ಸಂಪಾದಕೀಯ; ಶಿಶುಗಳ ಮರಣ ನಿಯಂತ್ರಿಸಿ

baby
Published on

ಕರ್ನಾಟಕದಲ್ಲಿ ಕಳೆದ ಮೂರು ವರ್ಷಗಳಲ್ಲಿ 18,931 ನವಜಾತ ಶಿಶುಗಳು ಮೃತಪಟ್ಟಿವೆ ಎಂಬುದು ಆತಂಕಕಾರಿ ಸಂಗತಿಯಾಗಿದೆ. ಆರೋಗ್ಯ ನಿರ್ವಹಣಾ ಮಾಹಿತಿ ವ್ಯವಸ್ಥೆ (ಎಚ್​ಎಂಐಎಸ್) ಅಂಕಿಅಂಶಗಳ ಪ್ರಕಾರ, 2022-23ರಲ್ಲಿ 7,471, 2023-24ರಲ್ಲಿ 5,634 ಮತ್ತು 2024-25ರಲ್ಲಿ 5,826 ಶಿಶುಗಳು ಸಾವಿಗೀಡಾಗಿವೆ. ಇದರಲ್ಲಿ ರಾಜಧಾನಿ ಬೆಂಗಳೂರು ಮುಂಚೂಣಿಯಲ್ಲಿದ್ದು, 2,324 ಶಿಶುಗಳ ಸಾವುಗಳು ದಾಖಲಾಗಿವೆ. ಈ ವಿಷಯದಲ್ಲಿ ಮೈಸೂರು, ರಾಯಚೂರು, ಬಳ್ಳಾರಿ, ಬೆಳಗಾವಿ ಮುಂತಾದ ಜಿಲ್ಲೆಗಳು ನಂತರದ ಸ್ಥಾನಗಳಲ್ಲಿವೆ.

ರಾಜ್ಯದಲ್ಲಿ ಶಿಶು ಮರಣ ಪ್ರಮಾಣ 1,000 ಜೀವಂತ ಜನನಗಳಿಗೆ 12ಕ್ಕೆ ಇಳಿಕೆ ಆಗಿದೆ. ಇದು ದೇಶದ ಸರಾಸರಿಯಾದ 26ಕ್ಕಿಂತ ಕಡಿಮೆ. ಆದರೆ ನೆರೆಯ ಕೇರಳದಲ್ಲಿ ಇದರ ಪ್ರಮಾಣ ಕೇವಲ 5 ಇದೆ. ಅದಕ್ಕೆ ಹೋಲಿಸಿದರೆ ಕರ್ನಾಟಕದಲ್ಲಿ ನವಜಾತ ಶಿಶುಗಳ ಮರಣ ಪ್ರಮಾಣ ಇನ್ನಷ್ಟು ಕಡಿಮೆಯಾಗುವ ಅವಶ್ಯಕತೆ ಇದೆ. ಇನ್ನೊಂದು ಗಮನಿಸಬೇಕಾದ ಅಂಶವೆಂದರೆ, ಗ್ರಾಮೀಣ ಪ್ರದೇಶಗಳಿಗಿಂತ ನಗರ ಪ್ರದೇಶಗಳಲ್ಲಿಯೇ ಶಿಶು ಮರಣ ಪ್ರಮಾಣ ಅಧಿಕವಾಗಿರುವುದು. ಹಾಗೆ ನೋಡಿದರೆ ಗ್ರಾಮೀಣ ಪ್ರದೇಶಗಳಲ್ಲಿಯೇ ಆರೋಗ್ಯ ಸೇವೆ ಮತ್ತಿತರ ಸವಲತ್ತುಗಳು ಕಡಿಮೆ. ನಗರಪ್ರದೇಶಗಳಲ್ಲಿ ಸುಸಜ್ಜಿತವಾದ, ದಿನದ ಇಪ್ಪತ್ನಾಲ್ಕು ಗಂಟೆಯೂ ಕಾರ್ಯ ನಿರ್ವಹಿಸುವ ಆಸ್ಪತ್ರೆಗಳಿರುತ್ತವೆ. ಆದರೂ ಶಿಶುಮರಣ ಪ್ರಮಾಣ ನಗರಪ್ರದೇಶಗಳಲ್ಲೇ ಹೆಚ್ಚಾಗಿರುವುದು ವಿಪರ್ಯಾಸ.

ಅವಧಿಪೂರ್ವ ಜನನ, ಕಡಿಮೆ ತೂಕ, ಉಸಿರುಗಟ್ಟುವಿಕೆ, ನ್ಯುಮೋನಿಯಾ, ಜನ್ಮಜಾತ ದೋಷಗಳು ಈ ಸಾವುಗಳಿಗೆ ಪ್ರಮುಖ ಕಾರಣಗಳಾಗಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆರೋಗ್ಯ ಕ್ಷೇತ್ರಕ್ಕೆ ಕೋಟ್ಯಂತರ ರೂಪಾಯಿ ಅನುದಾನ ನೀಡುತ್ತಿವೆ. ಆಧುನಿಕ ಸೌಲಭ್ಯಗಳನ್ನೂ ಕಲ್ಪಿಸುತ್ತಿವೆ. ವಿಶೇಷ ನವಜಾತ ಶಿಶು ಆರೈಕೆ ಘಟಕಗಳು (ಎಸ್​ಎನ್​ಸಿಯು), ನವಜಾತ ಶಿಶು ಸ್ಥಿರೀಕರಣ ಘಟಕಗಳು (ಎನ್​ಬಿಎಸ್​ಯುು) ಮತ್ತು ನವಜಾತ ಶಿಶು ಆರೋಗ್ಯ ಕೇಂದ್ರಗಳು (ಎನ್​ಬಿಸಿಸಿ) ರಾಜ್ಯದೆಲ್ಲೆಡೆ ಸ್ಥಾಪನೆಯಾಗಿವೆ. ಕಾಂಗರೂ ಮದರ್ ಕೇರ್ (ಕೆಎಂಸಿ) ವಾರ್ಡ್​ಗಳಂತಹ ವಿಶೇಷ ಸೇವೆಗಳೂ ಲಭ್ಯವಿವೆ. ಇಷ್ಟೆಲ್ಲ ಸೌಲಭ್ಯಗಳಿದ್ದರೂ ಶಿಶು ಮರಣವನ್ನು ಸಂಪೂರ್ಣ ತಡೆಯಲು ಸಾಧ್ಯವಾಗಿಲ್ಲ ಎಂಬುದು ಶೋಚನೀಯ ಸಂಗತಿ.

ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಶಿಶು ಮರಣ ಪ್ರಮಾಣ ತುಸು ಜಾಸ್ತಿಯಿದೆ. ಕರ್ನಾಟಕದಲ್ಲಿ ಪ್ರಗತಿಯಿದ್ದರೂ, ಸೌಲಭ್ಯಗಳ ಸಮರ್ಪಕ ಬಳಕೆ ಆಗುತ್ತಿಲ್ಲ. ಜನರಲ್ಲಿ ಜಾಗೃತಿಯ ಕೊರತೆಯೂ ಇದೆ. ಇದರಿಂದಾಗಿ ನವಜಾತ ಶಿಶುಗಳು ಮರಣ ಹೊಂದುವ ಪ್ರಕರಣಗಳು ಹೆಚ್ಚಾಗುತ್ತಿವೆ. ಆರೋಗ್ಯ ಸಿಬ್ಬಂದಿಗೆ ನಿಯಮಿತವಾಗಿ ತರಬೇತಿ ನೀಡುವುದು, ಸಮುದಾಯ ಆಧಾರಿತ ಆರೈಕೆಯನ್ನು ಗ್ರಾಮೀಣ ಪ್ರದೇಶಗಳಿಗೆ ವಿಸ್ತರಿಸುವುದು, ಮಹಿಳೆಯರಿಗೆ ಗರ್ಭಾವಸ್ಥೆಯ ಆರೈಕೆಯ ಬಗ್ಗೆ ಜಾಗೃತಿ ಮೂಡಿಸುವುದು, ಬಾಣಂತಿಯರಿಗೆ ಮತ್ತು ಅವರ ಕುಟುಂಬಸ್ಥರಿಗೆ ನವಜಾತ ಶಿಶುವಿನ ಆರೈಕೆ ಬಗ್ಗೆ ಅರಿವು ಮೂಡಿಸುವುದು, ಆಸ್ಪತ್ರೆಗಳಲ್ಲಿನ ಸೌಲಭ್ಯಗಳ ಸಮರ್ಪಕ ಬಳಕೆಯನ್ನು ಖಾತ್ರಿಪಡಿಸಿಕೊಳ್ಳುವುದು ಮುಂತಾದ ಕ್ರಮಗಳು ಮರಣಪ್ರಮಾಣವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಸಹಾಯಕವಾಗಬಹುದು. ರಾಜ್ಯ ಸರ್ಕಾರವು ಈ ಸಮಸ್ಯೆಯ ಪರಿಹಾರಕ್ಕಾಗಿ ಸಮಗ್ರ ಯೋಜನೆ ರೂಪಿಸುವುದು ಮಾತ್ರವಲ್ಲದೆ, ಅದರ ಕಾರ್ಯಾನುಷ್ಠಾನದಲ್ಲಿ ಸಮಾಜದ ಸಕ್ರಿಯ ಸಹಕಾರ ಪಡೆಯುವ ಅವಶ್ಯಕತೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net