

ಕೈಗಾರಿಕೆಗಳನ್ನು ಸ್ಥಾಪಿಸಲು ಸರ್ಕಾರದಿಂದ ಜಮೀನು ಪಡೆದುಕೊಂಡವರು ಹತ್ತಾರು ವರ್ಷಗಳಾದರೂ ಕೈಗಾರಿಕೆ ಸ್ಥಾಪನೆ ಮಾಡಿಲ್ಲದಿದ್ದರೆ ಅಥವಾ ದುರ್ಬಳಕೆ ಮಾಡಿಕೊಂಡಿದ್ದರೆ ಆ ಜಮೀನನ್ನು ವಾಪಸ್ ಪಡೆಯಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಳಗಾವಿಯಲ್ಲಿ ನಡೆದಿರುವ ವಿಧಾನಮಂಡಳದ ಅಧಿವೇಶನದಲ್ಲಿ ತಿಳಿಸಿದ್ದಾರೆ.
ನಿಗದಿತ ಉದ್ದೇಶಕ್ಕೆ ಬಳಕೆಯಾಗದ ಜಮೀನು ಗುರುತಿಸಲು ಲ್ಯಾಂಡ್ ಆಡಿಟ್ ಮಾಡಲಾಗುವುದು ಎಂದೂ ಅವರು ಹೇಳಿದ್ದಾರೆ. ಇಂತಹ ಹೇಳಿಕೆಗಳು ಮೇಲ್ನೋಟಕ್ಕೆ ಸೂಕ್ತ ಎಂದು ಕಂಡುಬಂದರೂ ವಾಸ್ತವದಲ್ಲಿ ಕಾರ್ಯರೂಪಕ್ಕೆ ಬರುವುದು ಸಹ ಮುಖ್ಯವಾಗುತ್ತದೆ. ಕೈಗಾರಿಕೆಗಳ ಸ್ಥಾಪನೆಗೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಸ್ವಾಧೀನಪಡಿಸಿಕೊಂಡ ಜಮೀನಿನ ಸಮಗ್ರ ಲೆಕ್ಕಪರಿಶೋಧನೆ ನಡೆಸಲು 3 ತಿಂಗಳ ಹಿಂದೆಯೇ ಆದೇಶಿಸಲಾಗಿದೆ. ಈ ಲ್ಯಾಂಡ್ ಆಡಿಟ್ ಆದ ಬಳಿಕ ಎಲ್ಲ ದಾಖಲೆಗಳು ಮತ್ತು ಮುಂದೇನು ಮಾಡಬೇಕು ಎಂಬ ಯೋಜನೆಯನ್ನು ಸದನದಲ್ಲಿ ಮಂಡಿಸುತ್ತೇನೆ ಎಂದೂ ಮುಖ್ಯಮಂತ್ರಿಗಳು ಹೇಳಿದ್ದಾರೆ. ಆದರೆ ಈ ಹೇಳಿಕೆಯಲ್ಲಿ ಖಚಿತತೆಯ ಕೊರತೆ ಕಾಣಿಸಿದರೂ ಅಚ್ಚರಿಯಿಲ್ಲ.
ಬೆಳಗಾವಿಯಲ್ಲಿ ಕಳೆದ ವರ್ಷ ಜರುಗಿದ ವಿಧಾನ ಮಂಡಳದ ಅಧಿವೇಶನದ ಸಂದರ್ಭದಲ್ಲಿ ಕೂಡ ರಾಜ್ಯ ಸರ್ಕಾರವು ಬಳಕೆಯಾಗದ ಜಮೀನು ವಾಪಸು ಪಡೆಯುವುದಾಗಿ ಹೇಳಿತ್ತು. ಭೂಮಿ ಹಂಚಿಕೆಯಾಗಿ 5ರಿಂದ 20 ವರ್ಷ ಕಳೆದರೂ ಕೈಗಾರಿಕೆ ಪ್ರಾರಂಭ ಮಾಡದ ಭೂಮಿಯನ್ನು ವಾಪಸ್ ಪಡೆಯಲಾಗುವುದು. ಕಾರ್ಖಾನೆ ಪೂರ್ಣವಾಗಿ ಪ್ರಾರಂಭಿಸದಿದ್ದರೆ ಸೇಲ್ ಡೀಡ್ ಮಾಡಿಕೊಡುವುದಿಲ್ಲ. ಕೈಗಾರಿಕೆ ಭೂಮಿಯನ್ನು ರಿಯಲ್ ಎಸ್ಟೇಟ್ಗೆ ಬಳಸಿಕೊಳ್ಳಲು ಅವಕಾಶವಿಲ್ಲ. ಬಳಕೆಯಾಗದ 500ಕ್ಕೂ ಹೆಚ್ಚು ಕೈಗಾರಿಕೆಗಳ ಜಮೀನನ್ನು ವಾಪಸ್ ಪಡೆಯಲಾಗುವುದು. ಈಗಾಗಲೇ ಅಂದಾಜು 500 ಎಕರೆ ವಾಪಸ್ ಪಡೆಯಲು ನೋಟಿಸ್ ನೀಡಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ಬೆಳಗಾವಿ ಅಧಿವೇಶನದಲ್ಲಿ ಹೇಳಿಕೆ ನೀಡಿದ್ದರು.
ಕೈಗಾರಿಕೆಗಳನ್ನು ಸ್ಥಾಪಿಸಲು ಸರ್ಕಾರವು ಕಡಿಮೆ ಬೆಲೆಯಲ್ಲಿ ಜಮೀನನ್ನು ಒದಗಿಸುತ್ತದೆ. ಅಲ್ಲದೆ, ಯಂತ್ರೋಪಕರಣ ಖರೀದಿಗೆ ಸಬ್ಸಿಡಿ, ತೆರಿಗೆ ವಿನಾಯಿತಿ ಮುಂತಾದ ಸೌಲಭ್ಯಗಳನ್ನು ಕೂಡ ಕಲ್ಪಿಸುತ್ತದೆ. ಕೈಗಾರಿಕೆಗಳು ಸೃಷ್ಟಿಯಾಗಿ ಜನರಿಗೆ ಉದ್ಯೋಗ ಲಭಿಸುವಂತಾಗಲಿ ಎಂಬುದು ಇದರ ಹಿಂದಿನ ಉದ್ದೇಶವಾಗಿರುತ್ತದೆ. ಜತೆಗೆ ಸರ್ಕಾರಕ್ಕೂ ತೆರಿಗೆ ರೂಪದಲ್ಲಿ ಆದಾಯ ಬರುತ್ತದೆ. ಕೈಗಾರಿಕೆಗಳನ್ನು ಪ್ರೋತ್ಸಾಹಿಸಲು ಸರ್ಕಾರ ಬಳಸುವ ಹಣ ಸಾರ್ವಜನಿಕರ ತೆರಿಗೆಯಿಂದ ಬಂದಿರುವಂತಹುದು. ಜಮೀನು ಕೂಡ ಸಾಮಾನ್ಯವಾಗಿ ರೈತರಿಂದ ಕಡಿಮೆ ಬೆಲೆಗೆ ಸ್ವಾಧೀನಪಡಿಸಿಕೊಂಡಿದ್ದೇ ಆಗಿರುತ್ತದೆ. ಹೀಗಾಗಿ, ಕೈಗಾರಿಕೆ ಸ್ಥಾಪನೆ ಹೆಸರಿನಲ್ಲಿ ಕಡಿಮೆ ಬೆಲೆಗೆ ಸರ್ಕಾರದಿಂದ ಪಡೆದುಕೊಂಡ ಭೂಮಿಯನ್ನು ಎಷ್ಟೋ ವರ್ಷಗಳ ಕಾಲ ಹಾಗೆಯೇ ಇಟ್ಟುಕೊಂಡು ನಂತರ ಹೆಚ್ಚಿನ ಬೆಲೆಗೆ ಮಾರಿಕೊಂಡು ಲಾಭ ಮಾಡಿಕೊಳ್ಳುವುದು ಇಲ್ಲವೇ ಬೇರೆಯ ಉದ್ದೇಶಗಳಿಗೆ ಬಳಕೆ ಮಾಡಿಕೊಳ್ಳುವುದು ಸಮ್ಮತದ ಸಂಗತಿಯಲ್ಲ. ವರ್ಷದ ಹಿಂದೆ ಸಚಿವ ನಿರಾಣಿ ಹೇಳಿರುವಂತೆ ಈಗಾಗಲೇ ಗುರುತಿಸಿರುವ ಜಮೀನುಗಳನ್ನು ವಾಪಸು ಪಡೆಯುವ ದಿಟ್ಟ ಕ್ರಮವನ್ನು ಸರ್ಕಾರ ತೋರಬೇಕು. ಆಗ ಉಳಿದವರಿಗೂ ಬಿಸಿ ಮುಟ್ಟಿ, ಕೈಗಾರಿಕೆ ಸ್ಥಾಪನೆಗೆ ಅವರು ಮುಂದಾಗುವ ಸಾಧ್ಯತೆ ಇರುತ್ತದೆ. ಇದೊಂದೇ ಅಲ್ಲ, ಯಾವುದೇ ಸರ್ಕಾರಿ ಯೋಜನೆಯಾದರೂ ಅದರ ಸದ್ಬಳಕೆಗೆ ಆಲೋಚಿಸಬೇಕೆ ವಿನಾ ದುರುಪಯೋಗಕ್ಕಲ್ಲ.