

ಮಾದಕದ್ರವ್ಯದ ಕರಾಳ ಜಾಲ ಸಾಮಾಜಿಕ ಸ್ವಾಸ್ಥ್ಯಕ್ಕೆ ಮಾರಕವಾಗುತ್ತಿದೆ. ಈ ಪಿಡುಗಿನ ಹಾವಳಿ ಇತ್ತೀಚಿನ ದಿನಗಳಲ್ಲಿ ವ್ಯಾಪಕವಾಗಿ ಆವರಿಸಿಕೊಂಡಿದ್ದು, ವಿದ್ಯಾರ್ಥಿಗಳು ಮತ್ತು ಯುವಜನರ ಬದುಕಿಗೆ ಕಂಟಕವಾಗುತ್ತಿದೆ. ಮೊದಲೆಲ್ಲ ಡ್ರಗ್ಸ್ನ ಹಾವಳಿ ಮಹಾನಗರಗಳಿಗೆ ಸೀಮಿತವಾಗಿತ್ತು. ಆದರೆ, ಈಗ ಸಣ್ಣ ಸಣ್ಣ ನಗರಗಳಲ್ಲೂ ಡ್ರಗ್ಸ್ ಸುಲಭವಾಗಿ ದೊರಕುವಂತಾಗಿದೆ ಎಂದರೆ ಈ ಜಾಲದ ವಿಷಬೇರು ಎಷ್ಟು ವ್ಯಾಪಕವಾಗಿ ಹರಡಿಕೊಂಡಿದೆ ಎಂದು ಅಂದಾಜಿಸಬಹುದು. ಇದೊಂದು ಸಾಮಾಜಿಕ ಸಮಸ್ಯೆಯಾಗಿ ಬದಲಾಗಿದ್ದು, ಕಠಿಣ ಕಾನೂನಿನ ಕ್ರಮದ ಜತೆಗೆ, ಜಾಗೃತಿ ಮೂಡಿಸುವ ಅಗತ್ಯವೂ ಇದೆ. ಇತ್ತೀಚಿನ ಬೆಳವಣಿಗೆಗಳನ್ನು ಅವಲೋಕಿಸಿದರೆ ಡ್ರಗ್ಸ್ ಪಿಡುಗಿನ ವಿರುದ್ಧದ ಆಂದೋಲನವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮತ್ತು ಸಂಘಟಿತವಾಗಿ ಕೈಗೊಳ್ಳಬೇಕಾದ ಅಗತ್ಯವಿದೆ.
ಕರ್ನಾಟಕದಲ್ಲಿ ಡ್ರಗ್ಸ್ ಮಾಫಿಯಾ ಬೇರು ದಿನೇದಿನೆ ಗಟ್ಟಿಯಾಗುತ್ತಿರುವುದು ಆತಂಕಕಾರಿ ವಿದ್ಯಮಾನ. ಕದ್ದು ಮುಚ್ಚಿ ಡ್ರಗ್ಸ್ ಸಾಗಣೆ ಮಾಡುತ್ತಿದ್ದ ದಂಧೆಕೋರರು ಇದೀಗ ನಾಯಿ, ಬೆಕ್ಕು, ಮೀನು ಸೇರಿ ಸಾಕುಪ್ರಾಣಿಗಳ ಆಹಾರದ ಸೋಗಿನಲ್ಲಿ ವಿದೇಶದಿಂದ ಕೋಟ್ಯಂತರ ರೂಪಾಯಿ ಮೌಲ್ಯದ ಡ್ರಗ್ಸ್ ಬೆಂಗಳೂರಿಗೆ ಸಾಗಿಸುತ್ತಿರುವ ಆತಂಕಕಾರಿ ವಿಚಾರ ಬೆಳಕಿಗೆ ಬಂದಿದೆ. ಕೊರಿಯರ್ ಮೂಲಕ ಮಾದಕ ವಸ್ತು ಪೂರೈಕೆಯಾಗುತ್ತಿರುವ ಬೃಹತ್ ದಂಧೆಯನ್ನು ಬೆಂಗಳೂರು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬುಧವಾರ ಪತ್ತೆ ಮಾಡಿದ್ದಾರೆ. ಥಾಯ್ಲೆಂಡ್, ದಕ್ಷಿಣ ಆಫ್ರಿಕಾ, ನೈಜೀರಿಯಾ ಸೇರಿದಂತೆ ವಿವಿಧ ದೇಶಗಳಿಂದ ಭಾರತಕ್ಕೆ ಡ್ರಗ್ಸ್ ಪೂರೈಕೆಯಾಗುತ್ತಿದೆ.
ಕಾನೂನುಬಾಹಿರ ಕೃತ್ಯಗಳಿಗೆ ಬಳಸುವ ಡಾರ್ಕ್ವೆಬ್ಸೈಟ್ ಮೂಲಕ ವಿದೇಶಗಳಿಂದ ಮಾದಕ ವಸ್ತು ಆಮದಾಗುತ್ತಿದೆ. ಪ್ರಸಕ್ತ ಸಾಲಿನ ಜನವರಿಯಿಂದ ಅಕ್ಟೋಬರ್ 8ರವರೆಗಿನ ಅವಧಿಯಲ್ಲಿ ಡ್ರಗ್ಸ್ಗೆ ಸಂಬಂಧಿಸಿದಂತೆ ಬೆಂಗಳೂರಲ್ಲೇ 711 ಪ್ರಕರಣ ದಾಖಲಿಸಿಕೊಂಡು, 1,483.30 ಕೆ.ಜಿ ಡ್ರಗ್ಸ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅವ್ಯಾಹತವಾಗಿ ನಡೆಯುತ್ತಿರುವ ಡ್ರಗ್ಸ್ ದಂಧೆಯಲ್ಲಿ ವಿದೇಶಿಗರೇ ಹೆಚ್ಚಿದ್ದು, ಕಳೆದ 9 ತಿಂಗಳಲ್ಲಿ 35 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಇದಲ್ಲದೆ ಕೇರಳ, ತಮಿಳುನಾಡು, ರಾಜಸ್ಥಾನ, ದೆಹಲಿ, ಮಧ್ಯಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳ 1,013 ಪೆಡ್ಲರ್ಗಳನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ.
ಮಾದಕವಸ್ತು ಜಾಲ ಹೊಸ ಹೊಸ ಸ್ವರೂಪದಲ್ಲಿ ಬೆಳೆಯುತ್ತ ಸಾಗಿದ್ದು, ಎಚ್ಚರಿಕೆಯ ಗಂಟೆಯನ್ನು ಮೊಳಗಿಸಿದೆ. ಡ್ರಗ್ಸ್ ವ್ಯಸನಿಗಳ ಬದುಕಂತೂ ನರಕಸದೃಶವಾಗಿದ್ದು, ಇಂಥವರು ಅಪರಾಧ ಪ್ರಕರಣಗಳಲ್ಲಿ ತೊಡಗಿಕೊಳ್ಳುತ್ತಿರುವ ನಿದರ್ಶನಗಳೂ ಕಂಡುಬಂದಿವೆ. ಹಾಗಾಗಿ, ಶೈಕ್ಷಣಿಕ ಸಂಸ್ಥೆಗಳಲ್ಲಿ ಕಟ್ಟುನಿಟ್ಟಿನ ಕ್ರಮದ ಜತೆಗೆ ವಿದ್ಯಾರ್ಥಿಗಳಲ್ಲಿ ಡ್ರಗ್ಸ್ ದುಷ್ಪರಿಣಾಮದ ಬಗ್ಗೆ ಅರಿವು ಮೂಡಿಸಬೇಕಿದೆ. ಬೆಳೆಯುತ್ತಲೇ ಸಾಗಿರುವ ಡ್ರಗ್ಸ್ ಜಾಲವನ್ನು ಮಟ್ಟಹಾಕಲು ಪೊಲೀಸ್ ಇಲಾಖೆಯ ಸಿಬ್ಬಂದಿಗೆ ಅಗತ್ಯ ತರಬೇತಿ ಮತ್ತು ನೆರವನ್ನು ನೀಡಬೇಕಿದೆ.
ಈ ಪಿಡುಗಿನ ವಿರುದ್ಧ ಹೋರಾಡಲು ಇನ್ನಷ್ಟು ಪರಿಣಾಮಕಾರಿ ಹೊಸ ಉಪಕ್ರಮಗಳನ್ನು ಕೈಗೊಳ್ಳಬೇಕಿದೆ. ಶಿಕ್ಷಣ ಸಂಸ್ಥೆಗಳನ್ನು ಮೊದಲು ಈ ಜಾಲದಿಂದ ಮುಕ್ತಗೊಳಿಸಬೇಕಿದೆ. ಯುವಜನರು ಒಮ್ಮೆ ಇಂಥ ಚಟಕ್ಕೆ ದಾಸರಾದರೆ ಬಿಡುವುದು ಕಷ್ಟ ಹಾಗೂ ಅದರಿಂದ ಕೌಟುಂಬಿಕ, ಸಾಮಾಜಿಕವಾಗಿ ಅನೇಕ ಬಗೆಯ ಸಮಸ್ಯೆಗಳು ಎದುರಾಗುತ್ತವೆ. ಹೀಗಾಗಿ ಆರಂಭದಲ್ಲೇ ಈ ಪಿಡುಗನ್ನು ನಿಯಂತ್ರಿಸಬೇಕಾದುದು ಅನಿವಾರ್ಯ. ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆಯಾಗುವಂತೆ ನಿಗಾ ವಹಿಸಬೇಕಿದೆ.