

ಭಾರತದ ವಿರುದ್ಧ ಒಂದಿಲ್ಲೊಂದು ಕಿತಾಪತಿ ಮಾಡುತ್ತಲೇ ಇರದಿದ್ದರೆ ಚೀನಾ ಮತ್ತು ಪಾಕಿಸ್ತಾನದಂತಹ ದೇಶಗಳಿಗೆ ತಿಂದ ಅನ್ನ ಅರಗುವುದಿಲ್ಲವೆಂದು ಕಾಣುತ್ತದೆ. ಪಾಕಿಸ್ತಾನವು ಭಾರತದ ವಿರುದ್ಧ ಭಯೋತ್ಪಾದನೆಗೆ ಉತ್ತೇಜನ, ಪ್ರೋತ್ಸಾಹ ನಿಡುವ ಕೆಲಸವನ್ನು ನಿರಂತರವಾಗಿ ಮುಂದುವರಿಸಿದ್ದರೆ, ಚೀನಾದ್ದು ಮತ್ತೊಂದು ತೆರನಾದ ತಂಟೆಕೋರತನ. ಭಾರತದೊಂದಿಗಿನ ಗಡಿಯಲ್ಲಿ ಸದಾ ಏನಾದರೂ ರಗಳೆ ತೆಗೆಯುತ್ತಲೇ ಇರುವ ಚೀನಾ, ಈಗ ಅರುಣಾಚಲ ಪ್ರದೇಶದ ಒಳಗೆ, ಭಾರತದ ಗಡಿಯೊಳಗೆ ಹಳ್ಳಿಯನ್ನೇ ನಿರ್ವಿುಸುವ ಮೂಲಕ ಮತ್ತೊಮ್ಮೆ ತನ್ನ ಸ್ವಭಾವವನ್ನು ತೋರ್ಪಡಿಸಿದೆ.
ಅರುಣಾಚಲದ ತ್ಸಾರಿ ಚು ನದಿ ಮೇಲಿರುವ, ಒಳನಾಡಿನ ಸುಬಾನ್ಸಿರಿ ಜಿಲ್ಲೆಯ ವ್ಯಾಪ್ತಿಗೆ ಬರುವ ಪ್ರದೇಶದಲ್ಲಿ ಚೀನಾ 101 ಮನೆಗಳ ಹಳ್ಳಿಯನ್ನೇ ನಿರ್ವಿುಸಿದೆ ಎಂಬ ಸಂಗತಿ ಉಪಗ್ರಹ ಚಿತ್ರಗಳಿಂದ ದೃಢಪಟ್ಟಿದೆ. ಭಾರತದ ಗಡಿಯೊಳಗಡೆ ಸುಮಾರು ನಾಲ್ಕೂವರೆ ಕಿಲೋಮೀಟರ್ ಒಳಗೆ ಈ ನಿರ್ಮಾಣ ನಡೆದಿರುವುದು ಭಾರತದ ಪಾಲಿಗೆ ತಲೆನೋವಿನ ಸಂಗತಿಯೇ ಸರಿ. ವಾಸ್ತವದಲ್ಲಿ ಈ ಪ್ರದೇಶದ ಒಡೆತನದ ಬಗ್ಗೆ ಭಾರತ ಮತ್ತು ಚೀನಾದ ನಡುವೆ ದಶಕಗಳಿಂದ ವಿವಾದ ಇದೆ. ಹೀಗಿರುವಾಗ, ಅಲ್ಲಿ ಮನೆಗಳ ನಿರ್ವಣದ ಧಾಷ್ಟರ್್ಯವನ್ನು ಚೀನಾ ತೋರಿರುವುದು ತೀವ್ರ ಖಂಡನಾರ್ಹ. 2019ರ ಆಗಸ್ಟ್ ವೇಳೆಗೆ ಖಾಲಿ ಇದ್ದ ಆ ಜಾಗದಲ್ಲಿ ನವೆಂಬರ್ ಹೊತ್ತಿಗೆ ಮನೆಗಳನ್ನು ಕಟ್ಟಿರುವುದು ಉಪಗ್ರಹ ಚಿತ್ರಗಳಿಂದ ಗೊತ್ತಾಗಿದೆ. ಈ ವಿಷಯ ಭಾರತ ಸರ್ಕಾರದ ಗಮನಕ್ಕೂ ಬಂದಿದೆ.
‘ವಾಸ್ತವ ನಿಯಂತ್ರಣ ರೇಖೆಯ ಆಸುಪಾಸಿನಲ್ಲಿ ಚೀನಾ ನಿರ್ಮಾಣ ಚಟುವಟಿಕೆ ನಡೆಸಿರುವ ಕುರಿತು ವರದಿಗಳನ್ನು ಗಮನಿಸಿದ್ದೇವೆ. ಎಲ್ಲ ಚಟುವಟಿಕೆಗಳ ಮೇಲೆ ಸೂಕ್ಷ್ಮ ನಿಗಾ ಇರಿಸಲಾಗಿದೆ. ಭಾರತದೊಂದಿಗಿನ ಗಡಿಭಾಗದಲ್ಲಿ ಚೀನಾ ಅನೇಕ ವರ್ಷಗಳಿಂದ ನಿರ್ಮಾಣ ಚಟುವಟಿಕೆಗಳನ್ನು ನಡೆಸುತ್ತಿದೆ’ ಎಂದು ಭಾರತದ ವಿದೇಶಾಂಗ ಸಚಿವಾಲಯ ಪ್ರತಿಕ್ರಿಯಿಸಿದೆ. ಭಾರತ ಸರ್ಕಾರ ಗಡಿಭಾಗದಲ್ಲಿ ರಸ್ತೆ, ಸೇತುವೆಗಳು ಇತ್ಯಾದಿ ಮೂಲಸೌಕರ್ಯ ಕಾಮಗಾರಿಗಳಿಗೆ ವೇಗ ನೀಡಿದೆ ಎಂದೂ ವಿದೇಶಾಂಗ ಸಚಿವಾಲಯ ತಿಳಿಸಿದೆ. ಹೀಗೆ ವಿನಾಕಾರಣ ಕ್ಯಾತೆ ತೆಗೆಯುವುದು ಚೀನಾ ಹವ್ಯಾಸವೇ ಆಗಿದೆ. ಈ ಹಿಂದೆ, ಡೋಕ್ಲಾಮ್ಲ್ಲಿ ಅದು ಸೇನೆಯನ್ನು ಜಮಾವಣೆ ಮಾಡಿ ತಗಾದೆ ತೆಗೆದಿತ್ತು. ಆಗ ಭಾರತವೂ ದಿಟ್ಟ ಪ್ರತ್ಯುತ್ತರ ನೀಡಿ, ಸೇನೆಯನ್ನು ನಿಲ್ಲಿಸಿತ್ತು. 2017ರ ಜೂನ್ 16ರಿಂದ ಆಗಸ್ಟ್ 28ರವರೆಗೆ ಎರಡೂ ಸೇನೆಗಳು ಮುಖಾಮುಖಿಯಾಗೇ ನಿಂತಿದ್ದವು; ಯುದ್ಧ ಕಾಮೋಡವೂ ಕವಿದಿತ್ತು. ಕೊನೆಗೆ ಚೀನಾವೇ ಹಿಂದಡಿ ಇಟ್ಟು, ಸೇನೆಯನ್ನು ವಾಪಸ್ ಪಡೆಯಿತು. ಪೂರ್ವ ಲಡಾಖ್ನಲ್ಲಿಯೂ ಚೀನಾದ ರಕ್ಕಸ ಪ್ರವೃತ್ತಿ ಕಂಡುಬಂದಿತ್ತು.
ಒಪ್ಪಂದದ ಪ್ರಕಾರ, ಸೇನಾ ಶಿಬಿರ ತೆರವು ಮಾಡಿದ್ದಾರೆಯೇ ಎಂದು ಪರಿಶೀಲಿಸಲು ಹೋದ ಭಾರತೀಯ ಸೈನಿಕರ ಮೇಲೆ ಚೀನಾ ಸೈನಿಕರು ಬರ್ಬರವಾಗಿ ಹಲ್ಲೆ ನಡೆಸಿದಾಗ ಭಾರತದ 20 ಯೋಧರು ಹುತಾತ್ಮರಾಗಿದ್ದರು. ಚೀನಾದ ಇಂಥ ನಡೆಗಳಿಂದಾಗಿಯೇ ಆ ದೇಶದ ವಿರುದ್ಧ ಭಾರತದಲ್ಲಿ ಆಕ್ರೋಶ ಹೆಚ್ಚುತ್ತಿದು, ಚೀನೀ ವಸ್ತುಗಳ ಬಹಿಷ್ಕಾರಕ್ಕೆ ಜನಬೆಂಬಲ ವ್ಯಕ್ತವಾಗುತ್ತಿದೆ. ಕೇಂದ್ರ ಸರ್ಕಾರ ಕೂಡ ಚೀನಾ ಕಡಿವಾಣಕ್ಕೆ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದು ಅನಿವಾರ್ಯ ಸಹ.