ಸಮರ್ಥ ರಾಷ್ಟ್ರನಿರ್ಮಾಣ; ಸ್ವಾಮಿ ವಿವೇಕಾನಂದರ ಆದರ್ಶದ ಬೆಳಕು

Editorial
Published on

ಸ್ವಾಮಿ ವಿವೇಕಾನಂದರು ಮಾನವ ಇತಿಹಾಸದಲ್ಲಿ ಸಮಾಜದ ಮೇಲೆ ಬೀರಿದ ಪ್ರಭಾವ ಅತ್ಯಪಾರ ಹಾಗೂ ಅಸಾಧಾರಣವೂ ಹೌದು. ಶಕ್ತಿ, ಸ್ವಾಭಿಮಾನ, ಸ್ವಾವಲಂಬನೆ, ಸೇವೆ, ಆತ್ಮವಿಶ್ವಾಸ, ಯೋಗ್ಯ ವ್ಯಕ್ತಿತ್ವ, ರಾಷ್ಟ್ರಭಕ್ತಿ ವಿಚಾರಗಳಲ್ಲಿ ಅವರ ಸ್ಪಷ್ಟ ವಿಚಾರಗಳು ಸಮಾಜವನ್ನು, ವಿಶೇಷವಾಗಿ ಯುವಶಕ್ತಿಯನ್ನು ಮಂತ್ರಮುಗ್ಧರನ್ನಾಗಿಸುತ್ತವೆ. ಕ್ರಿಯಾಶೀಲರಾಗಿ ರೂಪುಗೊಳ್ಳಲು ಪ್ರೇರಣೆ ನೀಡುತ್ತವೆ. ಯುವಸಮೂಹದ ಶಕ್ತಿಯನ್ನು ಗುರುತಿಸಿ ಅದನ್ನು ರಾಷ್ಟ್ರನಿರ್ವಣದ ದಿಕ್ಕಿನಲ್ಲಿ ಹರಿಸಿದ ವಿವೇಕಾನಂದರ ಆದರ್ಶ ಇಂದಿಗೆ ಹೆಚ್ಚು ಪ್ರಸ್ತುತವಾಗಿದೆ. ವಿಶ್ವದಲ್ಲೇ ಅತಿ ಹೆಚ್ಚು ಯುವಕರನ್ನು ಹೊಂದಿರುವ ಭಾರತ ಅವರ ಕೌಶಲ, ಕಾರ್ಯಕ್ಷಮತೆಯ ಬಲದಿಂದ ಹಲವು ರಂಗಗಳಲ್ಲಿ ಸಾಧನೆಯ ಎತ್ತರ ತಲುಪಿದೆ. ಎಲ್ಲ ರಂಗಗಳಲ್ಲೂ ಯುವಕರ ಸಹಭಾಗಿತ್ವ ಹೆಚ್ಚುತ್ತಿದೆಯಾದರೂ; ರಾಜಕೀಯ ರಂಗದಲ್ಲಿ ಮಾತ್ರ ಗಮನಾರ್ಹವಾಗಿಲ್ಲ. ಹಾಗಾಗಿ, ಸಮಸ್ಯೆಗಳ ಬಗ್ಗೆ ದೂರುವುದಕ್ಕಿಂತ ಯುವಸಮೂಹವೇ ರಾಜಕೀಯ ಪ್ರವೇಶಿಸಿ ಆ ಕ್ಷೇತ್ರದ ಶುದ್ಧೀಕರಣ ಜತೆಗೆ ಅಭಿವೃದ್ಧಿಯ ಆಶಯವನ್ನೂ ಈಡೇರಿಸಲು ಇದು ಸಕಾಲ.

ಇತ್ತೀಚೆಗೆ ಪ್ರಕಟಗೊಂಡ ಗ್ರಾಮ ಪಂಚಾಯಿತಿ ಚುನಾವಣೆ ಫಲಿತಾಂಶ ಈ ನಿಟ್ಟಿನಲ್ಲಿ ಸ್ವಲ್ಪ ಆಶಾದಾಯಕವೆನಿಸಿದ್ದು, ಯುವ ಅಭ್ಯರ್ಥಿಗಳು ದೊಡ್ಡ ಸಂಖ್ಯೆಯಲ್ಲಿ ಗೆದ್ದುಬಂದಿದ್ದಾರೆ. ಯುವಕರು ಹಳ್ಳಿಗಳನ್ನು ತೊರೆಯುತ್ತಿದ್ದಾರೆ ಎಂಬ ಕಳವಳದ ಮಧ್ಯೆಯೇ ಕರೊನಾ ಮಹತ್ವದ ಸ್ಥಿತ್ಯಂತರ ತಂದಿತು. ಗ್ರಾಮಗಳಿಗೆ ಮರಳಿದ ಅದೆಷ್ಟೋ ಯುವಕರು ಅಲ್ಲಿನ ಸ್ಥಿತಿಯನ್ನು, ಹದಗೆಟ್ಟಿರುವ ವ್ಯವಸ್ಥೆಯನ್ನು ಕಂಡು, ಅದನ್ನು ತಾವೇ ಸರಿಪಡಿಸಲು ಮುಂದಾಗಿದ್ದಾರೆ. ಅದಕ್ಕೆ ರಾಜಕೀಯ ಅಧಿಕಾರ ಅಗತ್ಯ ಎಂಬುದನ್ನು ಅರ್ಥಮಾಡಿಕೊಂಡು ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಗೆದ್ದ ಮೇಲೆ ಹೊಸ ಹುರುಪಿನಿಂದ, ನವೀನ ಚಿಂತನೆಗಳಿಂದ ಅಭಿವೃದ್ಧಿಯ ಆಶಯಗಳನ್ನು ಈಡೇರಿಸಲು ಮುಂದಾಗಿದ್ದಾರೆ. ಇದು ಹಳ್ಳಿಗಳಲ್ಲಿ ಹೊಸ ಸಂಚಲನವನ್ನೇ ಮೂಡಿಸಿದೆ. ಆದರೆ, ಈ ಬದಲಾವಣೆ ಇಷ್ಟಕ್ಕೇ ಸೀಮಿತವಾಗಬಾರದು. ಪಂಚಾಯಿತಿ ಚುನಾವಣೆಯಲ್ಲೇನೋ ಯುವಕರು ಸ್ವಆಸಕ್ತಿ, ಸಾಮರ್ಥ್ಯದಿಂದ ಸ್ಪರ್ಧಿಸಿದ್ದಾರೆ. ವಿಧಾನಸಭೆ, ಲೋಕಸಭೆ ಚುನಾವಣೆಯಲ್ಲಿ ಲಾಬಿ, ಹಣಬಲ, ಇತರ ಬಲಗಳು ಕೆಲಸ ಮಾಡುತ್ತವೆ. ರಾಜಕೀಯ ಪಕ್ಷಗಳು ಅಲ್ಲೂ ಉತ್ತಮ ಆದರ್ಶಗಳನ್ನು ಇರಿಸಿಕೊಂಡ ಸಮರ್ಥ ಯುವಕರಿಗೆ ಮನ್ನಣೆ ನೀಡಬೇಕು. ಆಗ ನಿಜವಾದ ಬದಲಾವಣೆ ಸಾಧ್ಯ.

ಯುವಶಕ್ತಿಯ ಬಲದಿಂದ ಸಮಾಜದ ಚೈತನ್ಯವನ್ನು ಹೆಚ್ಚಿಸಬೇಕೆ ಹೊರತು ಅವರ ಉತ್ಸಾಹವನ್ನೇ ತಗ್ಗಿಸುವಂಥ ಅಪಸವ್ಯಗಳು ಪ್ರಭುತ್ವದಿಂದ ಅಥವಾ ವ್ಯವಸ್ಥೆಯಿಂದ ನಡೆಯಬಾರದು. ‘ನಿಷ್ಕ್ರಿಯತೆಯನ್ನು ತ್ಯಜಿಸಿರಿ. ನಮ್ಮಲ್ಲಿ ಮಾತನಾಡುವವರು ತುಂಬ ಜನರಿದ್ದಾರೆ. ಕೆಲಸ ಮಾಡುವವರು ಕಡಿಮೆ. ಹಾಗಾಗಿ ಮಾತು ನಿಲ್ಲಿಸಿ ಕೆಲಸದಲ್ಲಿ ತೊಡಗಿ’ ಎಂಬ ವಿವೇಕವಾಣಿಯಿಂದ ಸ್ಪೂರ್ತಿ ಪಡೆದು ಯುವಕರು ರಾಷ್ಟ್ರನಿರ್ಮಾಣದ ಕೈಂಕರ್ಯದಲ್ಲಿ ತೊಡಗಿಕೊಳ್ಳುವಂತಾಗಲಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net