ಸಂಪಾದಕೀಯ: ಪಾಠ ಕಲಿಯದ ಪಾಕಿಸ್ತಾನ

pp
Published on

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್​ನಲ್ಲಿ ಏಪ್ರಿಲ್ 22ರಂದು ನಡೆದ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದಕರ ದಾಳಿಗೆ ಭಾರತ ‘ಆಪರೇಷನ್ ಸಿಂಧೂರ’ ಮೂಲಕ ಉತ್ತರ ನೀಡಿತಷ್ಟೇ. ಅಲ್ಲದೆ, ಭಾರತ ಈ ವಾಯುದಾಳಿ ನಡೆಸಿದ್ದು ಭಯೋತ್ಪಾದಕರ ಅಡಗುತಾಣಗಳನ್ನು ಗುರಿಯಾಗಿಸಿಯೇ ಹೊರತು ಸೇನಾ ನೆಲೆಯ ಮೇಲೆ ಯಾವುದೇ ದಾಳಿ ನಡೆಸಿಲ್ಲ. ಭಾರತ ಇಂಥ ಹೊತ್ತಿನಲ್ಲೂ ಸಂಯಮ ಪ್ರದರ್ಶಿಸಿದರೂ, ಧೂರ್ತ ಪಾಕಿಸ್ತಾನ ಬುಧವಾರ ರಾತ್ರಿ ಭಾರತದ 15 ಸೇನಾ ನೆಲೆಗಳ ಮೇಲೆ ದಾಳಿ ನಡೆಸಲು ವಿಫಲ ಯತ್ನ ನಡೆಸಿದೆ. ಇದಲ್ಲದೆ, ಗುರುವಾರ ಜಮ್ಮುವಿನ ಮೇಲೆ ಡ್ರೋನ್ ದಾಳಿಗೆ ಯತ್ನಿಸಿದೆ. ಇದಕ್ಕೆ ನಮ್ಮ ಸೇನೆ ತಕ್ಕ ಪ್ರತಿಕ್ರಿಯೆ ನೀಡಿದೆ. ಮತ್ತೊಂದೆಡೆ, ಜಮ್ಮು-ಕಾಶ್ಮೀರದ ಗಡಿ ನಿಯಂತ್ರಣ ರೇಖೆಯಲ್ಲಿ ಅಪ್ರಚೋದಿತ ಗುಂಡಿನ ದಾಳಿ ಮುಂದುವರಿಸಿರುವ ಪಾಕ್ ಈ ಮೂಲಕ ಉದ್ವಿಗ್ನತೆಯನ್ನು ಹೆಚ್ಚಿಸುತ್ತಿದೆ. ಬುಧವಾರ ಗಡಿಭಾಗದ ಗ್ರಾಮಗಳ ಮೇಲೆ ನಡೆಸಿದ ಶೆಲ್ ದಾಳಿಯಲ್ಲಿ 16 ಜನ ಅಮಾಯಕರು ಪ್ರಾಣ ತೊರೆದಿದ್ದಾರೆ.

ಭಯೋತ್ಪಾದಕರ ಅಡಗುತಾಣಗಳು, ಶಿಬಿರಗಳು, ತರಬೇತಿ ಕೇಂದ್ರಗಳು ಪಾಕ್ ನೆಲದಲ್ಲೇ ಕಾರ್ಯಾಚರಿಸುತ್ತಿರುವುದು ಭಾರತದ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ಮೂಲಕ ಮತ್ತೊಮ್ಮೆ ಸ್ಪಷ್ಟಗೊಂಡಿದೆ. ಪಹಲ್ಗಾಮ್ ದಾಳಿಯಲ್ಲಿ ಪಾಕ್ ಕೈವಾಡದ ಬಗ್ಗೆ ಭಾರತ ಸಾಕಷ್ಟು ಸಾಕ್ಷ್ಯಗಳನ್ನು ಒದಗಿಸಿದೆ. ಅಲ್ಲದೆ, ಪಾಕ್​ನ ಕೆಲ ನಾಯಕರೇ ಅವರ ದೇಶವು ಕಳೆದ ಮೂರು ದಶಕಗಳಿಂದ ಭಯೋತ್ಪಾದನೆಗೆ ಎಲ್ಲ ಬಗೆಯ ಸಹಕಾರ ನೀಡುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ. ಅಂತಾರಾಷ್ಟ್ರೀಯ ವಲಯವು ಏಕಕಂಠದಲ್ಲಿ ಪಹಲ್ಗಾಮ್ ದಾಳಿಯನ್ನು ಖಂಡಿಸಿದ್ದು, ತಪ್ಪಿತಸ್ಥರನ್ನು ಶಿಕ್ಷೆಗೊಳಪಡಿಸಿ ಎಂದು ಹೇಳುವ ಮೂಲಕ ಭಯೋತ್ಪಾದನೆಯನ್ನು ಸಹಿಸಲಾಗುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಆದರೆ, ಭಾರತ ನಡೆಸಿದ ವಾಯುದಾಳಿಯಲ್ಲಿ ಮೃತಪಟ್ಟ ಭಯೋತ್ಪಾದಕರ ಅಂತ್ಯಸಂಸ್ಕಾರದಲ್ಲಿ ಪಾಕ್ ಸೇನೆಯ ಅಧಿಕಾರಿಗಳು ಭಾಗವಹಿಸುವ ಮೂಲಕ, ಅವರ ‘ಉಗ್ರಸ್ನೇಹ ನೀತಿ’ ಮತ್ತೊಮ್ಮೆ ಬಯಲುಗೊಂಡಿದೆ.

ಪಾಕಿಸ್ತಾನ ಪದೇಪದೆ ಗಂಭೀರ ಪ್ರಮಾದಗಳನ್ನು ಮಾಡುತ್ತಿದೆ. ಆದರೆ, ವಿನಾಕಾರಣ ಭಾರತದ ಮೇಲೆಯೇ ಆರೋಪ ಹೊರಿಸುತ್ತಿದೆ. ಭಯೋತ್ಪಾದನೆಯನ್ನು ನಿಗ್ರಹಿಸಲಾಗದ, ಉಗ್ರರಿಗೆ ಆಶ್ರಯ ನೀಡಿರುವ, ಉಗ್ರ ಸಂಘಟನೆಗಳನ್ನು ಪೋಷಿಸುತ್ತಿರುವ ಪಾಕಿಸ್ತಾನ ಭಯೋತ್ಪಾದನೆ ರಫ್ತು ಮೂಲಕ ಶಾಂತಿಗೆ ಕಂಟಕವಾಗಿದೆ. ವಾಸ್ತವ ಹೀಗಿರುವಾಗ ಭಾರತದ ಮೇಲೆ ದಾಳಿ ನಡೆಸುವ ಯುದ್ಧೋನ್ಮಾದದ ಮಾತುಗಳನ್ನು ಆಡುತ್ತಿದೆ. ಆ ದೇಶ ಎಂದೂ ಸುಧಾರಿಸುವುದಿಲ್ಲ, ತನ್ನ ತಪು್ಪಗಳನ್ನು ಒಪ್ಪಿಕೊಳ್ಳುವುದಿಲ್ಲ ಎಂಬುದಕ್ಕೆ ಈ ಬೆಳವಣಿಗೆಗಳು ಸಾಕ್ಷಿಯಾಗಿವೆ. ‘ಆಪರೇಷನ್ ಸಿಂಧೂರ’ ಜಾರಿಯಲ್ಲಿದೆ ಎಂದು ಹೇಳುವ ಮೂಲಕ ಭಾರತ ಸ್ಪಷ್ಟ ಸಂದೇಶ ರವಾನಿಸಿದೆ. ಆದರೆ, ತನ್ನ ಬೇಜವಾಬ್ದಾರಿ ನಡವಳಿಕೆ ಮತ್ತು ಹೇಳಿಕೆಗಳಿಂದ ಪಾಕ್ ಭಾರತದ ತಾಳ್ಮೆಯನ್ನು ಪರೀಕ್ಷಿಸುತ್ತಿದೆ ಮತ್ತು ಉದ್ವಿಗ್ನತೆಯನ್ನು ಹೆಚ್ಚಿಸುತ್ತಿದೆ. ಇದಕ್ಕಾಗಿ ದೊಡ್ಡ ಬೆಲೆ ತೆರಬೇಕಾಗುತ್ತದೆ ಎಂಬ ವಾಸ್ತವವನ್ನು ಪಾಕ್ ಮರೆತಂತಿದೆ. ಭಾರತದ ಸೇನೆ ಯಾವುದೇ ಸವಾಲು, ಸಂದರ್ಭವನ್ನು ಎದುರಿಸಲು ಸನ್ನದ್ಧವಾಗಿದೆ. ಸೂಕ್ತ ಕಾರ್ಯಾಚರಣೆಗೆ ಮುಕ್ತ ಸ್ವಾತಂತ್ರ್ಯವನ್ನು ಸೇನೆಗೆ ಕೇಂದ್ರ ಸರ್ಕಾರ ನೀಡಿದೆ. ಹಾಗಾಗಿ, ಪಾಕ್ ತನ್ನ ನಿಲುವು ಬದಲಿಸಿಕೊಂಡು, ತಪ್ಪನ್ನು ಒಪ್ಪಿಕೊಂಡರೆ ಕ್ಷೇಮ. ಇಲ್ಲದಿದಲ್ಲಿ ತನ್ನ ಪಾಪಕ್ಕೆ ತಕ್ಕ ಶಾಸ್ತಿ ಅನುಭವಿಸುವ ಕಾಲ ದೂರವಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net