

ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್ಸಿ) ಮುಖ್ಯ ಪರೀಕ್ಷೆ ಸೆಪ್ಟೆಂಬರ್ 22ರಂದು ನಡೆಯಲಿದೆ. ಆದರೆ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಇದೇ ದಿನ ಪೊಲೀಸ್ ಸಬ್ ಇನ್ಸ್ಟೆಕ್ಟರ್ (ಪಿಎಸ್ಐ) 402 ಹುದ್ದೆಗಳ ನೇಮಕಾತಿಗೆ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸಲು ಮುಂದಾಗಿದ್ದು, ಅಭ್ಯರ್ಥಿಗಳಿಗೆ ಸಮಸ್ಯೆಯಾಗಿ ಪರಿಣಮಿಸಿದೆ. ಆದ್ದರಿಂದ ಪಿಎಸ್ಐ ಪರೀಕ್ಷೆಯ ದಿನಾಂಕವನ್ನು ಮುಂದೂಡುವುದು ಅಭ್ಯರ್ಥಿಗಳ ಹಿತದೃಷ್ಟಿಯಿಂದ ಒಳ್ಳೆಯದು. ‘ಪಿಎಸ್ಐ ಸ್ಪರ್ಧಾತ್ಮಕ ಪರೀಕ್ಷೆಯನ್ನು ಮುಂದೂಡುವ ಕುರಿತು ರ್ಚಚಿಸಿ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಗೃಹ ಸಚಿವ ಜಿ.ಪರಮೇಶ್ವರ ಹೇಳಿದ್ದಾರೆ. ಆದರೆ, ಈ ಬಗ್ಗೆ ಶೀಘ್ರದಲ್ಲೇ ನಿರ್ಣಯ ಕೈಗೊಳ್ಳುವುದು ಅಗತ್ಯ. ಅಭ್ಯರ್ಥಿಗಳು ಕೊನೆಯ ಕ್ಷಣದವರೆಗೂ ಗೊಂದಲದಲ್ಲಿ ಇರುವಂತೆ ಆಗಬಾರದು. ಸರ್ಕಾರಿ ಹುದ್ದೆಗಳಿಗಾಗಿ ನಡೆಯುವ ನೇಮಕಾತಿ ಪರೀಕ್ಷೆಗಳು ಇತ್ತೀಚಿನ ವರ್ಷಗಳಲ್ಲಿ ಅವ್ಯವಸ್ಥೆಯಿಂದಲೇ ಹೆಚ್ಚು ಸುದ್ದಿಯಾಗುತ್ತಿವೆ. ಸಮನ್ವಯ ಮತ್ತು ಸಂವೇದನೆಯ ಕೊರತೆ, ಪಾರದರ್ಶಕತೆ ಇಲ್ಲದಿರುವುದು, ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಉಡಾಫೆಯ ಧೋರಣೆಯಿಂದಾಗಿ ಇಂಥ ಪರೀಕ್ಷೆಗಳ ಮೇಲೆ ಸಂಕಷ್ಟದ ಕಾಮೋಡ ಕವಿಯುತ್ತಿದೆ. ಸರ್ಕಾರವೂ ಇದನ್ನು ಗಂಭೀರ ವಾಗಿ ಪರಿಗಣಿಸುತ್ತಿಲ್ಲ. ರಾಜ್ಯದ ಬೊಕ್ಕಸದಿಂದ ‘ನಿರುದ್ಯೋಗ ಭತ್ಯೆ’ ನೀಡಲು ತೋರುವ ಉತ್ಸಾಹವನ್ನು ನೇಮಕಾತಿಗಳ ಪರೀಕ್ಷೆಯನ್ನು ಸುಗಮ ವಾಗಿಸಲು ಏಕೆ ತೋರಿಸುವುದಿಲ್ಲ ಎಂಬುದು ಅರ್ಥವಾಗದ ಸಂಗತಿ. ಪ್ರತಿ ಬಾರಿಯೂ ಒಂದಿಲ್ಲ ಒಂದು ಸಮಸ್ಯೆ, ಅವ್ಯವಸ್ಥೆಯ ಪರಿಣಾಮ ಯುವ ಉದ್ಯೋಗಾಕಾಂಕ್ಷಿಗಳು ರೋಸಿ ಹೋಗಿದ್ದಾರೆ.
ಕಳೆದ ನಾಲ್ಕು ವರ್ಷಗಳಿಂದ ಪಿಎಸ್ಐ ನೇಮಕಾತಿ ನಡೆದಿಲ್ಲ. ಅಲ್ಲದೆ, ಸಿಂಧುತ್ವ, ದಾಖಲಾತಿ ಪರಿಶೀಲನೆ, ತರಬೇತಿ ಪಡೆದು ಇಲಾಖೆಗೆ ಸೇರಲು ಕನಿಷ್ಠ ಒಂದು ವರ್ಷ ಬೇಕಾಗುತ್ತದೆ. ಹೀಗಿರುವಾಗ, ದೀರ್ಘಾವಧಿಯಿಂದ ನನೆಗುದಿಗೆ ಬಿದ್ದಿರುವ ಪಿಎಸ್ಐ ನೇಮಕಾತಿಯ ಸ್ಪರ್ಧಾತ್ಮಕ ಪರೀಕ್ಷೆಯನ್ನು, ಮತ್ತೊಂದು ಮುಖ್ಯ ಪರೀಕ್ಷೆಯೆಂದೇ ಹಮ್ಮಿಕೊಂಡಿದ್ದು ಏಕೆ? ಪಿಎಸ್ಐ ಆಕಾಂಕ್ಷಿಗಳು ಯುಪಿಎಸ್ಸಿ ಪರೀಕ್ಷೆಗೂ ಹಲವು ವರ್ಷಗಳಿಂದ ಸಿದ್ಧತೆ ನಡೆಸಿರುತ್ತಾರೆ ಎಂಬುದು ಗಮನಾರ್ಹ. ಅಲ್ಲದೆ, ಸರ್ಕಾರದ ಹಲವು ಇಲಾಖೆಗಳಲ್ಲಿ ಗ್ರೂಪ್ ಬಿ ಮತ್ತು ಸಿ ಹುದ್ದೆಗಳ ನೇಮಕಾತಿಯೂ ನನೆಗುದಿಗೆ ಬಿದ್ದಿದೆ. ‘ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು’ ಎಂಬ ಸರ್ಕಾರದ ಆಶ್ವಾಸನೆ ಇನ್ನೂ ಈಡೇರದೆ ಇರುವುದರಿಂದ, ಉದ್ಯೋಗಾಕಾಂಕ್ಷಿಗಳು ನೇಮಕಾತಿ ಪ್ರಕ್ರಿಯೆ ಆರಂಭಕ್ಕಾಗಿ ಎದುರು ನೋಡುತ್ತಿದ್ದಾರೆ. ಆಡಳಿತದ ಸುಗಮ ನಿರ್ವಹಣೆಗೆ ಖಾಲಿ ಹುದ್ದೆಗಳ ಭರ್ತಿ ಅನಿವಾರ್ಯ. ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ವಹಿಸಬೇಕಾಗಿದೆ. ಮುಖ್ಯವಾಗಿ, ಇಂಥ ನೇಮಕಾತಿ ಪ್ರಕ್ರಿಯೆಗಳು ಪಾರದರ್ಶಕವಾಗಿ ನಡೆಯುವಂತೆ ನೋಡಿಕೊಳ್ಳಬೇಕಾದ್ದು ಸರ್ಕಾರದ ಕರ್ತವ್ಯ.