

ಜನರನ್ನು ಓಲೈಸಲು, ಮತಗಳನ್ನು ಸೆಳೆಯಲು ಈಗ ರಾಜಕೀಯ ಪಕ್ಷಗಳ ಮಧ್ಯೆ ಅನಾರೋಗ್ಯಕರ ಸ್ಪರ್ಧೆ ಏರ್ಪಟ್ಟಿರುವುದು ದುರದೃಷ್ಟಕರ. ಜನರ ಜೀವನಸ್ತರ ಉತ್ತಮಪಡಿಸಲು ಶ್ರಮಿಸಬೇಕು ಎಂಬುದೇನೋ ನಿಜ. ಆದರೆ, ಇದಕ್ಕೆ ವ್ಯತಿರಿಕ್ತವಾಗಿ ರಾಜಕೀಯ ಪಕ್ಷಗಳು ಉಚಿತ ಕೊಡುಗೆಗಳ ಭರವಸೆ ನೀಡುತ್ತಿವೆ.
ಹೀಗೆ ಭರವಸೆ ನೀಡುವ ಮುನ್ನ ಆಯಾ ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಅವಲೋಕಿಸುವ ಗೋಜಿಗೆ ಹೋಗುವುದಿಲ್ಲ. ಆದಾಯದ ಮೂಲಗಳು ಯಾವವು, ಖರ್ಚುಗಳು ಎಷ್ಟು, ಸಾಲದ ಪ್ರಮಾಣ, ಅದಕ್ಕೆ ಕಟ್ಟುತ್ತಿರುವ ಬಡ್ಡಿ ಎಷ್ಟಿದೆ ಎಂಬಂಥ ಅಂಶಗಳನ್ನೆಲ್ಲ ಮೊದಲು ಪರಾಮರ್ಶೆ ಮಾಡಬೇಕು. ಆದರೆ, ಅಧಿಕಾರಕ್ಕೆ ಬರಬೇಕು ಎಂಬ ಏಕೈಕ ಉದ್ದೇಶದಿಂದ ಹೀಗೆ ಹಿಂದೆಮುಂದೆ ಯೋಚನೆ ಮಾಡದೆ ಬೊಕ್ಕಸವನ್ನು ಬರಿದು ಮಾಡುವುದು ಸರಿಯಾದ ಕ್ರಮವಲ್ಲ.
ವಿಚಿತ್ರವೆಂದರೆ, ಉಚಿತ ಯೋಜನೆಗಳನ್ನು ಘೋಷಿಸುವ ವಿಷಯದಲ್ಲಿ ಆಡಳಿತ ಪಕ್ಷ, ವಿರೋಧ ಪಕ್ಷ ಎಂಬ ಭೇದವಿಲ್ಲ, ದೊಡ್ಡ ಪಕ್ಷ, ಸಣ್ಣ ಪಕ್ಷ ಎಂಬ ಭಿನ್ನತೆಯೂ ಇಲ್ಲ. ಆರಂಭದಲ್ಲಿ ಇಂಥ ‘ಕೊಡುಗೆ’ಗಳನ್ನು ವಿರೋಧಿಸಿದ್ದ ಬಿಜೆಪಿ ಕೂಡ ಈಗ ಮತಗಳು ತಪ್ಪಿಹೋಗಬಾರದು ಎಂಬ ಕಾರಣಕ್ಕಾಗಿ ಇದೇ ಮಾರ್ಗ ಹಿಡಿದಿದೆ. ಕಾಂಗ್ರೆಸ್ ಅಂತೂ ‘ಗ್ಯಾರಂಟಿ’ಗಳನ್ನೇ ನೆಚ್ಚಿಕೊಂಡಿದೆ.
ದೆಹಲಿ ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇದ್ದು, ಪ್ರಚಾರ ರಂಗೇರಿದೆ. ರಾಜಧಾನಿ ದೆಹಲಿಯ ಚುನಾವಣಾ ಕಣದಲ್ಲೂ ಈ ‘ಉಚಿತ ಯೋಜನೆ’ಗಳದ್ದೇ ಪ್ರತಿಧ್ವನಿ ಕೇಳಿಬರುತ್ತಿದೆ. ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದವರಿಗೆ ಒಂದಿಷ್ಟು ಸೌಕರ್ಯ ಕಲ್ಪಿಸುವುದು ಅವಶ್ಯ. ಆದರೆ, ಹೀಗೆ ಮತಗಳನ್ನು ಸೆಳೆಯಲು ಆರ್ಥಿಕತೆಗೆ ಪೆಟ್ಟು ನೀಡಿ ಉಚಿತ ಕೊಡುಗೆ ಘೋಷಿಸುವುದು ಸೂಕ್ತವಲ್ಲ. ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ ಬೆನ್ನಲ್ಲೇ ಬಿಜೆಪಿ ಸಹ ಇದೇ ದಾರಿ ತುಳಿದಿದೆ. ಈ ಬಗೆಯ ಪ್ರವೃತ್ತಿ ದೀರ್ಘಾವಧಿಯಲ್ಲಿ ಹಲವು ತೊಂದರೆಗಳನ್ನು ತಂದೊಡ್ಡುತ್ತದೆ ಎಂದು ಆರ್ಥಿಕ ತಜ್ಞರು ಎಚ್ಚರಿಕೆ ನೀಡುತ್ತ ಬಂದಿದ್ದಾರಾದರೂ, ಯಾವುದೇ ರಾಜಕೀಯ ಪಕ್ಷಗಳು ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ.
ದೆಹಲಿಯಲ್ಲಂತೂ ಆಮ್ ಆದ್ಮಿ ಪಕ್ಷದ ಸರ್ಕಾರ ಉಚಿತ ವಿದ್ಯುತ್, ಉಚಿತ ಕುಡಿಯುವ ನೀರು, ಅಲ್ಲದೆ, ಒಂಬತ್ತು ಇಲಾಖೆಗಳ 27 ಯೋಜನೆಗಳಡಿ ವಿವಿಧ ರೀತಿಯ ಸಬ್ಸಿಡಿಯನ್ನು ಒದಗಿಸುತ್ತಿದೆ. ಇದರಿಂದ ದೆಹಲಿ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಆದರೂ, ಈ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದರೆ ಬಾಲಕರಿಗೆ ಉಚಿತ ಬಸ್ ಪ್ರಯಾಣ, ಮೆಟ್ರೋ ಪ್ರಯಾಣ ದರದಲ್ಲಿ ಶೇ.50ರಷ್ಟು ರಿಯಾಯ್ತಿ ನೀಡುವುದಾಗಿ ಆಪ್ ಘೋಷಿಸಿದೆ.
ಅಲ್ಲದೆ, ದೆಹಲಿಯಲ್ಲಿ 2019ರಿಂದಲೂ ಮಹಿಳೆಯರು ಬಸ್ನಲ್ಲಿ ಉಚಿತವಾಗಿ ಪ್ರಯಾಣ ಮಾಡುತ್ತಿದ್ದಾರೆ. ಆದರೆ, ಈ ಎಲ್ಲ ಯೋಜನೆಗಳು ದೀರ್ಘಾವಧಿ ನಡೆಸಲು ಸಾಧ್ಯವೇ? ಬೊಕ್ಕಸದ ಹಣವೆಲ್ಲ ಉಚಿತ ಯೋಜನೆಗಳಿಗೆ ವೆಚ್ಚವಾಗಿ ಬಿಟ್ಟರೆ ಅಭಿವೃದ್ಧಿ ಯೋಜನೆಗಳಿಗೆ ಎಲ್ಲಿಂದ ಹಣ ಹೊಂದಿಸಲಾಗುತ್ತದೆ? ಮೂಲಸೌಕರ್ಯ ವೃದ್ಧಿ, ಆರೋಗ್ಯ ಸೇವೆಗಳ ಹೆಚ್ಚಳವಾಗದೆ ಅಭಿವೃದ್ಧಿಯ ಮೆಟ್ಟಿಲು ಏರಲು ಸಾಧ್ಯವಿಲ್ಲ. ಈ ಎಲ್ಲ ಅಂಶಗಳ ಬಗ್ಗೆ ರಾಜಕೀಯ ಪಕ್ಷಗಳು ಮುಕ್ತ ಮನಸ್ಸಿನಿಂದ ಯೋಚಿಸಬೇಕು. ಒಂದು ಪಕ್ಷ ಘೋಷಿಸಿದೆ ಅಂತ ಮತ್ತೊಂದು ಪಕ್ಷ ಅದನ್ನೇ ಅನುಕರಣೆ ಮಾಡುವುದನ್ನು ಬಿಟ್ಟು ವಿವೇಚನೆಯಿಂದ ನಡೆದುಕೊಂಡರೆ ಆರ್ಥಿಕತೆಯ ಆರೋಗ್ಯವನ್ನೂ ಕಾಪಾಡಿಕೊಳ್ಳಬಹುದು ಎಂಬುದನ್ನು ಮರೆಯುವಂತಿಲ್ಲ.