

ಕರೊನಾ ಸೋಂಕಿನ ಹಾವಳಿ ಹಲವು ತಿಂಗಳುಗಳ ನಂತರ ನಿಧಾನವಾಗಿಯಾದರೂ ಕಡಿಮೆ ಆಗುತ್ತಿದೆ ಎಂದು ಸಮಾಧಾನ ಪಡುವಾಗಲೇ, ರೂಪಾಂತರಿ ಕರೊನಾ ಬ್ರಿಟನ್ನಲ್ಲಿ ಕಾಣಿಸಿಕೊಂಡಿದೆ. ಇದು ಬಹುಬೇಗ ಹಬ್ಬುತ್ತದೆಯಾದರೂ, ತೀಕ್ಷ್ಣವಾದ ವೈರಸ್ ಅಲ್ಲ ಎಂಬುದು ವೈದ್ಯಕೀಯ ಸಂಶೋಧಕರ ಅಭಿಪ್ರಾಯ. ಕರೊನಾದ ಹೊಸ ಪ್ರಬೇಧದ ಕುರಿತಂತೆ ಇನ್ನು ಹೆಚ್ಚಿನ ಸ್ಪಷ್ಟತೆ ಇಲ್ಲದಿರುವುದರಿಂದ ಒಂದಿಷ್ಟು ಗೊಂದಲ ಮೂಡಿರುವುದಂತೂ ನಿಜ. ಬ್ರಿಟನ್ ಸುರಕ್ಷಾ ಕ್ರಮಗಳನ್ನು ಕಠಿಣಗೊಳಿಸಿದೆ. ಕೆಲ ರಾಷ್ಟ್ರಗಳು ಮತ್ತೆ ಲಾಕ್ಡೌನ್ ವಿಧಿಸಲು ಚಿಂತನೆ ನಡೆಸಿವೆ. ನವೆಂಬರ್ 25ರ ನಂತರ ಬ್ರಿಟಿನ್ ಸೇರಿ ಇತರ ದೇಶಗಳಿಂದ ಭಾರತಕ್ಕೆ ಆಗಮಿಸಿದ ಪ್ರಯಾಣಿಕರನ್ನು ಕಡ್ಡಾಯವಾಗಿ ಆರ್ಟಿಪಿಸಿಆರ್ ಪರೀಕ್ಷೆಗೊಳಪಡಿಸಿ, ಕ್ವಾರಂಟೈನ್ನಲ್ಲಿ ಇರಿಸಲಾಗುತ್ತಿದೆ. ‘ಈಗಿರುವ ಮುಂಜಾಗ್ರತೆ ಕ್ರಮಗಳನ್ನು ಪಾಲಿಸಿದರೆ ಸಾಕು. ಹೊಸ ಪ್ರಬೇಧಕ್ಕೂ ಈಗಿರುವ ಚಿಕಿತ್ಸೆಯೇ ಮುಂದುವರಿಯಲಿದೆ’ ಎಂದು ತಾಂತ್ರಿಕ ಸಲಹಾ ಸಮಿತಿ (ಟಿಎಸಿ) ಸದಸ್ಯರು ಸ್ಪಷ್ಟಪಡಿಸಿದ್ದಾರೆ.
ಕರೊನಾದಿಂದ ಅಮೆರಿಕದ ಬಳಿಕ ತೀವ್ರ ಬಾಧಿತವಾಗಿರುವ ರಾಷ್ಟ್ರ ಭಾರತ. ಈಗಾಗಲೇ ಸೋಂಕಿತರ ಸಂಖ್ಯೆ 1 ಕೋಟಿಯನ್ನು ದಾಟಿದ್ದರೆ, ಮೃತರ ಸಂಖ್ಯೆ 1.46 ಲಕ್ಷದ ಗಡಿ ದಾಟಿದೆ. ಕೇರಳ, ಮಹಾರಾಷ್ಟ್ರದಲ್ಲಿ ಪ್ರಕರಣಗಳ ಸಂಖ್ಯೆ ಇನ್ನೂ ತಗ್ಗಿಲ್ಲ. ಕರ್ನಾಟಕದಲ್ಲಿ 9 ಲಕ್ಷಕ್ಕೂ ಅಧಿಕ ಪ್ರಕರಣಗಳು ದಾಖಲಾಗಿದ್ದರೆ, ಮೃತರ ಸಂಖ್ಯೆ 12 ಸಾವಿರಕ್ಕೂ ಅಧಿಕ. ದೆಹಲಿಯಲ್ಲಿ ತಗ್ಗಿದ್ದ ಕರೊನಾ ಪ್ರಮಾಣ, ಸೋಂಕಿನ ಎರಡನೇ ಅಲೆಯಿಂದಾಗಿ ಮತ್ತಷ್ಟು ಜಾಸ್ತಿಯಾಯಿತು. ಹೀಗಿರುವಾಗ ರೂಪಾಂತರಿ ಕರೊನಾ ಮತ್ತೆಷ್ಟು ಹಾನಿ ಮಾಡಲಿದೆಯೆ?, ಇದು ತೀವ್ರವಾಗಿ ಹಬ್ಬಿದರೆ ಪರಿಸ್ಥಿತಿ ನಿಯಂತ್ರಿಸುವುದು ಹೇಗೆ? ಎಂಬ ಬಗ್ಗೆಯೂ ಚಿಂತನೆ ನಡೆಯುತ್ತಿದೆ. ಜನಜೀವನವೂ ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಸ್ಥಿತಿಗೆ ಬರುತ್ತಿದೆ.
ರಾಜ್ಯದಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಇಂದಿನಿಂದ (ಶುಕ್ರವಾರ) ರಾತ್ರಿ ಕರ್ಫ್ಯೂ ಜಾರಿಯಾಗುತ್ತಿದೆ. ರಾತ್ರಿ 11ರಿಂದ ನಸುಕಿನ ಜಾವ 5 ಗಂಟೆಯವರೆಗೂ ವಿಧಿಸಲಾಗಿರುವ ರಾತ್ರಿ ಕರ್ಫ್ಯೂ ಜನವರಿ 2ರವರೆಗೆ ಜಾರಿಯಲ್ಲಿ ಇರಲಿದೆ. ಹಾಗಾಗಿ, ಕ್ರಿಸ್ವುಸ್ ಮತ್ತು ಹೊಸ ವರ್ಷದ ಆಚರಣೆ ಸಾಂಕೇತಿಕವಾಗಿ ನಡೆಯಲಿದೆ ಅಷ್ಟೇ. ‘ರಾತ್ರಿ ಕರ್ಫ್ಯೂ ವಿಧಿಸುವ ಯಾವುದೇ ಪ್ರಸ್ತಾವನೆ ಇಲ್ಲ’ ಎಂದು ಹೇಳಿದ 24 ಗಂಟೆಯೊಳಗೆ ರಾಜ್ಯ ಸರ್ಕಾರ ನಿರ್ಧಾರವನ್ನು ಬದಲಿಸಿದೆ. ಕರೊನಾ ಸೋಂಕಿನ ಪ್ರಸರಣ ವೇಗ ಪಡೆಯಬಾರದು, ಅದರಿಂದ ಮತ್ತಷ್ಟು ತೊಂದರೆಗಳು ಸೃಷ್ಟಿಯಾಗಬಾರದು ಎಂಬ ಮುನ್ನೆಚ್ಚರಿಕೆ ಸೂಕ್ತವಾಗಿಯೇ ಇದೆ. ಆದರೆ, ವ್ಯಾಪಾರ-ವಹಿವಾಟು ಸೇರಿ ಜನಜೀವನ ಈಗಷ್ಟೇ ಹಳಿಗೆ ಮರಳುತ್ತಿದೆ. ಲಾಕ್ಡೌನ್ನಿಂದ ಆಗಿರುವ ಆರ್ಥಿಕ ನಷ್ಟದ ಅಂದಾಜು ಸರ್ಕಾರಕ್ಕೆ ಇದ್ದೇಇದೆ. ಎಷ್ಟೋ ವಲಯಗಳು ಆ ನಷ್ಟದಿಂದ ಹೊರಬರಲು ಹೋರಾಡುತ್ತಿವೆ. ಉದ್ಯಮಗಳು ಮೊದಲಿನ ಸ್ಥಿತಿಗೆ ತಲುಪಿಲ್ಲ. ಸಣ್ಣ ವ್ಯಾಪಾರಿಗಳ ಪರಿಸ್ಥಿತಿಯಂತೂ ಶೋಚನೀಯ. ಹಾಗಾಗಿ, ವ್ಯಾಪಾರ-ವಹಿವಾಟಿಗೆ ಮತ್ತೆ ಧಕ್ಕೆ ಆಗದಂತೆ ಸರ್ಕಾರ ಕಾಳಜಿ ವಹಿಸಬೇಕಿದೆ. ಜನರು ತಪ್ಪದೆ ಸುರಕ್ಷಾ ಕ್ರಮಗಳನ್ನು, ಸರ್ಕಾರದ ನಿಯಮಗಳನ್ನು ಪಾಲಿಸಬೇಕಿದೆ.
ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್ಗಾಗಿ ನಮ್ಮ ಫೇಸ್ಬುಕ್ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..