ವ್ಯವಸ್ಥೆ ಕುಸಿಯದಿರಲಿ; ಪರೀಕ್ಷೆ, ನೇಮಕಾತಿ ಪ್ರಕ್ರಿಯೆಗಳು ಪಾರದರ್ಶಕವಾಗಿ ನಡೆಯಬೇಕು..

Editorial
Published on

‘545 ಪಿಎಸ್​ಐ ಹುದ್ದೆ ನೇಮಕಾತಿಗೆ ಮರುಪರೀಕ್ಷೆ ನಡೆಸಲಾಗುವುದು. ಆರೋಪಿಗಳ ಹೊರತಾಗಿ ಇತರ ಅಭ್ಯರ್ಥಿಗಳು ಪರೀಕ್ಷೆ ಬರೆಯಬಹುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ಶುಕ್ರವಾರ ಘೋಷಿಸಿದ್ದಾರೆ. ಈ ನಿರ್ಣಯಕ್ಕೆ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಮುಖ್ಯವಾಗಿ, ನಿಷ್ಠೆಯಿಂದ ಕಷ್ಟಪಟ್ಟು ಓದಿ, ಪ್ರಾಮಾಣಿಕವಾಗಿ ಪರೀಕ್ಷೆ ಬರೆದು, ಆಯ್ಕೆಯಾದ ಅಭ್ಯರ್ಥಿಗಳು ಇದು ತಮಗಾದ ತೀವ್ರ ಅನ್ಯಾಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಕ್ರಮದ ವ್ಯಾಪಕತೆಯನ್ನು ಪರಿಶೀಲಿಸಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಸರ್ಕಾರ ಹೇಳಿದೆಯಾದರೂ, ಉದ್ಯೋಗ ನಿರೀಕ್ಷೆಯಲ್ಲಿದ್ದ ಪ್ರಾಮಾಣಿಕ ಅಭ್ಯರ್ಥಿಗಳು ಇದರಿಂದ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಮತ್ತೊಮ್ಮೆ ಪರೀಕ್ಷೆಗಾಗಿ ಓದಿ, ಪೂರಕ ಸಿದ್ಧತೆ ಮಾಡಿಕೊಂಡು ಬರೆಯಬೇಕು. ಇದಕ್ಕೆ ಶ್ರಮ, ಸಮಯ ಎರಡೂ ವ್ಯಯವಾಗಲಿದೆ. ಪರೀಕ್ಷೆಯಲ್ಲಿ ವ್ಯಾಪಕ ಅಕ್ರಮ ಪ್ರಕರಣ ಸಂಬಂಧ ಹಲವು ಆರೋಪಿಗಳ ಬಂಧನವೂ ಆಗಿದೆ. ಆದರೆ, ಹೊಸದಾಗಿ ಪರೀಕ್ಷೆ ನಡೆದರೂ ಮತ್ತೆ ಇಂಥ ಅಕ್ರಮ ನಡೆಯುವುದಿಲ್ಲ, ಹಣ, ವರ್ಚಸ್ಸಿನ ಜಾಲದಿಂದ ನೇಮಕಾತಿ ಪ್ರಕ್ರಿಯೆಯ ದಿಕ್ಕು ತಪು್ಪವುದಿಲ್ಲ ಎಂಬುದಕ್ಕೆ ಏನು ಖಾತ್ರಿ? ಅಂದರೆ, ಇಲ್ಲಿ ಪ್ರಶ್ನೆ ಮತ್ತು ಸವಾಲು ಇರುವುದು ವ್ಯವಸ್ಥೆ ಶುದ್ಧೀಕರಣದ ಬಗ್ಗೆ. ಸರ್ಕಾರ ಅತ್ತ ಗಮನ ನೀಡದೆ ಮೂಲಸಮಸ್ಯೆ ಬಗೆಹರಿಯುವುದಿಲ್ಲ.

ಪಿಎಸ್​ಐ ನೇಮಕಾತಿ ಮಾತ್ರವಲ್ಲ ರಾಜ್ಯ ಸರ್ಕಾರದ ಹಲವು ಇಲಾಖೆಗಳಿಗೆ ನಡೆಯುತ್ತಿರುವ ನೇಮಕಾತಿಗಳು ಭ್ರಷ್ಟಾಚಾರ, ಅವ್ಯವಹಾರ, ಅಕ್ರಮದ ಗಂಭೀರ ಅಪಸವ್ಯಗಳಿಗೆ ಸಾಕ್ಷಿಯಾಗುತ್ತಿರುವುದು ಒಳ್ಳೆಯ ಬೆಳವಣಿಗೆಯೇನಲ್ಲ. ಪದೇಪದೆ ಇಂಥ ಘಟನೆಗಳು ನಡೆಯುತ್ತಿರುವುದರಿಂದ ಪ್ರತಿಭೆಯ ಮಾನದಂಡದ ಮೇಲೆ ಉದ್ಯೋಗ ಪಡೆಯಲು ಯತ್ನಿಸುವ ಅಭ್ಯರ್ಥಿಗಳು ವ್ಯವಸ್ಥೆ ಮೇಲಿನ ವಿಶ್ವಾಸವನ್ನೇ ಕಳೆದುಕೊಳ್ಳುವ ಸನ್ನಿವೇಶ ಸೃಷ್ಟಿಯಾಗುತ್ತದೆ. ಲಂಚ, ಲಾಬಿ ಇಲ್ಲದೆ ಸರ್ಕಾರಿ ಉದ್ಯೋಗ ಪಡೆಯುವ ನಿಟ್ಟಿನಲ್ಲಿ ಅಸಂಖ್ಯ ಅಭ್ಯರ್ಥಿಗಳು ಹಗಲು-ರಾತ್ರಿ ಒಂದು ಮಾಡಿ ಅಧ್ಯಯನ ಮಾಡುತ್ತಾರೆ, ಇತರ ಕೆಲಸಗಳನ್ನು ಬದಿಗೊತ್ತಿ ಸ್ಮರ್ಧಾತ್ಮಕ ಪರೀಕ್ಷೆಗೆ ಸಜ್ಜಾಗುತ್ತಾರೆ. ಆದರೆ ಕೆಲವು ವ್ಯಕ್ತಿಗಳು ಅಥವಾ ಜಾಲಗಳು ನಡೆಸುವ ಕೃತ್ಯಗಳಿಂದ ಇವರೆಲ್ಲ ತಮ್ಮದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸುವಂತಾಗುತ್ತದೆ. ಸರ್ಕಾರ ಹಿಂದಿನ ಪ್ರಕರಣಗಳಿಂದ ಪಾಠ ಕಲಿಯಬೇಕಿತ್ತು. ಮತ್ತೊಂದೆಡೆ, ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆಯ ಅಕ್ರಮಗಳು ಬೆಳಕಿಗೆ ಬರುತ್ತಿರುವಂತೆಯೇ ಅಭ್ಯರ್ಥಿಗಳು ಕಳವಳ ವ್ಯಕ್ತಪಡಿಸಿದ್ದು, ಮರುಪರೀಕ್ಷೆ ನಡೆಸುವಂತೆ ಆಗ್ರಹಿಸಿದ್ದಾರೆ. ನೇಮಕಾತಿ ಪರೀಕ್ಷೆಗೆ ಅಣಿಯಾಗಲೆಂದೇ ಕೆಲವರು ಇದ್ದ ಉದ್ಯೋಗವನ್ನೂ ತ್ಯಜಿಸಿದ್ದರು. ಕೇಂದ್ರ ಲೋಕಸೇವಾ ಆಯೋಗವು (ಯುಪಿಎಸ್​ಸಿ) ಯಾವುದೇ ಅಪಸವ್ಯಗಳಿಲ್ಲದಂತೆ ಪರೀಕ್ಷೆ ಮತ್ತು ನೇಮಕಾತಿಗಳನ್ನು ನಡೆಸಿ, ಸಮರ್ಥ ಮಾದರಿಯನ್ನು ರೂಪಿಸಿರುವಾಗ ಅದನ್ನು ರಾಜ್ಯದಲ್ಲಿ ಅಳವಡಿಸಿಕೊಳ್ಳಲು ಇರುವ ಅಡ್ಡಿಯಾದರೂ ಏನು? ವ್ಯವಸ್ಥೆ ಮೇಲಿನ ನಂಬಿಕೆ ಕುಸಿದರೆ ಅದು ಗಂಭೀರ ಲೋಪ. ಸರ್ಕಾರ ಇನ್ನಾದರೂ ಎಚ್ಚೆತ್ತುಕೊಂಡು ಸೂಕ್ತ ಸುಧಾರಣೆಗಳನ್ನು ಕೈಗೊಳ್ಳಲು, ಯುಪಿಎಸ್​ಸಿ ಮಾದರಿ ಅನುಸರಿಸಲು ಇದು ಸಕಾಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net