ಸಂಪಾದಕೀಯ| ಫಲಿತಾಂಶದ ಸಂದೇಶಗಳು: ಗುಣಮಟ್ಟದ ತರಬೇತಿ ಫಲ ನೀಡಿದೆ

Editorial
Published on

ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್​ಸಿ) 2021ನೇ ಸಾಲಿನ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, ಹಲವು ಸಂದೇಶಗಳನ್ನು ರವಾನಿಸಿದೆ. ಭಾರತೀಯ ಆಡಳಿತ ಸೇವೆ (ಐಎಎಸ್), ಭಾರತೀಯ ವಿದೇಶಾಂಗ ಸೇವೆ (ಐಎಫ್​ಎಸ್), ಭಾರತೀಯ ಪೊಲೀಸ್ ಸೇವೆ (ಐಪಿಎಸ್), ಕೇಂದ್ರ ಸೇವೆಗಳು, ಗ್ರೂಪ್ ಬಿ ಮತ್ತು ಸಿ ಹುದ್ದೆಗಳಿಗೆ ಒಟ್ಟಾರೆ 685 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. 800ಕ್ಕೂ ಅಧಿಕ ಹುದ್ದೆಗಳು ಖಾಲಿ ಇದ್ದವು ಎಂಬುದು ಗಮನಾರ್ಹ. ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಬಾಲಕಿಯರು ಮೇಲುಗೈ ಸಾಧಿಸುವುದು ವಾಡಿಕೆ ಎಂಬಂತಾಗಿದೆ. ಆದರೆ, ಈ ಬಾರಿ ಯುಪಿಎಸ್​ಸಿ ಪರೀಕ್ಷೆಯಲ್ಲೂ ಮಹಿಳೆಯರೇ ಮೊದಲ ಮೂರು ಸ್ಥಾನಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಕರ್ನಾಟಕದಿಂದ ಕಳೆದ ವರ್ಷ 30 ಅಭ್ಯರ್ಥಿಗಳು ಆಯ್ಕೆಯಾಗಿದ್ದರು, ಅದರ ಹಿಂದಿನ ವರ್ಷ 27 ಅಭ್ಯರ್ಥಿಗಳು ಆಯ್ಕೆಯಾಗಿದ್ದರು. ಆದರೆ ಈ ವರ್ಷ ಕರ್ನಾಟಕದ ಪಾಲು ಸ್ವಲ್ಪ ಕಡಿಮೆಯಾಗಿದ್ದು, 25 ಅಭ್ಯರ್ಥಿಗಳು ಮಾತ್ರ ರ್ಯಾಂಕ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಅದೇನಿದ್ದರೂ, ನಾಗರಿಕ ಸೇವೆಗಳತ್ತ ಯುವಸಮೂಹದ ಒಲವು ಹೆಚ್ಚುತ್ತಿರುವುದು ಸಕಾರಾತ್ಮಕ ಬೆಳವಣಿಗೆ. ವ್ಯವಸ್ಥೆ ಶುದ್ಧೀಕರಣದ ಪ್ರಕ್ರಿಯೆ ಶುರುವಾಗುವುದೇ ಆಡಳಿತ ಸೇವೆಗಳ ಮೂಲಕ. ಇದು ಯಶಸ್ವಿಯಾಗಬೇಕಾದರೆ ದಕ್ಷ, ಪ್ರಾಮಾಣಿಕ ಅಧಿಕಾರಿವರ್ಗ ಬೇಕು. ಕೆಲ ವರ್ಷಗಳ ಹಿಂದಿನ ನಿದರ್ಶನವನ್ನೇ ತೆಗೆದುಕೊಂಡರೆ ಯುವಕರು ಕೆಲವೇ ವೃತ್ತಿಗಳತ್ತ ಆಕರ್ಷಿತರಾಗುತ್ತಿದ್ದರು. ಅಲ್ಲಿ ಅತಿಯಾದ ಸ್ಪರ್ಧೆ ಏರ್ಪಟ್ಟು, ವಿಚಿತ್ರ ಒತ್ತಡವೂ ಏರ್ಪಡುತ್ತಿತ್ತು. ಇಂಜಿನಿಯರ್ ಅಥವಾ ವೈದ್ಯನಾದರೆ ಮಾತ್ರ ಬದುಕು ಎಂಬಂಥ ಚಿತ್ತಸ್ಥಿತಿ ಈಗ ಬದಲಾಗುತ್ತಿದೆ, ವ್ಯವಸ್ಥೆಯನ್ನು ದೂಷಿಸುತ್ತ ಕೂರುವ ಬದಲು, ತಾವೇ ವ್ಯವಸ್ಥೆ ಬದಲಾವಣೆಯ ಭಾಗವಾಗಬೇಕು, ಇದಕ್ಕಾಗಿ ಆಯಕಟ್ಟಿನ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತ ಪರಿವರ್ತನೆ ತರಬೇಕು ಎಂಬ ಮನೋಭಾವ ಹೆಚ್ಚುತ್ತಿದೆ. ಅದೆಷ್ಟೋ ಜನರು ಯುಪಿಎಸ್​ಸಿ ಪರೀಕ್ಷೆಗಾಗಿ ಭಾರಿ ಶ್ರಮ, ಬದ್ಧತೆಯೊಂದಿಗೆ ತಯಾರಿ ನಡೆಸಿದ್ದಾರೆ. ಆರ್ಥಿಕವಾಗಿ ಹಿಂದುಳಿದ ಕುಟುಂಬದ ಯುವಕ/ಯುವತಿಯರು ಗಮನ ಸೆಳೆಯುವಂಥ ಸಾಧನೆ ಮಾಡುತ್ತಿದ್ದು, ಪ್ರತಿಭೆ ಇದ್ದಲ್ಲಿ ಭೌತಿಕ ಬಡತನಕ್ಕೆ ಹೆದರಬೇಕಿಲ್ಲ ಎಂಬುದನ್ನು ರುಜುವಾತು ಮಾಡಿದ್ದಾರೆ. ಅಷ್ಟೇ ಅಲ್ಲ, ಇತ್ತೀಚಿನ ವರ್ಷಗಳಲ್ಲಿ ಯುಪಿಎಸ್​ಸಿ ಪರೀಕ್ಷೆಗೆ ಸಜ್ಜುಗೊಳ್ಳಲು ಸೂಕ್ತ ತರಬೇತಿ ಸಿಗುತ್ತಿದ್ದು, ಗ್ರಾಮೀಣ ಪ್ರದೇಶದವರಿಗೂ ವರದಾನವಾಗಿ ಪರಿಣಮಿಸಿದೆ. ಮೊದಲು ದೆಹಲಿ, ಮುಂಬೈಯಂಥ ಪ್ರತಿಷ್ಠಿತ ನಗರಗಳಲ್ಲಿ ಮಾತ್ರ ತರಬೇತಿ ಕೇಂದ್ರಗಳು ಇದ್ದವು. ಈಗ ರಾಜ್ಯದ ಉದಾಹರಣೆಯನ್ನೇ ತೆಗೆದುಕೊಂಡರೆ, ಬೆಂಗಳೂರು, ಹುಬ್ಬಳ್ಳಿ-ಧಾರವಾಡ ಸೇರಿ ಹಲವೆಡೆ ತರಬೇತಿ ಲಭ್ಯವಾಗುತ್ತಿದೆ. ಈಗ ವಿವಿಧ ನಾಗರಿಕ ಸೇವೆಗಳಿಗೆ ಆಯ್ಕೆಯಾಗಿರುವ ಅಭ್ಯರ್ಥಿಗಳು ಕಾರ್ಯದಕ್ಷತೆಯಿಂದ ಗಮನ ಸೆಳೆಯಬೇಕಿದೆ. ಆಡಳಿತಶಾಹಿಯಲ್ಲಿನ ಅಪಸವ್ಯಗಳನ್ನು ದೂರಮಾಡುವ ಜತೆಗೆ, ಆಡಳಿತಯಂತ್ರಕ್ಕೆ ಸುಧಾರಣೆಯ ಸ್ಪರ್ಶ ನೀಡುವ ಹೊಣೆಗಾರಿಕೆಯೂ ಇದೆ. ಈ ಬಾರಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದವರು, ನಿರಾಶರಾಗದೆ ಮತ್ತೊಂದು ಪ್ರಯತ್ನಕ್ಕೆ ಕೈಹಾಕಿದ್ದಲ್ಲಿ ಯಶಸ್ಸು ಒಲಿಯುವುದು ಕಷ್ಟವೇನಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net