನಲ್ಲೂ ಮಳೆಯ ಅಬ್ಬರ ಮುಂದುವರಿದಿದ್ದು, ಇನ್ನು ಹಲವು ದಿನಗಳ ಕಾಲ ಸುರಿಯಲಿದೆ. ಹೀಗಾಗಿ ಮುಂದಿನ ಪರಿಸ್ಥಿತಿಯನ್ನು ಎದುರಿಸುವುದಕ್ಕೆ ಸರ್ಕಾರ ಸನ್ನದ್ಧವಾಗಬೇಕಿದೆ. ಮಳೆ ಸಂಬಂಧಿತ ಹಾನಿಯನ್ನು ತಡೆಗಟ್ಟಲು ಸರ್ಕಾರದ ಇಚ್ಛಾಶಕ್ತಿ ತುಂಬ ಅವಶ್ಯ ಎಂಬುದನ್ನು ಮರೆಯುವಂತಿಲ್ಲ. ಅಧಿಕಾರಿಗಳು ಜಡತ್ವವನ್ನು ತೊರೆದು ಜನರ ಸಂಕಷ್ಟವನ್ನು ಅರಿಯುವ, ಸಂವೇದನೆಗೆ ಮಿಡಿಯುವ ರೀತಿಯಲ್ಲಿ ಕೆಲಸ ಮಾಡಬೇಕು. ಜಿಲ್ಲಾಡಳಿತಗಳು ಜನರ ಸಂಕಷ್ಟಗಳಿಗೆ ಸ್ಪಂದಿಸಬೇಕು. ಮಳೆಸಂಬಂಧಿ ಅನಾಹುತಗಳ ನಿರ್ವಹಣೆಗೆ ಜಿಲ್ಲಾವರು ಸಹಾಯವಾಣಿ ಆರಂಭಿಸುವುದು ಸೂಕ್ತ. ಮುಂದಿನ ದಿನಗಳ ಮಳೆಯನ್ನು ಎದುರಿಸಲು, ಹಾನಿಯ ಪ್ರಮಾಣವನ್ನು ತಗ್ಗಿಸಲು, ಜನರಿಗೆ ಸೂಕ್ತ ನೆರವು ಒದಗಿಸಲು ಶ್ರಮಿಸಬೇಕು, ಈ ನಿಟ್ಟಿನಲ್ಲಿ ಸೂಕ್ತ ಯೋಜನೆ ರೂಪಿಸಿಕೊಳ್ಳಬೇಕು.
ಅಲ್ಲದೆ, ಮಳೆಯಿಂದ ಹಾನಿಗೊಳಗಾದ ಉತ್ತರ ಮತ್ತು ಈಶಾನ್ಯ ರಾಜ್ಯಗಳ ಜನರಿಗೆ ಬದುಕು ಕಟ್ಟಿಕೊಳ್ಳಲು ಕೇಂದ್ರ ಸರ್ಕಾರ ಅಗತ್ಯ ನೆರವನ್ನು ನೀಡಬೇಕು. ಉತ್ತರಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶ ಸೇರಿದಂತೆ ಹಲವು ರಾಜ್ಯಗಳು ಪ್ರವಾಹಸದೃಶ ಸ್ಥಿತಿಯನ್ನು ಎದುರಿಸುತ್ತಿದ್ದು, ನದಿಗಳು ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿವೆ. ಶ್ರಾವಣದ ಮಳೆಯಬ್ಬರ ಜನರನ್ನು ಹೈರಾಣಾಗಿಸಿದ್ದು, ಜನಜೀವನ ಸ್ತಬ್ಧಗೊಂಡಿದೆ. ಹಾನಿಯ ನಿಖರ ಸಮೀಕ್ಷೆ ನಡೆಸಿ ಮಳೆ ಸಂತ್ರಸ್ತರಿಗೆ ವಿಳಂಬವಿಲ್ಲದೆ ಪರಿಹಾರ ವಿತರಿಸಬೇಕು. ಮಾತ್ರವಲ್ಲ, ಸಂಭಾವ್ಯ ಭೂಕುಸಿತದ ಸ್ಥಳಗಳನ್ನು ಗುರುತಿಸಿ, ಅಲ್ಲಿನ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಬೇಕು. ಪರಿಹಾರ ಕಾರ್ಯ, ಜನರಿಗೆ ನೆರವು ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರಗಳು ಕೇಂದ್ರದೊಂದಿಗೆ ಸಮನ್ವಯದಿಂದ ಕಾರ್ಯನಿರ್ವಹಿಸಿ, ಸಂಕಷ್ಟದ ಸಮಯವನ್ನು ಮೀರಿ ನಿಲ್ಲಬೇಕಿದೆ. ಜನರಲ್ಲಿ ಆತ್ಮಸ್ಥೈರ್ಯ ತುಂಬಬೇಕಿದೆ. ಈ ನಿಟ್ಟಿನಲ್ಲಿ ಸಾಮೂಹಿಕ ಪ್ರಯತ್ನ ಅಗತ್ಯ.