ಸಂಪಾದಕೀಯ: ಸಾಮರಸ್ಯದ ಸಂಕೇತ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಭಾರತದ ಸಾಂಸ್ಕೃತಿಕ ಹಾಗೂ ಧಾರ್ವಿುಕ ವೈವಿಧ್ಯತೆಯಲ್ಲಿ ಸಾರ್ವಜನಿಕ ಗಣೇಶೋತ್ಸವಕ್ಕೆ ಅತ್ಯಂತ ವಿಶಿಷ್ಟವಾದ ಸ್ಥಾನವಿದೆ. ದೇಶದ ಸ್ವಾತಂತ್ರ್ಯ ಸಂಗ್ರಾಮದ ಅವಧಿಯಲ್ಲಿ, ಬ್ರಿಟಿಷರ ವಿಭಜನಾ ನೀತಿಯ ವಿರುದ್ಧ ಜನರನ್ನು ಒಂದೇ ವೇದಿಕೆಯಡಿ ಸಂಘಟಿಸಲು ಲೋಕಮಾನ್ಯ ಬಾಲಗಂಗಾಧರ ತಿಲಕರು ಸಾರ್ವಜನಿಕ ಗಣೇಶೋತ್ಸವ ಎಂಬ ಪರಿಕಲ್ಪನೆಗೆ ಚಾಲನೆ ನೀಡಿದರು. ಜಾತಿ, ಮತ, ಧರ್ಮ ಮತ್ತು ಭಾಷೆಯ ಗಡಿಗಳನ್ನು ಮೀರಿ ಪ್ರತಿಯೊಬ್ಬ ಭಾರತೀಯನಲ್ಲೂ ರಾಷ್ಟ್ರೀಯತೆಯ ಭಾವನೆ ಹಾಗೂ ಸಾಮಾಜಿಕ ಸಾಮರಸ್ಯವನ್ನು ಮೂಡಿಸುವುದೇ ಈ ಆಚರಣೆಯ ಮೂಲ ಉದ್ದೇಶವಾಗಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಗಣೇಶೋತ್ಸವದ ಮೆರವಣಿಗೆಗಳು ಹಲವೆಡೆ ಸಂಘರ್ಷ, ಅಶಾಂತಿ ಮತ್ತು ಕೋಮು ಉದ್ವಿಗ್ನತೆಗಳಿಗೆ ಕಾರಣವಾಗುತ್ತಿರುವುದು ಖೇದಕರ ಸಂಗತಿಯಾಗಿದೆ.
ವಿಘ್ನನಿವಾರಕನ ಆರಾಧನೆ ಯಾವ ಕಾರಣಕ್ಕೂ ವಿಘ್ನ ಸೃಷ್ಟಿಗೆ ಹಾದಿ ಮಾಡಿಕೊಡಬಾರದು. ಗಣೇಶ ಮೂರ್ತಿಯ ಪ್ರತಿಷ್ಠಾಪನೆಯಿಂದ ಹಿಡಿದು ವಿಸರ್ಜನಾ ಮೆರವಣಿಗೆಯವರೆಗೆ ವಿವಿಧ ಕಾರಣಗಳಿಂದ ಅಲ್ಲಲ್ಲಿ ಸಣ್ಣಪುಟ್ಟ ಘರ್ಷಣೆಗಳು ನಡೆದು, ಕೊನೆಗೆ ಅವು ದೊಡ್ಡ ಮಟ್ಟದ ಗಲಭೆಗಳಾಗಿ ರೂಪಾಂತರಗೊಂಡ ಉದಾಹರಣೆಗಳು ನಮ್ಮ ಕಣ್ಮುಂದೆಯೇ ಇವೆ. ಮೆರವಣಿಗೆ ಮೇಲೆ ದುಷ್ಕರ್ವಿುಗಳಿಂದ ವಿನಾಕಾರಣ ಕಲ್ಲೆಸೆತ, ಎದುರಾಳಿ ಗುಂಪುಗಳನ್ನು ಕೆರಳಿಸುವ ಉದ್ದೇಶದಿಂದ ಪ್ರಚೋದನಕಾರಿ ಗೀತೆಗಳನ್ನು ಹಾಕುವುದು ಮುಂತಾದವು ಇಂತಹ ಅನಾಹುತಗಳಿಗೆ ಕಾರಣವಾಗುತ್ತಿವೆ. ಭಕ್ತಿ, ಶ್ರದ್ಧೆ ಹಾಗೂ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಪ್ರತಿಬಿಂಬಿಸುವುದಷ್ಟೇ ಉದ್ದೇಶವಾಗಿರಬೇಕು.
ಕಲಹಗಳಿಂದ ಅಂತಿಮವಾಗಿ ನಷ್ಟ ಅನುಭವಿಸುವುದು ಸಾರ್ವಜನಿಕರೇ. ಗಲಾಟೆಗಳು ನಡೆದಾಗ ನಿಷೇಧಾಜ್ಞೆ ಜಾರಿಯಾಗಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿ, ಯುವಕರ ಮೇಲೆ ಕ್ರಿಮಿನಲ್ ಪ್ರಕರಣಗಳು ದಾಖಲಾಗಿ ಅವರ ಭವಿಷ್ಯ ಹಾಳಾಗುತ್ತದೆ. ದಶಕಗಳಿಂದ ಅನ್ಯೋನ್ಯವಾಗಿ ಬಾಳುತ್ತಿರುವ ನೆರೆಹೊರೆಯವರ ನಡುವೆ ಅನುಮಾನ ಮತ್ತು ದ್ವೇಷದ ಗೋಡೆಗಳು ಎದ್ದುನಿಲ್ಲುತ್ತವೆ. ಸಾಮಾಜಿಕ ಸೌಹಾರ್ದ ಹಾಳಾಗುತ್ತದೆ. ಹಬ್ಬ ಮುಗಿದುಹೋದರೂ ಸಮಾಜದಲ್ಲಿ ಉಳಿಯುವ ಈ ದ್ವೇಷದ ಗಾಯಗಳು ಮಾಯಲು ವರ್ಷಗಳೇ ಬೇಕಾಗುತ್ತವೆ. ಗಣೇಶೋತ್ಸವದ ಹೆಸರಿನಲ್ಲಿ ಸಮಾಜದ ಶಾಂತಿ ಕದಡುವುದು ದೇವರಿಗೇ ಮಾಡುವ ಅಪಚಾರ.
ಪೊಲೀಸರು ಹಾಗೂ ಜಿಲ್ಲಾಡಳಿತಗಳು ಘಟನೆ ನಡೆದ ಮೇಲೆ ಕ್ರಮ ಕೈಗೊಳ್ಳುವುದಕ್ಕೆ ಮುಂದಾಗದೆ, ಮೊದಲೇ ಕಡ್ಡಾಯವಾಗಿ ಶಾಂತಿ ಸಮಿತಿ ಸಭೆಗಳನ್ನು ನಡೆಸಬೇಕು. ಗಲಾಟೆಗೆ ಕಾರಣವಾಗುವ ಎರಡೂ ಕಡೆಯ ಯುವಕರನ್ನು ಠಾಣೆಗೆ ಕರೆಸಿ ಎಚ್ಚರಿಕೆ ನೀಡಬೇಕು. ಮೆರವಣಿಗೆಯ ಮಾರ್ಗ ಮತ್ತು ಧ್ವನಿವರ್ಧಕಗಳ ಬಳಕೆಯ ಕುರಿತು ಕೂಡ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಬೇಕು. ಈ ವಿಷಯದಲ್ಲಿ ಯಾವುದೇ ರಾಜಕೀಯ ಅಥವಾ ಒತ್ತಡಗಳಿಗೆ ಮಣಿಯದೆ ತಪ್ಪು ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಗಣೇಶೋತ್ಸವ ಮಂಡಳಿಗಳು, ಆಯೋಜಕರು ಕೂಡ ಈ ವಿಷಯದಲ್ಲಿ ಎಚ್ಚರ ವಹಿಸಬೇಕು. ಸಾರ್ವಜನಿಕ ಕಾರ್ಯಕ್ರಮ ರೂಪಿಸುವಾಗ ಕಾನೂನು ಪಾಲನೆ ಹಾಗೂ ಸಾರ್ವಜನಿಕ ಹಿತಾಸಕ್ತಿಗೆ ಪ್ರಥಮ ಆದ್ಯತೆ ನೀಡಬೇಕು. ಮೆರವಣಿಗೆಯಲ್ಲಿ ಭಾಗವಹಿಸುವ ಯುವಕರು ಪ್ರಚೋದನೆಗಳಿಗೆ ಅವಕಾಶ ನೀಡದಂತೆ ನಿಗಾ ವಹಿಸಬೇಕು. ಹಬ್ಬಗಳು ಸಮಾಜವನ್ನು ಜೋಡಿಸಲಿ, ಸಾಮರಸ್ಯ ಹೆಚ್ಚಿಸಲಿ. ಗಣೇಶೋತ್ಸವದ ಪಾವಿತ್ರ್ಯ ಮತ್ತು ಆಶಯವನ್ನು ಎತ್ತಿಹಿಡಿಯುವುದು ಎಲ್ಲರ ಕರ್ತವ್ಯ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net