ಸಂಪಾದಕೀಯ | ಸುರಕ್ಷತೆ ಮುಖ್ಯ - ಎಲ್ಲರೂ ನಿಯಮ ಪಾಲನೆ ಮಾಡಬೇಕು

Indicative image 1
Published on

ಕರೊನಾ ಹಾವಳಿಯಿಂದಾಗಿ ಸ್ತಬ್ಧವಾಗಿದ್ದ ಜನಜೀವನದ ಬಹುತೇಕ ಎಲ್ಲ ವಲಯಗಳು ಈಗ ಮತ್ತೆ ಚಟುವಟಿಕೆಯನ್ನು ಪುನರಾರಂಭಿಸಿವೆ; ಕೆಲವೇ ಕೆಲವು ನಿರ್ಬಂಧಗಳು ಜಾರಿಯಲ್ಲಿವೆ. ಈ ನಡುವೆ, ಬೇಕೋಬೇಡವೋ ಎಂಬ ಪರವಿರೋಧದ ಚರ್ಚೆಯಲ್ಲಿ ಇರುವುದು ಶಾಲಾಕಾಲೇಜುಗಳನ್ನು ಆರಂಭಿಸುವ ವಿಚಾರ. ಅಂತೂ ರಾಜ್ಯ ಸರ್ಕಾರ ಅಳೆದುತೂಗಿ, ನ.17 ರಿಂದ ಅಂದರೆ ದೀಪಾವಳಿ ಬಳಿಕ ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೊಮಾ ಹಾಗೂ ಇಂಜಿನಿಯರಿಂಗ್ ಕಾಲೇಜುಗಳನ್ನು ಆರಂಭಿಸಲು ನಿರ್ಧರಿಸಿದೆ. ಶುಕ್ರವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಣಯಕ್ಕೆ ಬರಲಾಗಿದೆ. ಕಾಲೇಜುಗಳ ಆರಂಭಕ್ಕೆ ಅನುಮತಿಸಲಾಗಿದ್ದರೂ, ಕೆಲವು ನಿಯಮಗಳನ್ನು ವಿಧಿಸಲಾಗಿದೆ.

ವಿದ್ಯಾರ್ಥಿಗಳು, ಬೋಧಕರು ಹಾಗೂ ಪಾಲಕರ ಹಿತದೃಷ್ಟಿಯಿಂದ ಇಂಥ ನಿಯಮಗಳು ಅನಿವಾರ್ಯ ಕೂಡ. ನೇರ ಅಥವಾ ಆನ್​ಲೈನ್ ತರಗತಿ ಅಥವಾ ಎರಡನ್ನೂ ಒಟ್ಟಿಗೆ ಆಯ್ಕೆ ಮಾಡಿಕೊಳ್ಳುವುದನ್ನು ವಿದ್ಯಾರ್ಥಿಗಳ ವಿವೇಚನೆಗೆ ಬಿಡಲಾಗಿದ್ದು, ಈ ಕುರಿತಂತೆ ಬಲವಂತ ಮಾಡುವಂತಿಲ್ಲ. ನೇರ ತರಗತಿ ಬಯಸುವ ವಿದ್ಯಾರ್ಥಿಗಳು ಪಾಲಕರಿಂದ ಲಿಖಿತ ಒಪ್ಪಿಗೆ ಪಡೆಯಬೇಕಾಗುತ್ತದೆ. ಅದಲ್ಲದೆ, ಈ ಕುರಿತಂತೆ ಪ್ರಮಾಣಿತ ಕಾರ್ಯವಿಧಾನ ಪ್ರಕ್ರಿಯೆ (ಎಸ್​ಒಪಿ)ಯನ್ನು ಶೀಘ್ರ ಬಿಡುಗಡೆ ಮಾಡಲಿದ್ದು, ಆರೋಗ್ಯದ ದೃಷ್ಟಿಯಿಂದ ಇಲಾಖೆ ಎಲ್ಲ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಉನ್ನತ ಶಿಕ್ಷಣ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಹೇಳಿದ್ದ್ದಾರೆ. ದೈಹಿಕ ಅಂತರ ಕಾಯ್ದುಕೊಳ್ಳುವುದು, ತರಗತಿಗಳಲ್ಲಿ ಮಾಸ್ಕ್ ಧರಿಸುವುದು ಇತ್ಯಾದಿ ಮುನ್ನೆಚ್ಚರಿಕೆ ಕ್ರಮಗಳ ಪಾಲನೆ ಕಡ್ಡಾಯ ಎಂದು ಸರ್ಕಾರ ತಿಳಿಸಿದೆ.

ವಿವಿಧ ಕ್ಷೇತ್ರಗಳ ತಜ್ಞರು, ಹಿರಿಯ ಅಧಿಕಾರಿಗಳು, ಪೋಷಕರ ಅಭಿಪ್ರಾಯಗಳು ಮತ್ತು ನೆರೆರಾಜ್ಯಗಳಲ್ಲಿ ಕೈಗೊಂಡ ಕ್ರಮಗಳ ಮಾಹಿತಿ ಪಡೆದು ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದೂ ಸಚಿವರು ತಿಳಿಸಿದ್ದಾರೆ. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಶಿಕ್ಷಣ ಬಹುಮುಖ್ಯವಾದ್ದರಿಂದ ಸರ್ಕಾರ ಏನಾದರೊಂದು ನಿರ್ಣಯಕ್ಕೆ ಬರಬೇಕಾದ ಅನಿವಾರ್ಯತೆಯಿತ್ತು ಎನ್ನಬಹುದು. ಈಗಾಗಲೇ ಶೈಕ್ಷಣಿಕ ವರ್ಷದ ಅರ್ಧಭಾಗ ಮುಗಿದುಹೋಗಿದೆ. ನೇರ ತರಗತಿಗಳು ನಡೆಯದ ಕಾರಣ ಈಗ ಆನ್​ಲೈನ್ ಶಿಕ್ಷಣ ನಡೆಯುತ್ತಿದ್ದರೂ, ಅದರಿಂದ ಕೆಲವು ಸಮಸ್ಯೆಗಳೂ ಇರುವುದು ಇಷ್ಟು ದಿನಗಳ ಅನುಭವದಲ್ಲಿ ಗಮನಕ್ಕೆ ಬಂದಿದೆ. ಈಗ ಪಿಯು ನಂತರದ ಶಿಕ್ಷಣದ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ.

ಇನ್ನು, ಪದವಿಪೂರ್ವ ಹಂತ ಹಾಗೂ ಎಸ್​ಎಸ್​ಎಲ್​ಸಿ ಒಳಗಿನ ವಿಷಯ ಏನೆಂಬುದು ತೀರ್ವನವಾಗಬೇಕಿದೆ. ಸರ್ಕಾರ ಈ ತರಗತಿಗಳ ವಿಷಯದಲ್ಲಿಯೂ ವಿವೇಚನೆಯಿಂದ ನಿರ್ಧಾರಕ್ಕೆ ಬರಬಹುದೆಂದು ಭಾವಿಸಬಹುದು. ಇದೇ ಸಂದರ್ಭದಲ್ಲಿ, ಕರೊನಾ ಸಮುದಾಯ ಹಂತಕ್ಕೆ ಪಸರಿಸಿರುವುದರಿಂದ, ವಿದ್ಯಾರ್ಥಿಗಳು, ಬೋಧಕರು, ಪಾಲಕರು- ಹೀಗೆ ಎಲ್ಲರೂ ಮುನ್ನೆಚ್ಚರಿಕೆ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ. ಇಲ್ಲವಾದಲ್ಲಿ ಯಾವುದೋ ಹಂತದಲ್ಲಿ ತಪು್ಪ ಅಥವಾ ಅಲಕ್ಷ್ಯವಾದರೆ ಅದಕ್ಕೆ ಭಾರಿ ಬೆಲೆ ತೆರಬೇಕಾಗುತ್ತದೆ ಎಂಬ ಅರಿವು ಎಲ್ಲರಿಗೂ ಇರಬೇಕು. ಏಕೆಂದರೆ, ಕರೊನಾ ವಿರುದ್ಧದ ಹೋರಾಟ ಸಾಮೂಹಿಕವಾಗಿ ನಡೆಯಬೇಕಾದಂಥದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net