ಸಂಪಾದಕೀಯ|ಭಾರತ ಮತ್ತು ಅಮೆರಿಕ 2+2 ಸಭೆ ಬಾಂಧವ್ಯವೃದ್ಧಿಗೆ ಪೂರಕ

India US
Published on

‘ಜಾಗತಿಕ ನಾಯಕ’ನಾಗುವ ಹಪಾಹಪಿಯಲ್ಲಿ ಹಲವು ರಾಷ್ಟ್ರಗಳೊಂದಿಗೆ ಅನವಶ್ಯಕ ವಿವಾದಗಳನ್ನು ಸೃಷ್ಟಿಸಿಕೊಂಡಿರುವ ಮತ್ತು ಯುದ್ಧೋನ್ಮಾದವನ್ನು ತೋರುತ್ತಿರುವ ಚೀನಾ ಲಡಾಖ್ ಗಡಿಯಲ್ಲೂ ಉದ್ವಿಗ್ನ ಸ್ಥಿತಿ ಸೃಷ್ಟಿಸಿ, ಭಾರತದೊಂದಿಗಿನ ಸಂಬಂಧಕ್ಕೆ ಪೆಟ್ಟು ನೀಡಿದೆ. ಮತ್ತೊಂದೆಡೆ, ಅಮೆರಿಕ ಮತ್ತು ಚೀನಾ ನಡುವಿನ ವಾಣಿಜ್ಯ ಸಮರವೂ ತೀವ್ರ ಸ್ವರೂಪ ಪಡೆದುಕೊಂಡಿದೆ. ಇಂಥ ಸಂದರ್ಭದಲ್ಲೇ ನಡೆದ ಭಾರತ ಮತ್ತು ಅಮೆರಿಕ ವಿದೇಶಾಂಗ ಹಾಗೂ ರಕ್ಷಣಾ ಸಚಿವರ 2+2 ಸಭೆ ಡ್ರ್ಯಾಗನ್​​ ರಾಷ್ಟ್ರಕ್ಕೆ ಸ್ಪಷ್ಟ ಸಂದೇಶ ರವಾನಿಸಲು ಯಶಸ್ವಿಯಾಗಿದೆ. ಅಲ್ಲದೆ, ಉಭಯ ರಾಷ್ಟ್ರಗಳ ರಕ್ಷಣಾ ವ್ಯವಹಾರ, ಸಹಕಾರವನ್ನು ಮತ್ತೊಂದು ಮಜಲಿಗೆ ಕೊಂಡೊಯ್ದಿದೆ. ಈ ವಿದ್ಯಮಾನವನ್ನು ಅಂತಾರಾಷ್ಟ್ರೀಯ ವಲಯ ಕುತೂಹಲದಿಂದ ಗಮನಿಸಿದೆ. ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯಲು ಕೆಲವೇ ದಿನಗಳು ಬಾಕಿ ಇರುವಂತೆ ನಡೆದಿರುವ ಈ ಸಭೆ, ಮುಂದಿನ ದಿನಗಳಲ್ಲಿ ಆ ರಾಷ್ಟ್ರದ ವಿದೇಶಾಂಗ ನೀತಿ ಹೇಗಿರುತ್ತದೆ ಎಂಬುದರ ಸೂಚಕವೂ ಆಗಿದೆ.

ಭಾರತ ಅಂತಾರಾಷ್ಟ್ರೀಯ ಶಕ್ತಿಯಾಗಿ ಮಾರ್ಪಡುತ್ತಿರುವುದನ್ನು ಮನಗಂಡ ಅಮೆರಿಕ ಭಾರತವು ತನ್ನ ‘ಪ್ರಮುಖ ರಕ್ಷಣಾ ಪಾಲುದಾರ’ ಎಂದು 2016ರ ಜೂನ್​ನಲ್ಲಿಯೇ ಅಧಿಕೃತವಾಗಿ ಘೋಷಿಸಿತು. ಅದಕ್ಕೆ ಪೂರಕವಾಗಿಯೇ ಹಲವು ಒಪ್ಪಂದ, ಸಹಕಾರ ನೀತಿಗಳು ಏರ್ಪಟ್ಟಿರುವುದು ಗಮನಾರ್ಹ. ಮಂಗಳವಾರ ವಿದೇಶಾಂಗ ಸಚಿವ ಎಸ್.ಜೈ ಶಂಕರ್ ಹಾಗೂ ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್ ಮತ್ತು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೋ ಹಾಗೂ ರಕ್ಷಣಾ ಕಾರ್ಯದರ್ಶಿ ಮಾರ್ಕ್ ಟಿ. ಎಸ್ಪರ್ ನಡುವೆ ನಡೆದ ಮಾತುಕತೆಯ ವೇಳೆ, ಇಂಡೋ-ಪೆಸಿಫಿಕ್ ವಲಯದಲ್ಲಿ ಚೀನಾದ ಪ್ರಾಬಲ್ಯ ಮಟ್ಟ ಹಾಕಲು, ಜಂಟಿ ಸೇನಾ ಸಮರಾಭ್ಯಾಸ ನಡೆಸಲು ಸಮ್ಮತಿ ಏರ್ಪಟ್ಟಿದೆ. ಇದೇ ವೇಳೆ, ಮೂಲಭೂತ ವಿನಿಮಯ ಹಾಗೂ ಸಹಕಾರ ಒಪ್ಪಂದವನ್ನು (ಬಿಇಸಿಎ) ಪೂರ್ಣಗೊಳಿಸಲಾಗಿದ್ದು, ‘ಇದು ರಕ್ಷಣಾ ಮಾಹಿತಿ ವಿನಿಮಯಕ್ಕೆ ಹೊಸ ಹಾದಿಯನ್ನು ತೆರೆಯಲಿದೆ’ ಎಂದು ರಾಜನಾಥ್ ಸಿಂಗ್ ಪ್ರತಿಕ್ರಿಯಿಸಿದ್ದಾರೆ.

ಇಲ್ಲಿನ ರಕ್ಷಣಾ ವಲಯದಲ್ಲಿ ಮತ್ತಷ್ಟು ಹೂಡಿಕೆ ಮಾಡಲು ಉತ್ಸಾಹ ತೋರಿರುವ ಅಮೆರಿಕ, ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಕಾಯಂ ಸದಸ್ಯತ್ವ ಸಿಗಬೇಕೆಂಬ ವಿಚಾರಕ್ಕೆ ಮತ್ತೊಮ್ಮೆ ಬೆಂಬಲ ವ್ಯಕ್ತಪಡಿಸಿದೆ. ‘ಭಾರತ ಎದುರಿಸುತ್ತಿರುವ ಸವಾಲುಗಳ ವಿರುದ್ಧ ಹೋರಾಡಲು ಅಮೆರಿಕ ಸಹಕಾರ ನೀಡುತ್ತದೆ’ ಎಂಬ ಪಾಂಪಿಯೋ ಮಾತು ಮಹತ್ವದ್ದು. ಇಂಡೋ-ಪೆಸಿಫಿಕ್ ವಲಯದ ಎಲ್ಲ ದೇಶಗಳ ಸ್ಥಿರತೆ, ಶಾಂತಿ ಮತ್ತು ಸಮೃದ್ಧಿಗೂ ಆದ್ಯತೆ ನೀಡಲು ಈ ಸಭೆ ನಿರ್ಧರಿಸಿದೆ. ಅಮೆರಿಕದ ನಾಯಕರು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ, ಮಾತುಕತೆ ನಡೆಸಿದ್ದಾರೆ. ಒಟ್ಟಾರೆ ಈ ಸಭೆ, ಉಭಯ ದೇಶಗಳ ಬಾಂಧವ್ಯ ಹೆಚ್ಚಿಸುವ ಜತೆಗೆ, ದ್ವಿಪಕ್ಷೀಯ ಸಂಬಂಧಗಳ ಬದ್ಧತೆಯನ್ನೂ ಎತ್ತರಕ್ಕೆ ಕೊಂಡೊಯ್ದಿದೆ. ಅಮೆರಿಕದ ಚುನಾವಣೆ ಬಳಿಕ ಈ ಚಿತ್ರಣ ಹೇಗಿರಲಿದೆ ಎಂಬುದು ಕುತೂಹಲಕರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net