ಸಂಪಾದಕೀಯ; ಹೊಣೆ ಮರೆತ ಪೊಲೀಸರು

Untitled design
Published on

ರಾಜ್ಯದಲ್ಲಿ ಇತ್ತೀಚೆಗೆ ಸೈಬರ್ ಕ್ರೖೆಂಗಿಂತ ಅಪಾಯಕಾರಿ ರೀತಿಯಲ್ಲಿ ಡ್ರಗ್ಸ್ ದಂಧೆಯ ಜಾಲ ವಿಸ್ತರಣೆಯಾಗುತ್ತಿದೆ. ವಿಶ್ವದಲ್ಲೇ ಅತಿ ಹೆಚ್ಚು ಯುವಕರನ್ನು ಹೊಂದಿರುವ ದೇಶ ನಮ್ಮದು. ಆದರೆ, ನಶೆಯುಕ್ತ ರಾಸಾಯನಿಕ ವಸ್ತುಗಳ ದುಶ್ಚಟಕ್ಕೆ ಬಲಿಯಾಗುತ್ತಿರುವವರ ಸಂಖ್ಯೆ ಏರುಗತಿಯಲ್ಲಿದೆ. ಇದಕ್ಕೆ ಕಡಿವಾಣ ಹಾಕಬೇಕಾದ ಪೊಲೀಸರು ತಮ್ಮಹೊಣೆಗಾರಿಕೆಯನ್ನು ಮರೆತಿದ್ದಾರೆ ಎಂಬುದು ಪದೇಪದೆ ಸಾಬೀತಾಗುತ್ತಿದೆ. ಡ್ರಗ್ಸ್ ಜಾಲದ ದುಷ್ಟರೊಂದಿಗೆ ಕೈ ಮಿಲಾಯಿಸಿದ್ದ ಎರಡು ಠಾಣೆಗಳ 11 ಜನ ಪೊಲೀಸರು ಅಮಾನತುಗೊಂಡಿದ್ದಾರೆ. ಇಂತಹ ಪ್ರಕರಣದಲ್ಲಿ ಇಷ್ಟು ಪೊಲೀಸರು ಸಸ್ಪೆಂಡ್ ಆಗಿರುವುದು ರಾಜ್ಯದಲ್ಲಿ ಇದೇ ಮೊದಲು. ಕೆಲವು ಪ್ರಕರಣಗಳಲ್ಲಿ ಪೊಲೀಸರು ರಾಜ್ಯದ ಜನರಿಂದ ಶಹಬ್ಬಾಸ್​ಗಿರಿ ಪಡೆದುಕೊಂಡಿದ್ದರೆ, ಮಾದಕ ವಸ್ತುಗಳ ಬಹುತೇಕ ಪ್ರಕರಣಗಳಲ್ಲಿ ಟೀಕೆಗೆ ಗುರಿಯಾಗಿರುವುದೇ ಹೆಚ್ಚು. ನಗರ ಪ್ರದೇಶಲ್ಲಿರುವ ಡ್ರಗ್ಸ್ ಜಾಲ ಇತ್ತೀಚೆಗೆ ಗ್ರಾಮೀಣ ಪ್ರದೇಶಕ್ಕೂ ವಿಸ್ತರಿಸಿದೆ. ಮಕ್ಕಳು ದುಶ್ಚಟಕ್ಕೆ ಬಲಿಯಾಗುತ್ತಿರುವ ಪರಿಣಾಮ ಪಾಲಕರು ರೋಸಿಹೋಗಿದ್ದಾರೆ. ರಾಜ್ಯದಲ್ಲಿ 2024ರ ಸೆಪ್ಟಂಬರ್ ತಿಂಗಳಲ್ಲಿ ‘ಡ್ರಗ್ಸ್ ಮುಕ್ತ ಕರ್ನಾಟಕ’ ಘೋಷಣೆಯೊಂದಿಗೆ ಕಾರ್ಯಪಡೆ ರಚನೆ ಮಾಡಲಾಗಿತ್ತು.

ಈ ಕಾರ್ಯಪಡೆ ರಾಜ್ಯದಲ್ಲಿ ಡ್ರಗ್ಸ್ ಪೂರೈಕೆ, ಮಾರಾಟ ಜಾಲಕ್ಕೆ ಸಂಪೂರ್ಣ ಕಡಿವಾಣ ಹಾಕುವ ಮಹತ್ತರ ಜವಾಬ್ದಾರಿಯನ್ನು ಹೊತ್ತಿತ್ತು. ಪ್ರತಿ ತಿಂಗಳು ಪೊಲೀಸ್ ಹಿರಿಯ ಮತ್ತು ಕಿರಿಯ ಅಧಿಕಾರಿಗಳ ಸಭೆ, ಮಾದಕ ವಸ್ತು ಪೂರೈಕೆ ಮೂಲ ಪತ್ತೆ ಹಚ್ಚಬೇಕಾದ ಕಾರ್ಯ ಮಾಡಬೇಕಿತ್ತು. ವಹಿಸಿಕೊಂಡ ಜವಾಬ್ದಾರಿಯನ್ನು ಅದು ಮರೆತಿದ್ದರ ಪರಿಣಾಮವಾಗಿ, ಬೇಲಿಯೇ ಎದ್ದು ಹೊಲ ಮೇಯ್ದಂತೆ ರಾಜಾರೋಷವಾಗಿ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳು ಮೋಜು-ಮಸ್ತಿ ಮಾಡಿದ್ದಾರೆ. ಇದರಿಂದ ದಂಧೆಕೋರರಿಗೆ ಆನೆ ಬಲ ಬಂದಂತಾಗಿದೆ. ರಾಜ್ಯದಲ್ಲಿ ಪತ್ತೆಯಾಗುವ ಡ್ರಗ್ಸ್ ಪೈಕಿ ಬೆಂಗಳೂರಿನ ಪಾಲು ಶೇ. 50ರಷ್ಟಿರುತ್ತದೆ. ವರ್ಷದಿಂದ ವರ್ಷಕ್ಕೆ ಡ್ರಗ್ಸ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಪೊಲೀಸ್ ಇಲಾಖೆಯಿಂದ ಮಾದಕ ದ್ರವ್ಯ ಗಳ ವಿರುದ್ಧ ಕಳೆದ ವರ್ಷ 3,602 ಶಾಲಾ-ಕಾಲೇಜುಗಳಲ್ಲಿ 5.5 ಲಕ್ಷ ಮಕ್ಕಳಿಗೆ ಬೋಧನೆ ಮಾಡಲಾಗಿದೆ. 4,333 ಕಾಲೇಜುಗಳಲ್ಲಿ 6.15 ಲಕ್ಷ ಮಕ್ಕಳೊಂದಿಗೆ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪೊಲೀಸ್ ಇಲಾಖೆಯ ಅಂಕಿಅಂಶಗಳು ಹೇಳುತ್ತವೆ.

ಆದರೆ, ಇದಕ್ಕೆ ವ್ಯತಿರಿಕ್ತ ಎಂಬಂತೆ ನಗರ ಪ್ರದೇಶಗಳಲ್ಲಿ ಡ್ರಗ್ಸ್ ನಶೆಯಲ್ಲಿ ತೇಲುವವರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ವಿದೇಶಗಳಿಂದ ಡ್ರಗ್ಸ್ ಮಾರಾಟ ಮಾಡಲು ರಾಜ್ಯಕ್ಕೆ ಆಗಮಿಸುತ್ತಿರುವ ವಿದೇಶಿಗರ ಸಂಖ್ಯೆಯೂ ದೊಡ್ಡದಿದೆ. ಕಳೆದ 12 ವರ್ಷಗಳಲ್ಲಿ 2,194 ಜನರನ್ನು ಬಂಧಿಸಿ, 356 ವಿದೇಶಿ ಪ್ರಜೆಗಳನ್ನು ಗಡಿಪಾರು ಮಾಡಲಾಗಿದೆ. ಆದರೆ, ಇದೇ ಪೊಲೀಸರು ಡ್ರಗ್ಸ್ ದಂಧೆಕೋರರೊಂದಿಗೆ ಸದ್ದಿಲ್ಲದೆ ಶಾಮೀಲಾಗಿ ಅಕ್ರಮಕ್ಕೆ ರಹದಾರಿ ಮಾಡಿಕೊಟ್ಟಿರುವುದು ನಾಚಿಕೆಗೇಡಿನ ಸಂಗತಿ. ಬೆಂಗಳೂರಿನಲ್ಲಂತೂ ಡ್ರಗ್ಸ್ ಜಾಲದ ಜತೆ ಪೊಲೀಸರ ನಂಟು ಹೊಸ ವಿಷಯವೇನಲ್ಲ. ಇಡೀ ರಾಜ್ಯದಲ್ಲಿ ಎಲ್ಲ ಕಡೆ ಇಂತಹ ಅಪವಿತ್ರ ಮೈತ್ರಿ ಇರುವ ಸಾಧ್ಯತೆ ಇದೆ. ಇದನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಪೊಲೀಸರ ಇಂತಹ ನಡವಳಿಕೆಗೆ ನಿರ್ದಾಕ್ಷಿಣ್ಯವಾಗಿ ಕಡಿವಾಣ ಹಾಕಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net