

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2021-22ನೇ ಸಾಲಿನ ಮುಂಗಡಪತ್ರವನ್ನು ಸೋಮವಾರ ಮಂಡಿಸಿದ್ದಾರೆ. ಕರೊನಾ ತಂದೊಡ್ಡಿದ ಆರ್ಥಿಕ ಸಂಕಷ್ಟವು ಬಜೆಟ್ ತಯಾರಿಯಲ್ಲಿ ಪರಿಣಾಮ ಬೀರಿರುವುದು ಸ್ಪಷ್ಟ. ಇದಲ್ಲದೆ, ನೂತನ ಕೃಷಿ ಕಾನೂನುಗಳನ್ನು ವಿರೋಧಿಸಿ ನಡೆಯುತ್ತಿರುವ ರೈತರ ಪ್ರತಿಭಟನೆಯನ್ನು ಸಹ ಸರ್ಕಾರ ಆದ್ಯತೆಯಾಗಿ ಗಮನಿಸಿದೆ. ಹೀಗಾಗಿಯೇ, ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಮುಂದುವರಿಯುತ್ತದೆ ಎಂಬುದನ್ನು ಸ್ಪಷ್ಟಪಡಿಸಲು ಸರ್ಕಾರ ಬಜೆಟ್ ಮಂಡನೆ ವೇದಿಕೆಯನ್ನೂ ಬಳಸಿಕೊಂಡಿದೆ. ಕೃಷಿ ಉತ್ಪನ್ನಗಳ ಉತ್ಪಾದನಾ ವೆಚ್ಚಕ್ಕಿಂತ ಒಂದೂವರೆ ಪಟ್ಟು ಹೆಚ್ಚು ಬೆಂಬಲ ಬೆಲೆ ನೀಡಲಾಗುತ್ತದೆ ಎಂದು ಹಣಕಾಸು ಸಚಿವರು ಹೇಳಿದ್ದಾರೆ ಮತ್ತು ಯಾವ್ಯಾವ ಬೆಳೆಗೆ ಎಷ್ಟು ಬೆಂಬಲ ಬೆಲೆ ನೀಡಲಾಗಿದೆ ಎಂಬ ಪಟ್ಟಿಯನ್ನೂ ದೇಶದ ಮುಂದಿರಿಸಿದ್ದಾರೆ. ಈ ಸಾಲಿನಲ್ಲಿ ಕೃಷಿ ಸಾಲದ ಮೊತ್ತವನ್ನು 16.5 ಲಕ್ಷ ಕೋಟಿ ರೂ.ಗೆ ಹಿಗ್ಗಿಸಿದ್ದಾರೆ. ದೇಶದ ಅಭಿವೃದ್ಧಿ ದೃಷ್ಟಿಯಿಂದ, ಈ ಮುಂಗಡಪತ್ರ ಆರು ಸ್ತಂಭಗಳ ಮೇಲೆ ನಿಂತಿದೆ ಎಂದು ಸಚಿವೆ ಹೇಳಿದ್ದಾರೆ. ಕರೊನಾ ಹಿನ್ನೆಲೆಯಲ್ಲಿ ಆರೋಗ್ಯ ರಂಗಕ್ಕೆ ವಿಶೇಷ ಗಮನ ಕೊಡಬಹುದೆಂಬ ನಿರೀಕ್ಷೆ ಸಹಜವಾಗಿಯೇ ಇತ್ತು. ಅದಕ್ಕೆ ತಕ್ಕಂತೆ ಆರೋಗ್ಯ ಮತ್ತು ಯೋಗಕ್ಷೇಮ ಎಂಬ ಪರಿಕಲ್ಪನೆಯಡಿ ಹಣವನ್ನು ಮೀಸಲಿರಿಸಿದ್ದಾರೆ. ಇದರಿಂದ ಸರ್ಕಾರಿ ಆರೋಗ್ಯ ವ್ಯವಸ್ಥೆ ಸುಧಾರಣೆಗೆ ಅನುಕೂಲವಾಗಲಿದೆ. ನೌಕರ ವರ್ಗಕ್ಕೆ ಏನೂ ಕೊಡುಗೆ ಇಲ್ಲವೆಂಬ ಅಸಮಾಧಾನ ವ್ಯಕ್ತವಾಗಿದೆ. ಈ ವರ್ಷ ವಿಧಾನಸಭಾ ಚುನಾವಣೆ ನಡೆಯಲಿಕ್ಕಿರುವ ಕೇರಳ, ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿಗೆ ದೊಡ್ಡ ಮೊತ್ತದ ವಿಶೇಷ ಮೂಲಸೌಕರ್ಯ ಯೋಜನೆಗಳನ್ನು ಪ್ರಕಟಿಸಲಾಗಿದೆ.
ಆರ್ಥಿಕ ಕಂದಕವನ್ನು ತುಂಬಿಕೊಳ್ಳುವ ಉದ್ದೇಶದಿಂದ ಸರ್ಕಾರಿ ಸ್ವಾಮ್ಯದ ಉದ್ದಿಮೆಗಳ ಬಂಡವಾಳ ಹಿಂತೆಗೆತ, ಎಲ್ಐಸಿ ಐಪಿಒ ಬಿಡುಗಡೆ ಹಾಗೂ ಕೆಲ ಗ್ರಾಹಕ ವಸ್ತುಗಳ ಸುಂಕ ಹೆಚ್ಚಳದಂತಹ ಮಾರ್ಗಗಳನ್ನು ಸರ್ಕಾರ ಕಂಡುಕೊಂಡಿದೆ. ಕರೊನಾ ಕಾರಣದಿಂದ ಜನರ ಖರೀದಿ ಶಕ್ತಿ ಕಡಿಮೆಯಾಗಿದೆ. ಹೀಗಿರುವಾಗ ಜನರ ಖರೀದಿ ಸಾಮರ್ಥ್ಯ ಹೆಚ್ಚಳಕ್ಕೆ ಯೋಜನೆ ರೂಪಿಸಬೇಕಿತ್ತು ಎಂಬ ವಾದವೂ ಇದೆ. ಇನ್ನೊಂದೆಡೆ, ವಿತ್ತೀಯ ಕೊರತೆ ಹೆಚ್ಚುತ್ತಿರುವುದು ಸರ್ಕಾರದ ಪಾಲಿಗೆ ತಲೆನೋವಿನ ಸಂಗತಿಯೇ ಸರಿ. ಈ ಕೊರತೆ ಭರಿಸಲು ಸಾಲದ ಪ್ರಮಾಣ ಹೆಚ್ಚಿಸಬೇಕಾಗುತ್ತದೆ. ಈ ನಡುವೆ, ಜನವರಿ ತಿಂಗಳಲ್ಲಿ ಜಿಎಸ್ಟಿ ಸಂಗ್ರಹ 1.20 ಲಕ್ಷ ಕೋಟಿ ರೂ.ಗೆ ಹೆಚ್ಚಿರುವುದು ಸ್ವಲ್ಪ ನೆಮ್ಮದಿಯ ಸಂಗತಿ. ಒಟ್ಟಿನಲ್ಲಿ, ಹಲವು ಮಿತಿಗಳ ನಡುವೆಯೇ ಸರ್ಕಾರ ಕಸರತ್ತು ನಡೆಸಿರುವುದು ಸ್ಪಷ್ಟ.