ಸಂಪಾದಕೀಯ| ಸುರಕ್ಷತೆಗೆ ಆದ್ಯತೆ ಅಗತ್ಯ

railway Station
Published on

ಅಮೃತ ಭಾರತ ಯೋಜನೆಯಡಿ ನೈರುತ್ಯ ವಲಯ ರೈಲ್ವೆ ವ್ಯಾಪ್ತಿಯ ಹುಬ್ಬಳ್ಳಿ ಹಾಗೂ ಮೈಸೂರು ವಿಭಾಗಗಳ ಅನೇಕ ರೈಲು ನಿಲ್ದಾಣಗಳನ್ನು ಮೇಲ್ದರ್ಜೆಯ ರೈಲು ನಿಲ್ದಾಣಗಳನ್ನಾಗಿ ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿರುವುದು ಸ್ವಾಗತಾರ್ಹ ಸಂಗತಿಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ಯೋಜನೆಯಡಿ ದೇಶಾದ್ಯಂತ 508 ರೈಲ್ವೆ ನಿಲ್ದಾಣಗಳ ಅಭಿವೃದ್ಧಿಗೆ ಆ. 6ರಂದು ಶಿಲಾನ್ಯಾಸವನ್ನು ವಿಡಿಯೋ ಕಾನ್ಪರೆನ್​ನಲ್ಲಿ ನೆರವೇರಿಸುವ ಮೂಲಕ ಕಾಮಗಾರಿಗೆ ತ್ವರಿತ ಚಾಲನೆಯನ್ನೂ ನೀಡಲಿದ್ದಾರೆ.

ಅಮೃತ ಭಾರತ ನಿಲ್ದಾಣ ಯೋಜನೆ ಅಡಿಯಲ್ಲಿ ದೇಶದಾದ್ಯಂತ 1,275 ನಿಲ್ದಾಣಗಳನ್ನು ಅಭಿವೃದ್ಧಿಗೊಳಿಸಲಾಗುವುದು ಎಂದು ಕೇಂದ್ರ ಸರ್ಕಾರದ 2023ರ ಬಜೆಟ್​ನಲ್ಲಿಯೇ ಘೊಷಿಸಿದೆ. ಈ ಯೋಜನೆ ಅಡಿ ಕರ್ನಾಟಕದಲ್ಲಿ 55 ನಿಲ್ದಾಣಗಳನ್ನು ಮೇಲ್ದರ್ಜೆಗೆ ಏರಿಸಲು ಉದ್ದೇಶಿಸಲಾಗಿದೆ. ನಿಲ್ದಾಣದ ಪ್ರವೇಶ ದ್ವಾರ, ಸಂಚಾರ ಪ್ರದೇಶ, ಪ್ರಯಾಣಿಕರ ವಿಶ್ರಾಂತಿ ಕೊಠಡಿ, ಶೌಚಾಲಯ, ದಿವ್ಯಾಂಗ ಪ್ರಯಾಣಿಕರಿಗೆ ಅನುಕೂಲವಾಗುವ ಲಿಫ್ಟ್, ನಿಲ್ದಾಣದ ಸ್ವಚ್ಛತೆ, ಉಚಿತ ವೈ-ಫೈ, ಸ್ಥಳೀಯವಾಗಿ ತಯಾರಿಸಿದ ವಸ್ತುಗಳನ್ನು ‘ಒಂದು ನಿಲ್ದಾಣ ಒಂದು ಉತ್ಪನ್ನ’ ಮಳಿಗೆ ಮೂಲಕ ಪ್ರಯಾಣಿಕರಿಗೆ ತಲುಪಿಸುವ ವ್ಯವಸ್ಥೆ, ಎಕ್ಸಿಕ್ಯೂಟಿವ್ ಲಾಂಜ್, ರಿಟೈಲ್ ಮಳಿಗೆಗಳಿಗೆ ಸ್ಥಳ ಸೇರಿದಂತೆ ಅನೇಕ ಸೌಕರ್ಯಗಳನ್ನು ಒದಗಿಸಲು ಮುಂದಾಗಿರುವುದು ಪ್ರಯಾಣಿಕರ ಸ್ನೇಹಿ ಕ್ರಮ ಎನ್ನಬಹುದಾಗಿದೆ. ರೈಲ್ವೆ ನಿಲ್ದಾಣಗಳ ಅಭಿವೃದ್ಧಿ ಕುರಿತಂತೆ ರೈಲ್ವೆ ಇಲಾಖೆಯು ಸಾರ್ವಜನಿಕರಿಂದಲು ಕೂಡ ಸಲಹೆಗಳನ್ನು ಪಡೆಯಲು ಮುಂದಾಗಿರುವುದು ವಿಶೇಷವಾಗಿದೆ.

ಭಾರತೀಯರಿಗೆ ರೈಲ್ವೆಯು ಈಗಲೂ ಪ್ರಮುಖ ಹಾಗೂ ಆದ್ಯತೆಯ ಸಾರಿಗೆ ವ್ಯವಸ್ಥೆಯಾಗಿ ಮುಂದುವರಿದಿದ್ದು, ಪ್ರತಿದಿನ 2 ಕೋಟಿಗೂ ಅಧಿಕ ಜನರು ಭಾರತದ ರೈಲುಗಳಲ್ಲಿ ಸಂಚರಿಸುತ್ತಾರೆ. 1.26 ಲಕ್ಷ ಕಿ.ಮೀ. ಉದ್ದದ ರೈಲು ಮಾರ್ಗದೊಂದಿಗೆ ಭಾರತೀಯ ರೈಲ್ವೆ ಜಾಗತಿಕವಾಗಿ ನಾಲ್ಕನೇ ಸ್ಥಾನದಲ್ಲಿದೆ. ಈ ಹಿಂದಿನ ದಿನಗಳಿಗೆ ಹೋಲಿಸಿದರೆ ರೈಲ್ವೆ ನಿಲ್ದಾಣ ಹಾಗೂ ರೈಲುಗಳಲ್ಲಿ ಪ್ರಯಾಣಿಕರಿಗೆ ಒದಗಿಸುವ ಸೌಲಭ್ಯಗಳಲ್ಲಿ ಸಾಕಷ್ಟು ಸುಧಾರಣೆಗಳಾಗಿವೆ. ಈ ಹಿಂದೆ ರೈಲುಗಳಲ್ಲಿ ಶುಚಿತ್ವದ ಅಭಾವ ಕಂಡುಬರುತ್ತಿತ್ತು. ಶೌಚಗೃಹಗಳಲ್ಲಿ ನೀರಿನ ಕೊರತೆಯೂ ವ್ಯಾಪಕವಾಗಿರುತ್ತಿತ್ತು. ಈಗ ಇಂತಹ ಸಮಸ್ಯೆಗಳು ಬಹುತೇಕವಾಗಿ ಗೋಚರಿಸುವುದಿಲ್ಲ. ಅಮೃತ ಯೋಜನೆಯಡಿ ನಿಲ್ದಾಣಗಳನ್ನು ಮೇಲ್ದರ್ಜೆಗಳನ್ನು ಏರಿಸುತ್ತಿರುವುದು ಈ ನಿಟ್ಟಿನಲ್ಲಿ ಇನ್ನಷ್ಟು ಸುಧಾರಣೆಗೆ ಕೊಡುಗೆ ನೀಡಬಹುದಾಗಿದೆ.

ರೈಲ್ವೆ ನಿಲ್ದಾಣಗಳ ಅಭಿವೃದ್ಧಿಯಲ್ಲದೆ ಇನ್ನೂ ಅನೇಕ ವಿಷಯಗಳಿಗೆ ಸಂಬಂಧಿಸಿದಂತೆ ಸುಧಾರಣೆಗಳಾಗಬೇಕಿದೆ. ಇದರಲ್ಲಿ ಮಹತ್ವವಾದುದು ಸುರಕ್ಷತೆ. ಕಳೆದ ಜೂನ್ 2ರಂದು ಒರಿಸ್ಸಾದ ಬಾಲಾಸೋರ್​ನಲ್ಲಿ ಸಂಭವಿಸಿದ ರೈಲು ದುರಂತದಲ್ಲಿ 295 ಜನರು ಸಾವನ್ನಪ್ಪಿರುವುದು ಇನ್ನೂ ಹಸಿರಾಗಿಯೇ ಇದೆ. ಸಿಗ್ನಲ್ ವ್ಯವಸ್ಥೆ ಸೇರಿದಂತೆ ಸುರಕ್ಷತೆ ಕ್ರಮಗಳನ್ನು ಬಲಪಡಿಸುವ ಮೂಲಕ ಅಪಘಾತ ನಿರೋಧಕ ವ್ಯವಸ್ಥೆಯನ್ನು ರೂಪಿಸುವುದು ಅತ್ಯಗತ್ಯವಾಗಿದೆ. ಇನ್ನು ಭಾರತೀಯ ರೈಲುಗಳ ಸಮಯ ಪಾಲನೆಯಲ್ಲಿ ಸಾಕಷ್ಟು ಹಿಂದುಳಿದಿದ್ದು, ಈ ನಿಟ್ಟಿನಲ್ಲಿಯೂ ತುರ್ತು ಕ್ರಮಗಳ ಅಗತ್ಯತೆ ತೀವ್ರವಾಗಿ ಗೋಚರಿಸುತ್ತದೆ.

ಇನ್ನು ಕರ್ನಾಟಕವು ದೇಶದಲ್ಲಿಯೇ ರೈಲ್ವೆ ಅಭಿವೃದ್ಧಿಯಲ್ಲಿ ಹಿಂದುಳಿದ ರಾಜ್ಯಗಳಲ್ಲಿ ಒಂದಾಗಿದೆ. ರಾಜ್ಯದ ಎಷ್ಟೋ ಪ್ರದೇಶಗಳು ರೈಲು ಸೇವೆಯನ್ನು ಕಂಡಿದ್ದು ಇತ್ತೀಚಿನ ವರ್ಷಗಳಲ್ಲಿ. ಈಗಲೂ ಅನೇಕ ಪ್ರದೇಶಗಳು ಇದರಿಂದ ವಂಚಿತವಾಗಿರುವುದು ಖೇದಕರ ಸಂಗತಿಯಾಗಿದೆ. ಪ್ರಸ್ತುತ ಇರುವ ರೈಲ್ವೆ ಮಾರ್ಗಗಳಲ್ಲಿ ಸೌಲಭ್ಯಗಳನ್ನು ಹೆಚ್ಚಿಸಲು ಸಂಪನ್ಮೂಲ ವ್ಯಯಿಸುವುದರ ಜತೆಗೆ, ರಾಜ್ಯದಾದ್ಯಂತ ರೈಲು ಜಾಲವನ್ನು ಇನ್ನಷ್ಟು ವಿಸ್ತರಿಸಲು ಹೆಚ್ಚಿನ ಬಂಡವಾಳವನ್ನು ತೊಡಗಿಸುವುದು ಅಪೇಕ್ಷಣೀಯವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net