ಸಂಪಾದಕೀಯ| ಸವಾಲು ಸ್ವೀಕರಿಸಬೇಕಿದೆ: ಉದ್ಯಮಗಳಿಗೆ ಸಂಕಷ್ಟದ ಜತೆಗೆ ಅವಕಾಶವೂ ಇದೆ

Industry
Published on

ಕರೊನಾ ಸೋಂಕಿನ ಹಾವಳಿ ಹಲವು ರಂಗಗಳ ಮೇಲೆ ದುಷ್ಪರಿಣಾಮ ಬೀರಿದೆ. ಆರ್ಥಿಕತೆಗೆ ಬಲವಾದ ಪೆಟ್ಟು ಬಿದ್ದಿದ್ದು, ಉದ್ಯಮವಲಯ ಸೊರಗುತ್ತಿದೆ. ಎರಡು ತಿಂಗಳ ಲಾಕ್​ಡೌನ್ ಅವಧಿಯಲ್ಲಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಉತ್ಪಾದನೆ ಹಾಗೂ ವಿದೇಶಿ ಆಮದು ಸ್ಥಗಿತಗೊಂಡಿದ್ದರಿಂದ ದಿನಬಳಕೆ ವಸ್ತುಗಳ ಕೊರತೆ ಸೃಷ್ಟಿಯಾಗಿದೆ. ಅಲ್ಲದೆ, ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸ್ವಯಂ ಲಾಕ್​ಡೌನ್​ನಂಥ ಕ್ರಮಗಳು ಹಲವೆಡೆ ಕೈಗೊಳ್ಳಲಾಗಿದ್ದು, ಗೃಹೋಪಯೋಗಿ ವಸ್ತುಗಳ ಅಭಾವದಿಂದ ಬೆಲೆಏರಿಕೆಯ ಭೀತಿಯೂ ಕಾಡುತ್ತಿದೆ. ಕೈಗಾರಿಕೆಗಳಲ್ಲಿ ಬಹುತೇಕ ಕಡೆ ಉತ್ಪಾದನೆ ಪೂರ್ಣಪ್ರಮಾಣದಲ್ಲಿ ಆರಂಭವಾಗಿಲ್ಲ. ಕಚ್ಚಾ ವಸ್ತುಗಳ ಕೊರತೆ, ಕಾರ್ವಿುಕರ ಅಲಭ್ಯತೆ , ವಸ್ತುಗಳ ಸಾಗಾಟಕ್ಕೆ ಸಮಸ್ಯೆ, ಬೇಡಿಕೆ ಕುಸಿತದಿಂದ ಮುಂಚಿನಂತೆ ಉತ್ಪಾದನೆ ಸಾಧ್ಯವಾಗುತ್ತಿಲ್ಲ. ಹಾರ್ಡ್​ವೇರ್ ಉತ್ಪನ್ನ, ಎಲೆಕ್ಟ್ರಿಕ್ ಸಾಮಗ್ರಿ, ಚಪ್ಪಲಿ, ಶೂ, ಸ್ಮಾರ್ಟ್​ಫೋನ್, ಟಿವಿಯಂಥ ಉತ್ಪನ್ನಗಳ ಕೊರತೆ ಕಂಡುಬರುತ್ತಿದೆ. ಒಂದು ವೇಳೆ ಬೆಲೆ ಹೆಚ್ಚಳವಾದಲ್ಲಿ ಜನಸಾಮಾನ್ಯರು ಮತ್ತೊಂದು ಹೊಸ ಸಂಕಷ್ಟವನ್ನು ಎದುರಿಸಬೇಕಾಗುತ್ತದೆ.

ಉದ್ಯಮವಲಯ ಪ್ರಸಕ್ತ ಸನ್ನಿವೇಶದಲ್ಲಿ ಹಲವು ಸಮಸ್ಯೆ, ಸಂಕಷ್ಟಗಳನ್ನು ಎದುರಿಸುತ್ತಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಕರೊನಾ ಸವಾಲನ್ನೇ ಅವಕಾಶವನ್ನಾಗಿ ಪರಿವರ್ತಿಸಿಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಅದಕ್ಕೆ ಪೂರಕವಾಗಿ ಲಘು ಹಾಗೂ ಸಣ್ಣ, ಮಧ್ಯಮ ಕೈಗಾರಿಕೆಗಳಿಗೆ ಬೃಹತ್ ಪ್ಯಾಕೇಜ್ ನೀಡುವ ಜತೆಗೆ, ಹಲವು ಬಗೆಯ ವಿನಾಯ್ತಿಗಳನ್ನು ಘೋಷಿಸಲಾಗಿದೆ. ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಲು ಇದು ಸರಿಯಾದ ಸಮಯವಾಗಿದ್ದು, ಸ್ಥಳೀಯ ಸಂಪನ್ಮೂಲ, ಕೌಶಲ ಬಳಸಿಕೊಂಡು ಕೈಗಾರಿಕೆಗಳು ಹೊಸ ಸಾಧ್ಯತೆಗಳನ್ನು ಶೋಧಿಸಬೇಕಿದೆ. ‘ಕರೊನಾ ಸವಾಲನ್ನು ಭಾರತ ಯಶಸ್ವಿಯಾಗಿ ಮಣಿಸಿ, ಇದರಿಂದ ಹೊರಬರಲಿದೆ. ಮಾತ್ರವಲ್ಲ ಜಾಗತಿಕ ಆರ್ಥಿಕತೆ ಪುನಶ್ಚೇತನದಲ್ಲಿ ಭಾರತ ಪ್ರಮುಖ ಪಾತ್ರ ವಹಿಸಲಿದೆ’ ಎಂದು ಪ್ರಧಾನಿ ‘ಇಂಡಿಯಾ ಗ್ಲೋಬಲ್ ವೀಕ್-2020’ ಉದ್ದೇಶಿಸಿ ಮಾತನಾಡುತ್ತ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕರೊನಾ ದಿಢೀರಾಗಿ ಬಂದೇರಗಿದ ಸಮಸ್ಯೆ ಆಗಿರುವುದರಿಂದ ಹಲವು ಸಮಸ್ಯೆಗಳು ಹುಟ್ಟಿಕೊಂಡಿರುವುದು ನಿಜ. ಆದರೆ, ಪರಿಹಾರದ ಹಾದಿಯನ್ನು ಶೋಧಿಸಲು ಮುಂದಾಗಬೇಕಿದೆ. ಆರ್ಥಿಕತೆಗೆ ಚೇತರಿಕೆ ನೀಡುವ ಶಕ್ತಿ ಉದ್ಯಮಗಳಿಗಿದೆ. ಅಲ್ಲದೆ, ‘ಆತ್ಮನಿರ್ಭರ’ ಮಂತ್ರವೂ ಸಂಚಲನ ಮೂಡಿಸಿದ್ದು, ಹೊಸ ಉತ್ಸಾಹ, ಸ್ಪರ್ಧೆ, ಗುಣಮಟ್ಟ, ತಾಜಾ ಚಿಂತನೆಯೊಂದಿಗೆ ಕಾರ್ಯದಕ್ಷತೆಯನ್ನು ಹೆಚ್ಚಿಸಬೇಕಿದೆ.

ಇನ್ನೊಂದೆಡೆ, ಚೀನಾದಿಂದ ಬಹುರಾಷ್ಟ್ರೀಯ ಕಂಪನಿಗಳು ಹೊರಬರುತ್ತಿದ್ದು, ಅವುಗಳನ್ನು ಭಾರತಕ್ಕೆ ಸೆಳೆಯಲು ಕೇಂದ್ರ ಸರ್ಕಾರ, ಹಾಗೆಯೇ ಕೆಲ ಕಂಪನಿಗಳನ್ನು ಕರ್ನಾಟಕಕ್ಕೆ ತರಲು ರಾಜ್ಯ ಸರ್ಕಾರ ಆಸಕ್ತಿ ವಹಿಸಿದೆ. ಹೂಡಿಕೆಗೆ ಇರುವ ಅವಕಾಶ, ಇಲ್ಲಿಯ ಉದ್ಯಮಸ್ನೇಹಿ ವಾತಾವರಣದ ಬಗ್ಗೆಯೂ ಮನದಟ್ಟು ಮಾಡಿಕೊಡಲಾಗುತ್ತಿದೆ. ಸೋಂಕಿನ ಹಾವಳಿ ಕಡಿಮೆಯಾದ ಬಳಿಕ ಹಲವು ಬಹುರಾಷ್ಟ್ರೀಯ ಕಂಪನಿಗಳು ಹೂಡಿಕೆಗೆ ಮುಂದಾಗಬಹುದು. ಹಾಗಾಗಿ, ನೈರಾಶ್ಯದ ವಾತಾವರಣ ದೀರ್ಘ ಕಾಲ ಇರಲಾರದು. ಈ ಅಂಶವನ್ನು ಉದ್ಯಮಗಳು ಅರ್ಥ ಮಾಡಿಕೊಂಡು, ಸವಾಲನ್ನು ಅವಕಾಶವನ್ನಾಗಿ ಪರಿವರ್ತಿಸಿಕೊಳ್ಳುವ ಜಾಣ್ಮೆ ತೋರಲಿ ಎಂಬುದೇ ಆಶಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net