

ಕರೊನಾ ಎರಡನೇ ಅಲೆಯ ಅಬ್ಬರ ತಗ್ಗುತ್ತಿದೆ ಎನ್ನುವಷ್ಟರಲ್ಲೇ, ರೂಪಾಂತರಿಗಳ ಹಾವಳಿಯಿಂದ ಮತ್ತೆ ಪರಿಸ್ಥಿತಿ ಬಿಗಡಾಯಿಸುತ್ತಿದೆ. ಮೂರನೇ ಅಲೆ ಬರುವ ಸಾಧ್ಯತೆ ಬಗ್ಗೆ ತಜ್ಞರು ಈ ಹಿಂದೆಯೇ ಎಚ್ಚರಿಸಿದ್ದರು. ಕರೊನಾ ಅಂತ್ಯಕಾಣದ ಸಮಸ್ಯೆಯಾಗಿ ಮುಂದುವರಿದಿದ್ದು, ಇದರೊಂದಿಗೇ ಬದುಕುವ, ಅದಕ್ಕಾಗಿ ಜೀವನಶೈಲಿಯಲ್ಲಿ ಸೂಕ್ತ ಮಾರ್ಪಾಡು ಮಾಡಿಕೊಳ್ಳುವ ಅಗತ್ಯ ಇದೆ. ಅಪಾಯವನ್ನು ನಿರ್ಲಕ್ಷಿಸಿದರೆ ಮತ್ತೆ ಹಾನಿ ಖಂಡಿತ. ಕರೊನಾದ ಮೊದಲನೇ ಅಲೆ ವಿಶ್ವದ ಹಲವು ದೇಶಗಳಿಗೆ ಇನ್ನಿಲ್ಲದಂತೆ ಕಾಡಿತಾದರೂ, ಭಾರತದಲ್ಲಿ ಸೀಮಿತ ಪರಿಣಾಮಗಳು ಕಂಡುಬಂದವು. ಆ ಮೈಮರೆವಿನಲ್ಲೇ ಎರಡನೇ ಅಲೆ ಎದುರಿಸಲು ಸೂಕ್ತ ಸಿದ್ಧತೆ ಮಾಡಿಕೊಳ್ಳಲಿಲ್ಲ. ದಿಢೀರನೆ ಪ್ರಕರಣಗಳ ಸಂಖ್ಯೆ ಏರಿ, ಅದು ದೈನಂದಿನ 4 ಲಕ್ಷದ ಗಡಿ ದಾಟಿದಾಗ ಪರಿಸ್ಥಿತಿ ನಿಯಂತ್ರಿಸಲು ಹರಸಾಹಸ ಪಡಬೇಕಾಯಿತು. ಆಸ್ಪತ್ರೆಗಳಲ್ಲಿ ಹಾಸಿಗೆಗಳ ಕೊರತೆ, ವೈದ್ಯಕೀಯ ಆಮ್ಲಜನಕದ ಕೊರತೆ ರೋಗಿಗಳನ್ನು ಮತ್ತಷ್ಟು ಆತಂಕಿತರನ್ನಾಗಿ ಮಾಡಿದವು. ಪ್ರಸಕ್ತ, ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದು ಚಿಂತೆಗೆ ಕಾರಣವಾಗಿದ್ದು, ಕರ್ನಾಟಕದಲ್ಲೂ ಸೋಂಕಿನ ಪ್ರಸರಣ ವೇಗಗೊಳ್ಳುವ ಭೀತಿ ಎದುರಾಗಿದೆ. 3ನೇ ಅಲೆ ಆರಂಭವಾಗಿರುವ ಶಂಕೆ ವ್ಯಕ್ತವಾಗಿದ್ದು, ಅಲ್ಲಿಂದ ಬರುವವರ ಮೇಲೆ ನಿಗಾ ವಹಿಸದಿದ್ದರೆ ರೂಪಾಂತರಿ ವೈರಸ್ ಮತ್ತೆ ರಾಜ್ಯಕ್ಕೆ ವಕ್ಕರಿಸಬಹುದು.
ಗಡಿ ರಾಜ್ಯ ಕೇರಳದಲ್ಲಿ ಪಾಸಿಟಿವಿಟಿ ದರ ಶೇಕಡ 10 ಹಾಗೂ ಮಹಾರಾಷ್ಟ್ರದಲ್ಲಿ ಶೇ.4ಕ್ಕೆ ಏರಿಕೆಯಾಗಿದೆ. ದೈನಂದಿನದ ಒಟ್ಟು ಪ್ರಕರಣಗಳಲ್ಲಿ ಶೇಕಡ 50ಕ್ಕಿಂತ ಹೆಚ್ಚು ಸೋಂಕಿತರು ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಪತ್ತೆಯಾಗುತ್ತಿದ್ದಾರೆ. ಹೆಚ್ಚು ಸಕ್ರಿಯ ಪ್ರಕರಣಗಳು ಕೂಡ ಈ ರಾಜ್ಯದಲ್ಲೇ ಇವೆ. ಪ್ರಸ್ತುತ ಈ ಎರಡು ರಾಜ್ಯಗಳಿಂದ ಕರ್ನಾಟಕಕ್ಕೆ ಬರುವ ಪ್ರಯಾಣಿಕರಿಗೆ ಕೋವಿಡ್ ನೆಗೆಟಿವ್ ಪ್ರಮಾಣಪತ್ರ ಅಥವಾ ಕೋವಿಡ್ ಲಸಿಕೆ ಒಂದು ಡೋಸ್ ಪಡೆದಿರುವ ಪ್ರಮಾಣಪತ್ರ ಕಡ್ಡಾಯಗೊಳಿಸಲಾಗಿದೆ. ಆದರೆ, ಈ ನಿಯಮ ಸರಿಯಾಗಿ ಪಾಲನೆಯಾಗುತ್ತಿಲ್ಲ. ಈ ನಡುವೆ ಕರ್ನಾಟಕದಲ್ಲಿ ಬ್ಲಾ್ಯಕ್ ಫಂಗಸ್ ಸೋಂಕಿತರ ಸಂಖ್ಯೆ 3491ಕ್ಕೆ ಏರಿಕೆಯಾಗಿದೆ. ಇದರಲ್ಲಿ 303 ಸೋಂಕಿತರು ಮೃತಪಟ್ಟಿದ್ದಾರೆ. ಅಲ್ಲದೆ ಡೆಲ್ಟಾಗಿಂತಲೂ ಘಾತಕವಾದ ಕಪ್ಪಾ ಎಂಬ ಹೊಸ ರೂಪಾಂತರಿ ವೈರಸ್ ಉತ್ತರಪ್ರದೇಶದಲ್ಲಿ ಪತ್ತೆಯಾಗಿದೆ. ಪ್ರಸಿದ್ಧ ಪ್ರವಾಸಿತಾಣಗಳಲ್ಲಿ ಪ್ರವಾಸಿಗರ ಸಂಖ್ಯೆ ಏರಿಕೆಯಾಗುತ್ತಿದ್ದು, ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ರಾಜ್ಯಗಳಿಗೆ ಕೇಂದ್ರ ಸೂಚನೆ ನೀಡಿದೆ.
ಜನರು ಸುರಕ್ಷಾ ಕ್ರಮಗಳನ್ನು ಮರೆತು ಪ್ರವಾಸ ಕೈಗೊಳ್ಳುತ್ತಿರುವುದು, ಮತ್ತೆ ಜನರನ್ನು ಸೇರಿಸಿ ಸಭೆ-ಸಮಾರಂಭಗಳನ್ನು ಆಯೋಜಿಸುತ್ತಿರುವುದು ಕಳವಳಕಾರಿ ವಿಚಾರ. ಆರು ತಿಂಗಳಿಗೊಮ್ಮೆ ವೈರಸ್ ರೂಪಾಂತರವಾಗುತ್ತಲೇ ಇರುತ್ತದೆ ಎಂಬುದು ತಜ್ಞರ ಅಂಬೋಣ. ಹಾಗಾಗಿ, ಸದ್ಯದ ಸನ್ನಿವೇಶದಲ್ಲಂತೂ ಕರೊನಾ ಮುಗಿಯದ ಸಮಸ್ಯೆ. ಹಾಗಾಗಿಯೇ, ಸುರಕ್ಷತೆಗೆ ಆದ್ಯತೆ ನೀಡುವುದು, ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದು, ನಿಯಮಗಳನ್ನು ಪಾಲಿಸುವುದು ಸೇರಿದಂತೆ ಅಗತ್ಯ ಕ್ರಮಗಳನ್ನು ಜೀವನಶೈಲಿಯ ಭಾಗವಾಗಿಯೇ ಅಳವಡಿಸಿಕೊಳ್ಳಬೇಕಿದೆ. ಈ ವಿಷಯದಲ್ಲಿ ನಿರ್ಲಕ್ಷ್ಯ ಸಲ್ಲ, ಸೂಕ್ತ ಸಿದ್ಧತೆಯೊಂದಿಗೆ ರೂಪಾಂತರಿ ತಳಿಗಳನ್ನು ಎದುರಿಸಬೇಕಿದೆ.