

ಕರೊನಾ ಲಾಕ್ಡೌನ್ ಕಾರಣಕ್ಕೆ ಬಹುತೇಕ ಎಲ್ಲ ವಲಯಗಳು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವುದು ಗೊತ್ತಿರುವಂಥದೇ. ಕರೊನಾ ಮೊದಲ ಅಲೆಯ ಸಂದರ್ಭದಲ್ಲಿ ಸಹ ಇದೇ ರೀತಿ ಆಗಿತ್ತು. ಆಗಲೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬೇರೆ ಬೇರೆ ರೀತಿಯಲ್ಲಿ ಜನರ ನೆರವಿಗೆ ಬಂದಿದ್ದವು. ಇನ್ನೇನು ಮೊದಲ ಅಲೆಯ ಅಬ್ಬರ ಕಡಿಮೆಯಾಗಿ ಜನಜೀವನ ಸಹಜ ಸ್ಥಿತಿಗೆ ಬಂತು; ಆರ್ಥಿಕ ಚಟುವಟಿಕೆಗಳು ಗರಿಗೆದರಬಹುದು ಎಂಬ ವಾತಾವರಣ ನಿರ್ವಣವಾಗುತ್ತಿದ್ದಾಗಲೇ ಎರಡನೆಯ ಅಲೆ ಆರಂಭವಾಗಿ ಜನಜೀವನವನ್ನು ಕಾಡಿತು. ಈಗ ಈ ಆರ್ಭಟ ಸ್ವಲ್ಪ ಕಡಿಮೆಯಾಗಿದೆಯಾದರೂ, ಡೆಲ್ಟಾ ಪ್ಲಸ್ ಆತಂಕ ಗೋಚರಿಸಿದೆ. ಈ ನಡುವೆಯೇ, ಕೇಂದ್ರ ಸರ್ಕಾರವು ಕರೊನಾ ಎರಡನೆಯ ಅಲೆಯಿಂದ ಬಾಧಿತರಾದವರ ನೆರವಿಗಾಗಿ ವಿಶೇಷ ಪ್ಯಾಕೇಜನ್ನು ಸೋಮವಾರ ಘೋಷಿಸಿದೆ. ಆರೋಗ್ಯ ವಲಯಕ್ಕೆ 50 ಸಾವಿರ ಕೋಟಿ ರೂ, ಇತರ ವಲಯಕ್ಕೆ 60 ಸಾವಿರ ಕೋಟಿ ರೂ. ಮತ್ತು ಮೈಕ್ರೊ ಫೈನಾನ್ಸ್ ಮೂಲಕ 25 ಲಕ್ಷ ಮಂದಿಗೆ ಸಾಲ ಗ್ಯಾರೆಂಟಿ ಯೋಜನೆ, ಆತ್ಮನಿರ್ಭರ ಭಾರತ ರೋಜಗಾರ್ ಯೋಜನೆ ವಿಸ್ತರಣೆ ಮುಂತಾದವು ಈ ಪ್ಯಾಕೇಜಿನಲ್ಲಿ ಸೇರಿವೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಕಟಿಸಿದ್ದಾರೆ.
ಆರ್ಥಿಕ ಸಂಕಷ್ಟದ ಈ ಹೊತ್ತಲ್ಲಿ ಇಂಥದೊಂದು ಸಹಾಯದ ಅಗತ್ಯವಿತ್ತು. ಮತ್ತು ಇದು ಸರ್ಕಾರಗಳ ಕರ್ತವ್ಯ ಕೂಡ. ಕರ್ನಾಟಕದಲ್ಲಿ ಸಹ ಕೆಲ ದಿನಗಳ ಹಿಂದೆ ವಿವಿಧ ಜನವರ್ಗದವರಿಗಾಗಿ ಪ್ಯಾಕೇಜ್ ಘೋಷಿಸಿರುವುದನ್ನು ಇಲ್ಲಿ ಉಲ್ಲೇಖಿಸಬಹುದು. ಅದರಲ್ಲೂ ವಿಶೇಷವಾಗಿ ಕೇಂದ್ರ ಸರ್ಕಾರವು ಪ್ರವಾಸೋದ್ಯಮ ಮತ್ತು ಆರೋಗ್ಯ ರಂಗದ ಬೆಳವಣಿಗೆಯತ್ತ ಚಿತ್ತ ಹರಿಸಿದ್ದು ಸಕಾಲಿಕ ಕ್ರಮ. ಕರೊನಾ ಸಾಂಕ್ರಾಮಿಕ ಎಂದಲ್ಲ, ಮುಂದೆ ಬರಬಹುದಾದ ಸಾಂಕ್ರಾಮಿಕಗಳನ್ನು ಎದುರಿಸುವಲ್ಲಿ ಸಹ ದೇಶದ ಆರೋಗ್ಯ ವ್ಯವಸ್ಥೆ ಬಲಯುತವಾಗಿರಬೇಕಾದುದು ಅಗತ್ಯ. ಕರೊನಾ ಅಬ್ಬರದ ಹೊತ್ತಲ್ಲಿ, ಆಕ್ಸಿಜನ್ ಕೊರತೆ, ಐಸಿಯು ಹಾಸಿಗೆಗಳ ಕೊರತೆ ಮುಂತಾದವು ಬಾಧಿಸಿದ್ದನ್ನು ಮರೆಯುವಂತಿಲ್ಲ. ಅದೇ ರೀತಿ, ಸಣ್ಣ ಕೈಗಾರಿಕೋದ್ಯಮಿಗಳಿಗೆ ನೆರವಾಗಲು ಮುಂದಾಗಿರುವುದು ಮತ್ತೊಂದು ಮಹತ್ವದ ನಿರ್ಣಯ.
ಕರೊನಾ ಲಾಕ್ ಡೌನ್ ಪರಿಣಾಮವಾಗಿ ಬಹುತೇಕ ಎಲ್ಲ ಉದ್ಯಮಗಳೂ ನಷ್ಟ ಅನುಭವಿಸುತ್ತಿವೆ. ಇದಲ್ಲದೆ, ಕಚ್ಚಾವಸ್ತುಗಳ ಲಭ್ಯತೆ ಬೇರೆ ಕಷ್ಟವಾಗಿದೆ. ಕೈಗಾರಿಕಾ ರಂಗ ನಷ್ಟದಲ್ಲಿದ್ದರೆ ಯಾವುದೇ ದೇಶದ ಆರ್ಥಿಕತೆ ಚೆನ್ನಾಗಿರುವುದು ಸಾಧ್ಯವಿಲ್ಲ. ಹಾಗೇ, ಉದ್ಯೋಗ ಸೃಷ್ಟಿಯಲ್ಲಿ ಕೂಡ ಕೈಗಾರಿಕೆಗಳ ಪಾತ್ರ ಮಹತ್ವದ್ದು. ಸರ್ಕಾರಗಳು ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡುವುದು ಒಂದು ಬಾಬತ್ತಾದರೆ, ಆ ಯೋಜನೆಗಳ ಫಲ ಅರ್ಹರಿಗೆ ದೊರಕುವಂತೆ ನಿಗಾ ವಹಿಸಬೇಕಾದುದು ಸಹ ಬಹಳ ಮುಖ್ಯ. ಏಕೆಂದರೆ, ಎಷ್ಟೋ ಯೋಜನೆಗಳು ಕಾಗದದ ಮೇಲೆ ಚೆನ್ನಾಗಿ ಕಂಡರೂ, ಅನುಷ್ಠಾನದ ಹಂತದಲ್ಲಿ ವಿಫಲವಾಗುತ್ತವೆ. ಇದರಿಂದ ಯೋಜನೆಯ ಮೂಲೋದ್ದೇಶ ಈಡೇರದು. ಇದೇ ಸಂದರ್ಭದಲ್ಲಿ, ಭಾರತದಲ್ಲಿ ಲಸಿಕಾ ಅಭಿಯಾನಕ್ಕೆ ವೇಗ ದೊರಕಿರುವುದು ಸಹ ಸ್ವಲ್ಪ ಸಮಾಧಾನದ ಸಂಗತಿ. ಕರೊನಾ ನಿಯಂತ್ರಣಕ್ಕೆ ಬಂದಲ್ಲಿ ಉಳಿದ ರಂಗಗಳ ಚೇತರಿಕೆಯತ್ತ ಸರ್ಕಾರಗಳು ಹೆಚ್ಚು ಗಮನನೀಡಬಹುದು.