ಸಂಪಾದಕೀಯ: ಆತ್ಮಸ್ಥೈರ್ಯ ಹೆಚ್ಚಿಸಬೇಕು

tale
Published on

ಭಾರತದಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಮಾಣ ತೀವ್ರಗತಿಯಲ್ಲಿ ಏರುತ್ತಿದ್ದು, ಪ್ರತಿ ವರ್ಷ 13 ಸಾವಿರ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಆಘಾತಕಾರಿ ಅಂಶ ಬಯಲಾಗಿದೆ. ಆತ್ಮಹತ್ಯೆಯ ಒಟ್ಟಾರೆ ಪ್ರಮಾಣ ವಾರ್ಷಿಕ ಶೇಕಡ 2ರಷ್ಟು ಹೆಚ್ಚುತ್ತಿದ್ದರೆ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಮಾಣ ವಾರ್ಷಿಕ ಶೇ. 4ರಷ್ಟು ಏರುತ್ತಿದ್ದು, ಇದು ದೇಶದಾದ್ಯಂತ ಒಂದು ಪಿಡುಗಾಗಿ ಬೆಳೆಯುತ್ತಿದೆ ಎಂದು ನ್ಯಾಷನಲ್ ಕ್ರೖೆಂ ರೆಕಾರ್ಡ್ಸ್ ಬ್ಯೂರೊ (ಎನ್​ಸಿಆರ್​ಬಿ) ಖಚಿತಪಡಿಸಿದೆ. ಕುಗ್ಗಿದ ಮಾನಸಿಕ ಆರೋಗ್ಯ, ಹೆಚ್ಚಿರುವ ಒತ್ತಡ, ಖಿನ್ನತೆ ಮುಂತಾದವು ಇದಕ್ಕೆ ಕಾರಣಗಳಾಗಿವೆ. ಭಾರತದಲ್ಲಿ ಆತ್ಮಹತ್ಯೆಯ ಪ್ರಮಾಣ 1 ಲಕ್ಷಕ್ಕೆ 12.4 ಆಗಿದ್ದು, ಇದು ದೇಶದಲ್ಲಿ ಇದುವರೆಗಿನ ಗರಿಷ್ಠ ಪ್ರಮಾಣವಾಗಿದೆ ಎಂಬುದು ಗಮನಾರ್ಹ.

ವಿದ್ಯಾರ್ಥಿಗಳು ಖಿನ್ನತೆಯನ್ನು ನಿರ್ಲಕ್ಷಿಸುತ್ತಿರುವುದು ಅಥವಾ ಅವರಿಗೆ ಸೂಕ್ತ ಸ್ಪಂದನೆ ಸಿಗದಿರುವುದು ಆತ್ಮಹತ್ಯೆಯಂಥ ದುಡುಕಿನ ನಿರ್ಧಾರಕ್ಕೆ ಕಾರಣವಾಗುತ್ತಿದೆ. ಖಿನ್ನತೆ ಕಾಣಿಸಿಕೊಂಡ ಆರಂಭದ ಹಂತದಲ್ಲೇ ಮನೋವೈದ್ಯರನ್ನು ಅಥವಾ ಆಪ್ತಸಮಾಲೋಚಕರನ್ನು ಕಾಣಲು ಬಹುತೇಕರು ಹಿಂಜರಿಯುವುದು, ಸಮಸ್ಯೆಯನ್ನು ಮತ್ತಷ್ಟು ಕ್ಲಿಷ್ಟಗೊಳಿಸುತ್ತದೆ. ಖಿನ್ನತೆಯಿಂದ ಆರಂಭಿಕ ಹಂತದಲ್ಲೇ ಹೊರಬರಲು ಸಾಧ್ಯವಿದೆ. ಇದಕ್ಕೆ ಒಂದಿಷ್ಟು ಭಾವನಾತ್ಮಕ ಬೆಂಬಲ, ಜೀವನಶೈಲಿಯಲ್ಲಿ ಸುಧಾರಣೆ ಅಗತ್ಯ. ಕರೊನಾ ಮತ್ತು ನಂತರದ ಅವಧಿಯಲ್ಲೂ ದೇಶದಲ್ಲಿ ಆತ್ಮಹತ್ಯೆ ಪ್ರಮಾಣ ಹೆಚ್ಚಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ಸಂಖ್ಯೆ ಹೆಚ್ಚುತ್ತಿರುವುದು ಕಳವಳಕಾರಿ.

ವಿದ್ಯಾರ್ಥಿಗಳನ್ನು ವಿಶ್ವಾಸದಿಂದ ಕಾಣುವ ಮತ್ತು ಅವರಲ್ಲಿ ನಂಬಿಕೆ ಹುಟ್ಟಿಸುವಂಥ ವಾತಾವರಣ ಸೃಷ್ಟಿಯಾಗಬೇಕು. ಆದರೆ, ಇಂದಿನ ದಿನಗಳಲ್ಲಿ ಶೈಕ್ಷಣಿಕ ವಲಯ ವಿದ್ಯಾರ್ಥಿಗಳ ಮೇಲೆ ಅತಿಯಾದ ಒತ್ತಡ ಹೇರುತ್ತಿದ್ದರೆ, ಮತ್ತೊಂದೆಡೆ ಪಾಲಕರು ಅತಿಯಾದ ನಿರೀಕ್ಷೆ ಮೂಲಕ ಮತ್ತೊಂದು ಬಗೆಯ ಒತ್ತಡವನ್ನು ಸೃಷ್ಟಿಸುತ್ತಿದ್ದಾರೆ. ಇದನ್ನೆಲ್ಲ ನಿಭಾಯಿಸುವುದು ಸಾಧ್ಯವಿಲ್ಲ ಎಂದುಕೊಳ್ಳುವ ವಿದ್ಯಾರ್ಥಿಗಳು ತಾತ್ಕಾಲಿಕ ಸೋಲನ್ನೇ ಅಥವಾ ತೊಂದರೆಯನ್ನೇ ಅಂತಿಮ ಪರಾಭವವೆಂದು ಭಾವಿಸಿ, ಪ್ರಾಣ ಕಳೆದುಕೊಳ್ಳುತ್ತಿರುವುದು ನಿಜಕ್ಕೂ ದುರದೃಷ್ಟಕರ. ಇಂಥ ಘಟನೆಗಳು ತಗ್ಗಬೇಕಾದರೆ ಶೈಕ್ಷಣಿಕ ವಲಯ, ಪಾಲಕರು ಮತ್ತು ಒಟ್ಟಾರೆ ಸಮಾಜದಿಂದ ಒಂದಿಷ್ಟು ಭರವಸೆ ಮೂಡಿಸುವಂಥ ಕ್ರಮಗಳನ್ನು ಕೈಗೊಳ್ಳಬೇಕು. ಇದರ ಭಾಗವಾಗಿ ವಿದ್ಯಾರ್ಥಿಗಳ ಪಠ್ಯಕ್ರಮದಲ್ಲಿ ಶೈಕ್ಷಣಿಕ ಅಂಶಗಳ ಜತೆಗೆ ಆತ್ಮಸ್ಥೈರ್ಯ ಹೆಚ್ಚಿಸುವಂತಹ ಸ್ಪೂರ್ತಿದಾಯಕ ಸಂಗತಿಗಳನ್ನು ಸೇರಿಸುವುದು, ಒತ್ತಡ ನಿವಾರಣೆಗಾಗಿ ಆಟೋಟಗಳಿಗೆ ಹೆಚ್ಚಿನ ಒತ್ತು ನೀಡುವುದು, ಪ್ರತಿಭೆಗಳನ್ನು ಪ್ರೋತ್ಸಾಹಿಸುವುದು, ಸೋತಾಗ ಸೂಕ್ತ ಸಾಂತ್ವನ ನೀಡುವುದು ಮುಂತಾದ ಕ್ರಮಗಳನ್ನು ಕೈಗೊಳ್ಳುವುದು ವಿಹಿತ.

ನೋವನ್ನು ಎದುರಿಸಿ, ಅದನ್ನು ಮೀರಿನಿಂತರೆ ಮತ್ತೆ ಬದುಕು ಕಟ್ಟಿಕೊಳ್ಳುವ ಅವಕಾಶಗಳು ಸಿಕ್ಕೇ ಸಿಗುತ್ತವೆ. ಆತ್ಮಸ್ಥೈರ್ಯದಿಂದ ಸವಾಲುಗಳ ವಿರುದ್ಧ ಹೋರಾಡುವ ಸಂಕಲ್ಪ ಅಗತ್ಯ. ಮಾನಸಿಕ ಆರೋಗ್ಯದ ರಕ್ಷಣೆಯೂ ಪ್ರಧಾನ ಆದ್ಯತೆಯಾಗಲಿ. ಯುವಕರ ಮುಂದೆಯಂತೂ ಜೀವನದ ಹಲವು ಅವಕಾಶಗಳಿರುತ್ತವೆ; ಅದನ್ನು ಪರಿಗಣಿಸುವುದನ್ನು ಬಿಟ್ಟು ಸಾವಿನ ಮನೆಯ ಹಾದಿ ಹಿಡಿಯುವುದು ಸರಿಯಲ್ಲ. ಅದಮ್ಯ ಆತ್ಮವಿಶ್ವಾಸ, ಸಕಾರಾತ್ಮಕ ಚಿಂತನೆ, ಆಶಾವಾದ, ಕಠಿಣ ಪರಿಶ್ರಮ ವ್ಯಕ್ತಿತ್ವದ ಭಾಗವಾಗಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net