

ಅಂತಾರಾಷ್ಟ್ರೀಯ ಮಾದರಿಯ ನ್ಯಾಯವಿಜ್ಞಾನ ವಿಶ್ವವಿದ್ಯಾಲಯವನ್ನು ಕರ್ನಾಟಕದಲ್ಲಿ ಸ್ಥಾಪಿಸಲು ಕೇಂದ್ರ ಗೃಹ ವ್ಯವಹಾರ ಸಚಿವ ಅಮಿತ್ ಷಾ ಅವರು ತಾತ್ವಿಕವಾಗಿ ಒಪ್ಪಿಗೆ ನೀಡಿದ್ದು, ಇದನ್ನು ಬೆಂಗಳೂರಿನಲ್ಲಿ ಸ್ಥಾಪಿಸಲಾಗುವುದು ಎಂದು ರಾಜ್ಯದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಹೇಳಿರುವುದು ರಾಜ್ಯದಲ್ಲಿ ಅಪರಾಧಗಳನ್ನು ತ್ವರಿತವಾಗಿ ಪತ್ತೆ ಹಚ್ಚುವ ಹಾಗೂ ನಿಯಂತ್ರಿಸುವ ನಿಟ್ಟಿನಲ್ಲಿ ಮಹತ್ವದ ಬೆಳವಣಿಗೆಯಾಗಿದೆ.
ಅಪರಾಧ ಪ್ರಕರಣಗಳ ತನಿಖೆ ಮತ್ತು ವಿಚಾರಣೆ ಸಂದರ್ಭದಲ್ಲಿ ನ್ಯಾಯವಿಜ್ಞಾನ ಅಥವಾ ವಿಧಿವಿಜ್ಞಾನದ ಪಾತ್ರ ನಿರ್ಣಾಯಕವಾಗಿದೆ. ಕ್ರಿಮಿನಲ್ ಪ್ರಕರಣಗಳಲ್ಲಿ ಪತ್ತೇದಾರರು ಮತ್ತು ಕಾನೂನು ಜಾರಿ ಸಂಸ್ಥೆಗಳು ಪುರಾವೆಗಳನ್ನು ಸಂಗ್ರಹಿಸಿದರೂ ನ್ಯಾಯಾಲಯದಲ್ಲಿ ಒಪ್ಪಿಕೊಳ್ಳಬಹುದಾದ ಸತ್ಯಗಳನ್ನು ಸ್ಥಾಪಿಸಲು ಆ ಸಾಕ್ಷ್ಯಗಳ ವಿಶ್ಲೇಷಣೆಯನ್ನು ನ್ಯಾಯ ವಿಜ್ಞಾನದ ಮೂಲಕವೇ ಮಾಡಬೇಕಾಗುತ್ತದೆ. ಅಪರಾಧಿಗಳನ್ನು ಪತ್ತೆ ಮಾಡುವಲ್ಲಿ ನೆರವಾಗುವಂತೆಯೇ ನಿರಪರಾಧಿಗಳನ್ನು ಮುಕ್ತಗೊಳಿಸಲು ಕೂಡ ಈ ವಿಜ್ಞಾನ ಸಹಾಯ ಮಾಡುತ್ತದೆ. ವಿಧಿವಿಜ್ಞಾನ ವಿಜ್ಞಾನಿಗಳು ನೀಡುವ ವರದಿಗಳನ್ನು ನ್ಯಾಯಾಲಯಗಳು ವ್ಯಾಪಕವಾಗಿ ಸ್ವೀಕರಿಸುತ್ತವೆ.
ಏಕೆಂದರೆ, ವೈಜ್ಞಾನಿಕ ವಿಧಾನಗಳನ್ನು ಬಳಸುವ ಮೂಲಕ ಹೆಚ್ಚಿನ ಪಕ್ಷಪಾತಕ್ಕೆ ಅವಕಾಶವಿಲ್ಲದಂತೆ ವರದಿಗಳನ್ನು ತಯಾರಿಸಲಾಗುತ್ತದೆ. ಕ್ಲಿಷ್ಟಕರವಾದ ಅನೇಕ ಪ್ರಕರಣಗಳು ಕೂಡ ಈಗ ವಿಧಿವಿಜ್ಞಾನ ತಂತ್ರಜ್ಞಾನದ ಅಭಿವೃದ್ಧಿಯಿಂದಾಗಿ ಸುಲಭವಾಗಿ ಪರಿಹಾರಗೊಳ್ಳುತ್ತಿವೆ. ಈ ಹಿಂದೆ ರಾಜ್ಯದಲ್ಲಿ ವಿಧಿವಿಜ್ಞಾನ ಪ್ರಯೋಗಾಲಯಗಳ (ಎಫ್ಎಸ್ಎಲ್) ಸಂಖ್ಯೆ ತೀರ ಕಡಿಮೆ ಇತ್ತು. ಈ ವರ್ಷದಲ್ಲಿ ಹುಬ್ಬಳ್ಳಿ ಮತ್ತು ಬಳ್ಳಾರಿಯಲ್ಲಿ ಹೊಸದಾಗಿ ಎಫ್ಎಸ್ಎಲ್ ಸ್ಥಾಪಿಸಲಾಗಿದ್ದು, ಶಿವಮೊಗ್ಗ ಹಾಗೂ ಹಾಸನದಲ್ಲಿ ಕೂಡ ಶೀಘ್ರದಲ್ಲಿಯೇ ಸ್ಥಾಪನೆಗೊಳ್ಳಲಿವೆ. ಮಂಗಳೂರು, ಬೆಳಗಾವಿ, ದಾವಣಗೆರೆ, ಮೈಸೂರು, ಕಲಬುರಗಿ ನಗರಗಳಲ್ಲಿ ಈಗಾಗಲೇ ಎಫ್ಎಸ್ಎಲ್ ಅಸ್ತಿತ್ವದಲ್ಲಿವೆ. ರಾಜ್ಯದಲ್ಲಿ ಎಫ್ಎಸ್ಎಲ್ಗಳ ಸಂಖ್ಯೆಹೆಚ್ಚುತ್ತಿರುವುದು ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚಲು ಹಾಗೂ ನ್ಯಾಯಾಲಯಗಳಲ್ಲಿ ಚಾರ್ಜ್ಶೀಟ್ ಸಲ್ಲಿಸಿ ತ್ವರಿತವಾಗಿ ಇತ್ಯರ್ಥಪಡಿಸಲು ಅನುಕೂಲವಾಗುತ್ತದೆ.
ಕೇಂದ್ರ ಸರ್ಕಾರದ ಕಂಪ್ಯೂಟರ್ ಸುರಕ್ಷತಾ ಸಮಿತಿಯಾದ ‘ಇಂಡಿಯನ್ ಕಂಪ್ಯೂಟರ್ ಎಮರ್ಜನ್ಸಿ ರೆಸ್ಪಾನ್ಸ್ ಟೀಮ್ ಅಂಕಿ-ಅಂಶಗಳ ಪ್ರಕಾರ ದೇಶದಲ್ಲಿ ಸೈಬರ್ ಕ್ರೖೆಂಗಳ ಸಂಖ್ಯೆಯು ಕಳೆದ ಮೂರು ವರ್ಷಗಳಲ್ಲಿ 5 ಪಟ್ಟು ಹೆಚ್ಚಳ ಕಂಡಿದೆ. 2018ರಲ್ಲಿ 2,08,456 ಸೈಬರ್ ಅಪರಾಧಗಳು ವರದಿಯಾಗಿದ್ದರೆ, 2021ರಲ್ಲಿ ಈ ಸಂಖ್ಯೆಯು 14,02,809ಕ್ಕೆ ತಲುಪಿದೆ. ಇನ್ನು ಇಂತಹ ಪ್ರಕರಣಗಳಲ್ಲಿ ಶೇ. 35 ಮಾತ್ರ ಇತ್ಯರ್ಥಗೊಳ್ಳುತ್ತಿವೆ. ಪ್ರಸ್ತುತವಾಗಿ ರಾಜ್ಯದ ಪೊಲೀಸರಿಗೆ ಅಹಮದಾಬಾದ್ನ ವಿಧಿವಿಜ್ಞಾನ ವಿಶ್ವವಿದ್ಯಾಲಯದ ಮೂಲಕ ಪೊಲೀಸರಿಗೆ ತರಬೇತಿ ಕೊಡಿಸಲಾಗುತ್ತಿದೆ. ಬೆಂಗಳೂರಿನಲ್ಲಿಯೇ ವಿಧಿವಿಜ್ಞಾನ ವಿವಿ ಸ್ಥಾಪನೆಯಾದರೆ ಇಂತಹ ತರಬೇತಿಯನ್ನು ರಾಜ್ಯದಲ್ಲಿಯೇ ನೀಡಿ ಸೈಬರ್ ಅಪರಾಧಗಳಿಗೆ ಕಡಿವಾಣ ಹಾಕಲು ಅನುಕೂಲವಾಗುತ್ತದೆ. ಸೈಬರ್ ಅಪರಾಧ ನಿಯಂತ್ರಣಕ್ಕಾಗಿ ಪೊಲೀಸರಿಗೆ ಅಂತರರಾಷ್ಟ್ರೀಯ ಮಟ್ಟದ ತರಬೇತಿ ನೀಡಲಾಗುತಿದ್ದು, ಸೈಬರ್ ಅಪರಾಧ ಪೊಲೀಸ್ ಠಾಣೆಗಳಿಗೆ ಸೈಬರ್ ಮತ್ತು ಡಿಜಿಟಲ್ ವಿಶ್ಲೇಷಕರನ್ನು ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಲಾಗುವುದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ. ಅಪರಾಧ ಎಸಗಲು ವಿನೂತನ ತಂತ್ರ-ಮಾರ್ಗಗಳನ್ನು ಈ ಅಪರಾಧಿಗಳು ಕಂಡುಕೊಳ್ಳುತ್ತಿದ್ದಾರೆ. ಹೀಗಾಗಿ, ಇಂತಹ ಅಪರಾಧಿಗಳನ್ನು ಪತ್ತೆಹಚ್ಚಲು ಸೈಬರ್ ಕ್ಷೇತ್ರದ ನುರಿತ ತಜ್ಞರನ್ನು ಪೂರ್ಣ ಪ್ರಮಾಣದಲ್ಲಿ ಪೊಲೀಸ್ ಇಲಾಖೆಯಲ್ಲಿ ನೇಮಕ ಮಾಡಿಕೊಳ್ಳುವುದು ಹೆಚ್ಚು ಸೂಕ್ತ ಎನಿಸುತ್ತದೆ.