ಸಂಪಾದಕೀಯ: ಆತಂಕಕಾರಿ ಬೆಳವಣಿಗೆ

Untitled design (2)
Published on

ಹಲವು ರಾಜ್ಯಗಳಲ್ಲಿ ವ್ಯಾಪಿಸಿರುವ ಭಯೋತ್ಪಾದನಾ ಜಾಲವೊಂದನ್ನು ಜಮ್ಮು-ಕಾಶ್ಮೀರ ಪೊಲೀಸರು ಭೇದಿಸಿದ್ದು, ದೊಡ್ಡ ಅನಾಹುತ ಸಂಭವಿಸುವುದನ್ನು ತಡೆದಂತಾಗಿದೆ. ಆದರೆ ಇಷ್ಟಕ್ಕೆ ಸಮಾಧಾನಪಡದೆ, ಈ ಜಾಲದ ಬೇರಿನವರೆಗೆ ಪತ್ತೆಹಚ್ಚಿ, ಮುಂದೆ ಇಂಥ ದುಸ್ಸಾಹಸಕ್ಕೆ ಯಾರೂ ಕೈಹಾಕದಂತೆ ಪ್ರಬಲ ಸಂದೇಶ ರವಾನಿಸುವ ಕೆಲಸ ಆಗಬೇಕಿದೆ. ರಾಸಾಯನಿಕ ಅಸ್ತ್ರ ತಯಾರಿಸಲು ಸಿದ್ಧತೆ ನಡೆಸುತ್ತಿದ್ದ ಮೂವರು ಶಂಕಿತ ಉಗ್ರರನ್ನು ಗುಜರಾತ್ ಎಟಿಎಸ್ ಮೊನ್ನೆಯಷ್ಟೇ ಬಂಧಿಸಿತ್ತು. ಇವರಿಗೂ ಈಗ ಬಯಲಾಗಿರುವ ಜಾಲಕ್ಕೂ ಸಂಬಂಧವಿದೆಯಾ ಎಂಬುದು ತನಿಖೆಯಿಂದ ಗೊತ್ತಾಗಬೇಕಿದೆ. ಈ ನಡುವೆ, ಸೋಮವಾರ ರಾತ್ರಿ ದೆಹಲಿಯಲ್ಲಿ ಸಂಭವಿಸಿದ ಕಾರು ಸ್ಪೋಟದಲ್ಲಿ ಹಲವರು ಸಾವನ್ನಪ್ಪಿದ್ದು, ಇದಕ್ಕೆ ನಿಖರ ಕಾರಣ ಗೊತ್ತಾಗಬೇಕಿದೆ.

ಶ್ರೀನಗರದ ಬನ್​ಪೋರಾ ನೌಗಮ್ ಪ್ರದೇಶದ ವಿವಿಧ ಸ್ಥಳಗಳಲ್ಲಿ ಜೈಷ್ ಎ ಮೊಹಮ್ಮದ್ ಸಂಘಟನೆಯನ್ನು ಬೆಂಬಲಿಸಿ ಪೋಸ್ಟರ್​ಗಳನ್ನು ಅಂಟಿಸಿದ್ದನ್ನು ಬೆನ್ನತ್ತಿ ತನಿಖೆಗಿಳಿದಾಗ ಈ ಜಾಲ ಬಯಲಾಗಿದ್ದು ವಿಶೇಷ. ಜಮ್ಮು ಮತ್ತು ಕಾಶ್ಮೀರ ಪೊಲೀಸರು ಈ ಜಾಲವನ್ನು ‘ವೈಟ್ ಕಾಲರ್ ಭಯೋತ್ಪಾದನಾ ಮಾದರಿ’ ಎಂದು ಕರೆದಿದ್ದಾರೆ. ಅಂದರೆ, ಉನ್ನತ ಶಿಕ್ಷಣವಂತರು, ಸಾಮಾಜಿಕ ಸ್ಥಾನಮಾನ ಇರುವವರು ಸಮಾಜವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗುವುದು. ಇದು ಮತ್ತಷ್ಟು ಕಳವಳ ಮೂಡಿಸುವ ಸಂಗತಿ. ಹದಿನೈದು ದಿನಗಳ ಕಾರ್ಯಾಚರಣೆ ನಡೆಸಿ ಈ ಜಾಲವನ್ನು ಬಯಲುಮಾಡಿದ್ದು, ಮೂವರು ವೈದ್ಯರು ಸೇರಿ ಹಲವರನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರು ಜೈಷ್ ಎ ಮೊಹಮ್ಮದ್ ಮತ್ತು ಭಾರತದಲ್ಲಿರುವ ಐಸಿಸ್ ಅಂಗ ಸಂಘಟನೆಯಾದ ಅನ್ಸರ್ ಘಜ್ವತ್-ಉಲ್-ಹಿಂದ್ (ಎಜಿಯುಎಚ್) ಸಂಘಟನೆಗಳೊಂದಿಗೆ ನಂಟು ಹೊಂದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಫರಿದಾಬಾದ್​ನಲ್ಲಿ ಬಂಧಿತ ಡಾ. ಮುಜಮ್ಮಿಲ್ ಗನೈ ವಾಸವಿದ್ದ ಬಾಡಿಗೆ ಮನೆಯಿಂದ ಸುಮಾರು 2900 ಕೆ.ಜಿ. ಸ್ಪೋಟಕ ವಸ್ತುಗಳನ್ನು ವಶಕ್ಕೆ ಪಡೆದಿರುವುದು ಈ ಜಾಲದ ವ್ಯಾಪಕತೆಯನ್ನು ಬಿಂಬಿಸುತ್ತದೆ. ಸಾಮಾಜಿಕ ಮತ್ತು ದತ್ತಿ ಉದ್ದೇಶಗಳಿಗೆ ಬಳಸುವುದಾಗಿ ಹಣ ಸಂಗ್ರಹಿಸುತ್ತಿದ್ದ ಇವರು ಕಾನೂನು ಬಾಹಿರ ಚಟುವಟಿಕೆಗಳಿಗೆ ಹಣ ಬಳಸುತ್ತಿದ್ದರೆಂದು ಪೊಲೀಸರು ತಿಳಿಸಿದ್ದಾರೆ.

ಕಾಶ್ಮೀರದ ಪಹಲ್ಗಾಮ್ಲ್ಲಿ ಭಯೋತ್ಪಾದಕರು 26 ಪ್ರವಾಸಿಗರನ್ನು ಹತ್ಯೆಗೈದದ್ದಕ್ಕೆ ಪ್ರತೀಕಾರವಾಗಿ ಭಾರತದ ಸೇನಾಪಡೆಗಳು ಆಪರೇಷನ್ ಸಿಂಧೂರ ನಡೆಸಿ, ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಪ್ರದೇಶದ ಮೇಲೆ ದಾಳಿಗೈದು ಭಯೋತ್ಪಾದಕರ ಹಲವು ಶಿಬಿರಗಳನ್ನು ಪುಡಿಗಟ್ಟಿದ್ದವು; ಈ ಕಾರ್ಯಾಚರಣೆಯಲ್ಲಿ ನೂರಾರು ಉಗ್ರರು ಹತರಾಗಿದ್ದರು. ಈ ಹೊಡೆತದಿಂದ ಉಗ್ರರ ಬೆನ್ನುಮೂಳೆಯೇ ಮುರಿದಂತಾಗಿತ್ತು. ಇಷ್ಟುಮಾತ್ರಕ್ಕೆ ಭಯೋತ್ಪಾದನೆ ಕೊನೆಯಾಗದು ಮತ್ತು ಪಾಕಿಸ್ತಾನವು ಉಗ್ರವಾದಕ್ಕೆ ಪ್ರೋತ್ಸಾಹ ಕೊಡುವುದನ್ನು ನಿಲ್ಲಿಸುವುದಿಲ್ಲ ಎಂಬುದು ಎಲ್ಲರಿಗೂ ತಿಳಿದ ವಿಚಾರವೇ ಆಗಿತ್ತು. ಇದಕ್ಕೆ ಪುಷ್ಟಿಯೆಂಬಂತೆ, ಉಗ್ರರು ಶಿಬಿರಗಳನ್ನು ಪುನರ್ ನಿರ್ಮಾಣ ಮಾಡುತ್ತಿರುವ ಮತ್ತು ಸಂಘಟನೆಗೆ ಬಲತುಂಬುತ್ತಿರುವ ವರದಿಗಳು ಮಾಧ್ಯಮಗಳಲ್ಲಿ ಪ್ರಕಟವಾಗಿದ್ದವು.

ಇದಲ್ಲದೆ, ಆಪರೇಷನ್ ಸಿಂಧೂರದ ಅವಮಾನವನ್ನು ದೃಷ್ಟಿಯಲ್ಲಿಟ್ಟು ಕೊಂಡು ಉಗ್ರ ಸಂಘಟನೆಗಳು ಭಾರತದಲ್ಲಿ ಭಯೋತ್ಪಾದನಾ ಕೃತ್ಯಗಳನ್ನೆಸಗುವ ಹಂಚಿಕೆ ರೂಪಿಸುತ್ತಿರುವ ಬಗ್ಗೆ ಗುಪ್ತಚರ ದಳಗಳಿಗೆ ಮಾಹಿತಿ ಸಿಕ್ಕಿತ್ತು. ಭಾರತದಲ್ಲಿ ಆತಂಕ ಸೃಷ್ಟಿಸಲು ಭಯೋತ್ಪಾದಕರು ಅವಕಾಶಕ್ಕಾಗಿ ಕಾಯುತ್ತಿದ್ದಾರೆ ಎಂಬುದು ಇದರಿಂದ ಮತ್ತೆ ಸ್ಪಷ್ಟವಾಗುತ್ತದೆ. ಇದರ ಜತೆಗೆ, ಆಂತರಿಕವಾಗಿ ಸಹ ಉಗ್ರ ಚಟುವಟಿಕೆ ಗಳ ಮಸಲತ್ತು ನಡೆಯುತ್ತಿದೆಯೆಂಬುದನ್ನು ಈಗಿನ ಘಟನೆ ದೃಢೀಕರಿಸಿದೆ. ಹೀಗಾಗಿ ಕಟ್ಟೆಚ್ಚರ ಅನಿವಾರ್ಯ. ಜತೆಗೆ, ತನಿಖಾ ಸಂಸ್ಥೆಗಳ ಜವಾಬ್ದಾರಿ ಮತ್ತಷ್ಟು ಹೆಚ್ಚಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net