

ಚೀನಾ ಮತ್ತು ಪಾಕಿಸ್ತಾನದ ನಾಯಕರು ಭಾರತದ ವಿರುದ್ಧದ ತಮ್ಮ ಕುತಂತ್ರಗಳಿಗೆ ಬಾಂಗ್ಲಾದೇಶವನ್ನು ಬಳಸಿಕೊಳ್ಳಲು ಪ್ರಾರಂಭಿಸಿದ್ದಾರೆ. ಇದು ಇತ್ತೀಚಿನ ಬೆಳವಣಿಗೆಗಳಿಂದ ಅತ್ಯಂತ ಸ್ಪಷ್ಟವಾಗಿ ಗೋಚರಿಸತೊಡಗಿದೆ. ಜೊತೆಗೆ ಇದರಿಂದ ಈ ಪ್ರದೇಶದಲ್ಲಿ ಆಗಬಹುದಾದ ಭೌಗೋಳಿಕ ರಾಜಕೀಯ ಬದಲಾವಣೆಗಳ ಬಗ್ಗೆ ಚರ್ಚೆ ಆರಂಭವಾಗಿದೆ.
ಬಾಂಗ್ಲಾದೇಶ ಸರ್ಕಾರದ ಮುಖ್ಯ ಸಲಹೆಗಾರ ಮೊಹಮದ್ ಯೂನಸ್ ನಾಲ್ಕು ದಿನಗಳ ಭೇಟಿಗಾಗಿ ಚೀನಾಕ್ಕೆ ತೆರಳಿದ್ದರು. ಅವರನ್ನು ಕರೆತರಲು ಚೀನಾ ಅಧ್ಯಕ್ಷರು ವಿಶೇಷ ವಿಮಾನವನ್ನು ಕಳಿಸಿದ್ದರು. ಅಲ್ಲಿನ ಸಭೆಗಳಲ್ಲಿ ಯೂನಸ್ ಅವರು ಈಶಾನ್ಯ ಭಾರತದ ವಿಷಯಗಳನ್ನೂ ಪ್ರಸ್ತಾಪಿಸಿದ್ದು ಗಮನ ಸೆಳೆಯಿತು. ಚೀನಾ ಭೇಟಿಯ ಪರಿಣಾಮವೇನೋ ಎಂಬಂತೆ, ಇದೀಗ ಬಾಂಗ್ಲಾದೇಶದ ಲಾಲ್ವೋನಿರ್ಹಾಟ್ ಜಿಲ್ಲೆಯಲ್ಲಿ ವಾಯುನೆಲೆಯೊಂದನ್ನು ನಿರ್ವಿುಸಲು ಚೀನಾ ಮುಂದಾಗಿದೆ. ಇದಕ್ಕೆ ಅನುಮತಿ ನೀಡಲು ಯೂನಸ್ ಆಸಕ್ತಿ ತೋರಿದ್ದಾರೆ.
ಲಾಲ್ವೋನಿರ್ಹಾಟ್ ಜಿಲ್ಲೆ ಬಾಂಗ್ಲಾದೇಶದ ವಾಯವ್ಯಕ್ಕಿದ್ದು, ಪಶ್ಚಿಮ ಬಂಗಾಲದ ಜಲಪಾಯಿಗುರಿ ಮತ್ತು ಕೂಚ್ಬೆಹಾರ್ ಜಿಲ್ಲೆಗಳಿಗೆ ಹತ್ತಿರದಲ್ಲಿದೆ. ಅಲ್ಲಿ ಚೀನಾ ವಾಯುನೆಲೆ ಸ್ಥಾಪಿಸುವುದರಿಂದ ಭಾರತದ ಈಶಾನ್ಯ ಭಾಗಗಳಿಗೆ ಎಷ್ಟರಮಟ್ಟಿಗೆ ಭದ್ರತಾ ಅಪಾಯ ತಲೆದೋರುತ್ತದೆ ಎಂಬುದು ಎಂಥವರಿಗೂ ಅರ್ಥವಾಗುವ ಸಂಗತಿ. ಇದರ ಜೊತೆಗೇ ಇನ್ನೊಂದು ಆತಂಕಕಾರಿ ಬೆಳವಣಿಗೆಯೂ ನಡೆಯುತ್ತಿದೆ. ಪಾಕಿಸ್ತಾನದ ವಿದೇಶಾಂಗ ಸಚಿವ ಇಶಕ್ದಾರ್ ಮತ್ತು ವಿದೇಶಾಂಗ ಕಾರ್ಯದರ್ಶಿ ಆಮ್ನಾ ಬಲೋಚ್ ಇದೇ ತಿಂಗಳ 22ರಂದು ಬಾಂಗ್ಲಾದೇಶಕ್ಕೆ ಭೇಟಿ ನೀಡಿ ಮಿಲಿಟರಿ ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ. ಚೀನಾ- ಪಾಕಿಸ್ತಾನ- ಬಾಂಗ್ಲಾದೇಶ ಮೂರೂ ಸೇರಿ ಈ ಮಳೆಗಾಲಕ್ಕೆ ಮುನ್ನ ಬಾಂಗ್ಲಾದೇಶದ ರಂಗಪುರದಲ್ಲಿ ಸೇನಾ ಅಭ್ಯಾಸ (ಭೂ ಮತ್ತು ವಾಯು) ನಡೆಸಲಿವೆ ಎಂಬ ಮಾತೂ ಕೇಳಿಬರುತ್ತಿದೆ.
ಭಾರತದ ಗುಪ್ತಚರ ಇಲಾಖೆ ಈಗಾಗಲೇ ಇದರ ಬಗ್ಗೆ ಮಾಹಿತಿ ಕಲೆಹಾಕಿದೆ. ಈ ಸೇನಾ ಅಭ್ಯಾಸಕ್ಕೆ ತಕ್ಕ ಪ್ರತ್ಯುತ್ತರ ನೀಡುವ ಬಗ್ಗೆ ಕೇಂದ್ರ ಸರ್ಕಾರ ಸಮಾಲೋಚನೆ ನಡೆಸುತ್ತಿದೆ. ಜೊತೆಗೆ ಆ ಭಾಗದಲ್ಲಿ ತಾನು ಕೈಗೊಳ್ಳಬೇಕಾದ ಎಲ್ಲ ಮಿಲಿಟರಿ ಸನ್ನದ್ಧತೆಯ ಕ್ರಮಗಳನ್ನೂ ಭಾರತ ಈಗಾಗಲೇ ಕೈಗೊಂಡಿದೆ ಎಂದು ವರದಿಗಳು ಹೇಳುತ್ತಿವೆ.
ಇತ್ತೀಚೆಗೆ ಭಾರತವು ಬಾಂಗ್ಲಾದೇಶದ ಮೇಲೆ ಹಲವು ನಿರ್ಬಂಧಗಳನ್ನು ವಿಧಿಸಲಾರಂಭಿಸಿದೆ. ವಿವಿಧ ರಾಷ್ಟ್ರಗಳಿಗೆ ತನ್ನ ಉತ್ಪನ್ನಗಳನ್ನು ರಫ್ತು ಮಾಡಲು ಬಾಂಗ್ಲಾದೇಶವು ಕಳೆದ ಐದು ವರ್ಷಗಳಿಂದ ಭಾರತದ ನೆಲವನ್ನು ಬಳಸಿಕೊಳ್ಳುತ್ತಿತ್ತು. ಅದಕ್ಕೆ ಭಾರತ ಈಗ ಇತಿಶ್ರೀ ಹಾಡಿದೆ. ಆದರೆ ಇಂತಹ ಮೃದು ಕ್ರಮಗಳು ಬಾಂಗ್ಲಾದೇಶದ ಮೇಲೆ ಹೆಚ್ಚು ಪರಿಣಾಮ ಬೀರುವುದಿಲ್ಲ. ಚೀನಾ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಒಂದು ದುಷ್ಟಕೂಟವಾಗಿ ಪರಿವರ್ತನೆಯಾಗುತ್ತಿದೆ.
ಇದು ಇಂದಲ್ಲ ನಾಳೆ ಭಾರತಕ್ಕೆ ಕಂಟಕವಾಗಿ ಪರಿಣಮಿಸುವುದರಲ್ಲಿ ಯಾವುದೇ ಸಂಶಯವಿಲ್ಲ. ಚೀನಾ ಮತ್ತು ಪಾಕಿಸ್ತಾನ ಹಿಂದೆಯೂ ಭಾರತದ ವಿರುದ್ಧ ತಮ್ಮ ‘ವ್ಯರ್ಥ ದುಸ್ಸಾಹಸ’ಗಳನ್ನು ಪ್ರದರ್ಶಿಸಿ ಸೋಲೊಪ್ಪಿಕೊಂಡಿವೆ. ಆದರೆ ಹಾಗೆಂದು ಭಾರತ ಮೈಮರೆಯುವಂತಿಲ್ಲ. ಈಶಾನ್ಯ ಭಾರತ ಅತ್ಯಂತ ಸೂಕ್ಷ್ಮ ಪ್ರದೇಶ. ಈಗಾಗಲೇ ಆ ಭಾಗದಲ್ಲಿ ಮಣಿಪುರದ ಆಂತರಿಕ ಪ್ರಕ್ಷುಬ್ಧತೆ, ಬಾಂಗ್ಲಾದೇಶೀಯರ ಒಳನುಸುಳುವಿಕೆ ಮುಂತಾದ ಸಮಸ್ಯೆಗಳಿವೆ. ಇವುಗಳ ಜತೆ ಮತ್ತೊಂದು ಸಮಸ್ಯೆ ಎದುರಾಗದಂತೆ ಭಾರತ ಎಚ್ಚರ ವಹಿಸುವ ಅವಶ್ಯಕತೆ ಇದೆ.