ನಿಯಂತ್ರಣ ಅವಶ್ಯ; ಸಾಮಾಜಿಕ ಸ್ವಾಸ್ಥ್ಯದ ರಕ್ಷಣೆಯಾಗಲಿ..

Editorial
Published on

ಭಾರತದಲ್ಲಿ ಕಾರ್ಯನಿರ್ವಹಿಸುವ ಎಲ್ಲ ವಿದೇಶಿ ಮತ್ತು ದೇಶೀ ಸಾಮಾಜಿಕ ಜಾಲತಾಣಗಳಿಗೆ ಇದೇ ಮೇ 26ರಿಂದ ನೂತನ ಮಾಹಿತಿ ತಂತ್ರಜ್ಞಾನ (ಮಾಧ್ಯಮ ಮಾರ್ಗದರ್ಶಿ ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ) ನಿಯಮಗಳು ಜಾರಿಯಾಗಿವೆ. ಈ ಮೂಲಕ ಮಹತ್ವದ ಬದಲಾವಣೆಗೆ ಮತ್ತು ಸಮಾಜದ ಸ್ವಾಸ್ಥ್ಯ ಕಾಪಾಡುವ ಪರಿಣಾಮಕಾರಿ ಪ್ರಯತ್ನಕ್ಕೆ ಚಾಲನೆ ಸಿಕ್ಕಿದೆ. ಯಾವುದೇ ನಿಯಂತ್ರಣವಿಲ್ಲದ ಸಾಮಾಜಿಕ ಮಾಧ್ಯಮಗಳ ಕಂಟೆಂಟ್​ಗೆ ಉತ್ತರದಾಯಿತ್ವ ನಿಗದಿಯಾಗಲಿದೆ. ಆದರೆ, ಕೆಲ ಕಂಪನಿಗಳು ಈ ಬಗ್ಗೆ ಮಿಶ್ರ ಪ್ರತಿಕ್ರಿಯೆ ತೋರಿವೆ. ಇನ್ನು ಕೆಲ ಸಂಸ್ಥೆಗಳು ಸಮಯಾವಕಾಶ ಕೋರಿವೆ. ‘ಭಾರತದಲ್ಲಿ ವಾಕ್ ಸ್ವಾತಂತ್ರ್ಯ ಮತ್ತು ಖಾಸಗಿತನದ ಹಕ್ಕು ಯಾವತ್ತೂ ಸುರಕ್ಷಿತವಾಗಿದೆ ಮತ್ತು ಮುಂದೆಯೂ ಸುರಕ್ಷಿತವಾಗಿರುತ್ತದೆ’ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಹಾಗಾಗಿ, ಹೊಸ ನಿಯಮಗಳ ಪಾಲನೆ ಆಗಬೇಕು ಮತ್ತು ತೀರಾ ಅವಶ್ಯವಿದ್ದಲ್ಲಿ ಸಣ್ಣಪುಟ್ಟ ಮಾರ್ಪಾಡುಗಳನ್ನು ಮಾಡಿ ಜಾಲತಾಣ ಕಂಪನಿಗಳ ಅಸಮಾಧಾನವನ್ನೂ ನೀಗಿಸಬಹುದು.

ಅಷ್ಟಕ್ಕೂ. ಸಾಮಾಜಿಕ ಮಾಧ್ಯಮಗಳ ಮೇಲೆ ನಿಗಾ ವ್ಯವಸ್ಥೆ ರೂಪುಗೊಳ್ಳಬೇಕು ಎಂಬ ಆಗ್ರಹ, ಚರ್ಚೆ ಇಂದು ನಿನ್ನೆಯದೇನಲ್ಲ. ಏಕೆಂದರೆ, ಸಾಮಾಜಿಕ ಜಾಲತಾಣಗಳ ದುರುಪಯೋಗದಿಂದ ಎಲ್ಲೆಡೆ ಅಧ್ವಾನಗಳು ಸೃಷ್ಟಿಯಾಗುತ್ತಿವೆ. ಇಲ್ಲಿ ಮೇಲ್ವಿಚಾರಣೆ ವ್ಯವಸ್ಥೆ ಇಲ್ಲದಿರುವುದರಿಂದ ಅಥವಾ ಹಾಕುವ ಸಂದೇಶಗಳ ಪರಾಮರ್ಶೆ ನಡೆಯುವುದಿಲ್ಲವಾದ್ದರಿಂದ ಕೆಲ ಶಕ್ತಿಗಳಿಗೆ ಅದೇ ಅನುಕೂಲವಾಗಿ ಪರಿಣಮಿಸಿದೆ. ವಾಸ್ತವದಲ್ಲಿ, ಸಾಮಾಜಿಕ ಮಾಧ್ಯಮಗಳು ಅಭಿವ್ಯಕ್ತಿಗೆ ಸಮರ್ಥ ವೇದಿಕೆಗಳು ಎಂಬುದರಲ್ಲಿ ಎರಡು ಮಾತಿಲ್ಲ. ಅದನ್ನು ರಚನಾತ್ಮಕವಾಗಿ ಬಳಸಿಕೊಂಡು, ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ವ್ಯಕ್ತಿ, ಶಕ್ತಿಗಳಿಗೂ ಕೊರತೆಯೇನಿಲ್ಲ. ಆದರೆ, ಇತ್ತೀಚಿನ ದಿನಗಳಲ್ಲಿ ದುರ್ಬಳಕೆ ಪ್ರಮಾಣವೇ ಹೆಚ್ಚುತ್ತಿರುವುದು ಕಳವಳದ ವಿಷಯ. ಅಲ್ಲದೆ, ಒಟಿಟಿ ಮುಖಾಂತರ ಜನರ ಭಾವನೆಗಳನ್ನು ಘಾಸಿಗೊಳಿಸುವಂಥ ವಿಷಯಗಳು ಪ್ರಸಾರವಾಗುತ್ತಿರುವುದು ವಿವಾದಕ್ಕೆ, ವಿರೋಧಕ್ಕೆ ಕಾರಣವಾಗಿದೆ. ವಾಕ್ ಸ್ವಾತಂತ್ರ್ಯದ ಚೌಕಟ್ಟನ್ನು ಮೀರಿ ಇವು ವರ್ತಿಸುತ್ತಿರುವ ಕುರಿತಂತೆ ವ್ಯಾಪಕ ಕಳವಳವೂ ವ್ಯಕ್ತವಾಗಿದೆ.

ಕೇಂದ್ರ ಸರ್ಕಾರ ಈ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಲು ಡಿಜಿಟಲ್ ಮೀಡಿಯಾ ನಿಯಂತ್ರಣಕ್ಕೆ ಸಂಬಂಧಿಸಿ ಹೊಸ ಕರಡು ನಿಯಮಗಳನ್ನು 2021ರ ಫೆಬ್ರವರಿಯಲ್ಲಿ ರೂಪಿಸಿ, ಇದರ ಜಾರಿಗೆ ಮೂರು ತಿಂಗಳ ಕಾಲಾವಕಾಶ ನೀಡಿತ್ತು. ಮೂರು ಸ್ತರದ ಸ್ವಯಂ ನಿಯಂತ್ರಣ ಮುಖ್ಯವಾದ ಕ್ರಮ. ಈ ನಿಯಮಗಳ ಪ್ರಕಾರ, ಒಟಿಟಿ ಸೇರಿದಂತೆ ಸಾಮಾಜಿಕ ಮಾಧ್ಯಮಗಳು ಕಂಟೆಂಟ್ ವಿಚಾರದಲ್ಲಿ ಸ್ವಯಂ ನಿರ್ಬಂಧ ಹೇರಿಕೊಳ್ಳಬೇಕಿದೆ. ಇದಲ್ಲದೆ, ಸ್ವಯಂ ನಿಯಂತ್ರಣ ಸಂಸ್ಥೆ/ಮಂಡಳಿ ಸ್ಥಾಪಿಸುವುದು ಅಗತ್ಯವಾಗಿದ್ದು, ಸರ್ಕಾರದಿಂದ ಮೇಲ್ವಿಚಾರಣಾ ವ್ಯವಸ್ಥೆಯೂ ಇರಲಿದೆ. ಒಟಿಟಿ ವೇದಿಕೆಗಳು ರೇಟಿಂಗ್ ನೀಡಬೇಕು. ದೂರು, ಅಹವಾಲುಗಳ ಪೈಕಿ ಕೆಲವನ್ನು ಸ್ವೀಕರಿಸಿದ 24 ಗಂಟೆಯೊಳಗೆ ಪರಿಹರಿಸಬೇಕು. ಇನ್ನು ಕೆಲವನ್ನು 15 ದಿನಗಳ ಒಳಗೆ ಬಗೆಹರಿಸಿ ಹಿಮ್ಮಾಹಿತಿಯನ್ನು ದೂರುದಾರನಿಗೆ ನೀಡಬೇಕು ಎಂಬ ನಿಯಮಗಳು ಸಾಮಾಜಿಕ ಮಾಧ್ಯಮಗಳನ್ನು ಶಿಸ್ತಿನ ಚೌಕಟ್ಟಿನಲ್ಲಿ ತರಲು ಅನುವಾಗಲಿವೆ. ಸ್ವಯಂ ನಿಯಂತ್ರಣಾ ವ್ಯವಸ್ಥೆ ಮತ್ತು ಸರ್ಕಾರದ ಮೇಲ್ವಿಚಾರಣಾ ವ್ಯವಸ್ಥೆ ಇರಲಿರುವುದರಿಂದ ಬಹಳಷ್ಟು ಅಪಸವ್ಯಗಳಿಗೆ ತಡೆ ಹಾಕಲು ಸಾಧ್ಯವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net