ಸಂಪಾದಕೀಯ | ಶಿಶುಮರಣ ತಪ್ಪಿಸಬೇಕು; ಕರೊನಾ ನೆಪದಲ್ಲಿ ಬೇರೆ ವಿಷಯಗಳ ನಿರ್ಲಕ್ಷ್ಯ ಸಲ್ಲ..

Editorial
Published on

ಅಭಿವೃದ್ಧಿಯ ವಿಷಯದಲ್ಲಿ ತುಂಬ ಮುಂದುವರಿದಿದ್ದೇವೆ ಎಂಬ ಸಾಧನಾಫಲಕವನ್ನು ಆಳುಗರು ಆಗಾಗ ಪ್ರದರ್ಶಿಸುತ್ತಲೇ ಇರುತ್ತಾರೆ. ಆದರೆ, ಮೂಲಭೂತವಾದ ಕ್ಷೇತ್ರಗಳನ್ನು, ಸುಧಾರಣೆಗಳನ್ನು ನಿರ್ಲಕ್ಷಿಸಿಬಿಟ್ಟರೆ ಅದರಿಂದ ಗಂಭೀರ ಸಮಸ್ಯೆಗಳು ಸೃಷ್ಟಿಯಾಗುತ್ತವೆ, ಜನಸಾಮಾನ್ಯರು ಪರದಾಡಬೇಕಾಗುತ್ತದೆ. ಕಳೆದ ಎರಡು ವರ್ಷಗಳಿಂದ ಕರೊನಾ ಸಂಕಷ್ಟದ ಪರಿಣಾಮ ಪ್ರಮುಖ ಇಲಾಖೆಗಳ ಅನುದಾನಕ್ಕೆ ಕತ್ತರಿ ಬಿದ್ದಿದೆ. ಪ್ರಮುಖ ಯೋಜನೆಗಳಿಗೆ ಸಕಾಲಿಕವಾಗಿ ಅನುದಾನ ಬಿಡುಗಡೆಯಾಗುತ್ತಿಲ್ಲ. ಮತ್ತೊಂದೆಡೆ, ಅಧಿಕಾರಶಾಹಿ ಕರೊನಾ ಸಾಂಕ್ರಾಮಿಕವನ್ನೇ ನೆಪವಾಗಿಸಿಕೊಂಡು, ಮತ್ತಷ್ಟು ಜಡತ್ವದಲ್ಲಿ ಮುಳುಗಿದೆ. ಅಪೌಷ್ಟಿಕತೆ ನಿವಾರಣೆ ಮಾಡುವ ಉದ್ದೇಶದಿಂದಲೇ ಕೇಂದ್ರ ಮತ್ತು ರಾಜ್ಯದ ಹಲವು ಯೋಜನೆಗಳಿವೆ. ಇವುಗಳು ಸರಿಯಾಗಿ ಅನುಷ್ಠಾನಕ್ಕೆ ಬಂದಿಲ್ಲ, ನಿಜವಾದ ಫಲಾನುಭವಿಗಳಿಗೆ ತಲುಪುತ್ತಿಲ್ಲ ಎಂಬುದಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹೆಚ್ಚುತ್ತಿರುವ ಶಿಶುಮರಣ ಪ್ರಕರಣಗಳೇ ಸಾಕ್ಷಿಯಾಗಿವೆ.

ಪ್ರಸಕ್ತ ಸಾಲಿನ ಏಪ್ರಿಲ್​ನಿಂದ ನವೆಂಬರ್​ವರೆಗೆ ಬಳ್ಳಾರಿ-ವಿಜಯನಗರ ಅವಳಿ ಜಿಲ್ಲೆ ವ್ಯಾಪ್ತಿಯಲ್ಲಿ 358 ಕಂದಮ್ಮಗಳು ಅಸುನೀಗಿವೆ ಎಂಬುದು ದುಃಖದ ಸಂಗತಿ. ಇದು ಈ ಜಿಲ್ಲೆಗಷ್ಟೇ ಸೀಮಿತವಾದ ಸಮಸ್ಯೆ ಎಂದು ಭಾವಿಸಬೇಕಿಲ್ಲ. ಏಪ್ರಿಲ್​ನಿಂದ ಇಲ್ಲಿಯ ತನಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 187 ಹಾಗೂ ಉಡುಪಿಯಲ್ಲಿ 83 ಶಿಶುಗಳು, ಕೊಪ್ಪಳ ಜಿಲ್ಲೆಯಲ್ಲಿ ಕಳೆದ ಒಂದು ವರ್ಷದಲ್ಲಿ 317 ಶಿಶುಗಳು, ರಾಯಚೂರು ಜಿಲ್ಲೆಯಲ್ಲಿ ಕಳೆದೊಂದು ವರ್ಷದಲ್ಲಿ 256 ಶಿಶುಗಳು, ಚಿತ್ರದುರ್ಗದಲ್ಲಿ ಜನವರಿಯಿಂದ ನವೆಂಬರ್ ಅಂತ್ಯದವರೆಗೆ 162 ನವಜಾತ ಶಿಶುಗಳು ಮರಣಹೊಂದಿವೆ. ಈ ಅಂಕಿಸಂಖ್ಯೆಗಳೇ ಪರಿಸ್ಥಿತಿಯ ಗಂಭೀರತೆಯನ್ನು ಸೂಚಿಸುತ್ತವೆ. ಅಪೌಷ್ಟಿಕತೆ, ಕಡಿಮೆ ತೂಕ, ರಕ್ತಹೀನತೆ, ಅವಧಿಪೂರ್ವ ಹೆರಿಗೆ, ಸೋಂಕು, ಹೆರಿಗೆ ಸಂದರ್ಭದಲ್ಲಿ ತಾಯಂದಿರ ಆರೋಗ್ಯದಲ್ಲಿ ಏರುಪೇರು ಸೇರಿದಂತೆ ಹಲವು ಕಾರಣಗಳಿಂದ ಶಿಶುಮರಣ ಪ್ರಮಾಣ ಹೆಚ್ಚಿದೆ. ಇತ್ತೀಚಿನ ವರ್ಷಗಳಲ್ಲಿ ದೇಶದಲ್ಲಿ ನವಜಾತ ಶಿಶುಗಳು ಮತ್ತು ತಾಯಂದಿರ ಮರಣಪ್ರಮಾಣ ತಗ್ಗಿತ್ತು.

ಆದರೆ, ಈಗ ರಾಜ್ಯದಲ್ಲಿ ಮತ್ತೆ ಹಳೆಯ ಸಮಸ್ಯೆ ಮರುಕಳಿಸುತ್ತಿದ್ದು, ಇದನ್ನು ಸರ್ಕಾರ ಮತ್ತು ಆರೋಗ್ಯ ವ್ಯವಸ್ಥೆ ಗಂಭೀರವಾಗಿ ಪರಿಗಣಿಸಬೇಕಿದೆ. ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಈಗಲೂ ಅಪೌಷ್ಟಿಕತೆ ದೊಡ್ಡ ಸಮಸ್ಯೆಯಾಗಿದೆ ಎಂಬುದು ಕಹಿವಾಸ್ತವ. ಆ ಸ್ಥಿತಿಯಿಂದ ಪಾರಾಗಲು, ಜೀವನ ರೂಪಿಸಿಕೊಳ್ಳಲೆಂದು ಉತ್ತರ ಕರ್ನಾಟಕದ ಜನ ದೊಡ್ಡ ಶಹರಗಳಿಗೆ ಭಾರಿ ಸಂಖ್ಯೆಯಲ್ಲಿ ವಲಸೆ ಬರುತ್ತಾರೆ. ಆದರೂ, ಪರಿಸ್ಥಿತಿ ಮಾತ್ರ ಬದಲಾಗಿಲ್ಲ. ಗರ್ಭೀಣಿಯರಿಗೆ ಉತ್ತಮ ಆರೈಕೆ, ಪೌಷ್ಟಿಕಾಂಶವುಳ್ಳ ಆರೋಗ್ಯಕರ ಆಹಾರ, ನಿಯಮಿತವಾಗಿ ಆರೋಗ್ಯ ತಪಾಸಣೆ ಅತ್ಯಗತ್ಯ. ಬಳ್ಳಾರಿ ಮತ್ತು ವಿಜಯನಗರದ ಪ್ರಕರಣಗಳನ್ನು ನೋಡಿದರೆ ತೀವ್ರ ಬಡತನ, ಅಪೌಷ್ಟಿಕತೆಯೇ ಶಿಶುಗಳ ಮರಣಕ್ಕೆ ಕಾರಣವಾಗುತ್ತಿದೆ ಎಂಬುದು ಸ್ಪಷ್ಟ. ಗ್ರಾಮೀಣ ಭಾಗದಲ್ಲಂತೂ ಜನರಿಗೆ ಸರ್ಕಾರಿ ಯೋಜನೆಗಳ ಸರಿಯಾದ ಮಾಹಿತಿಯೇ ಇಲ್ಲ. ಇದ್ದರೂ, ಯೋಜನೆ ಸರಿಯಾಗಿ ತಲುಪುತ್ತಿಲ್ಲ. ಸರ್ಕಾರ ಇನ್ನಾದರೂ ಎಚ್ಚೆತ್ತುಕೊಳ್ಳಬೇಕು. ಅಪೌಷ್ಟಿಕತೆ ನಿವಾರಣೆ ಸೇರಿ ಅವಶ್ಯ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net