

ಆಸ್ಪತ್ರೆಗಳಲ್ಲಿ ಹಾಸಿಗೆ ಸಿಗದೆ ರೋಗಿಗಳು ಪ್ರಾಣಬಿಡುತ್ತಿರುವ ಶೋಚನೀಯ ಪ್ರಕರಣಗಳು ವರದಿಯಾಗುತ್ತಲೇ ಇವೆ. ಆದರೆ, ಹಾಸಿಗೆ ಕಾಯ್ದಿರಿಸುವಿಕೆ, ಹಂಚಿಕೆಯಲ್ಲೇ ಭಾರಿ ಅವ್ಯವಹಾರ ನಡೆದಿದೆ. ದಲ್ಲಾಳಿಗಳು ಸಾಮಾನ್ಯ ಹಾಸಿಗೆಗೆ ಸಾವಿರಾರು ರೂಪಾಯಿ, ಐಸಿಯುವಿಗೆ ಲಕ್ಷಾಂತರ ರೂಪಾಯಿ ಪಡೆದ ಪ್ರಕರಣ ಆಘಾತ ಮೂಡಿಸುವ ಜತೆಗೆ, ತುರ್ತು ಪರಿಸ್ಥಿತಿಯ ದುರ್ಲಾಭ ಪಡೆಯುವ ಕೆಟ್ಟ ಮಾನಸಿಕತೆ ಬಗ್ಗೆ ಜನರಲ್ಲಿ ಆಕ್ರೋಶ ಮೂಡಿದೆ. ಇಂಥ ಅವಾಂತರಗಳಿಗೆ ಕೊನೆಯೇ ಇಲ್ಲ. ಕರೊನಾ ಆಸ್ಪತ್ರೆಗಳಲ್ಲಿನ ಹಾಸಿಗೆ ಹಂಚಿಕೆ ದಂಧೆಯ ಮತ್ತೊಂದು ಕರಾಳ ಮುಖವನ್ನು ಗುರುವಾರ ಖುದ್ದು ಕಂದಾಯ ಸಚಿವ ಆರ್.ಆಶೋಕ್ ಅವರೇ ಬಹಿರಂಗಗೊಳಿಸಿದ್ದಾರೆ. ಕರೊನಾ ಸಂಕಷ್ಟದ ಹೊತ್ತಲ್ಲೂ ಕೆಲವರು ಅದನ್ನು ಹಣ ಮಾಡುವ ದಂಧೆಯಾಗಿ ಪರಿವರ್ತಿಸಿಕೊಂಡಿರುವುದು ಅಸಹ್ಯ ಮೂಡಿಸಿದೆ. ಖಾಸಗಿ ಆಸ್ಪತ್ರೆ, ವೈದ್ಯಕೀಯ ಕಾಲೇಜು ಆಸ್ಪತ್ರೆಗಳಿಗೆ ದಾಖಲಾಗುವ ಸೋಂಕಿತರು ಮೃತರಾದಲ್ಲಿ ಅಥವಾ ಚೇತರಿಸಿಕೊಂಡು ಬಿಡುಗಡೆ ಆದ ಬಳಿಕವೂ ಅವರ ಹೆಸರಿನಲ್ಲೇ ಹಾಸಿಗೆ ಮುಂದುವರಿಯುತ್ತಿರುವುದರಿಂದ ಹೊಸ ಸೋಂಕಿತರಿಗೆ ಹಾಸಿಗೆ, ಚಿಕಿತ್ಸೆ ಲಭ್ಯವಾಗುತ್ತಿಲ್ಲ. ಈ ನಡುವೆ ರೋಗಿಗಳ ಅಸಹಾಯಕತೆ, ನರಳಾಟ ಮುಂದುವರಿದಿರುವುದು ಪರಿಸ್ಥಿತಿಯ ಗಂಭೀರತೆಗೆ ಸಾಕ್ಷಿ.
ಸಚಿವರಾದ ಬಸವರಾಜ ಬೊಮ್ಮಾಯಿ, ಡಾ.ಕೆ.ಸುಧಾಕರ್ ಜತೆಗೂಡಿ ಗುರುವಾರ ಆರ್.ಅಶೋಕ್ ಬೆಂಗಳೂರಿನ ಖಾಸಗಿ ವೈದ್ಯಕೀಯ ಕಾಲೇಜುಗಳ ಮುಖ್ಯಸ್ಥರ ಸಭೆ ನಡೆಸಿದಾಗ ಇಂಥ ಹಲವು ಅಪಸವ್ಯಗಳು ಕಂಡುಬಂದಿದ್ದು, ಸಚಿವರೇ ದಂಗಾಗಿ ಹೋಗಿದ್ದಾರೆ. ವೈದ್ಯಕೀಯ ಕ್ಷೇತ್ರ ಎಷ್ಟು ಪವಿತ್ರ, ಈ ಹೊತ್ತಲ್ಲಿ ಅದರ ಮೇಲೆ ಎಷ್ಟು ಜವಾಬ್ದಾರಿ, ಜನರ ನಂಬಿಕೆ ಇದೆ ಎಂಬುದು ಗೊತ್ತಿರುವಂಥದ್ದೇ. ಆದರೆ, ಕೆಲ ಖಾಸಗಿ ವೈದ್ಯಕೀಯ ಆಸ್ಪತ್ರೆಗಳೇ ಇಂಥ ಅವ್ಯವಹಾರದಲ್ಲಿ ತೊಡಗುವುದರಿಂದ, ಇಡೀ ವ್ಯವಸ್ಥೆಯನ್ನೇ ಅನುಮಾನದಿಂದ ನೋಡುವ ಸ್ಥಿತಿ ಸೃಷ್ಟಿಯಾಗುತ್ತದೆ. ಅಷ್ಟಕ್ಕೂ, ಕರೊನಾ ಆಪತ್ತಿನ ವಿರುದ್ಧ ಸರ್ಕಾರ ಮತ್ತು ಖಾಸಗಿ ವಲಯ ಎರಡೂ ಒಟ್ಟಾಗಿ ಹೋರಾಡಬೇಕಿದೆ. ಈ ಮಹತ್ತರ ಹೊಣೆಗಾರಿಕೆ ಸರ್ಕಾರದ ಮೇಲೆ ಎಷ್ಟಿದೆಯೋ, ಅಷ್ಟೇ ಖಾಸಗಿ ವಲಯದ ಮೇಲೂ ಇದೆ. ಅದಕ್ಕೆಂದೆ, ಖಾಸಗಿ ಆಸ್ಪತ್ರೆಗಳು ಹಾಗೂ ವೈದ್ಯಕೀಯ ಕಾಲೇಜುಗಳ ಒಟ್ಟು ಹಾಸಿಗೆಗಳಲ್ಲಿ ಶೇಕಡ 75ರಷ್ಟು ಮೀಸಲಿಡುವಂತೆ ಸರ್ಕಾರ ಏಪ್ರಿಲ್ 24ರಂದೇ ಆದೇಶಿಸಿದೆ. ಆದರೂ, ಇದು ಪರಿಣಾಮಕಾರಿಯಾಗಿ ಜಾರಿಯಾಗಿಲ್ಲ.
ಬೆಂಗಳೂರಿನ ಪ್ರತಿ ಖಾಸಗಿ ಆಸ್ಪತ್ರೆಗೆ ಕೆಎಎಸ್ ಅಧಿಕಾರಿ ನೇಮಿಸಲು, ಪ್ರತಿ 5 ಆಸ್ಪತ್ರೆಗಳಿಗೆ ಒಬ್ಬ ಹಿರಿಯ ಅಧಿಕಾರಿ ನೇಮಿಸಿ ಮೇಲ್ವಿಚಾರಣೆ ನಡೆಸಲು ಸರ್ಕಾರ ನಿರ್ಧರಿಸಿರುವುದು ಸಮಂಜಸವಾಗಿಯೇ ಇದೆ. ಹಾಸಿಗೆ ಹಂಚಿಕೆ ಅಕ್ರಮದಲ್ಲಿ ಶಾಮೀಲಾದವರ ವಿರುದ್ಧ ಸರ್ಕಾರ ಯಾವುದೇ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಬೇಕು. ಇನ್ನಾದರೂ, ವೈದ್ಯಕೀಯ ಆಸ್ಪತ್ರೆಗಳು ಮತ್ತು ಖಾಸಗಿ ಆಸ್ಪತ್ರೆಗಳು ಕರೊನಾ ನಿರ್ವಹಣೆಯಲ್ಲಿ ಮಹತ್ವದ ಪಾತ್ರ ವಹಿಸುವಂತಾಗಬೇಕು. ಆ ಮೂಲಕ ರೋಗಿಗಳಿಗೆ ಹಾಸಿಗೆ, ಸೂಕ್ತ ಚಿಕಿತ್ಸೆ, ವೈದ್ಯಕೀಯ ಆಮ್ಲಜನಕ ಸೇರಿದಂತೆ ಅವಶ್ಯಕ ಸೌಲಭ್ಯಗಳು ಲಭ್ಯವಾಗಬೇಕು.