

ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ಶನಿವಾರ ನಡೆಸಿದ ಗೆಜೆಟೆಡ್ ಪೊಬೇಷನರಿ ಗ್ರೂಪ್ ಎ ಮತ್ತು ಬಿ ಹುದ್ದೆಗಳ ಮುಖ್ಯ ಪರೀಕ್ಷೆಯಲ್ಲಿ ಮತ್ತೊಮ್ಮೆ ಹಲವಾರು ಎಡವಟ್ಟುಗಳು ಕಂಡುಬಂದಿವೆ. ಈ ತಪ್ಪುಗಳು ಕೆಪಿಎಸ್ಸಿಯ ವಿಶ್ವಾಸಾರ್ಹತೆಗೆ ಧಕ್ಕೆ ತಂದಿರುವುದಷ್ಟೇ ಅಲ್ಲ, ಲಕ್ಷಾಂತರ ಉದ್ಯೋಗಾಕಾಂಕ್ಷಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡಿವೆ. ಹೀಗೆ ಆಗುತ್ತಿರುವುದು ಇದು ಮೊದಲ ಬಾರಿ ಅಲ್ಲ. 2024ರ ಆ. 27ರ ಪೂರ್ವಭಾವಿ ಪರೀಕ್ಷೆಯಲ್ಲಿ 58 ಕನ್ನಡ ಭಾಷಾಂತರ ದೋಷಗಳು, ಡಿ. 29ರ ಮರುಪರೀಕ್ಷೆಯಲ್ಲಿ 79 ದೋಷಗಳು ಕಂಡುಬಂದಿದ್ದವು. ಆಗ ಕೇವಲ 5 ಪ್ರಶ್ನೆಗಳಿಗೆ ಕೃಪಾಂಕ ನೀಡುವ ಮೂಲಕ ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ ಅನ್ಯಾಯ ಮಾಡಲಾಯಿತು. ಈಗ ಮತ್ತೆ 384 ಆಡಳಿತಾತ್ಮಕ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಮುಖ್ಯ ಪರೀಕ್ಷೆಯಲ್ಲಿ ತಪ್ಪುಗಳಾಗಿರುವುದು ಕೆಪಿಎಸ್ಸಿಯ ನಿರಂತರ ಅಸಮರ್ಥತೆಗೆ ಕನ್ನಡಿ ಹಿಡಿದಿದೆ.
ಇದು ಅಭ್ಯರ್ಥಿಗಳಲ್ಲಿ ಆತಂಕ ಮತ್ತು ಅಸಮಾಧಾನಕ್ಕೆ ಎಡೆಮಾಡಿಕೊಟ್ಟಿದೆ. ಈ ದೋಷಗಳು ಕೇವಲ ಭಾಷಾಂತರದ ತಪ್ಪುಗಳಿಗೆ ಸೀಮಿತವಾಗಿಲ್ಲ. ಪ್ರಶ್ನೆಪತ್ರಿಕೆಯ ರಚನೆಯಲ್ಲಿ ರ್ತಾಕತೆಯ ಕೊರತೆ, ಅಸ್ಪಷ್ಟತೆ ಮತ್ತು ಕೆಲವೊಮ್ಮೆ ತಪ್ಪು ಕೀ ಉತ್ತರಗಳನ್ನು ಬಿಡುಗಡೆ ಮಾಡುವುದು ಕೆಪಿಎಸ್ಸಿಯ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸುವಂತೆ ಮಾಡಿದೆ. ಇಷ್ಟೆಲ್ಲ ರಾದ್ಧಾಂತಗಳಾಗುತ್ತಿದ್ದರೂ ಕೆಪಿಎಸ್ಸಿ ಕಾರ್ಯದರ್ಶಿ ಹುದ್ದೆಯಲ್ಲಿರುವ ಐಎಎಸ್ ಅಧಿಕಾರಿ ಈ ಬಗ್ಗೆ ಪ್ರತಿಕ್ರಿಯೆ ನೀಡುವ ಗೋಜಿಗೂ ಹೋಗದಿರುವುದು ಅಕ್ಷಮ್ಯ. ಪದೇಪದೆ ಎಡವಟ್ಟು ಸಂಭವಿಸುತ್ತಿರುವುದಕ್ಕೆ ಅಧಿಕಾರಿಗಳ ವೈಫಲ್ಯವೂ ಪ್ರಮುಖ ಕಾರಣ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಈ ಎಡವಟ್ಟುಗಳಿಂದ ಹೆಚ್ಚು ತೊಂದರೆಗೆ ಒಳಗಾದವರು ಕನ್ನಡ ಮಾಧ್ಯಮದ ಅಭ್ಯರ್ಥಿಗಳು. ಭಾಷಾಂತರ ದೋಷಗಳಿಂದಾಗಿ ಸರಿಯಾದ ಉತ್ತರಗಳನ್ನು ಗುರುತಿಸಲು ಅವರಿಗೆ ಕಷ್ಟವಾಗಿದೆ, ಇದರಿಂದ ಫಲಿತಾಂಶದಲ್ಲಿ ಅನೇಕರು ಅನರ್ಹರಾಗಿದ್ದಾರೆ. ಈ ಎಡವಟ್ಟುಗಳು ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿವೆ. ಕೆಪಿಎಸ್ಸಿಯಲ್ಲಿ ಹೆಚ್ಚಾಗಿರುವ ರಾಜಕೀಯ ಹಸ್ತಕ್ಷೇಪ, ಭ್ರಷ್ಟಾಚಾರ, ಸ್ವಜನಪಕ್ಷಪಾತವೇ ಈ ಎಲ್ಲ ಗೊಂದಲಕ್ಕೆ ಕಾರಣ ಎಂದು ವಿರೋಧ ಪಕ್ಷಗಳ ನಾಯಕರು ಆರೋಪಿಸಿದ್ದಾರೆ.
ಸಾಂವಿಧಾನಿಕ ಸಂಸ್ಥೆಯಾಗಿರುವ ಕೆಪಿಎಸ್ಸಿಯನ್ನು ಸರ್ಕಾರ ನೇರವಾಗಿ ನಿಯಂತ್ರಿಸಲು ಆಗದಿದ್ದರೂ, ಈ ವಿಷಯದಲ್ಲಿ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲಾಗದು. ಇನ್ನು ಮುಂದಾದರೂ ಕನ್ನಡ ಭಾಷಾಂತರಕ್ಕೆ ಹಿರಿಯ ಸಾಹಿತಿಗಳು, ಭಾಷಾ ಪ್ರವೀಣರು, ಪಠ್ಯರಚನಾ ಸಮಿತಿ ಸದಸ್ಯರು, ಶಿಕ್ಷಣ, ವಿಷಯ, ಭಾಷಾಂತರ ತಜ್ಞರನ್ನು ಒಳಗೊಂಡ ಸಮಿತಿ ರಚಿಸಿ ಕಟ್ಟುನಿಟ್ಟಾದ ಪ್ರಕ್ರಿಯೆ ರೂಪಿಸಬೇಕು. ಪ್ರಶ್ನೆಪತ್ರಿಕೆಗಳನ್ನು ಮೊದಲು ಕನ್ನಡದಲ್ಲಿ ರೂಪಿಸಿ, ನಂತರ ಇಂಗ್ಲಿಷ್ಗೆ ಭಾಷಾಂತರಿಸುವ ವಿಧಾನವನ್ನು ಅಳವಡಿಸಿಕೊಳ್ಳಬಹುದು. ಕೆಪಿಎಸ್ಸಿ ಪರೀಕ್ಷಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಖಾತ್ರಿಪಡಿಸಲು ಒಂದು ಸ್ವತಂತ್ರ ತನಿಖಾ ಸಂಸ್ಥೆಯನ್ನು ರಚಿಸಬೇಕು. ದೋಷಗಳಿಗೆ ಜವಾಬ್ದಾರರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ತಾಂತ್ರಿಕ ದೋಷಗಳನ್ನು ತಡೆಗಟ್ಟಲು ಆಧುನಿಕ ತಂತ್ರಜ್ಞಾನ ಬಳಸಬೇಕು. ಕೆಪಿಎಸ್ಸಿ ಸದಸ್ಯರ ಸಂಖ್ಯೆಯನ್ನು 15ರಿಂದ 8ಕ್ಕೆ ಇಳಿಸುವ ಮತ್ತು ಪಾರದರ್ಶಕ ಆಯ್ಕೆ ಪ್ರಕ್ರಿಯೆಯನ್ನು ಜಾರಿಗೆ ತರುವ ಯೋಚನೆಯನ್ನು ಸರ್ಕಾರ ಶೀಘ್ರ ಅನುಷ್ಠಾನಗೊಳಿಸಬೇಕು. ತಾತ್ಕಾಲಿಕ ಕ್ರಮಗಳಿಗೆ ಸೀಮಿತವಾಗದೆ, ಶಾಶ್ವತ ಪರಿಹಾರಗಳತ್ತ ಗಮನ ಹರಿಸಬೇಕು.