

ರಾಜ್ಯದ ಕೆಲ ಭಾಗಗಳಲ್ಲಿ ಬರಗಾಲ, ಮತ್ತೆ ಕೆಲವು ಕಡೆ ನೆರೆಯ ಸ್ಥಿತಿ ಸೃಷ್ಟಿಯಾಗಿದ್ದು, ಕೃಷಿ ಕ್ಷೇತ್ರ ಸಂಕಷ್ಟಕ್ಕೆ ಸಿಲುಕಿದೆ. ಗ್ರಾಮೀಣ ಭಾಗದ ಕಳವಳಗಳನ್ನು, ಅಲ್ಲಿನ ಆರ್ಥಿಕತೆಯ ಸಂಕಟವನ್ನು ಸಂವೇದನೆಯಿಂದ ಗಮನಿಸಿ, ಸೂಕ್ತ ಪರಿಹಾರವನ್ನು ಒದಗಿಸುವ ಕೆಲಸ ಪ್ರಾಮಾಣಿಕ ಹಾಗೂ ಪರಿಣಾಮಕಾರಿ ನೆಲೆಯಲ್ಲಿ ನಡೆಯಬೇಕಿದೆ. ಕೃಷಿ ಕ್ಷೇತ್ರದ ಹಿನ್ನಡೆ ಇಡೀ ಆರ್ಥಿಕತೆಯ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತದೆ ಎಂಬುದನ್ನು ಮರೆಯುವಂತಿಲ್ಲ. ಭತ್ತದ ಇಳುವರಿ ಕಡಿಮೆಯಾಗಿರುವುದರಿಂದ ಈಗಾಗಲೇ ಅಕ್ಕಿಯ ದರದಲ್ಲಿ ಭಾರಿ ಏರಿಕೆಯಾಗಿದೆ. ಜೀವನಾವಶ್ಯಕ ವಸ್ತುಗಳ ಬೆಲೆಯೇರಿಕೆಯ ಭಾರ ಶ್ರೀಸಾಮಾನ್ಯರನ್ನು ಹೈರಾಣಾಗಿಸಿದ್ದು, ಹಳ್ಳಿಗಳ ಸ್ಥಿತಿ ಇನ್ನಷ್ಟು ದಯನೀಯವಾಗಿದೆ.
ಕೃಷಿ ಚಟುವಟಿಕೆಗಳು ಇಲ್ಲದ್ದರಿಂದ ಕೃಷಿ ಕಾರ್ವಿುಕರು ದೊಡ್ಡ ಪ್ರಮಾಣದಲ್ಲಿ ಮಹಾನಗರಗಳಿಗೆ ಗುಳೆ ಹೋಗುತ್ತಿದ್ದಾರೆ. ಕಲ್ಯಾಣ ಕರ್ನಾಟಕ ಹಾಗೂ ಕಿತ್ತೂರು ಕರ್ನಾಟಕ ಭಾಗಗಳಲ್ಲಿ ಈ ಸಮಸ್ಯೆ ವ್ಯಾಪಕವಾಗಿದ್ದು, ಜನರು ಸಂಕಷ್ಟಕ್ಕೆ ಈಡಾಗಿದ್ದಾರೆ. ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕಿನ ಮೋತಿಕಲ್ ತಾಂಡಾ, ದೂಪದಹಳ್ಳಿ ಸೇರಿ ವಿವಿಧ ಗ್ರಾಮಗಳಿಂದ 2 ಸಾವಿರಕ್ಕೂ ಅಧಿಕ ಜನರು ಜುಲೈ ತಿಂಗಳಲ್ಲೇ ಗುಳೆ ಹೋಗಿರುವುದು ಸಮಸ್ಯೆಯ ತೀವ್ರತೆಗೆ ಸಾಕ್ಷಿಯಾಗಿದೆ. ವಿಜಯಪುರ, ಕೊಪ್ಪಳ, ಗದಗ, ಹಾವೇರಿ, ಯಾದಗಿರಿ, ಕಲಬುರಗಿ, ಬೀದರ್ ಜಿಲ್ಲೆಗಳಲ್ಲೂ ಸ್ಥಿತಿ ಭಿನ್ನವಾಗೇನೂ ಇಲ್ಲ. ಬರಗಾಲ ಬಂದಾಗ ಅಥವಾ ನೆರೆಯ ಸ್ಥಿತಿ ಸೃಷ್ಟಿಯಾದಾಗ ಇಲ್ಲಿನ ಹಳ್ಳಿಗಳೇ ಖಾಲಿಯಾಗುತ್ತವೆ. ಆದರೆ, ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ಪ್ರಯತ್ನಗಳು ಗಂಭೀರವಾಗಿ ನಡೆದಿಲ್ಲ.
ಸ್ಥಳೀಯವಾಗಿ ಉದ್ಯೋಗಸೃಷ್ಟಿ ಆಗದ ಪರಿಣಾಮ ಗುಳೆ ಸಾಮಾನ್ಯ ಎಂಬಂತಾಗಿದೆ. ಕೃಷ್ಣಾ ಮತ್ತು ಮಹಾದಾಯಿ ಸೇರಿದಂತೆ ಹಲವು ಪ್ರಮುಖ ನೀರಾವರಿ ಯೋಜನೆಗಳು ದಶಕಗಳಿಂದ ನನೆಗುದಿಗೆ ಬಿದ್ದಿರುವುದರಿಂದ, ಈ ಭಾಗದ ಕೃಷಿ ಕೇವಲ ಮಳೆಯನ್ನೇ ನಂಬಿ, ನಷ್ಟವೇ ಕಟ್ಟಿಟ್ಟ ಬುತ್ತಿ ಎಂಬಂತಾಗಿದೆ. ಗ್ರಾಮೀಣ ಭಾಗದಲ್ಲಿ ಜುಲೈ 1ರಿಂದ ವಿಬಿ-ಜಿರಾಮ್ ಯೋಜನೆ ಜಾರಿಯಾಗಿದ್ದರೂ, ಉದ್ಯೋಗ ಖಾತರಿ ಆಶಯ ಇನ್ನೂ ಈಡೇರಿಲ್ಲ. ಉತ್ತರ ಮತ್ತು ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಕೃಷಿ ಬಿಟ್ಟರೆ ಪರ್ಯಾಯ ಉದ್ಯೋಗ ಸೃಷ್ಟಿಸುವ ಸಣ್ಣ ಅಥವಾ ಮಧ್ಯಮ ಗಾತ್ರದ ಕೈಗಾರಿಕೆಗಳು ತೀರಾ ವಿರಳ. ಹೀಗಾಗಿ, ಬದುಕನ್ನು ಕಟ್ಟಿಕೊಳ್ಳಲು ಮಹಾನಗರಗಳಿಗೆ ಬಂದು, ಕಡಿಮೆ ಕೂಲಿಗೆ ಕೆಲಸ ನಿರ್ವಹಿಸುವಂಥ ದಯನೀಯ ಸ್ಥಿತಿ ಇದೆ. ಸ್ಥಳೀಯ ಮಟ್ಟದಲ್ಲೇ ಉದ್ಯೋಗ ಸೃಷ್ಟಿಸುವ ಪ್ರಯತ್ನಗಳು ತೀವ್ರಗೊಂಡರೆ, ಗುಳೆ ಸಮಸ್ಯೆಗೆ ಒಂದಿಷ್ಟು ಕಡಿವಾಣ ಹಾಕಬಹುದು.
ವಿಬಿ-ಜಿರಾಮ್ ಯೋಜನೆಯಲ್ಲಿ ಮಾನವ ದಿನ ಸೃಜನೆ ಮಾಡದೆ ನಿರ್ಲಕ್ಷ್ಯ ತೋರಿರುವ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ (ಪಿಡಿಒ) ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ ಸೂಚನೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಗುರುವಾರ ಇಲಾಖೆಯ ಉನ್ನತಾಧಿಕಾರಿಗಳ ಸಭೆ ನಡೆಸಿದ ಖಂಡ್ರೆ, ವಿಬಿ-ಜಿರಾಮ್ಯುಡಿ ಪ್ರತಿ ದಿನ 5 ಲಕ್ಷ ಮಾನವದಿನ ಸೃಜನೆ ಆಗುವವರಗೆ ಕಾರ್ಯದರ್ಶಿಗಳು, ಆಯುಕ್ತರು ಎಲ್ಲ ಜಿಲ್ಲಾ ಪಂಚಾಯಿತಿಗಳ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿಗಳೊಂದಿಗೆ ನಿತ್ಯ ವರ್ಚುವಲ್ ಸಭೆ ನಡೆಸಿ, ಪ್ರಗತಿ ಪರಿಶೀಲನೆ ನಡೆಬೇಕೆಂದು ಸೂಚಿಸಿದ್ದಾರೆ.
ಗ್ರಾಮ ಪಂಚಾಯಿತಿ ಮಟ್ಟದಲ್ಲಿ ವಿಬಿ-ಜಿರಾಮ್ ಯೋಜನೆ ಯಶಸ್ವಿಯಾಗಿ ಜಾರಿಗೆ ತಂದರೆ, ಗ್ರಾಮೀಣ ಭಾಗದ ಆರ್ಥಿಕತೆ ಚೇತರಿಸಿಕೊಳ್ಳಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಗಂಭೀರ ಪ್ರಯತ್ನಗಳು ನಡೆಯಲಿ. ದೈಹಿಕ ಶ್ರಮದ ಕೆಲಸಗಳಲ್ಲದೆ, ಸ್ಥಳೀಯ ಅಗತ್ಯಕ್ಕೆ ತಕ್ಕಂತೆ ಕೌಶಲ ಆಧಾರಿತ ಕೆಲಸಗಳನ್ನು ಸೇರಿಸಬೇಕು. ಮುಖ್ಯವಾಗಿ, ಕೂಲಿ ಹಣ ನೇರವಾಗಿ ಮತ್ತು ತಕ್ಷಣವೇ ಶ್ರಮಿಕರ ಖಾತೆಗೆ ಜಮೆಯಾಗುವಂತೆ ಪಾರದರ್ಶಕತೆ ತರಬೇಕು. ಗ್ರಾಮೀಣ ಭಾಗದಲ್ಲಿ ಆರ್ಥಿಕ ಸ್ಥಿರತೆ ತರುವ ನಿಟ್ಟಿನಲ್ಲಿ ದೀರ್ಘಾವಧಿ ಯೋಜನೆಗಳನ್ನು ರೂಪಿಸಬೇಕಿದೆ. ಆಗಲೇ ಹಳ್ಳಿಗಳು ಖಾಲಿಯಾಗುವುದನ್ನು ತಡೆಯಲು ಸಾಧ್ಯ.