

ಪ್ರೌಢಶಿಕ್ಷಣದ ಜವಾಬ್ದಾರಿ ಹೊತ್ತಿರುವ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಹಾಗೂ ಪಿಯು ಶಿಕ್ಷಣದ ಹೊಣೆ ಇರುವ ಕರ್ನಾಟಕ ಪದವಿಪೂರ್ವ ಶಿಕ್ಷಣ ಇಲಾಖೆಯಲ್ಲಿನ ಪರೀಕ್ಷಾ ಶಾಖೆಗಳನ್ನು ವಿಲೀನಗೊಳಿಸಿ ‘ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ’ಯನ್ನು ಅಸ್ತಿತ್ವಕ್ಕೆ ತರಲು ಸರ್ಕಾರ ನಿರ್ಧಾರ ಕೈಗೊಂಡಿದೆ. ಈ ಎರಡೂ ಮಂಡಳಿಗಳನ್ನು ವಿಲೀನಗೊಳಿಸಬೇಕೆಂಬ ಬೇಡಿಕೆಗೆ ಅನುಗುಣವಾಗಿ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ (ತಿದ್ದುಪಡಿ) ವಿಧೇಯಕಕ್ಕೆ ಕಳೆದ ಗುರುವಾರವಷ್ಟೇ ವಿಧಾನಸಭೆ ಅನುಮೋದನೆ ನೀಡಿತ್ತು. ಇದರ ಅನುಷ್ಠಾನದ ಮೊದಲ ಹೆಜ್ಜೆಯಾಗಿ ಈಗ ಪರೀಕ್ಷಾ ಶಾಖೆಗಳನ್ನು ವಿಲೀನಗೊಳಿಸಲಾಗಿದೆ. ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿನ ಅಗತ್ಯ ಕ್ರಮವೂ ಇದಾಗಿದೆ.
ಈ ವಿಲೀನದ ಸಾಧಕ-ಬಾಧಕಗಳ ಪರಿಶೀಲನೆಗಾಗಿ ಸಮಿತಿಯೊಂದನ್ನು ರಚಿಸಿ, ಆ ಸಮಿತಿ ನೀಡುವ ವರದಿ ಆಧರಿಸಿ ಹೊಸ ಮಂಡಳಿಯ ರಚನೆ ಮತ್ತು ಕಾರ್ಯವೈಖರಿ ರೂಪಿಸಲು ಸರ್ಕಾರ ಮುಂದಾಗಿರುವುದು ಸೂಕ್ತವಾಗಿದೆ. 2023-24ನೇ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ಪಿಯು ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ‘ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ’ ಹೆಸರನ್ನೊಳಗೊಂಡ ಅಂಕಪಟ್ಟಿಗಳು ದೊರೆಯುವ ಏಕೀಕೃತ ವ್ಯವಸ್ಥೆ ಅನುಷ್ಠಾನಕ್ಕೆ ಬರಲಿದೆ. ಈ ಹಿಂದೆ ಶಿಕ್ಷಣ ಸಚಿವರಾಗಿದ್ದ ಸುರೇಶಕುಮಾರ ಅವರು 2020ರಲ್ಲಿಯೇ ಎರಡೂ ಮಂಡಳಿಗಳನ್ನು ವಿಲೀನಗೊಳಿಸುವ ಹಾಗೂ ಪರೀಕ್ಷಾ ವಿಭಾಗಗಳನ್ನು ಒಗ್ಗೂಡಿಸುವ ಪ್ರಸ್ತಾವ ಮುಂದಿಟ್ಟಿದ್ದರು. ಕೇಂದ್ರದಲ್ಲಿ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯೇ (ಸಿಬಿಎಸ್ಇ) ಎಸ್ಎಸ್ಎಲ್ಸಿ ಜತೆಗೆ ಪಿಯು ಶಿಕ್ಷಣವನ್ನು ನೋಡಿಕೊಳ್ಳುತ್ತದೆ. ಹಲವು ರಾಜ್ಯಗಳಲ್ಲಿ ಕೂಡ 10ನೇ ತರಗತಿ ನಂತರದ ಶಿಕ್ಷಣವನ್ನು 11 ಮತ್ತು 12ನೇ ತರಗತಿ ಎಂದೇ ಗುರುತಿಸಲಾಗುತ್ತಿದ್ದು, ಇದೇ ವಿಧಾನವನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ನೂತನ ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) ಅನುಸಾರವಾಗಿ ಶಿಕ್ಷಣವನ್ನು ಎಲ್ಕೆಜಿಯಿಂದ 2ನೇ ತರಗತಿ, 3ರಿಂದ 5ನೇ ತರಗತಿ, 6ರಿಂದ 8ನೇ ತರಗತಿ ಹಾಗೂ 9ರಿಂದ 12ನೇ ತರಗತಿ ಎಂದು ನಾಲ್ಕು ವಿಭಾಗಗಳಾಗಿ ವಿಂಗಡಿಸಲಾಗಿದೆ.
ಪದವಿ ಕಾಲೇಜುಗಳ ಶಿಕ್ಷಣದ ಗುಣಮಟ್ಟ ಪರಿಶೀಲಿಸಿ ಗ್ರೇಡಿಂಗ್ ನೀಡಲು ವಿಶ್ವವಿದ್ಯಾನಿಲಯಗಳಲ್ಲಿ ನ್ಯಾಕ್ ವ್ಯವಸ್ಥೆ ಇದ್ದು, ಇದೇ ಮಾದರಿಯಲ್ಲಿ ಉದ್ದೇಶಿತ ಏಕೀಕೃತ ಮಂಡಳಿಯಡಿ ‘ಸ್ಕೂಲ್ ಎಕ್ಸಾಮಿನೇಷನ್ ಆಂಡ್ ಅಸೆಸ್ವೆುಂಟ್’ ಹೆಸರಿನ ಮಂಡಳಿ ರಚಿಸಿ, ಇದರ ಮೂಲಕ ಸರ್ಕಾರಿ ಮತ್ತು ಖಾಸಗಿ ಶಾಲಾ-ಕಾಲೇಜುಗಳಿಗೆ ಗ್ರೇಡಿಂಗ್ ನೀಡಲಾಗುವುದು. ಈ ವ್ಯವಸ್ಥೆಯು ಶಾಲಾಕಾಲೇಜುಗಳ ಗುಣಮಟ್ಟ ಪರಿಶೀಲಿಸಲು ಅನುಕೂಲಕರವಾಗಬಹುದು. ಈ ವ್ಯವಸ್ಥೆಗಳನ್ನು ಅನುಷ್ಠಾನಕ್ಕೆ ತರುವಾಗ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕಾದ ಅಗತ್ಯವಿದೆ. ಇನ್ನೊಂದೆಡೆ, ಸರ್ಕಾರದ ವೆಚ್ಚ ತಗ್ಗಿಸುವ ಹಾಗೂ ಆಡಳಿತಾತ್ಮಕ ಅನುಕೂಲದ ನಿಟ್ಟಿನಲ್ಲಿ ಕೆಲ ಇಲಾಖೆಗಳನ್ನು-ವಿಭಾಗಗಳನ್ನು ವಿಲೀನಗೊಳಿಸುವ ಕುರಿತು ಮಾಜಿ ಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್ ಸಮಿತಿ ಈಗಾಗಲೇ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಈ ಶಿಫಾರಸುಗಳನ್ನು ಪರಿಶೀಲಿಸಲು ಕಂದಾಯ ಸಚಿವ ಆರ್.ಅಶೋಕ್ ನೇತೃತ್ವದಲ್ಲಿ ಸಂಪುಟ ಉಪಸಮಿತಿ ರಚಿಸಲಾಗಿದೆ. ಆ ಸಮಿತಿಯ ವರದಿ ಏನಿರುತ್ತದೆಂಬುದು ಕುತೂಹಲಕರ. ಒಟ್ಟಿನಲ್ಲಿ, ಜನರಿಗೆ ತ್ವರಿತವಾಗಿ, ಪಾರದರ್ಶಕವಾಗಿ ಸೇವೆಗಳು ಸಿಗಬೇಕಾದುದು ಮುಖ್ಯ.