

ಹಿಮಾಚಲಪ್ರದೇಶ ರಾಜ್ಯದ ಆರ್ಥಿಕ ಪರಿಸ್ಥಿತಿ ದಿನೇದಿನೇ ಹದಗೆಡುತ್ತಿರುವುದು ಈಗ ದೇಶಾದ್ಯಂತ ಸುದ್ದಿಯಾಗುತ್ತಿದೆ. 86 ಸಾವಿರ ಕೋಟಿ ರೂ. ಸಾಲದ ಹೊರೆಯನ್ನು ನಿಭಾಯಿಸಲು ಅಲ್ಲಿನ ಕಾಂಗ್ರೆಸ್ ಸರ್ಕಾರ ಏದುಸಿರು ಬಿಡುತ್ತಿದೆ. ಸರ್ಕಾರಿ ನೌಕರರಿಗೆ ಸಕಾಲಕ್ಕೆ ಸಂಬಳ ನೀಡಲು ಸಾಧ್ಯವಾಗುತ್ತಿಲ್ಲ. ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಗ್ಯಾರಂಟಿ ಭರವಸೆಗಳನ್ನು ಈಡೇರಿಸುವುದಕ್ಕೆ ಹೆಚ್ಚಿನ ಹಣ ಖರ್ಚಾಗುತ್ತಿರುವುದು ಈ ಆರ್ಥಿಕ ದುಸ್ಥಿತಿಗೆ ಮುಖ್ಯ ಕಾರಣ ಎಂದಿದ್ದಾರೆ ವಿಶ್ಲೇಷಕರು.
ರಿಸರ್ವ್ ಬ್ಯಾಂಕ್ ವರದಿ ಪ್ರಕಾರ, ಹಿಮಾಚಲದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಮುನ್ನ 2022ರ ಮಾರ್ಚ್ವರೆಗೆ 69 ಸಾವಿರ ಕೋಟಿ ರೂ.ಗಿಂತ ಕಡಿಮೆ ಸಾಲ ಇತ್ತು. ಆದರೆ, ಅಧಿಕಾರಕ್ಕೆ ಬಂದ ನಂತರ 2024ರ ಮಾರ್ಚ್ ವೇಳೆಗೆ ಸಾಲದ ಪ್ರಮಾಣ 86,600 ಕೋಟಿ ರೂ.ಗಳಿಗೆ ಹೆಚ್ಚಿದೆ. ಒಟ್ಟಾರೆ ಕಳೆದ 5 ವರ್ಷಗಳಲ್ಲಿ ಹಿಮಾಚಲದ ಸಾಲವು 30 ಸಾವಿರ ಕೋಟಿ ರೂಪಾಯಿಗಳಷ್ಟು ಹೆಚ್ಚಾಗಿದೆ ಎಂದು ಆರ್ಬಿಐ ವರದಿ ಹೇಳಿದೆ. 2025ರ ಮಾರ್ಚ್ ವೇಳೆಗೆ, ಹಿಮಾಚಲ ಸರ್ಕಾರದ ಸಾಲವು ಸುಮಾರು 95 ಸಾವಿರ ಕೋಟಿ ರೂ.ಗಳಿಗೆ ಹೆಚ್ಚಾಗುವ ಅಪಾಯವಿದೆ. ಈ ಕಾರಣಕ್ಕಾಗಿ, ಅಲ್ಲಿನ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಸೇರಿದಂತೆ ಸಚಿವರು, ಮುಖ್ಯ ಸಂಸದೀಯ ಕಾರ್ಯದರ್ಶಿಗಳು ಮತ್ತು ನಿಗಮ ಮಂಡಳಿ ಅಧ್ಯಕ್ಷರು ಮುಂದಿನ 2 ತಿಂಗಳವರೆಗೆ ಸಂಬಳ ಮತ್ತು ಯಾವುದೇ ಭತ್ಯೆಗಳನ್ನೂ ತೆಗೆದುಕೊಳ್ಳುವುದಿಲ್ಲ ಎಂದು ತೀರ್ವನಿಸಿದ್ದಾರೆ. ಇದು ಆ ರಾಜ್ಯದ ಆರ್ಥಿಕ ಸ್ಥಿತಿ ಎಷ್ಟೊಂದು ಶೋಚನೀಯವಾಗಿದೆ ಎಂಬುದಕ್ಕೆ ಸಾಕ್ಷಿ.
ಹಿಮಾಚಲಪ್ರದೇಶ ಮಾತ್ರ ಸಾಲದ ಸುಳಿಗೆ ಸಿಲುಕಿಲ್ಲ. ಇತ್ತೀಚೆಗೆ ಚುನಾವಣೆಗಳಲ್ಲಿ ಗೆಲ್ಲಲು ಉಚಿತ ವಿದ್ಯುತ್, ಉಚಿತ ಪಡಿತರ, ಉಚಿತ ಸಂಚಾರ, ಉಚಿತ ಎಲ್ಪಿಜಿ ಸಿಲಿಂಡರ್, ನಗದು ವಿತರಣೆಯಂಥ ಭರವಸೆಗಳನ್ನು ರಾಜಕೀಯ ಪಕ್ಷಗಳು ಪ್ರಣಾಳಿಕೆಯಲ್ಲೇ ನೀಡುತ್ತಿವೆ. ಆದರೆ, ರಾಜ್ಯದ ಆರ್ಥಿಕ ಪರಿಸ್ಥಿತಿ ಹೇಗಿದೆ, ಈ ಯೋಜನೆಗಳ ಜಾರಿಗೆ ಆರ್ಥಿಕ ಸಂಪನ್ಮೂಲಗಳ ಕ್ರೋಡೀಕರಣ ಹೇಗೆ, ಉಳಿದ ಅಭಿವೃದ್ಧಿ ಕಾರ್ಯಗಳ ಮೇಲಾಗುವ ಪರಿಣಾಮ ಏನು ಎಂಬ ಬಗ್ಗೆ ಪರಾಮರ್ಶೆ ನಡೆಸುವುದಿಲ್ಲ. ಅಧಿಕಾರಕ್ಕೆ ಬಂದ ಮೇಲೆ ಇಂಥ ಗ್ಯಾರಂಟಿಗಳಿಗೆ ಸರ್ಕಾರಿ
ಖಜಾನೆಯನ್ನು ಬರಿದು ಮಾಡಿ, ವಿತ್ತೀಯ ಶಿಸ್ತನ್ನು ಉಲ್ಲಂಘಿಸುತ್ತಿರುವುದು ಸರಿಯಾದ ಬೆಳವಣಿಗೆಯಲ್ಲ. ಅರುಣಾಚಲ ಪ್ರದೇಶ, ಬಿಹಾರ, ಗೋವಾ, ಹಿಮಾಚಲ ಪ್ರದೇಶ, ಕೇರಳ, ಮಣಿಪುರ, ಮೇಘಾಲಯ, ಮಿಜೋರಾಮ್ ನಾಗಾಲ್ಯಾಂಡ್, ಪಂಜಾಬ್, ರಾಜಸ್ಥಾನ ಮತ್ತು ಪಶ್ಚಿಮ ಬಂಗಾಳ- ಇವು ಆರ್ಥಿಕ ಅಪಾಯದ ರಾಜ್ಯಗಳು ಎಂದು ಆರ್ಬಿಐ 2022ರ ತನ್ನ ವರದಿಯಲ್ಲಿ ತಿಳಿಸಿದೆ.
ಕರ್ನಾಟಕದಲ್ಲಿಯೂ ಕಾಂಗ್ರೆಸ್ ಸರ್ಕಾರ ಇದೇ ರೀತಿಯ ‘ಗ್ಯಾರಂಟಿ’ ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದಿದೆ. ‘ಗ್ಯಾರಂಟಿ’ ಜಾರಿ ಮಾಡಿರುವುದು ಹೌದಾದರೂ, ಇದರಿಂದ ಅಭಿವೃದ್ಧಿ ಯೋಜನೆಗಳಿಗೆ ಗ್ರಹಣ ಹಿಡಿದಿದೆ. ಹೀಗಾಗಿ ಇಲ್ಲಿ ಕೂಡ ಹಿಮಾಚಲದಂತಹ ಪರಿಸ್ಥಿತಿ ಉದ್ಭವವಾಗದಂತೆ ಎಚ್ಚರ ವಹಿಸಬೇಕಾದದ್ದು ಕರ್ನಾಟಕ ಸರ್ಕಾರದ ಕರ್ತವ್ಯವಾಗಿದೆ.