ಸಂಪಾದಕೀಯ: ತ್ವರಿತಗತಿಯಲ್ಲಿ ತನಿಖೆಯಾಗಲಿ

as
Published on

ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕ ಚಂದ್ರಶೇಖರನ್ ಆತ್ಮಹತ್ಯೆ ಪ್ರಕರಣ ರಾಜ್ಯ ರಾಜಕೀಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿರುವ ಮಧ್ಯೆಯೇ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಸಂತೇಬೆನ್ನೂರಿನ ಗುತ್ತಿಗೆದಾರರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತ (ಕೆಆರ್​ಐಡಿಎಲ್) ಅಡಿಯಲ್ಲಿ ಗುತ್ತಿಗೆದಾರ ಪಿ.ಎಸ್. ಗೌಡರ್ ಪಡೆದಿದ್ದ ಕಾಮಗಾರಿ 2023-24ರ ಆರ್ಥಿಕ ವರ್ಷದಲ್ಲಿ ಪೂರ್ಣಗೊಂಡಿತ್ತು. ಆದರೆ ಕಾಮಗಾರಿಯ ಮೊತ್ತವನ್ನು ಕೆಆರ್​ಐಡಿಎಲ್ ಪಾವತಿ ಮಾಡಿರಲಿಲ್ಲ. ಇದನ್ನು ಸ್ವತಃ ಅವರೇ ಡೆತ್​ನೋಟ್​ನಲ್ಲಿ ಬರೆದಿದ್ದಾರೆ ಎಂದು ವರದಿಯಾಗಿದೆ. ಅವರ ಪತ್ನಿ ನೀಡಿದ ದೂರು ಆಧರಿಸಿ ಸ್ಥಳೀಯ ಪೊಲೀಸರು ಕೆಆರ್​ಐಡಿಎಲ್ ಅಧಿಕಾರಿಗಳ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಗುತ್ತಿಗೆದಾರರಿಗೆ ಸಕಾಲದಲ್ಲಿ ಕಾಮಗಾರಿಯ ಮೊತ್ತ ಪಾವತಿ ಆಗುತ್ತಿಲ್ಲ ಎಂಬುದು ಈಗಾಗಲೇ ಜಗಜ್ಜಾಹೀರಾಗಿರುವ ವಿಷಯ. ಗುತ್ತಿಗೆದಾರರ ಸಂಘದ ಪದಾಧಿಕಾರಿಗಳೇ ಹಲವು ಬಾರಿ ಈ ಆರೋಪ ಮಾಡಿದ್ದಾರೆ. ಕೌಟುಂಬಿಕ ವ್ಯಾಜ್ಯದ ಹಿನ್ನೆಲೆಯಲ್ಲಿ ಗೌಡರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಮಾತು ಕೂಡ ಕೇಳಿಬಂದಿದ್ದು, ನಿಜವಾದ ಕಾರಣ ಪೊಲೀಸರ ತನಿಖೆಯಿಂದಷ್ಟೇ ಹೊರಬರಬೇಕಿದೆ.

ಇನ್ನೊಂದೆಡೆ, ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕ ಚಂದ್ರಶೇಖರನ್ ಶಿವಮೊಗ್ಗದ ತಮ್ಮ ನಿವಾಸದಲ್ಲಿ ಮೇ 27ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಆ ಪ್ರಕರಣದಲ್ಲಿ ಕೂಡ ಹಲವು ಪ್ರಶ್ನೆಗಳು ಹಾಗೆಯೇ ಉಳಿದಿವೆ. ನಿಗಮದ ಮುಖ್ಯ ಖಾತೆಯಿಂದ ಬೆಂಗಳೂರಿನ ಎಂ.ಜಿ. ರಸ್ತೆ ಶಾಖೆಯ ಅನಧಿಕೃತ ಖಾತೆಗೆ ಮೂರು ಸಲ ದೊಡ್ಡ ಮೊತ್ತ ವರ್ಗಾವಣೆ ಆಗಿದೆ. ನಿಗಮದ ಖಾತೆಯಲ್ಲಿ ಯೋಜನೆಗಳಿಗೆ ಮೀಸಲಿಟ್ಟ 187 ಕೋಟಿ ರೂ. ಇತ್ತು. ಲೋಕಸಭೆ ಚುನಾವಣೆ ನೀತಿಸಂಹಿತೆ ಜಾರಿಯಲ್ಲಿ ಇದ್ದುದರಿಂದ ಸರ್ಕಾರ ಅಧಿಕೃತ ಆದೇಶ ಹೊರಡಿಸಲು ಸಾಧ್ಯವಿಲ್ಲ. ನಿಗಮದ ಆಡಳಿತ ಮಂಡಳಿಯ ಸಭೆಯೂ ನಡೆದಿಲ್ಲ. ಆದರೂ ಹಣ ವರ್ಗಾವಣೆ ಆಗಿದೆ.

ಇದಕ್ಕೆ ಮೌಖಿಕ ಆದೇಶ ಇತ್ತು ಎಂಬುದು ಚಂದ್ರಶೇಖರನ್ ಡೆತ್​ನೋಟ್​ನಲ್ಲಿ ಇರುವ ಪ್ರಮುಖ ಅಂಶ. ಹಾಗಾದರೆ ಈ ಮೌಖಿಕ ಆದೇಶ ನೀಡಿದವರು ಯಾರು? ಅಧಿಕಾರಿಗಳೋ ಅಥವಾ ರಾಜಕಾರಣಿಗಳೋ? ವರ್ಗಾವಣೆಯಾದ ಹಣ ಎಲ್ಲಿಗೆ ಹೋಯಿತು? ನೆರೆ ರಾಜ್ಯಗಳ ಚುನಾವಣಾ ಖರ್ಚಿಗೆ ಬಳಸಿಕೊಳ್ಳಲು ಆ ಹಣವನ್ನು ಕಳಿಸಲಾಯಿತೆ? ಈ ರೀತಿಯ ಹತ್ತು ಹಲವು ಪ್ರಶ್ನೆಗಳು ಇನ್ನೂ ಪ್ರಶ್ನೆಗಳಾಗಿಯೇ ಉಳಿದಿವೆ. ರಾಜ್ಯ ಸರ್ಕಾರ ಈ ಪ್ರಕರಣವನ್ನು ಕೂಡಲೇ ಸಿಐಡಿ ತನಿಖೆಗೆ ವಹಿಸಿತು. ಕೆಲವು ಅಧಿಕಾರಿಗಳ ಮೇಲೆ ಎಫ್​ಐಆರ್ ದಾಖಲಿಸಲಾಗಿದ್ದು ಬಿಟ್ಟರೆ ಬೇರೆ ಯಾವುದೇ ಮಹತ್ವದ ಬೆಳವಣಿಗೆ ಆಗಲಿಲ್ಲ. ಈ ಮಧ್ಯೆ, ಪ್ರಕರಣದ ಕುರಿತು ಸ್ವತಃ ಬ್ಯಾಂಕಿನ ಅಧಿಕಾರಿಗಳೇ ಸಿಬಿಐಗೆ ಪತ್ರ ಬರೆದು ತನಿಖೆಗೆ ಆಗ್ರಹಿಸಿದ್ದಾರೆ. ಹೀಗಾಗಿ ಇಡೀ ಪ್ರಕರಣದ ತನಿಖೆಯನ್ನು ಸಿಬಿಐ ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಸಾಧ್ಯತೆ ಇದೆ. ಯಾರೇ ತನಿಖೆ ನಡೆಸಲಿ, ಆದಷ್ಟು ಬೇಗ ವಿಚಾರಣೆ ಮುಗಿದು ಸತ್ಯಾಂಶ ಹೊರಬರಬೇಕು. ಕೆಲವೇ ಕೆಲವು ಭ್ರಷ್ಟ ಅಧಿಕಾರಿಗಳು ಮಾಡುವ ತಪ್ಪಿನಿಂದಾಗಿ ಎಲ್ಲ ಅಧಿಕಾರಿಗಳನ್ನು ಸಂಶಯದಿಂದ ನೋಡುವಂತಹ ವಾತಾವರಣ ಸೃಷ್ಟಿಯಾಗಬಾರದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net