ಸಂಪಾದಕೀಯ: ಗನ್ ಸಂಸ್ಕೃತಿ ಬೆಳೆಯದಿರಲಿ

gun
Published on

ದೂರದ ಅಮೆರಿಕದ ಶಾಲೆಗಳಲ್ಲಿ ಶೂಟೌಟ್ ಪ್ರಕರಣಗಳನ್ನು ಕೇಳಿ, ಮಕ್ಕಳು ಗನ್​ಗಳನ್ನು ಬಳಸುವುದು ಹೇಗೆ ಸಾಧ್ಯ ಎಂದು ಅಚ್ಚರಿ ಪಡುತ್ತಿದ್ದೆವು. ಆದರೆ, ಆತಂಕದ ಸಂಗತಿ ಎಂದರೆ ಈ ಗನ್ ಸಂಸ್ಕೃತಿ ಭಾರತದಲ್ಲೂ ಅಡಿ ಇಟ್ಟಿದೆ ಎಂಬುದು. ಮಕ್ಕಳು ವಿಡಿಯೋ ಗೇಮ್ಳಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದು, ಈ ಪ್ರವೃತ್ತಿ ಅವರನ್ನು ಹಿಂಸಾತ್ಮಕ ಚಟುವಟಿಕೆಗಳಿಗೆ ಪ್ರಚೋದಿಸುತ್ತಿದೆ. ಬಿಹಾರದ ಸುಪೈಲ್ ಜಿಲ್ಲೆಯಲ್ಲಿ ನರ್ಸರಿ ಓದುತ್ತಿರುವ ಐದು ವರ್ಷದ ಬಾಲಕ ಬುಧವಾರ ಶಾಲಾಬ್ಯಾಗ್​ನಲ್ಲಿ

ಹ್ಯಾಂಡ್​ಗನ್ ತಂದು, ಮತ್ತೊಬ್ಬ ವಿದ್ಯಾರ್ಥಿ ಮೇಲೆ ದಾಳಿ ನಡೆಸಿದ್ದಾನೆ. ಘಟನೆಯಲ್ಲಿ ಮೂರನೇ ತರಗತಿಯ 10 ವರ್ಷದ ಬಾಲಕನ ಕೈಗೆ ಗಾಯವಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಷ್ಟು ಪುಟ್ಟ ಬಾಲಕನ ಕೈಗೆ ಗನ್ ಹೇಗೆ ಬಂತು ಮತ್ತು ಆತ ಅದನ್ನು ಶಾಲೆಯವರೆಗೆ ತರಲು ಹೇಗೆ ಸಾಧ್ಯವಾಯಿತು ಎಂಬುದರ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಅಲ್ಲದೆ, ಜಿಲ್ಲಾದ್ಯಂತ ಎಲ್ಲ ಶಾಲೆಗಳಿಗೂ ಕಟ್ಟೆಚ್ಚರ ವಹಿಸುವಂತೆ ಮತ್ತು ಮಕ್ಕಳ ಶಾಲಾಬ್ಯಾಗ್​ನ್ನು ಕಡ್ಡಾಯವಾಗಿ ತಪಾಸಣೆ ಮಾಡುವಂತೆ ಸೂಚಿಸಲಾಗಿದೆ.

ನಿಜಕ್ಕೂ ಇದೊಂದು ಆಘಾತಕಾರಿ ಘಟನೆ. ಪುಟ್ಟ ಮಕ್ಕಳು ಹಿಂಸೆಯ ಬಗ್ಗೆ ಯೋಚಿಸುತ್ತಾರೆ ಮತ್ತು ಅಂಥ ಕೃತ್ಯಗಳನ್ನು ಮಾಡಲು ಕೈಗೆ ಗನ್ ತೆಗೆದುಕೊಳ್ಳುತ್ತಾರೆ ಎಂಬ ಅಂಶವೇ ಚಿಂತಾಜನಕ. ನಮ್ಮಲ್ಲಿನ ಸಾಮಾಜಿಕ ಸ್ವಾಸ್ಥ್ಯ ಮತ್ತು ಶೈಕ್ಷಣಿಕ ವಾತಾವರಣದ ಮೇಲೆಯೂ ಈ ಘಟನೆ ಪ್ರಶ್ನೆ ಮೂಡಿಸಿದೆ. ಅಷ್ಟಕ್ಕೂ, ಗನ್ ಸೇರಿದಂತೆ ಇತರ ಶಸ್ತ್ರಾಸ್ತ್ರ ಪಡೆದುಕೊಳ್ಳಲು ಭಾರತದಲ್ಲಿ ಬಿಗಿ ನಿಯಮಗಳಿವೆ. ಅಮೆರಿಕದಂತೆ ಕೆಲವೇ ಗಂಟೆಗಳಲ್ಲಿ ಬಂದೂಕು ಖರೀದಿಸಲು ಇಲ್ಲಿ ಸಾಧ್ಯವಿಲ್ಲ. ವ್ಯಕ್ತಿಯ ಹಿನ್ನೆಲೆ, ಪೂರ್ವಾಪರ ಮತ್ತು ಶಸ್ತ್ರದ ಅವಶ್ಯಕತೆ ಇದನ್ನೆಲ್ಲ ಸಮಗ್ರವಾಗಿ ಅವಲೋಕಿಸಿಯೇ ಲೈಸೆನ್ಸ್ ನೀಡುವುದು ವಾಡಿಕೆ. ಆದರೆ, ಈಗ ಮಕ್ಕಳ ಕೈಗೂ ಬಂದೂಕು ಸಿಗುತ್ತಿದೆ ಎಂದರೆ, ಅಡ್ಡಮಾರ್ಗಗಳಲ್ಲಿ ಇದನ್ನು ಪಡೆಯಲಾಗುತ್ತಿದ್ದೆಯೇ, ಇಂಥ ಜಾಲಗಳು ಹುಟ್ಟಿಕೊಂಡು ಸಮಾಜಕ್ಕೆ ಘಾತಕವಾದ ಕೃತ್ಯಗಳನ್ನು ಎಸಗುತ್ತಿವೆಯೇ ಎಂಬ ಬಗ್ಗೆ ತನಿಖೆ ನಡೆಯಬೇಕಿದೆ.

ಅಮೆರಿಕದಂತೆಯೇ ಇಲ್ಲೂ ಸಾಮೂಹಿಕ ಗುಂಡಿನ ದಾಳಿಗಳು ಆರಂಭವಾದರೆ ಏನು ಗತಿ? ಗನ್ ಸಂಸ್ಕೃತಿ ಭಾರತದಲ್ಲಿ ಇನ್ನೂ ಆರಂಭಿಕ ಹಂತದಲ್ಲಿದೆ. ಇದರ ಅಪಾಯವನ್ನು ಮನಗಾಣಬೇಕು ಮತ್ತು ಈಗಲೇ ಅದನ್ನು ಹೊಸಕಿಹಾಕಲು, ಗನ್ ಸಂಸ್ಕೃತಿ ಮತ್ತೆ ತಲೆಎತ್ತದಂತೆ ಮಾಡಲು ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಬೇಕು. ಅಲ್ಲದೆ, ಮಕ್ಕಳಲ್ಲಿ ಹೆಚ್ಚುತ್ತಿರುವ ಹಿಂಸಾಪ್ರವೃತ್ತಿಗೆ ಕಡಿವಾಣ ಹಾಕಲು ಬಾಲ್ಯದಲ್ಲಿ ಉತ್ತಮ ಸಂಸ್ಕಾರ, ಯೋಗ, ಧ್ಯಾನಗಳ ಜೀವನಶೈಲಿಯನ್ನು ಅವರಿಗೆ ಪರಿಚಯಿಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net