

ಶಾಲೆಗಳು ಸದ್ಯದಲ್ಲಿ ಆರಂಭಗೊಳ್ಳುವ ಲಕ್ಷಣಗಳಂತೂ ಇಲ್ಲ. ಹಾಗಾಗಿ, ಆನ್ಲೈನ್ ಬೋಧನೆ/ಕಲಿಕೆ ಅನಿವಾರ್ಯ ಎಂಬಂತಾಗಿದೆ. ಆದರೆ, ಹಲವು ಶೈಕ್ಷಣಿಕ ಸಂಸ್ಥೆಗಳು/ಶಾಲೆಗಳು ದೀರ್ಘಾವಧಿಯವರೆಗೆ ಆನ್ಲೈನ್ ತರಗತಿಗಳನ್ನು ನಡೆಸುತ್ತಿರುವುದು ಮತ್ತು ಸರ್ಕಾರದ ಸೂಚನೆಗಳನ್ನು ಉಲ್ಲಂಘಿಸುತ್ತಿರುವ ಪರಿಣಾಮ ಮಕ್ಕಳ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತಿದೆ. ಕರೊನಾ ಕಾಲಿಟ್ಟ ಬಳಿಕ ರಾಜ್ಯಾದ್ಯಂತ ಮಕ್ಕಳ ಕಣ್ಣಿನ ಸಮಸ್ಯೆ ಪ್ರಕರಣಗಳ ಸಂಖ್ಯೆ ಶೇಕಡ 30ರಷ್ಟು ಹೆಚ್ಚಾಗಿರುವುದರ ಬಗ್ಗೆ ಕೆಲ ದಿನಗಳ ಹಿಂದಷ್ಟೇ ‘ವಿಜಯವಾಣಿ’ ವಿಶೇಷ ವರದಿಯನ್ನು ಪ್ರಕಟಿಸಿತ್ತು. ಮೊಬೈಲ್, ಕಂಪ್ಯೂಟರ್, ಲ್ಯಾಪ್ಟಾಪ್ ಶಿಕ್ಷಣದಿಂದಾಗಿ ಮಕ್ಕಳು ಕಣ್ಣನೇ ಕಳೆದುಕೊಳ್ಳಬೇಕಾದ ಭೀತಿ ಶುರುವಾಗಿರುವುದರಿಂದ ಪಾಲಕರು ಆನ್ಲೈನ್ ಬೋಧನೆ ಅವಧಿಯನ್ನು ತಗ್ಗಿಸುವಂತೆ ಆಗ್ರಹಿಸುತ್ತಲೇ ಇದ್ದಾರೆ.
ಈ ಬಗ್ಗೆ ಕೊನೆಗೂ ಸೂಕ್ತ ಕ್ರಮಕ್ಕೆ ಮುಂದಾಗಿರುವ ಸರ್ಕಾರ ಆನ್ಲೈನ್ ಶಿಕ್ಷಣದ ಕುರಿತು ತಜ್ಞರ ಸಮಿತಿ ನೀಡಿದ ಶಿಫಾರಸುಗಳ ಜಾರಿಗೆ ಮುಂದಾಗಿದೆ. ಆನ್ಲೈನ್ ಬೋಧನೆ ಅವಧಿಯನ್ನು ಉಲ್ಲಂಘಿಸುವ ಶೈಕ್ಷಣಿಕ ಸಂಸ್ಥೆಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದ್ದಾರೆ. ಅಷ್ಟೇ ಅಲ್ಲ, ತಜ್ಞರ ಸಮಿತಿಯ ಶಿಫಾರಸಿನ ಅನ್ವಯವೇ ಆನ್ಲೈನ್ ತರಗತಿಗಳನ್ನು ನಡೆಸಲು ಸೂಚಿಸಲಾಗಿದೆ. ಚಿಕ್ಕ ಮಕ್ಕಳಿಗೂ ಅವಧಿ ಮೀರಿ ತರಗತಿಗಳನ್ನು ನಡೆಸುತ್ತಿರುವುದರಿಂದ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಪ್ರತಿ ಆನ್ಲೈನ್ ತರಗತಿಯ ಗರಿಷ್ಠ ಸಮಯ 30 ನಿಮಿಷ ಎಂದು ನಿಗದಿ ಮಾಡಲಾಗಿದ್ದು, ಆರನೇ ಮತ್ತು ನಂತರದ ತರಗತಿಗಳಿಗೆ ಅವಶ್ಯಕತೆಗಳಿಗೆ ಅನುಗುಣವಾಗಿ 30-45 ನಿಮಿಷದ ತರಗತಿ ನಡೆಸಬಹುದಾಗಿದೆ. ವಯೋಮಾನಕ್ಕೆ ಅನುಗುಣವಾಗಿ ದಿನಕ್ಕೆ 1ರಿಂದ 4 ತರಗತಿಗಳನ್ನು ನಡೆಸಲು ಅವಕಾಶವಿದ್ದು, 2ನೇ ತರಗತಿಯವರೆಗೆ ಪಾಲಕರ ಉಪಸ್ಥಿತಿ ಕಡ್ಡಾಯವಾಗಿದೆ. ಮುಖ್ಯವಾಗಿ, ಶಾಲೆಗಳು ಆನ್ಲೈನ್ ಬೋಧನೆಗೆ ಹೆಚ್ಚುವರಿ ಶುಲ್ಕ ಪಡೆಯುವಂತಿಲ್ಲ ಎಂಬುದನ್ನೂ ಸರ್ಕಾರ ಮತ್ತೊಮ್ಮೆ ಸ್ಪಷ್ಟಪಡಿಸಿದೆ.
ತಜ್ಞರು ಮಕ್ಕಳ ಹಿತದೃಷ್ಟಿ ಮತ್ತು ಕಲಿಕೆಯ ಉದ್ದೇಶ ಎರಡನ್ನೂ ಗಮನದಲ್ಲಿ ಇರಿಸಿಕೊಂಡೇ ಸಮತೋಲಿತ ಶಿಫಾರಸುಗಳನ್ನು ನೀಡಿದ್ದಾರೆ. ಇವು ಈ ಮುಂಚೆಯೇ ಜಾರಿಗೆ ಬರಬೇಕಾಗಿತ್ತಾದರೂ, ಕೇಂದ್ರದ ಮಾರ್ಗಸೂಚಿಯನ್ನೇ ಅನ್ವಯಿಸಲು ರಾಜ್ಯ ನಿರ್ಧರಿಸಿತ್ತು. ಪ್ರಸಕ್ತ ಮಕ್ಕಳು ಮತ್ತು ಪಾಲಕರಿಂದ ದೂರುಗಳು ದೊಡ್ಡದನಿಯಲ್ಲಿ ಹೊಮ್ಮುತ್ತಿರುವುದರಿಂದ, ಆನ್ಲೈನ್ ಬೋಧನೆಗೆ ವೈಜ್ಞಾನಿಕ ಮತ್ತು ಪ್ರಾಯೋಗಿಕ ಚೌಕಟ್ಟನ್ನು ಒದಗಿಸಲು ಮುಂದಾಗಿದೆ. ಇದು ಸೂಕ್ತವಾದ ಕ್ರಮವೇ. ಆದರೆ, ಶಿಕ್ಷಣ ಸಂಸ್ಥೆಗಳು ಮತ್ತೆ ಯಾವುದಾದರೂ ನೆಪ ಮುಂದೆ ಮಾಡಿ, ನಿಯಮಗಳನ್ನು ಉಲ್ಲಂಘಿಸುವಂತೆ ಆಗಬಾರದು. ಪಾಠ ಮಾಡುವುದು ಅನಿವಾರ್ಯವಾದರೂ; ಅದು ಮಕ್ಕಳ ಹಿತಕ್ಕೆ ಮಾರಕವಾಗಬಾರದು. ಈ ಕಾಳಜಿಯನ್ನು ಗಮನದಲ್ಲಿ ಇರಿಸಿಕೊಂಡು ಶಾಲೆಗಳು ಆರಂಭಗೊಳ್ಳುವರೆಗೆ ವ್ಯವಸ್ಥಿತವಾಗಿ ಆನ್ಲೈನ್ ತರಗತಿಗಳನ್ನು ನಡೆಸುವುದು ಸೂಕ್ತ.