ಸಂಪಾದಕೀಯ; ರಾಷ್ಟ್ರೀಯ ಭದ್ರತೆಗೆ ಸವಾಲು

Untitled design
Published on

ಬಿಹಾರದಲ್ಲಿ ಚುನಾವಣೆಯ ಹೊಸ್ತಿಲಲ್ಲಿ ನಡೆದಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯು ಇದೀಗ ದೇಶದ ಚುನಾವಣಾ ವ್ಯವಸ್ಥೆಯಲ್ಲಿರುವ ದೌರ್ಬಲ್ಯವನ್ನು ಬಹಿರಂಗಪಡಿಸಿದೆ. ಕೆಲವು ದಿನಗಳಿಂದ ನಡೆಯುತ್ತಿರುವ ಈ ಪರಿಶೀಲನೆಯ ವೇಳೆ ಬಾಂಗ್ಲಾದೇಶ, ಮಯನ್ಮಾರ್ ಮತ್ತು ನೇಪಾಳದಂತಹ ನೆರೆ ರಾಷ್ಟ್ರಗಳ ಪ್ರಜೆಗಳ ಹೆಸರುಗಳು ಮತದಾರರ ಪಟ್ಟಿಯಲ್ಲಿ ನೋಂದಣಿ ಆಗಿರುವುದು ಬೆಳಕಿಗೆ ಬಂದಿದೆ. ಇದು ದೇಶಾದ್ಯಂತ ಸಂಚಲನ ಮೂಡಿಸಿದ್ದು, ಆತಂಕಕ್ಕೂ ಕಾರಣವಾಗಿದೆ. ಕೇವಲ ಬಿಹಾರಕ್ಕೆ ಸೀಮಿತವಾದ ಸಮಸ್ಯೆಯಿದು ಎಂಬುದಾಗಿ ಯಾರೂ ಭಾವಿಸಬೇಕಿಲ್ಲ. ರಾಷ್ಟ್ರೀಯ ಭದ್ರತೆ, ಚುನಾವಣಾ ಪ್ರಕ್ರಿಯೆಯ ಪಾರದರ್ಶಕತೆ ಮತ್ತು ಗಡಿಭಾಗದ ರಾಜ್ಯಗಳ ಸುರಕ್ಷತೆಗೆ ಸಂಬಂಧಿಸಿದ ದೊಡ್ಡ ಸವಾಲು ಇದಾಗಿದೆ. ಮತದಾರರ ಪಟ್ಟಿಯಲ್ಲಿ ವಿದೇಶೀಯರ ಹೆಸರುಗಳ ಸೇರ್ಪಡೆ ಭಾರತದ ಚುನಾವಣಾ ವ್ಯವಸ್ಥೆಯ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸುವಂತೆ ಮಾಡುತ್ತದೆ. ಇಂತಹ ಅಕ್ರಮಗಳು ಕೇವಲ ಆಡಳಿತಾತ್ಮಕ ಲೋಪಗಳಲ್ಲ, ಬದಲಿಗೆ ದೇಶದ ಒಳಗಿನ ಭದ್ರತೆಗೆ ಧಕ್ಕೆ ತರುವ ಬೆದರಿಕೆಗಳು.

ಬಿಹಾರದಂತಹ ಸೂಕ್ಷ್ಮ ಪ್ರದೇಶಗಳಲ್ಲಿ ಇಂತಹ ಘಟನೆಗಳು ಸಂಭವಿಸಿರುವುದು, ಇತರ ಗಡಿರಾಜ್ಯಗಳಾದ ಪಶ್ಚಿಮ ಬಂಗಾಳ, ಅಸ್ಸಾಂ, ಅರುಣಾಚಲ ಪ್ರದೇಶ ಮತ್ತು ಇತರ ರಾಜ್ಯಗಳಲ್ಲಿಯೂ ಈ ರೀತಿ ಇರುವ ಸಾಧ್ಯತೆಯನ್ನು ತಳ್ಳಿಹಾಕಲು ಆಗದಂತೆ ಮಾಡಿದೆ. ಈ ಹಿನ್ನೆಲೆಯಲ್ಲಿ, ದೇಶಾದ್ಯಂತ ಮತದಾರರ ಪಟ್ಟಿಯ ಸಮಗ್ರ ಮತ್ತು ತೀವ್ರ ಪರಿಶೀಲನೆಯ ಅಗತ್ಯ ಎದುರಾಗಿದೆ. ಸಮಸ್ಯೆಯ ಮೂಲವನ್ನು ಗುರುತಿಸಿ, ಅಕ್ರಮವಾಗಿ ಸೇರ್ಪಡೆಯಾದ ಹೆಸರುಗಳನ್ನು ತೆಗೆದುಹಾಕುವುದು, ಜೊತೆಗೆ ಇಂತಹ ಘಟನೆಗಳು ಮರುಕಳಿಸದಂತೆ ತಡೆಗಟ್ಟಲು ಕಠಿಣ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯ. ಇದಕ್ಕಾಗಿ, ಚುನಾವಣಾ ಆಯೋಗ ದೇಶಾದ್ಯಂತ ಒಂದು ಏಕರೂಪದ ಮತ್ತು ಕಟ್ಟುನಿಟ್ಟಾದ ಪರಿಶೀಲನಾ ಪ್ರಕ್ರಿಯೆಯನ್ನು ಕೈಗೊಳ್ಳಬೇಕು. ಮತದಾರರ ಗುರುತಿನ ದಾಖಲೆಗಳ ಪರಿಶೀಲನೆಯಲ್ಲಿ ಆಧಾರ್ ಕಾರ್ಡ್, ಪಾಸ್​ಪೋರ್ಟ್ ಅಥವಾ ಇತರ ದೃಢೀಕೃತ ದಾಖಲೆಗಳನ್ನು ಕಡ್ಡಾಯಗೊಳಿಸುವ ಮೂಲಕ ಈ ಪ್ರಕ್ರಿಯೆಯನ್ನು ಇನ್ನಷ್ಟು ಬಲಪಡಿಸಬಹುದು. ಇದರ ಜೊತೆಗೆ, ಈ ಸಮಸ್ಯೆಗೆ ಕಾರಣವಾಗಿರುವ ಸಂಭಾವ್ಯ ಆಡಳಿತಾತ್ಮಕ ಲೋಪಗಳು ಮತ್ತು ಭ್ರಷ್ಟಾಚಾರದ ಸಾಧ್ಯತೆಯನ್ನು ಸಹ ಗಂಭೀರವಾಗಿ ಪರಿಗಣಿಸಬೇಕು. ಸ್ಥಳೀಯ ಆಡಳಿತದಲ್ಲಿ ಇಂತಹ ಲೋಪಗಳಿಗೆ ಕಾರಣವಾದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿದ್ದರೆ, ಇದು ಅನೂಚಾನವಾಗಿ ಮುಂದುವರಿಯುವ ಸಾಧ್ಯತೆಯಿದೆ. ಇದಕ್ಕಾಗಿ ರಾಷ್ಟ್ರ ಮಟ್ಟದಲ್ಲಿ ಒಂದು ಪಾರದರ್ಶಕ, ಜವಾಬ್ದಾರಿಯುತ ವ್ಯವಸ್ಥೆ ರೂಪಿಸಬೇಕಿದೆ.

ಚುನಾವಣೆಯಲ್ಲಿ ವಿದೇಶಿ ಪ್ರಜೆಗಳ ಹಸ್ತಕ್ಷೇಪ ಸರ್ವಥಾ ಸಲ್ಲದು. ಇದನ್ನು ತಡೆಯಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು. ಇಲ್ಲದಿದ್ದರೆ, ಭಾರತದ ಚುನಾವಣಾ ವ್ಯವಸ್ಥೆಯ ವಿಶ್ವಾಸಾರ್ಹತೆ ಮತ್ತು ರಾಷ್ಟ್ರೀಯ ಭದ್ರತೆಗೆ ಹಾನಿ ಖಚಿತ. ರಾಜಕೀಯ ಒತ್ತಡಗಳಿಗೆ ಮಣಿಯದೆ, ಚುನಾವಣಾ ಆಯೋಗ ತನ್ನ ಸ್ವಾತಂತ್ರ್ಯ ಉಳಿಸಿಕೊಂಡು, ಈ ಸಮಸ್ಯೆಯನ್ನು ಮೂಲೋತ್ಪಾಟನೆ ಮಾಡಲು ಕಾರ್ಯತಂತ್ರ ರೂಪಿಸಲಿ. ಇದು ಭಾರತದ ಪ್ರಜಾಪ್ರಭುತ್ವದ ಸಮಗ್ರತೆಯನ್ನು ಕಾಪಾಡುವ ದಿಸೆಯಲ್ಲಿ ಒಂದು ಪ್ರಮುಖ ಹೆಜ್ಜೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net