ಸಂಪಾದಕೀಯ; ಸವಾಲು-ಅವಕಾಶ

Trump reacts to India
Published on

ಡೊನಾಲ್ಡ್ ಟ್ರಂಪ್ ಅವರು ಎರಡನೆಯ ಬಾರಿ ಶ್ವೇತಭವನ ಪ್ರವೇಶಿಸಿದ ನಂತರದಲ್ಲಿ ಕೈಗೊಳ್ಳುತ್ತಿರುವ ನಿರ್ಧಾರಗಳು, ಆಡುತ್ತಿರುವ ಮಾತುಗಳು ಜಾಗತಿಕವಾಗಿ ಸಂಚಲನ ಮೂಡಿಸುತ್ತಿವೆ. ಹಾಗೇ, ಹೊಸ ಜಾಗತಿಕ ಸಮೀಕರಣಕ್ಕೂ ಇದು ಮುನ್ನುಡಿ ಬರೆದಿದೆ. ಅದರಲ್ಲೂ ಸುಂಕ ವಿಚಾರದಲ್ಲಿ ಟ್ರಂಪ್ ಘೋಷಣೆಗಳು ವ್ಯಾಪಕ ಪರಿಣಾಮಕ್ಕೆ ಕಾರಣವಾಗಿವೆ. ‘ಮೇಕ್ ಅಮೆರಿಕಾ ಗ್ರೇಟ್ ಅಗೇನ್’ ಎಂಬ ಘೋಷಣೆ ಮೂಲಕ ಚುನಾವಣಾ ಪ್ರಚಾರ ನಡೆಸಿದ ಟ್ರಂಪ್, ಅಧಿಕಾರಕ್ಕೇರಿದ ಬಳಿಕ ತೆಗೆದುಕೊಳ್ಳುತ್ತಿರುವ ನಿರ್ಣಯಗಳು ನಿಜಕ್ಕೂ ಅಮೆರಿಕಾವನ್ನು ಗ್ರೇಟ್ ಆಗಿಸಬಲ್ಲವೆ ಎಂಬ ಅನುಮಾನ ಬೇರೆಯವರಿಗಿರಲಿ, ಖುದ್ದು ಅಮೆರಿಕನ್ನರಿಗೇ ಮೂಡಿದೆ. ಏಕೆಂದರೆ, ಸುಂಕ ಹೆಚ್ಚಳವು ಅಮೆರಿಕಕ್ಕೆ ರಫ್ತು ಮಾಡುವ ದೇಶಗಳ ಮೇಲೆ ಮಾತ್ರ ಪರಿಣಾಮ ಬೀರುವುದಿಲ್ಲ.

ವಿವಿಧ ವಸ್ತುಗಳ ಬೆಲೆ ಹೆಚ್ಚಳದಿಂದಾಗಿ ಅಮೆರಿಕನ್ ಗ್ರಾಹಕರ ಜೇಬನ್ನೂ ಸುಡಲಿದೆ. ಇದು ಒಂದು ಕಡೆಗಾದರೆ, ಜಾಗತಿಕವಾಗಿ ಬೃಹತ್ ಶಕ್ತಿಗಳ ಒಗ್ಗೂಡುವಿಕೆಗೂ ಟ್ರಂಪ್ ವೇದಿಕೆ ನಿರ್ವಿುಸಿಕೊಡುತ್ತಿರುವುದು ಗಮನಾರ್ಹ. ರಷ್ಯಾದಿಂದ ಕಚ್ಚಾ ತೈಲ ಖರೀದಿ ಮಾಡುತ್ತಿದೆಯೆಂಬ ಕಾರಣಕ್ಕೆ ಭಾರತದ ಮೇಲೆ ಶೇ. 50 (ಶೇ. 25 ಹೆಚ್ಚುವರಿ ಸುಂಕ ಸೇರಿ) ಸುಂಕವನ್ನು ಅಮೆರಿಕ ವಿಧಿಸಿದೆ. ವಿರಳ ಖನಿಜಗಳ ರಫ್ತಿಗೆ ಒಪು್ಪತ್ತಿಲ್ಲ ಎಂಬ ಕಾರಣಕ್ಕೆ ಚೀನಾದ ಮೇಲೆ ಶೇ.200ರವರೆಗೆ ಸುಂಕ ವಿಧಿಸಲು ನಿರ್ಣಯ ಮಾಡಿದೆ. ಇನ್ನೂ ಹಲವು ದೇಶಗಳ ಮೇಲೆ ಟ್ರಂಪ್ ಸುಂಕ ಸಮರ ಸಾರಿದ್ದಾರೆ.

ಈ ಸನ್ನಿವೇಶವು ಭಾರತ-ಚೀನಾ-ರಷ್ಯಾ ಒಗ್ಗಟ್ಟಿಗೆ ಕಾರಣವಾಗುತ್ತಿರುವುದು ಕುತೂಹಲಕರ ಬೆಳವಣಿಗೆ. ಈ ಪಟ್ಟಿಗೆ ಜಪಾನ್ ಕೂಡ ಸೇರಿದೆ. ಈಚೆಗೆ ಚೀನಾದಲ್ಲಿ ನಡೆದ ಷಾಂಗೈ ಸಹಕಾರ ಒಕ್ಕೂಟದ ಶೃಂಗಸಭೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ, ಚೀನಾ ಅಧ್ಯಕ್ಷ ಷಿ ಜಿನ್​ಪಿಂಗ್ ಮತ್ತು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಚರ್ಚೆ ನಡೆಸಿರುವುದು ವಿಶ್ವದ ಗಮನ ಸೆಳೆದಿದ್ದು, ಹೊಸ ಜಾಗತಿಕ ಶಕ್ತಿಯ ಉದಯವನ್ನೂ ಇದು ಸಂಕೇತಿಸಿದೆ. ಮುಂದಿನ ದಿನಗಳಲ್ಲಿ ಈ ನಿಟ್ಟಿನಲ್ಲಿ ಆಗಲಿರುವ ಬೆಳವಣಿಗೆಗಳು ಕುತೂಹಲಕರ. ಇದೇನೇ ಇರಲಿ, ಟ್ರಂಪ್ ಸೃಷ್ಟಿಸಿರುವ ಸನ್ನಿವೇಶವನ್ನು ಭಾರತದಂತಹ ದೇಶವು ಹೊಸ ಹೊಸ ಮಾರುಕಟ್ಟೆಗಳು ಹಾಗೂ ಹೊಸ ಹೊಸ ಸ್ನೇಹಿತದೇಶಗಳನ್ನು ಕಂಡುಕೊಳ್ಳಲು ಒಂದು ಅವಕಾಶವಾಗಿ ಬಳಸಿಕೊಳ್ಳಬೇಕು. ಹೀಗೆ ಮಾಡಿದಲ್ಲಿ ಭವಿಷ್ಯದಲ್ಲಿ ಯಾವುದೇ ರೀತಿಯ ಪರಿಸ್ಥಿತಿಯನ್ನು ಎದುರಿಸಲು ಅನುಕೂಲವಾಗುತ್ತದೆ.

ಭಾರತ ಸರ್ಕಾರ ಈಗಾಗಲೇ ಈ ದಿಕ್ಕಿನಲ್ಲಿ ಪ್ರಯತ್ನ ನಡೆಸಿರುವುದು ಸಮಾಧಾನದ ಸಂಗತಿ. ಅಮೆರಿಕ ಕ್ರಮದಿಂದ ಆಗಬಹುದಾದ ಪರಿಣಾಮಗಳನ್ನು ಅಂದಾಜಿಸಿ ದೇಶದ ಹಿತಾಸಕ್ತಿಗೆ ಪೂರಕವಾದ ಕ್ರಮಗಳನ್ನು ಯೋಜಿಸುವ ನಿಟ್ಟಿನಲ್ಲಿ ಸರ್ಕಾರ ಸಂಬಂಧಪಟ್ಟ ಉದ್ಯಮ ವಲಯಗಳು ಮತ್ತು ವಿಷಯತಜ್ಞರ ಜತೆ ನಿರಂತರವಾಗಿ ಚರ್ಚೆ ನಡೆಸುತ್ತಿದೆ. ಜತೆಗೆ, ಯೂರೋಪ್ ಮತ್ತಿತರ ಮಾರುಕಟ್ಟೆ ವಿಸ್ತರಣೆಯತ್ತಲೂ ಚಿತ್ತ ನೆಟ್ಟಿದೆ. ಇದರೊಂದಿಗೆ, ರಾಜ್ಯ ಸರ್ಕಾರಗಳು ಸಹ ತಂತಮ್ಮ ಪರಿಧಿಯಲ್ಲಿ ಹೊಸ ಆಲೋಚನೆಗಳ ಮೂಲಕ ಹಿತಾಸಕ್ತಿ ರಕ್ಷಣೆಗೆ ಗಮನಹರಿಸಬೇಕಿದೆ. ಒಟ್ಟಿನಲ್ಲಿ, ಈ ಸವಾಲನ್ನು ಅವಕಾಶವಾಗಿ ಪರಿವರ್ತಿಸಿಕೊಂಡರೆ ಭವಿಷ್ಯದಲ್ಲಿ ಪ್ರಯೋಜನಕಾರಿಯಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net