

ಚುನಾವಣೆಯ ಗದ್ದಲ ಸಂಪೂರ್ಣ ಮುಗಿದಿದೆ. ಆದ್ದರಿಂದ ನಮ್ಮ ರಾಜಕಾರಣಿಗಳು ಚುನಾವಣಾ ಗುಂಗಿನಿಂದ ಹೊರಬಂದು, ಅವರು ನಿರ್ವಹಿಸಬೇಕಾದ ಕರ್ತವ್ಯಗಳ ಕಡೆಗೆ ಗಮನ ಹರಿಸುವ ಸಮಯವಿದು. ರಾಜಕೀಯ ಆರೋಪ-ಪ್ರತ್ಯಾರೋಪಗಳೆಲ್ಲ ಚುನಾವಣೆ ಸಮಯಕ್ಕೆ ಸೀಮಿತವಾಗಿದ್ದರೆ ಸೂಕ್ತ. ಆ ಕಹಿಯನ್ನು ಚುನಾವಣೆ ನಂತರವೂ ಮುಂದುವರಿಸಬಾರದು. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಆಡಳಿತ ಮತ್ತು ವಿರೋಧ ಪಕ್ಷ ಎರಡಕ್ಕೂ ಮಹತ್ವದ ಹೊಣೆಗಾರಿಕೆ ಇದೆ ಎಂಬುದನ್ನು ಮರೆಯುವಂತಿಲ್ಲ. ಹೆಚ್ಚುಕಡಿಮೆ ಮೂರು ತಿಂಗಳ ಕಾಲ ಚುನಾವಣಾ ಜ್ವರದಿಂದ ಆಡಳಿತಯಂತ್ರವೇ ಸ್ತಬ್ಧಗೊಂಡಿತ್ತು. ಅಭಿವೃದ್ಧಿ ಕಾರ್ಯಗಳು, ಅವುಗಳ ಪರಿಶೀಲನೆ ಹೀಗೆ ಎಲ್ಲ ಪ್ರಕ್ರಿಯೆ ನನೆಗುದಿಗೆ ಬಿದ್ದಿದ್ದವು.
ಭಾನುವಾರ ಸಂಜೆ ಪ್ರಧಾನಿ ನರೇಂದ್ರ ಮೋದಿಯವರ ಜತೆ 71 ಸಚಿವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಮಂಗಳವಾರದಂದು ಬಹುತೇಕ ಸಚಿವರು ಅಧಿಕಾರವನ್ನು ಸ್ವೀಕರಿಸಿಯಾಗಿದೆ. ಭಾರಿ ನಿರೀಕ್ಷೆ ಹಾಗೂ ಕುತೂಹಲ ಮೂಡಿಸಿದ್ದ ಸಂಪುಟ ರಚನೆಯಲ್ಲಿ ಕರ್ನಾಟಕಕ್ಕೆ ಉತ್ತಮ ಪ್ರಾತಿನಿಧ್ಯ ದೊರೆತಿರುವ ಜತೆಗೆ ಮಹತ್ವದ ಖಾತೆಗಳು ಲಭಿಸಿರುವುದು ಗಮನಾರ್ಹ ಬೆಳವಣಿಗೆ. ರಾಜ್ಯದ ಹಿತಾಸಕ್ತಿಯ ದೃಷ್ಟಿಯಿಂದ ಖಂಡಿತವಾಗಿಯೂ ಇದೊಂದು ಸದಾವಕಾಶ ಎನ್ನಬಹುದು. ಕರ್ನಾಟಕದಿಂದ ರಾಜಸ್ಯಸಭೆ ಸದಸ್ಯೆ ಆಗಿರುವ ನಿರ್ಮಲಾ ಸೀತಾರಾಮನ್ ಅವರಿಗೆ ಮತ್ತೆ ವಿತ್ತ ಹಾಗೂ ಕಾಪೋರೇಟ್ ವ್ಯವಹಾರಗಳ ಹೊಣೆಗಾರಿಕೆ ಸಿಕ್ಕಿದೆ. ಎರಡು ಬಾರಿ ಮುಖ್ಯಮಂತ್ರಿಯಾಗಿ ಆಡಳಿತದಲ್ಲಿ ಅನುಭವ ಹೊಂದಿರುವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಬೃಹತ್ ಕೈಗಾರಿಕೆ ಮತ್ತು ಉಕ್ಕು, ಕಳೆದ ಬಾರಿ ಸಂಸದೀಯ ವ್ಯವಹಾರಗಳ ಸಚಿವರಾಗಿದ್ದ ಪ್ರಹ್ಲಾದ ಜೋಶಿ ಅವರಿಗೆ ಆಹಾರ ಸರಬರಾಜು, ನವೀಕರಿಸಬಹುದಾದ ಇಂಧನ, ತುಮಕೂರು ಸಂಸದ ವಿ.ಸೋಮಣ್ಣ ಅವರಿಗೆ ರೈಲ್ವೆ, ಜಲಶಕ್ತಿ ಮತ್ತು ಕಳೆದ ಬಾರಿಯೂ ಮೋದಿ ಸಂಪುಟದಲ್ಲಿದ್ದ ಶೋಭಾ ಕರಂದ್ಲಾಜೆ ಅವರಿಗೆ ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಇಲಾಖೆಯ ಹೊಣೆಗಾರಿಕೆ ವಹಿಸಲಾಗಿದೆ. ನಿಸ್ಸಂಶಯವಾಗಿಯೂ ಇವೆಲ್ಲ ಮಹತ್ವದ ಖಾತೆಗಳು.
ದೊರೆತಿರುವ ಅವಕಾಶವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ದೇಶದ ಎಲ್ಲ ಭಾಗಗಳ ಅಭಿವೃದ್ಧಿಗೆ ಪ್ರಯತ್ನ ಮಾಡುವುದರ ಜತೆಗೆ, ಕರ್ನಾಟಕದ ಅಗತ್ಯಗಳೇನೆಂದು ತಿಳಿದುಕೊಂಡು ಅವುಗಳನ್ನು ಪೂರೈಸುವತ್ತ ವಿಶೇಷ ಗಮನ ಹರಿಸಬೇಕು. ರಾಜಕೀಯ ಇಚ್ಛಾಶಕ್ತಿ ಇದ್ದರೆ ತಾವು ಪ್ರತಿನಿಧಿಸುವ ರಾಜ್ಯಕ್ಕೆ ಸಾಕಷ್ಟು ಕೊಡುಗೆ ನೀಡಲು ಸಾಧ್ಯ. ನೀರಾವರಿ, ರೈಲ್ವೆ ಕ್ಷೇತ್ರದಲ್ಲಂತೂ ರಾಜ್ಯದಲ್ಲಿ ಸಾಕಷ್ಟು ಕೆಲಸಗಳು ಆಗಬೇಕಿವೆ. ನನೆಗುದಿಗೆ ಬಿದ್ದಿರುವ ಯೋಜನೆಗಳನ್ನು ಪೂರ್ಣಗೊಳಿಸಲು, ಹೊಸ ಕಾಮಗಾರಿಗಳನ್ನು ನಿಗದಿತ ಸಮಯದಲ್ಲಿ ಮುಗಿಸಲು ಆದ್ಯತೆ ನೀಡಬೇಕಿದೆ. ರಾಜಕೀಯ ಭಿನ್ನಾಭಿಪ್ರಾಯ ಮರೆತು ರಾಜ್ಯ ಸರ್ಕಾರವು ಕೇಂದ್ರ ಸಚಿವರಿಗೆ ಅಗತ್ಯ ಸಹಕಾರ ನೀಡಬೇಕು. ಕರ್ನಾಟಕವನ್ನು ಅಭಿವೃದ್ಧಿಯ ಮುಂಚೂಣಿಗೆ ತರುವ, ವಿವಿಧ ಕ್ಷೇತ್ರಗಳಲ್ಲಿ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸುವ ಕೆಲಸ ಸಾಮೂಹಿಕ ಹೊಣೆಗಾರಿಕೆಯಿಂದ ನಡೆಯಬೇಕು. ರಾಜ್ಯದಿಂದ ಆಯ್ಕೆ ಆಗಿರುವ ಕೇಂದ್ರ ಸಚಿವರು, ಜನರ ನಿರೀಕ್ಷೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೆಕು ಎಂಬುದೇ ಆಶಯ.