ಸಂಪಾದಕೀಯ: ಸುರಕ್ಷತೆಗೆ ಸಮಯೋಚಿತ ಹೆಜ್ಜೆ: ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸದಲ್ಲಿ ಸೆಲ್ಫಿ, ರೀಲ್ಸ್​ ನಿಷೇಧ

Editorial | ಸುರಕ್ಷತೆಗೆ ಸಮಯೋಚಿತ ಹೆಜ್ಜೆ
Editorial | ಸುರಕ್ಷತೆಗೆ ಸಮಯೋಚಿತ ಹೆಜ್ಜೆ
Published on
ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು ಕೈಗೊಳ್ಳುವ ಶೈಕ್ಷಣಿಕ ಪ್ರವಾಸಗಳಲ್ಲಿ ವಿದ್ಯಾರ್ಥಿಗಳು ಸೆಲ್ಫಿ ತೆಗೆದುಕೊಳ್ಳುವುದು ಹಾಗೂ ರೀಲ್ಸ್​ ಮಾಡುವುದನ್ನು ಕಾಲೇಜು ಶಿಕ್ಷಣ ಇಲಾಖೆ ಸಂಪೂರ್ಣವಾಗಿ ನಿಷೇಧಿಸಿರುವುದು ಅತ್ಯಂತ ಸೂಕ್ತ ಹಾಗೂ ಸಮಯೋಚಿತ ನಿರ್ಧಾರವಾಗಿದೆ. ಶೈಕ್ಷಣಿಕ ಪ್ರವಾಸಗಳ ಮೂಲ ಉದ್ದೇಶವೇ ತರಗತಿಯಿಂದ ಹೊರಬಂದು ಪ್ರತ್ಯಕ್ಷ ಅನುಭವದ ಮೂಲಕ ಜ್ಞಾನಾರ್ಜನೆ ಮಾಡುವುದು, ಸಂಶೋಧನಾತ್ಮಕ ದೃಷ್ಟಿಕೋನ ಬೆಳೆಸಿಕೊಳ್ಳುವುದು ಹಾಗೂ ಹೊಸ ಪರಿಸರವನ್ನು ಗ್ರಹಿಸುವುದು. ಆದರೆ, ಇತ್ತೀಚಿನ ವರ್ಷಗಳಲ್ಲಿ ಡಿಜಿಟಲ್​ ಯುಗದ ಪ್ರಭಾವದಿಂದಾಗಿ ಶೈಕ್ಷಣಿಕ ಪ್ರವಾಸಗಳು ಜ್ಞಾನಾರ್ಜನೆಯ ಸಂದರ್ಭಗಳಾಗುವ ಬದಲು ಸಾಮಾಜಿಕ ಜಾಲತಾಣಗಳಲ್ಲಿ ಲೈಕ್ಸ್​ ಮತ್ತು ಷೇರ್​ಗಳಿಗಾಗಿ ವಿಡಿಯೋ ಹಂಚಿಕೊಳ್ಳುವ ವೇದಿಕೆಗಳಾಗಿ ಬದಲಾಗುತ್ತಿರುವುದು ಕಳವಳಕಾರಿ. ಈ ಹಿನ್ನೆಲೆಯಲ್ಲಿ ಇಲಾಖೆ ರೂಪಿಸಿರುವ ನೂತನ ಮಾರ್ಗಸೂಚಿಯು ಸಾರ್ವಜನಿಕ ವಲಯದಲ್ಲಿ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.
ಸಾಮಾಜಿಕ ಜಾಲತಾಣಗಳ ಹುಚ್ಚು ಎಷ್ಟರಮಟ್ಟಿಗೆ ಬೆಳೆದಿದೆ ಎಂದರೆ, ಜಲಪಾತಗಳು, ಬೆಟ್ಟ & ಗುಡ್ಡಗಳು, ನದಿ ತೀರಗಳು ಹಾಗೂ ಚಲಿಸುವ ವಾಹನಗಳ ಬಳಿ ಅಪಾಯಕಾರಿ ರೀತಿಯಲ್ಲಿ ನಿಂತು ಸೆಲ್ಫಿ ಹಾಗೂ ರೀಲ್ಸ್​ ಮಾಡುವ ದುಸ್ಸಾಹಸಕ್ಕೆ ಯುವಜನರು ಮುಂದಾಗುತ್ತಿದ್ದಾರೆ. ಕಣ್ರೆಪ್ಪೆ ಬಡಿಯುವುದರೊಳಗೆ ಇವು ಅಪಾಯಗಳಿಗೆ ಹಾದಿಮಾಡಿಕೊಡುತ್ತಿವೆ. ಇದಕ್ಕೆ ಅನೇಕ ಯುವಕರ ಅಮೂಲ್ಯ ಜೀವಗಳು ಈಗಾಗಲೇ ಬಲಿಯಾಗಿವೆ. ಇಂತಹ ಆವಾಂತರಗಳಿಗೆ ಕಡಿವಾಣ ಹಾಕಲು ಇಲಾಖೆಯು ಕಟ್ಟುನಿಟ್ಟಿನ ಕ್ರಮಗಳಿಗೆ ಮುಂದಾಗಿದೆ. ಪ್ರವಾಸಕ್ಕೆ ತೆರಳುವ ಮೊದಲು ವಿದ್ಯಾರ್ಥಿಗಳಿಂದ ಮುಚ್ಚಳಿಕೆ ಪತ್ರ ಹಾಗೂ ಪೋಷಕರ ಒಪ್ಪಿಗೆ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ. ಜತೆಗೆ, ಮಳೆಗಾಲದಲ್ಲಿ ಶೈಕ್ಷಣಿಕ ಪ್ರವಾಸಕ್ಕೆ ಅನುಮತಿ ನೀಡದಿರುವುದು, ಪ್ರವಾಸದ ಅವಧಿಯನ್ನು ಗರಿಷ್ಠ 5 ದಿನಗಳಿಗೆ ಸೀಮಿತಗೊಳಿಸುವುದು ಹಾಗೂ ಆಯಾ ಸ್ಥಳೀಯ ಪೊಲೀಸ್​ ಠಾಣೆಗೆ ಕಡ್ಡಾಯವಾಗಿ ಮುಂಚಿತವಾಗಿಯೇ ಮಾಹಿತಿ ನೀಡಬೇಕೆಂಬ ನಿಯಮಗಳು ವಿದ್ಯಾರ್ಥಿಗಳ ಭದ್ರತೆಯನ್ನು ಹೆಚ್ಚಿಸಲಿವೆ.
ಪ್ರವಾಸದ ಸಮಯದಲ್ಲಿ ವಿದ್ಯಾರ್ಥಿಗಳ ಸುರಕ್ಷತೆಯ ಸಂಪೂರ್ಣ ಜವಾಬ್ದಾರಿ ಉಪನ್ಯಾಸಕರು ಮತ್ತು ಕಾಲೇಜು ಆಡಳಿತ ಮಂಡಳಿಯ ಮೇಲಿರುತ್ತದೆ. ಪ್ರವಾಸಕ್ಕೆ ತೆರಳುವ ತಂಡದೊಂದಿಗೆ ಕಡ್ಡಾಯವಾಗಿ ಖಾಯಂ ಅಧ್ಯಾಪಕರು ಹಾಗೂ ಇಬ್ಬರು ಮಹಿಳಾ ಉಪನ್ಯಾಸಕರು ಇರಬೇಕು ಎಂಬ ನಿಯಮವು ವಿದ್ಯಾರ್ಥಿನಿಯರ ರಕ್ಷಣೆ ಮತ್ತು ಆಡಳಿತಾತ್ಮಕ ಶಿಸ್ತಿಗೆ ಹೆಚ್ಚಿನ ಬಲ ನೀಡುತ್ತದೆ. ಅತಿಥಿ ಉಪನ್ಯಾಸಕರನ್ನಷ್ಟೇ ಕಳುಹಿಸಿ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪರಿಪಾಠಕ್ಕೆ ಇದು ಬ್ರೇಕ್​ ಹಾಕಲಿದೆ. ಶಿಕ್ಷಕರು ಪ್ರವಾಸದ ವೇಳೆ ಕೇವಲ ಮಾರ್ಗದರ್ಶಕರಾಗಿರದೆ, ವಿದ್ಯಾರ್ಥಿಗಳು ಅಪಾಯಕಾರಿ ಸ್ಥಳಗಳಿಗೆ ತೆರಳದಂತೆ ಹಾಗೂ ನಿಯಮಗಳನ್ನು ಮೀರಿ ವರ್ತಿಸದಂತೆ ನಿರಂತರ ನಿಗಾ ವಹಿಸಬೇಕಿದೆ.
ಯುವಜನತೆಯ ಉತ್ಸಾಹ ಮತ್ತು ತಂತ್ರಜ್ಞಾನದ ಬಳಕೆಗೆ ಸಂಪೂರ್ಣ ತಡೆಯೊಡ್ಡುವುದು ಈ ಆದೇಶದ ಉದ್ದೇಶವಲ್ಲ. ಮನರಂಜನೆ ಅಥವಾ ಸಾಮಾಜಿಕ ಜಾಲತಾಣಗಳ ಜನಪ್ರಿಯತೆಗಿಂತ ಜೀವ ಮತ್ತು ಆರೋಗ್ಯದ ರಕ್ಷಣೆ ಮಿಗಿಲಾದುದು. ಶೈಕ್ಷಣಿಕ ಪ್ರವಾಸಗಳು ಕೇವಲ ಪ್ರವಾಸಿ ತಾಣಗಳ ವೀಕ್ಷಣೆಯಾಗದೆ, ಶೈಕ್ಷಣಿಕ ಮೌಲ್ಯಗಳನ್ನು ವೃದ್ಧಿಸುವ ಜ್ಞಾನಯಾತ್ರೆಯಾಗಬೇಕಿದೆ. ಇಲಾಖೆ ರೂಪಿಸಿರುವ ಈ ಕಟ್ಟುನಿಟ್ಟಿನ ನಿಯಮಗಳು ಕೇವಲ ಕಾಗದದ ಮೇಲಷ್ಟೇ ಉಳಿಯಬಾರದು. ರಾಜ್ಯದ ಪ್ರತಿಯೊಂದು ಪ್ರಥಮ ದರ್ಜೆ ಕಾಲೇಜುಗಳ ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಈ ಮಾರ್ಗಸೂಚಿಗಳನ್ನು ಯಾವುದೇ ಲೋಪವಿಲ್ಲದೆ ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ, ವಿದ್ಯಾರ್ಥಿಗಳಿಗೆ ಸುರಕ್ಷಿತ ಹಾಗೂ ಮೌಲ್ಯಯುತ ಕಲಿಕಾ ವಾತಾವರಣವನ್ನು ನಿರ್ಮಿಸಿಕೊಡಬೇಕಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net