

ಕರ್ನಾಟಕದಲ್ಲಿ 2023ರಲ್ಲಿ ವಿಧಾನಸಭೆ ಚುನಾವಣೆ ನಡೆಯಲಿಕ್ಕಿದೆ. ಎಲ್ಲ ರಾಜಕೀಯ ಪಕ್ಷಗಳ ಚಿತ್ತ ಕ್ರಮೇಣ ಅತ್ತ ಹರಿಯುತ್ತಿದೆ. ಆಡಳಿತಾರೂಢ ಬಿಜೆಪಿಗೆ ‘ದಕ್ಷಿಣದ ಹೆಬ್ಬಾಗಿಲು’ ಎನಿಸಿಕೊಂಡ ಕರ್ನಾಟಕದಲ್ಲಿ ಮತ್ತೆ ಅಧಿಕಾರ ಹಿಡಿಯಬೇಕಾದ ಪ್ರತಿಷ್ಠೆಯಿದ್ದರೆ, ಪ್ರತಿಪಕ್ಷ ಕಾಂಗ್ರೆಸ್ಸಿಗೆ ಕೈತಪ್ಪಿದ ಅಧಿಕಾರವನ್ನು ಮರಳಿ ವಶಮಾಡಿಕೊಳ್ಳುವ ಹವಣಿಕೆ. ಇನ್ನು ಜೆಡಿಎಸ್ ಸಹ ಅವಕಾಶಕ್ಕಾಗಿ ಕಾದಿದೆ. ಹೀಗಾಗಿ ರಾಜಕಾರಣದ ಮೂಡ್ ನಿಧಾನಕ್ಕೆ ಚುನಾವಣೆಯತ್ತ ಹೊರಳುತ್ತಿದೆ. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬಿಜೆಪಿ ಅಧಿಕಾರ ಹಿಡಿಯಿತಾದರೂ ಅದು ಎಣಿಸಿದಂತೆ ಆಡಳಿತವನ್ನು ನೀಡಲು ಆಗುತ್ತಿಲ್ಲ ಎಂಬುದು ವಾಸ್ತವ. ಇದಕ್ಕೆ ಬೇರೆ ಬೇರೆ ಕಾರಣಗಳಿದ್ದರೂ ಇನ್ನಾದರೂ ಆಡಳಿತಕ್ಕೆ ಚುರುಕುಮುಟ್ಟಿಸಿ ಜನಸಾಮಾನ್ಯರಿಗೆ ಸರ್ಕಾರದ ಬಗ್ಗೆ ಸದಭಿಪ್ರಾಯ ಮೂಡುವಂತೆ ಮಾಡದಿದ್ದರೆ ಚುನಾವಣೆಯಲ್ಲಿ ಅದು ಪರಿಣಾಮ ಬೀರುವುದು ಖಚಿತ.
ರಾಜ್ಯದಲ್ಲಿ ನಡೆಯುವ ಸರ್ಕಾರಿ ಕಾಮಗಾರಿಗಳಲ್ಲಿ ಶೇ.40 ಪರ್ಸೆಂಟೇಜ್ ಆರೋಪ ಮಾಡಿ ಗುತ್ತಿಗೆದಾರರ ಸಂಘ ನೇರವಾಗಿ ಪ್ರಧಾನಿಗೇ ದೂರು ನೀಡಿತ್ತು. ಆಡಳಿತ ಪಕ್ಷದ ಪ್ರಮುಖರು ಈ ಆರೋಪವನ್ನು ನಿರಾಕರಿಸಿದರಾದರೂ ಸಾಕಷ್ಟು ಹಾನಿಯಂತೂ ಆಯಿತು. ಇನ್ನು, ಪಕ್ಷದ ಆಂತರಿಕ ವಲಯದಲ್ಲಿನ ಬೆಳವಣಿಗೆಗಳು ಬೇರೆಯದೇ ಸಂದೇಶ ನೀಡುವಂತಿವೆ. ಆಡಳಿತ ನಿರೀಕ್ಷಿತ ವೇಗದಲ್ಲಿ ನಡೆಯುತ್ತಿಲ್ಲ ಎಂಬ ಭಾವನೆ ಜನರಲ್ಲಿರುವುದು ಸಹ ನಿಜ. ಈ ಎಲ್ಲ ಅಂಶಗಳನ್ನು ವಿರೋಧ ಪಕ್ಷಗಳು ಎತ್ತಿತೋರಿಸಿ ಜನಬೆಂಬಲ ಪಡೆಯಲು ಯತ್ನಿಸುವುದು ಸಹಜ. ಈ ಸಂಗತಿಗಳನ್ನು ಮನಗಂಡಿರುವ ಬಿಜೆಪಿ ಹೈಕಮಾಂಡ್, ಪರಿಸ್ಥಿತಿ ಹೀಗೇ ಮುಂದುವರಿದರೆ ಚುನಾವಣೆ ಎದುರಿಸುವುದು ಕಷ್ಟ ಎಂಬ ತೀರ್ವನಕ್ಕೆ ಬಂದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಆಡಳಿತಕ್ಕೆ ಸಂಬಂಧಿಸಿದಂತೆ ಕೆಲ ಸಲಹೆ-ಸೂಚನೆಗಳನ್ನು ನೀಡಿದೆ ಎಂಬ ಮಾಹಿತಿ ಲಭಿಸಿದೆ. ಭ್ರಷ್ಟಾಚಾರದ ವಿರುದ್ಧ ಕ್ರಮವಾಗಬೇಕು; ಅದಕ್ಷ, ಜಡ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವ ಬಗ್ಗೆ ಪರಿಶೀಲಿಸಬೇಕು ಎಂಬಿತ್ಯಾದಿ ಕಿವಿಮಾತು ಪಕ್ಷದ ವರಿಷ್ಠರಿಂದ ರವಾನೆಯಾಗಿವೆಯಂತೆ. ಕೇಂದ್ರ ಸರ್ಕಾರ ಅದಕ್ಷ ಅಧಿಕಾರಿಗಳನ್ನು ವಜಾಮಾಡುವ ಹೆಜ್ಜೆಯನ್ನೂ ತೆಗೆದುಕೊಂಡಿದ್ದು ಇಲ್ಲಿ ಉಲ್ಲೇಖನೀಯ. ಆ ಮಾದರಿ ರಾಜ್ಯದಲ್ಲೂ ಬರಲಿ ಎಂಂಬುದು ವರಿಷ್ಠರ ಅಪೇಕ್ಷೆ. ಇದರಿಂದ ಸರ್ಕಾರ ಮತ್ತು ಪಕ್ಷದ ಬಗ್ಗೆ ಜನರಲ್ಲಿ ಸಕಾರಾತ್ಮಕ ಇಮೇಜ್ ಬೆಳೆಯುತ್ತದೆ ಎಂಬುದು ಅವರ ಲೆಕ್ಕಾಚಾರ.
ಆಡಳಿತ ಯಂತ್ರವನ್ನು ಸಕ್ರಿಯಗೊಳಿಸುವ ಉದ್ದೇಶದಿಂದ ಮುಖ್ಯಮಂತ್ರಿ ಬೊಮ್ಮಾಯಿ, ಗುರುವಾರ ಮತ್ತು ಶುಕ್ರವಾರ ಎಲ್ಲ ಜಿಲ್ಲೆಗಳ ಡಿಸಿಗಳು ಜಿಲ್ಲಾ ಪಂಚಾಯಿತಿಗಳ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಸಭೆ ನಡೆಸಲಿದ್ದಾರೆ. ಕೇಂದ್ರ ಸರ್ಕಾರದ ಪ್ರಾಯೋಜಿತ ಯೋಜನೆಗಳ ಪ್ರಗತಿಯ ಪರಿಶೀಲನೆಯೂ ನಡೆಯಲಿದೆ. ಕಾಲಮಿತಿಯಲ್ಲಿ ಯೋಜನೆಗಳನ್ನು ಪೂರ್ಣಗೊಳಿಸುವುದು, ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಜನರಿಗೆ ತಲುಪಿಸುವುದು ಮುಂತಾದ ವಿಷಯಗಳ ಬಗ್ಗೆ ಅಧಿಕಾರಿಗಳಿಗೆ ಸಿಎಂ ನಿರ್ದೇಶನಗಳನ್ನು ನೀಡಲಿದ್ದಾರೆ. ಸರ್ಕಾರದ ಯೋಜನೆಗಳನ್ನು ಸರಿಯಾಗಿ ತಲುಪಿಸುವಲ್ಲಿ ಅಧಿಕಾರಿಗಳ ಪಾತ್ರ ಮಹತ್ವವಾದುದು. ಆದರೆ ಇವೆಲ್ಲ ಕೇವಲ ಮಾತಿಗೆ ಸೀಮಿತವಾಗದೆ ಕೃತಿಯಲ್ಲಿ ಬಂದಾಗ ಮಾತ್ರ ಜನರಿಗೆ ಸುಗಮ ಆಡಳಿತ ಅನುಭವಕ್ಕೆ ಬರುತ್ತದೆ ಮತ್ತು ಸರ್ಕಾರದ ಇಮೇಜ್ ಸಹ ಹೆಚ್ಚುತ್ತದೆ. ಅಂಥದೊಂದು ಇಚ್ಛಾಶಕ್ತಿಯನ್ನು ಪ್ರದರ್ಶಿಸಬೇಕಷ್ಟೆ.