ಸಂಪಾದಕೀಯ| ಬಾಂಗ್ಲಾದೇಶದ ಬವಣೆ

Bangladesh
Published on

ಬಾಂಗ್ಲಾದೇಶದಲ್ಲಿ ಅಲ್ಲಿನ ಬಹುಸಂಖ್ಯಾತ ಸ್ಥಳೀಯರು ಮತ್ತೆ ಹಿಂದು ದೇವಸ್ಥಾನಗಳ ಮೇಲೆ, ಹಿಂದು ಆಚರಣೆಗಳ ಮೇಲೆ ದಾಳಿ ಮಾಡಲು ಆರಂಭಿಸಿರುವುದು ಆತಂಕಕಾರಿ ವಿಷಯ. ಸತ್​ಖೀರಾ ಜಿಲ್ಲೆಯಲ್ಲಿನ ದೇವಸ್ಥಾನವೊಂದರಿಂದ ದೇವಿಯ ಕಿರೀಟವನ್ನೇ ಕದ್ದಿರುವ ಘಟನೆಯೂ ನಡೆದಿದೆ. ಇದು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಭೇಟಿಯ ವೇಳೆ ಸಲ್ಲಿಸಿದ್ದ ಕೊಡುಗೆ. ಢಾಕಾ ನಗರದ ದುರ್ಗಾ ಪೆಂಡಾಲ್​ಗೆ ಶುಕ್ರವಾರ ರಾತ್ರಿ ದುಷ್ಕರ್ವಿುಯೊಬ್ಬ ಬಾಂಬ್ ಎಸೆದ ಘಟನೆ ಆತಂಕ ಮೂಡಿಸಿತು. ಆತನನ್ನು ಹಿಡಿಯುವ ಪ್ರಯತ್ನ ಮಾಡಿದಾಗ ಸ್ಥಳೀಯರು ಬಾಂಬ್ ಎಸೆದಾತನ ರಕ್ಷಣೆಗೆ ಬಂದದ್ದು, ಇಂಥ ಘಟನೆಗಳ ಹಿಂದಿನ ಅಹಿತಕರ ಉದ್ದೇಶವನ್ನು ಸ್ಪಷ್ಟಗೊಳಿಸುತ್ತದೆ. ಬಾಂಬ್ ಎಸೆದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದರೂ, ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಅಷ್ಟೇ ಅಲ್ಲ, ಸೀಮೆಎಣ್ಣೆ ತುಂಬಿದ ಬಾಟಲ್​ಗಳನ್ನು ಹಲವು ದುರ್ಗಾ ಪೆಂಡಾಲ್​ಗಳಲ್ಲಿ ಎಸೆದು, ದುಷ್ಕೃತ್ಯಕ್ಕೆ ಯತ್ನಿಸಲಾಗಿದೆ. ನವರಾತ್ರಿ ಸಂದರ್ಭದಲ್ಲಿ ಪೂಜೆಗಾಗಿ ದುರ್ಗಾ ಪೆಂಡಾಲ್​ಗೆ ಭೇಟಿ ನೀಡಿದ ಹಿಂದು ಮಹಿಳೆಯರ ಆಭರಣಗಳನ್ನು ಕಳ್ಳತನ ಮಾಡಲಾಗಿದೆ, ಹಿಂದು ಭಕ್ತರ ಮೇಲೆ ದಾಳಿ ಮಾಡಿ, ಬೆದರಿಕೆ ಒಡ್ಡಲಾಗಿದೆ. ಬಾಂಗ್ಲಾದೇಶದ ಮೂಲಭೂತವಾದಿ ನಾಯಕ ಹಾಗೂ ಹಾಲಿ ಸರ್ಕಾರದಲ್ಲಿ ಧಾರ್ವಿುಕ ವಿಷಯಗಳ ಸಲಹೆಗಾರ ಆಗಿರುವ ಮುಯಿದ್ದಿನ್ ರಬ್ಬಾನಿ, ‘ಬಾಂಗ್ಲಾದೇಶದಲ್ಲಿನ ಎಲ್ಲ ಹಿಂದು ದೇವತೆಗಳ ಮೂರ್ತಿಗಳನ್ನು ಸರ್ಕಾರ ಧ್ವಂಸಗೊಳಿಸಬೇಕು ಹಾಗೂ ದೇಶದಲ್ಲಿ ಷರಿಯಾ ಕಾನೂನು ಜಾರಿಗೊಳಿಸಬೇಕು’ ಎಂದು ಬಹಿರಂಗವಾಗಿ ಹೇಳಿರುವುದನ್ನು ನೋಡಿದರೆ, ಮೂಲಭೂತವಾದಿಗಳ ಅಟ್ಟಹಾಸ ಹೆಚ್ಚುತ್ತಿರುವುದು ಸ್ಪಷ್ಟ. ಈ ಹಿಂದೆ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಿಂದ ಮಾತ್ರ ಇಂಥ ಘಟನೆಗಳು ವರದಿಯಾಗುತ್ತಿದ್ದವು. ಈಗ ಬಾಂಗ್ಲಾದೇಶವು ಹಿಂದುಗಳಿಗೆ ಸುರಕ್ಷಿತವಲ್ಲ ಎಂಬಂತಾಗಿದೆ.

ಹಿಂದು ಶ್ರದ್ಧಾಕೇಂದ್ರಗಳನ್ನು ಅಪವಿತ್ರಗೊಳಿಸುವ ಅಥವಾ ಅವುಗಳ ಮೇಲೆ ದಾಳಿ ನಡೆಸುವ ಘಟನೆಗಳು ಸರಣಿಯಾಗಿ ನಡೆಯುತ್ತಿದ್ದು, ಇದು ದೊಡ್ಡ ಷಡ್ಯಂತ್ರವೇ ಆಗಿದೆ ಎಂಬುದರಲ್ಲಿ ಈಗ ಯಾವುದೇ ಅನುಮಾನಗಳು ಉಳಿದಿಲ್ಲ. ಶೇಖ್ ಹಸೀನಾ ದೇಶ ತೊರೆದ ಕೆಲವೇ ದಿನಗಳಲ್ಲಿ ಹಿಂದುಗಳ ಮೇಲಿನ ದಾಳಿ ಪ್ರಕರಣಗಳು ಹೆಚ್ಚಿದ್ದವು. ಈಗ ಅವು ಮತ್ತೆ ಮರುಕಳಿಸುತ್ತಿರುವುದು ಚಿಂತೆಯ ವಿಷಯ. ಮಹಮ್ಮದ್ ಯೂನುಸ್ ಅವರನ್ನು ಮುಖ್ಯ ಸಲಹೆಗಾರರನ್ನಾಗಿ ಹೊಂದಿರುವ ಮಧ್ಯಂತರ ಸರ್ಕಾರ ಅಸ್ತಿತ್ವಕ್ಕೆ ಬಂದು ಎರಡು ತಿಂಗಳುಗಳು ಕಳೆದಿವೆ. ಹೀಗಾಗಿ, ಯೂನುಸ್ ಸರ್ಕಾರ ಬರೀ ಆಶ್ವಾಸನೆಗೆ ಸೀಮಿತವಾಗದೆ ಹಿಂದುಗಳ ರಕ್ಷಣೆಗೆ ದಿಟ್ಟ ಕ್ರಮಗಳನ್ನು ಕೈಗೊಂಡು, ಅನುಷ್ಠಾನಕ್ಕೆ ತರಬೇಕು. ಹಿಂದುಗಳ ಹಾಗೂ ಹಿಂದು ಮಂದಿರಗಳ ಮೇಲಿನ ದಾಳಿಯ ಬಗ್ಗೆ ಭಾರತ ಸರ್ಕಾರ ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನ ಪ್ರತಿಭಟನೆಯನ್ನು ದಾಖಲಿಸಿ, ಈ ಘಟನೆಗಳು ಮರುಕಳಿಸದಂತೆ ನಿಯಂತ್ರಿಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net