

ಕರೊನಾ ಕಾರಣದಿಂದಾಗಿ ಕಳೆದ ಸುಮಾರು ಎರಡು ವರ್ಷಗಳಿಂದ ಅನೇಕ ಸರ್ಕಾರಿ ಯೋಜನೆಗಳಿಗೂ ಗ್ರಹಣ ಹಿಡಿದಿತ್ತು. ಆ ಪ್ರಕಾರ, ಪಡಿತರ ಚೀಟಿ (ಬಿಪಿಎಲ್ ಕಾರ್ಡ್) ವಿತರಣೆಗೂ ಸಮಸ್ಯೆ ಉಂಟಾಗಿತ್ತು. ಹೀಗಾಗಿ ಅರ್ಜಿದಾರರು ಕಾಯುವ ಪರಿಸ್ಥಿತಿಯಿತ್ತು. ಇದೀಗ ಸರ್ಕಾರ ಸಿಹಿಸುದ್ದಿ ನೀಡಿದೆ. ಬಿಪಿಎಲ್ ಕಾರ್ಡಿಗೆ ಅರ್ಜಿ ಸಲ್ಲಿಸಿದವರ ಪೈಕಿ ಮನೆ ಮನೆ ಸಮೀಕ್ಷೆ ಪೂರ್ಣಗೊಂಡ 4.25 ಲಕ್ಷ ಅರ್ಜಿದಾರರ ಜೈವಿಕ ದತ್ತಾಂಶ ಸಂಗ್ರಹಿಸಿ ಒಂದು ತಿಂಗಳೊಳಗೆ ಬಿಪಿಎಲ್ ಪಡಿತರ ಚೀಟಿ ವಿತರಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ್ ಕತ್ತಿ ಸೋಮವಾರ ವಿಧಾನ ಪರಿಷತ್ನಲ್ಲಿ ಪ್ರಕಟಿಸಿದ್ದಾರೆ. ಕಳೆದ ಮೂರು ವರ್ಷ (2022ರ ಫೆಬ್ರವರಿ ಅಂತ್ಯ) ಗಳಲ್ಲಿ ಆದ್ಯತಾ ಪಡಿತರ ಚೀಟಿ ಕೋರಿ ಒಟ್ಟು 15,53,745 ಅರ್ಜಿಗಳು ಸ್ವೀಕೃತವಾಗಿವೆ. ಇದರಲ್ಲಿ 8,03,782 ಅರ್ಹ ಅರ್ಜಿದಾರರಿಗೆ ಕಾರ್ಡ್ ವಿತರಿಸಲಾಗಿದೆ.
ಕರೊನಾ ಕಾರಣಕ್ಕೆ ಮನೆ ಮನೆ ಸಮೀಕ್ಷೆ, ಜೈವಿಕ ತಂತ್ರಾಂಶ ಸಂಗ್ರಹ ಆಗದೆ ಪಡಿತರ ಚೀಟಿ ವಿತರಣೆ ವಿಳಂಬವಾಗಿತ್ತು. ಈಗ 4.25 ಲಕ್ಷ ಬಿಪಿಎಲ್ ಪಡಿತರ ಕಾರ್ಡ್ ವಿತರಣೆಯಾಗಲಿದೆ. ಉಳಿದ ಅರ್ಜಿದಾರರ ಮನೆ ಮನೆ ಸಮೀಕ್ಷೆ, ದತ್ತಾಂಶ ಸಂಗ್ರಹ ಕಾರ್ಯವನ್ನು ಮೂರು ತಿಂಗಳಲ್ಲಿ ಪೂರ್ಣಗೊಳಿಸಿ ಕಾರ್ಡ್ ನೀಡಲಾಗುವುದು ಎಂದು ಸಚಿವರು ಭರವಸೆ ನೀಡಿದ್ದಾರೆ. ಈ ಭರವಸೆಯನ್ನು ಆದ್ಯತೆ ಮೇರೆಗೆ ಈಡೇರಿಸಬೇಕಿದೆ. ಏಕೆಂದರೆ, ಪಡಿತರವನ್ನು ಅವಲಂಬಿಸುವವರಿಗೆ ತೊಂದರೆಯಾಗಬಾರದು. ಈ ಹಿಂದೆ ಅನರ್ಹರಿಗು ಕೂಡ ಕಾರ್ಡ್ ವಿತರಣೆಯಾಗಿ ರಗಳೆಯಾಗಿತ್ತು. ಆದಾಯ ತೆರಿಗೆ ಪಾವತಿದಾರರು, ಸರ್ಕಾರಿ ನೌಕರರು ಸಹ ಬಿಪಿಎಲ್ ಕಾರ್ಡ್ ಹೊಂದಿದ್ದರು. ನಂತರ ಅನೇಕ ಹಂತಗಳಲ್ಲಿ ಸೋಸುವಿಕೆ ನಡೆದು, ಒಟ್ಟು ಸುಮಾರು 13 ಲಕ್ಷ ಬಿಪಿಎಲ್ ಪಡಿತರ ಚೀಟಿಗಳನ್ನು ರದ್ದುಮಾಡಲಾಗಿತ್ತು. ಮತ್ತೆ ಅಂಥ ಅಪಸವ್ಯ ಉಂಟಾಗದಂತೆ ಎಚ್ಚರ ಅಗತ್ಯ. ಇಲ್ಲಿ ಜನರ ಜವಾಬ್ದಾರಿಯೂ ಇರುವುದನ್ನು ಮರೆಯಲಾಗದು. ಕೆಲ ವಸ್ತುಗಳ ಬೆಲೆ ಏರಿಕೆ ಕುರಿತೂ ಸಚಿವ ಉಮೇಶ್ ಕತ್ತಿ ಪ್ರಸ್ತಾಪಿಸಿದ್ದಾರೆ. ಕಚ್ಚಾ ತೈಲ, ಖಾದ್ಯ ತೈಲ ಬೆಲೆ ಅಂತಾರಾಷ್ಟ್ರೀಯ ಮಾರುಕಟ್ಟೆ ಅವಲಂಬಿತ. ಹೀಗಾಗಿ ಮುಕ್ತ ಮಾರುಕಟ್ಟೆಯಲ್ಲಿ ಇವುಗಳ ಬೆಲೆ ನಿಯಂತ್ರಣ ಅಸಾಧ್ಯ. ಆದರೆ ಕೃತಕ ಅಭಾವ ಸೃಷ್ಟಿ, ಅಧಿಕ ಬೆಲೆಗೆ ಮಾರಾಟ ತಡೆಗೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಸಚಿವರು ಹೇಳಿದ್ದಾರೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಏರಿಳಿತಗಳ ಬಗ್ಗೆ ಸ್ಥಳೀಯ ಸರ್ಕಾರಗಳು ಏನೂ ಮಾಡಲಾಗದು ಎಂಬುದು ನಿಜ. ಆದರೆ, ಡೀಸೆಲ್ ಹಾಗೂ ಪೆಟ್ರೋಲ್ ಮೇಲಿನ ಸೆಸ್ ಪರಿಷ್ಕರಣೆ ಮೂಲಕ ರಾಜ್ಯಗಳು ಇಂಧನ ದರವನ್ನು ಸ್ವಲ್ಪ ತಗ್ಗಿಸಲು ಅವಕಾಶವಿದೆ. ಆದರೆ ಆದಾಯಕ್ಕೆ ಹೊಡೆತಬೀಳುತ್ತದೆ ಎಂಬ ಕಾರಣಕ್ಕೆ ಸರ್ಕಾರಗಳು ಈ ಬಗ್ಗೆ ಹೆಚ್ಚು ಮನಸ್ಸು ಮಾಡುವುದಿಲ್ಲ ಎಂಬುದು ಬಹಿರಂಗ ಗುಟ್ಟು. ಆದರೆ ಅನೇಕ ತಿಂಗಳುಗಳಿಂದ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರು ಹೈರಾಣಾಗಿದ್ದಾರೆ. ರಷ್ಯಾ-ಯೂಕ್ರೇನ್ ಯುದ್ಧ ಸಹ ಹಲವು ಸಾಮಗ್ರಿಗಳ ದರ ಹೆಚ್ಚಳಕ್ಕೆ ಕಾರಣವಾಗಿದೆ. ಸರ್ಕಾರದ ಬೊಕ್ಕಸ ಸುಸ್ಥಿತಿಯಲ್ಲಿದ್ದರೆ ಜನರಿಗೆ ಹೆಚ್ಚು ಅನುಕೂಲ ಮಾಡಿಕೊಡಬಹುದು ಎಂಬುದು ಒಪ್ಪತಕ್ಕ ಮಾತು. ಅದೇ ಸಂದರ್ಭದಲ್ಲಿ ಸರ್ಕಾರಗಳು ಸಹ ಜನಸಾಮಾನ್ಯರ ಜೇಬಿನ ಭಾರ ಬಹಳ ಹೆಚ್ಚದಂತೆ ಮುತುವರ್ಜಿ ವಹಿಸಬೇಕಾದುದು ಅಪೇಕ್ಷಣೀಯ.