

ಇಂದು (ಸೋಮವಾರ) ವಿಧಾನಮಂಡಲದ ಅಧಿವೇಶನ ಆರಂಭವಾಗಲಿದ್ದು, ಮಾರ್ಚ್ 21ರವರೆಗೆ ನಡೆಯಲಿದೆ. ಸರ್ಕಾರ ಹಾಗೂ ಪ್ರತಿಪಕ್ಷಗಳು ಉತ್ಸಾಹದಲ್ಲಿವೆ. ಸರ್ಕಾರದ ನೀತಿಗಳನ್ನು ವಿರೋಧಿಸಲು, ವೈಫಲ್ಯಗಳನ್ನು ಎತ್ತಿ ತೋರಿಸಲು ಬಿಜೆಪಿ ಹಾಗೂ ಜಾತ್ಯತೀತ ಜನತಾದಳ ನಾಯಕರು ಸಜ್ಜಾಗಿದ್ದಾರೆ.
ಬಂಡವಾಳ ಹೂಡಿಕೆ ಸಮಾವೇಶದ ಯಶಸ್ಸು ಹಾಗೂ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಬಗ್ಗೆ ಮಾತನಾಡಲು ಸರ್ಕಾರದಲ್ಲಿ ಇರುವವರು ಕಾತರರಾಗಿದ್ದಾರೆ. ಮಾರ್ಚ್ 7ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಮಂಡಿಸಲಿದ್ದು, ವಿತ್ತೀಯ ಕೊರತೆಗೆ ಹೇಗೆ ಪರಿಹಾರ ಕಂಡುಕೊಳ್ಳಲಿದ್ದಾರೆ ಎಂಬ ಕುತೂಹಲವೂ ಇದೆ. ಬಳಿಕ ಬಜೆಟ್ ಕುರಿತಂತೆ ಚರ್ಚೆ ನಡಯಲಿದ್ದು, ಈ ಬಾರಿಯಾದರೂ ಅಭಿವೃದ್ಧಿ ಕಾರ್ಯಗಳಿಗೆ ಸೂಕ್ತ ಅನುದಾನ ಸಿಗಲಿದೆಯೇ ಕಾದು ನೋಡಬೇಕು.
ರಾಜ್ಯವು ಗಂಭೀರ ಸ್ವರೂಪದ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಆರ್ಥಿಕ ದುಸ್ಥಿತಿ ಚಿಂತೆಗೀಡುಮಾಡಿದೆ. ಸಾಲದ ಪ್ರಮಾಣ ಗಣನೀಯವಾಗಿ ಹೆಚ್ಚುತ್ತಿದೆ. ಮತ್ತೊಂದೆಡೆ, ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದ್ದರೂ ಮೈಕ್ರೋ ಫೈನಾನ್ಸ್ಗಳ ಹಾವಳಿಗೆ ಕಡಿವಾಣ ಬಿದ್ದಿಲ್ಲ. ಸಾಲ ಪಡೆದ ಬಡವರು ಮತ್ತು ಗ್ರಾಮೀಣ ಪ್ರದೇಶದವರು ಪರಿಹಾರ ಕಾಣದೆ ಕಂಗಾಲಾಗಿದ್ದಾರೆ. ಸಾಲಗಾರರ ಕಾಟಕ್ಕೆ ಬೇಸತ್ತು ಹಲವರು ಆತ್ಮಹತ್ಯೆಗೆ ಶರಣಾದ ಹಲವು ಘಟನೆಗಳು ಕಳೆದ ಕೆಲ ತಿಂಗಳಲ್ಲಿ ವರದಿಯಾಗಿವೆ.
ರೈತರ ಸಂಕಷ್ಟ ಮುಂದುವರಿದಿದೆ. ವಿದ್ಯುತ್ ಸಮಸ್ಯೆಯಿಂದ ಗ್ರಾಮೀಣ ಪ್ರದೇಶದ ಜನರು ಹೈರಾಣಾಗಿದ್ದಾರೆ. ರಾಜ್ಯದ ಒಂಬತ್ತು ವಿಶ್ವವಿದ್ಯಾಲಯಗಳನ್ನು ಮುಚ್ಚಲು ಸಚಿವ ಸಂಪುಟ ಉಪಸಮಿತಿ ಶಿಫಾರಸು ಮಾಡಿದ್ದು, ಈ ಬಗ್ಗೆ ಅಲ್ಲಿನ ವಿದ್ಯಾರ್ಥಿಗಳು ಮತ್ತು ಅವರ ಪಾಲಕರಲ್ಲಿ ತಳಮಳ ಮೂಡಿದೆ. ಹೀಗೆ ಶೀಘ್ರದಲ್ಲೇ ಸ್ಪಂದಿಸಿ, ಪರಿಹಾರ ಕಂಡುಕೊಳ್ಳಬೇಕಾದ ಹಲವು ಸವಾಲು, ಸಮಸ್ಯೆಗಳಿವೆ.
ಪ್ರತಿ ಬಾರಿ ಅಧಿವೇಶನ ನಡೆದಾಗಲೂ ಗದ್ದಲ, ಗೊಂದಲ ಮರುಕಳಿಸಿ ಯಾವುದೇ ಚರ್ಚೆಗಳು ಸಮರ್ಪಕವಾಗಿ ನಡೆಯುತ್ತಿಲ್ಲ. ಇದು ಜನರ ನಂಬಿಕೆ ಹಾಗೂ ಪ್ರಜಾತಂತ್ರದ ಮೌಲ್ಯಗಳಿಗೆ ಎಸಗುವ ದ್ರೋಹ. ಅಧಿವೇಶನ ಎಂಬುದು ರಾಜಕೀಯ ಶಕ್ತಿಯನ್ನು ತೋರಿಸುವ ಅಥವಾ ಮಾತಿನ ಅಬ್ಬರದಿಂದ ಮೂಲವಿಷಯವನ್ನು ಮರೆಮಾಚುವ ವೇದಿಕೆಯಲ್ಲ. ಸಂಸದೀಯ ಮೌಲ್ಯಗಳ ಪರಂಪರೆ ಮತ್ತು ಘನತೆಯನ್ನು ಅಧಿವೇಶನದ ಕಲಾಪ ಎತ್ತಿ ಹಿಡಿಯಬೇಕು.
ಪ್ರಸಕ್ತ ಅಧಿವೇಶನದ ಬಗ್ಗೆ ಜನರಲ್ಲಿ ಸಾಕಷ್ಟು ನಿರೀಕ್ಷೆಗಳಿವೆ ಎಂಬ ವಾಸ್ತವವನ್ನು ಸರ್ಕಾರ ಮತ್ತು ಪ್ರತಿಪಕ್ಷಗಳು ಮನಗಾಣಬೇಕು. ಸಮಸ್ಯೆಗಳ ಚರ್ಚೆ ಮತ್ತು ಅವುಗಳಿಗೆ ಪರಿಹಾರ ಕಂಡುಕೊಳ್ಳಲು ಅಧಿವೇಶನ ಪರಿಣಾಮಕಾರಿ ವೇದಿಕೆಯಾಗಬೇಕು. ಅದನ್ನು ಬಿಟ್ಟು ರಾಜಕೀಯ ಪ್ರತಿಷ್ಠೆ, ಸ್ವಾರ್ಥ, ಆರೋಪ-ಪ್ರತ್ಯಾರೋಪ, ಧರಣಿ, ಗದ್ದಲ, ಗೊಂದಲಗಳಲ್ಲಿ ಸಮಯ ವ್ಯರ್ಥವಾಗಬಾರದು.
ಜನರ ತೆರಿಗೆ ಹಣದಿಂದಲೇ ಅಧಿವೇಶನ ನಡೆಯುತ್ತದೆ, ಜನಪ್ರತಿನಿಧಿಗಳಿಗೆ ಸೌಲಭ್ಯಗಳು ದೊರೆಯುತ್ತವೆ. ಹಾಗಾಗಿ, ಅಧಿವೇಶನದ ಒಂದು ಕ್ಷಣವನ್ನೂ ಹಾಳು ಮಾಡಿದರೂ, ಅದರಿಂದ ಜನರ ತೆರಿಗೆ ಹಣ ವ್ಯರ್ಥವಾದಂತೆ. ಇದು ನಮ್ಮ ಜನಪ್ರತಿನಿಧಿಗಳಿಗೆ ಗೊತ್ತಿಲ್ಲ ಅಂತೇನಲ್ಲ. ಆದರೆ, ರಾಜಕೀಯದ ಕಚ್ಚಾಟಗಳನ್ನು ಬದಿಗಿರಿಸಿ ಜನರ ದನಿಯಾಗಿ ಕಾರ್ಯನಿರ್ವಹಿಸುವ ಬದ್ಧತೆಯನ್ನು ಮೆರೆಯಬೇಕಿದೆ ಅಷ್ಟೇ.