

ಡಾ. ಎಚ್.ಎಸ್. ವೆಂಕಟೇಶಮೂರ್ತಿ ಕನ್ನಡ ಸಾಹಿತ್ಯ ಲೋಕ ಕಂಡ ವಿಶಿಷ್ಟ ಪ್ರತಿಭೆ. ಅಕ್ಷರಲೋಕದ ಈ ಅಕ್ಕರೆಯ ಕವಿ ಬರವಣಿಗೆಗೆ ತುಂಬಿದ ಸೃಜನಶೀಲ ಶಕ್ತಿ ನಿಜಕ್ಕೂ ಅಸಾಧಾರಣ. ಬರಬರುತ್ತ ಮನುಷ್ಯ ಯಾಂತ್ರಿಕ ಬದುಕಿಗೆ ಒಗ್ಗಿಕೊಳ್ಳುವಾಗ ಭಾವಗಳನ್ನು ಬಡಿದೆಬ್ಬಿಸಿದ ಎಚ್ಚೆಸ್ವಿ, ಭಾವವಿಲ್ಲದ ಬದುಕು ಬರಡು ಎಂಬುದನ್ನು ಆ ಮೂಲಕ ಸಾರಿದರು. ಹಾಗಾಗಿಯೇ, ಅವರು ಬರೆದ ಭಾವಗೀತೆಗಳು ಕನ್ನಡಿಗರ ಮನೆಮನಗಳಲ್ಲಿ ಅನುರಣಿಸುತ್ತಿವೆ. ಜೀವನಕ್ಕೆ ಹೊಸ ವ್ಯಾಖ್ಯೆಯನ್ನು, ಬೆರಗನ್ನು ನೀಡುತ್ತಿವೆ.
ಕಥೆ, ಕವನ, ಕಾದಂಬರಿ, ನಾಟಕ, ಮಕ್ಕಳ ಸಾಹಿತ್ಯ, ಅನುವಾದ ಹೀಗೆ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ತಮ್ಮದೇ ಆದ ವಿಶಿಷ್ಟ ಛಾಪನ್ನು ಮೂಡಿಸಿ ಕನ್ನಡ ನಾಡಿನ ಜನ-ಮನವನ್ನು ಸೂರೆಗೊಂಡರು. ಸೃಜನಶೀಲತೆಯ ಬಗ್ಗೆ ಅಪಾರವಾದ ನಂಬಿಕೆ ಇರಿಸಿ, ಭಾವಕೋಮಲತೆಗೆ ಮನಸೋತವರು. ಹಾಗಾಗಿ, ಅವರ ಮಾತುಗಳು ಕೂಡ ಅಷ್ಟೇ ಮೃದುವಾಗಿದ್ದವು. ‘ಮೃದುಮಾತಿನಿಂದ ಹೃದಯ ಮುಟ್ಟಬಹುದು’ ಎಂದು ಹೇಳಿ, ಹಾಗೆಯೇ ನಡೆದುಕೊಂಡರು. ಸಾಹಿತ್ಯ ರಂಗದಲ್ಲಿ ಹಲವು ಹೊಸ ಪ್ರತಿಭೆ, ಶಿಷ್ಯರನ್ನು ಬೆಳೆಸಿ, ಪ್ರೋತ್ಸಾಹಿಸಿದರು. ಆದ್ದರಿಂದಲೇ ಸಾರಸ್ವತ ಪ್ರಪಂಚದ ಅರಳೀಮರದಂತಿದ್ದ ಎಚ್ಚೆಸ್ವಿ ನೆರಳಲ್ಲಿ ಅನೇಕ ಸಾಹಿತ್ಯಸುಮಗಳು ಅರಳಿ, ಬೌದ್ಧಿಕ ಪರಿಮಳ ಬೀರುತ್ತಿವೆ.
ಎಚ್ಚೆಸ್ವಿ ಕಾವ್ಯವನ್ನು ನೋಡಿದ ಬಗೆ, ಸೃಷ್ಟಿಸಿದ ಬಗೆ ಎರಡೂ ವಿಭಿನ್ನ ಮತ್ತು ವಿಶಿಷ್ಟವಾಗಿತ್ತು. ಕಾವ್ಯದ ಮೂಲಕವೇ ಜೀವನವನ್ನು ನೋಡುವ, ಗ್ರಹಿಸುವ, ಅರ್ಥೈಸುವ ಪ್ರಯತ್ನ ಮಾಡಿದರು. ಪರಂಪರೆ, ಪುರಾಣದ ಆಧಾರದಲ್ಲೇ ವರ್ತಮಾನಕ್ಕೆ ಹೊಸ ದೃಷ್ಟಿ ನೀಡಿದರು. ಅವರ ಸಾಹಿತ್ಯದ ಸೃಷ್ಟಿ ಎಲ್ಲ ವಯಸ್ಸಿನವರಿಗೂ ದಿಕ್ಸೂಚಿ. ಬಾಲ್ಯದ ಬೆರಗು, ಯೌವನದ ಜೀವನಪ್ರೀತಿ, ಸುಖ-ದುಃಖಗಳ ಬಗ್ಗೆ ಸ್ಥಿತಪ್ರಜ್ಞೆ, ಇಳಿವಯಸ್ಸಿನಲ್ಲೂ ಕುಂದದ ಉತ್ಸಾಹ, ಬರವಣಿಗೆ ಮೂಲಕ ದೊಡ್ಡ ಸಂದೇಶವನ್ನೇ ನೀಡಿದರು.
2020ರ ಫೆಬ್ರವರಿಯಲ್ಲಿ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ (ಕಲಬುರಗಿ) ಅಧ್ಯಕ್ಷತೆ ವಹಿಸಿ ಕನ್ನಡ ಪ್ರೀತಿಯ ಬಗ್ಗೆ ಸಾತ್ವಿಕ ಆದರೆ ಅಷ್ಟೇ ವೈಚಾರಿಕವಾದ ಹೊಸ ದೃಷ್ಟಿಯನ್ನು ಕೊಟ್ಟರು. ‘ಕನ್ನಡ ಮನೆ ಮಾತಾಗಬೇಕು, ಹೃದಯದ ಮಾತಾಗಬೇಕು. ಮಕ್ಕಳನ್ನು ಕನ್ನಡದಲ್ಲೇ ಮುದ್ದಿಸೋಣ’ ಎಂದು ಹೇಳಿ ಕನ್ನಡ ಕಟ್ಟುವ ಕೆಲಸ ಮನೆಗಳಿಂದಲೇ ಆರಂಭವಾಗಬೇಕು ಎಂದು ಸ್ಪಷ್ಟಪಡಿಸಿದರು. ಎಚ್ಚೆಸ್ವಿ ನಾಡುನುಡಿಗೆ ನೀಡಿರುವ ಕೊಡುಗೆ ಅನುಪಮ. ಅವರು ಭೌತಿಕವಾಗಿ ನಮ್ಮೊಂದಿಗೆ ಇಲ್ಲದಿರಬಹುದು. ಆದರೆ, ಅವರ ಸಾಹಿತ್ಯ ಕೃಷಿ ಇಂದಿಗೂ, ಮುಂದಿಗೂ ಭಾವದೀವಿಗೆ. ಅದು ಸದಾ ಬೆಳಗುತ್ತಿರುತ್ತದೆ. ಆ ಮೂಲಕ ಕನ್ನಡ ಮನಸ್ಸುಗಳಿಗೆ ಪ್ರೇರಣೆ ನೀಡುತ್ತದೆ. ಎಚ್ಚೆಸ್ವಿ ನೆನಪುಗಳಲ್ಲಿ ಸದಾ ಶಾಶ್ವತ.