ಸಂಪಾದಕೀಯ: ಜೀವ ಅಮೂಲ್ಯ

ed
Published on

ಬದುಕಿಗಾಗಿ ಹೋರಾಟ ಅಗತ್ಯ ಮತ್ತು ಅನಿವಾರ್ಯ. ಆದರೆ, ಇತ್ತೀಚಿನ ದಿನಗಳಲ್ಲಿ ಬದುಕು ಮುಗಿಸಿಕೊಳ್ಳಲು ‘ಹೋರಾಟ’ ಹೆಚ್ಚುತ್ತಿರುವುದು ಕಳವಳಕಾರಿ ವಿಷಯ. ಜಗತ್ತಿನಲ್ಲೇ ಭಾರತದಲ್ಲಿ ಅತಿಹೆಚ್ಚು ಆತ್ಮಹತ್ಯೆ ಪ್ರಕರಣಗಳು ದಾಖಲಾಗುತ್ತಿವೆ ಎಂಬ ಸಂಗತಿ ಮತ್ತೆ ಮುನ್ನೆಲೆಗೆ ಬಂದಿದೆ. ಭಾರತದಲ್ಲಿ ಆತ್ಮಹತ್ಯೆಯ ಪ್ರಮಾಣ 1 ಲಕ್ಷಕ್ಕೆ 12.4 ಆಗಿದ್ದು, ಇದು ದೇಶದಲ್ಲಿ ಇದುವರೆಗಿನ ಗರಿಷ್ಠ ಪ್ರಮಾಣವಾಗಿದೆ ಎಂಬುದು ಗಮನಾರ್ಹ. ಭಾರತದಲ್ಲಿ 2022ರಲ್ಲಿ 1.71 ಲಕ್ಷ ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂಬ ಮಾಹಿತಿ 2024ರ ಏಪ್ರಿಲ್​ನಲ್ಲಿ ನ್ಯಾಷನಲ್ ಕ್ರೖೆಂ ರೆಕಾರ್ಡ್ಸ್ ಬ್ಯೂರೋ (ಎನ್​ಸಿಆರ್​ಬಿ) ಅಂಕಿ-ಅಂಶದಲ್ಲಿ ಬಹಿರಂಗವಾಗಿತ್ತು. ಈ ಆತ್ಮಹತ್ಯೆಗಳಿಗೆ ಪ್ರಮುಖ ಕಾರಣ ಖಿನ್ನತೆ.

ಉದ್ಯೋಗ, ಆರ್ಥಿಕ, ಸಂಬಂಧ ಹಾಗೂ ಆರೋಗ್ಯ ಕುರಿತ ಸಮಸ್ಯೆಗಳ ಒತ್ತಡದಿಂದಾಗಿ ಜನರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಮಹಾನಗರಗಳಲ್ಲಿ ಆತ್ಮಹತ್ಯೆ ಪ್ರಮಾಣ ಹೆಚ್ಚಿದೆ. ಖಿನ್ನತೆಯ ಹೊತ್ತಲ್ಲಿ ಮನೋವೈದ್ಯರನ್ನು ಅಥವಾ ಆಪ್ತಸಮಾಲೋಚಕರನ್ನು ಕಾಣಲು ಬಹುತೇಕರು ಹಿಂಜರಿಯುವುದು, ಸಮಸ್ಯೆಯನ್ನು ಮತ್ತಷ್ಟು ಕ್ಲಿಷ್ಟಗೊಳಿಸುತ್ತದೆ. ಖಿನ್ನತೆಯಿಂದ ಆರಂಭಿಕ ಹಂತದಲ್ಲೇ ಹೊರಬರಲು ಸಾಧ್ಯವಿದೆ. ಇದಕ್ಕೆ ಒಂದಿಷ್ಟು ಭಾವನಾತ್ಮಕ ಬೆಂಬಲ, ಜೀವನಶೈಲಿಯಲ್ಲಿ ಸುಧಾರಣೆ ಅಗತ್ಯ. ಕರೊನಾ ಮತ್ತು ನಂತರದ ಅವಧಿಯಲ್ಲೂ ದೇಶದಲ್ಲಿ ಆತ್ಮಹತ್ಯೆ ಪ್ರಮಾಣ ಹೆಚ್ಚಿತ್ತು.

ಜೀವ ಮತ್ತು ಜೀವನ ಎರಡೂ ಬಹು ಅಮೂಲ್ಯವಾದವು. ಸಮಸ್ಯೆಗಳಿಗೆ ಬೆದರಿ ಆತ್ಮಹತ್ಯೆ ಮಾಡಿಕೊಂಡರೆ ಯಾವುದೇ ಸಮಸ್ಯೆ ಬಗೆಹರಿಯುವುದಿಲ್ಲ. ಬದಲಾಗಿ, ಅಂಥ ವ್ಯಕ್ತಿಯ ಕುಟುಂಬದ ಮೇಲೆ ಮತ್ತಷ್ಟು ಹೊರೆ ಬಿದ್ದು, ಒತ್ತಡ, ಸಂಕಷ್ಟ ಎದುರಿಸುವಂತಾಗುತ್ತದೆ. ಈ ಕ್ಷಣಕ್ಕೆ, ದಿನಕ್ಕೆ ಸಮಸ್ಯೆಯ ತೀವ್ರತೆ ಹೆಚ್ಚಿರಬಹುದು. ಆದರೆ, ಕಾಲವೇ ಎಲ್ಲ ನೋವುಗಳಿಗೆ ಉತ್ತಮ ಔಷಧ ಎಂಬುದನ್ನು ಗಮನಿಸಬೇಕು. ಆತ್ಮಹತ್ಯೆಯಿಂದ ಪ್ರಾಣ ಕಳೆದುಕೊಂಡರೆ ಇಡೀ ಹೋರಾಟವೇ ವ್ಯರ್ಥವಲ್ಲವೇ? ಪರಿಸ್ಥಿತಿಗಳು ಸುಧಾರಿಸಲು ಒಂದಿಷ್ಟು ಸಮಯ ಬೇಕು ಎಂಬುದೇನೋ ನಿಜ. ಆ ಅವಧಿಯಲ್ಲಿ ತಾಳ್ಮೆ, ಸಂಯಮವೇ ಜೀವನದ ಮಂತ್ರವಾದರೆ ಕಷ್ಟಗಳ ಬೇಲಿ ದಾಟಿ ಒಳ್ಳೆಯ ದಿನಗಳತ್ತ ಸಾಗಬಹುದು.

ಸಮಸ್ಯೆಗಳಿಂದ ಆಚೆ ಬರಲು ಪರಿಹಾರದ ದಾರಿಗಳು ಇದ್ದೇ ಇವೆ. ಅಂಥ ಮಾರ್ಗಗಳನ್ನು ವಿವೇಚನೆಯಿಂದ ಅವಲೋಕಿಸಿ, ಮುಂದಡಿ ಇಡಬೇಕೆ ಹೊರತು ಆತ್ಮಹತ್ಯೆಯಂಥ ದುಡುಕಿನ ನಿರ್ಧಾರಕ್ಕೆ ಮುಂದಾಗಬಾರದು. ಯಾವುದೇ ಸಮಸ್ಯೆಯಾದರೂ ದೀರ್ಘಾವಧಿ ಇರುವುದಿಲ್ಲ. ಹಾಗಾಗಿ, ಅಂಥ ಹೊತ್ತಲ್ಲಿ ಧೃತಿಗೆಟ್ಟು ದುಡುಕಿನ ನಿರ್ಧಾರಗಳಿಗೆ ಮುಂದಾಗಬಾರದು. ಆ ಕ್ಷಣದ ದುಃಖವನ್ನು, ನೋವನ್ನು ಎದುರಿಸಿ, ಅದನ್ನು ಮೀರಿನಿಂತರೆ ಮತ್ತೆ ಬದುಕು ಕಟ್ಟಿಕೊಳ್ಳುವ ಅವಕಾಶಗಳು ಸಿಕ್ಕೇ ಸಿಗುತ್ತವೆ. ಆತ್ಮಸ್ಥೈರ್ಯದಿಂದ ಸವಾಲುಗಳ ವಿರುದ್ಧ ಹೋರಾಡುವ ಸಂಕಲ್ಪ ನಮ್ಮದಾಗಲಿ. ಮಾನಸಿಕ ಆರೋಗ್ಯದ ರಕ್ಷಣೆಯೂ ಪ್ರಧಾನ ಆದ್ಯತೆಯಾಗಲಿ. ಯುವಕರ ಮುಂದೆಯಂತೂ ಜೀವನದ ಹಲವು ಅವಕಾಶಗಳಿರುತ್ತವೆ; ಅದನ್ನು ಪರಿಗಣಿಸುವುದನ್ನು ಬಿಟ್ಟು ಸಾವಿನ ಮನೆಯ ಹಾದಿ ಹಿಡಿಯುವುದು ಸರಿಯಲ್ಲ. ಅದಮ್ಯ ಆತ್ಮವಿಶ್ವಾಸ, ಸಕಾರಾತ್ಮಕ ಚಿಂತನೆ, ಆಶಾವಾದ, ಕಠಿಣ ಪರಿಶ್ರಮ ವ್ಯಕ್ತಿತ್ವದ ಭಾಗವಾಗಬೇಕು. ಮಾನಸಿಕ ಸ್ವಾಸ್ಥ್ಯಕ್ಕೆ ಪೂರಕವಾದ ಕ್ರಮಗಳನ್ನು ಸರ್ಕಾರ ಪ್ರೋತ್ಸಾಹಿಸಿ, ಖಿನ್ನತೆ, ಆತಂಕದ ಹೊತ್ತಲ್ಲಿ ಸೂಕ್ತ ಮಾರ್ಗದರ್ಶನ ಸಿಗುವಂತಾಗಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net