

ಭಯೋತ್ಪಾದನಾ ಚಟುವಟಿಕೆ ನಿಯಂತ್ರಣಕ್ಕೆ ರಾಜ್ಯಗಳ ನಡುವೆ ಸಮನ್ವಯದ ಅಗತ್ಯವಿದ್ದು, ಗಡಿ ದಾಟುವ ಶಂಕಿತ ಉಗ್ರರ ಚಲನವಲಗಳ ಬಗ್ಗೆ ನಿಗಾ ವಹಿಸಲು ಮತ್ತು ಹೆಚ್ಚು ಜಾಗರೂಕರಾಗಿರಲು ವಿಶೇಷವಾಗಿ ದಕ್ಷಿಣದ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಡಿಜಿಪಿಗಳೊಂದಿಗೆ ಪತ್ರ ವ್ಯವಹಾರ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿರುವುದು ರಾಜ್ಯ ಮತ್ತು ದೇಶಗಳ ಸೀಮೆಯನ್ನು ಮೀರಿ ವ್ಯಾಪಿಸಿರುವ ಭಯೋತ್ಪಾದಕ ಚಟುವಟಿಕೆಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಅಗತ್ಯವಿರುವ ಕ್ರಮವೇ ಆಗಿದೆ.
ಈಚೆಗೆ ಮಂಗಳೂರಿನಲ್ಲಿ ಸಂಭವಿಸಿದ ಕುಕ್ಕರ್ ಬಾಂಬ್ ಸ್ಪೋಟದ ಆರೋಪಿ ಮೊಹಮ್ಮದ್ ಶಾರೀಕ್ ಕರಾವಳಿ, ಕೇರಳ ಭಾಗದವರ ಸಂಪರ್ಕದಿಂದ ಕೃತ್ಯದಲ್ಲಿ ಭಾಗಿಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಕುಕ್ಕರ್ ಬಾಂಬ್ ಸ್ಪೋಟದ ನಂತರ ಪೊಲೀಸರು ಮೈಸೂರು, ಬಳ್ಳಾರಿ, ಕೊಯಮತ್ತೂರು, ಊಟಿ ಸೇರಿದಂತೆ ಏಳು ಕಡೆಗಳಲ್ಲಿ ಆರು ಮಂದಿಯನ್ನು ಬಂಧಿಸಿದ್ದಾರೆ. ಯಾರ್ಯಾರ ಸಂಪರ್ಕದಲ್ಲಿ ಶಾರಿಕ್ ಇದ್ದ ಎಂಬುದರ ಬಗ್ಗೆ ತನಿಖೆಯನ್ನು ಪೊಲೀಸರು ಮುಂದುವರಿಸಿದ್ದಾರೆ. ಈ ಬೆಳವಣಿಗೆಗಳನ್ನು ಗಮನಿಸಿದರೆ ಭಯೋತ್ಪಾದನೆ ಜಾಲವು ದಕ್ಷಿಣ ಭಾರತದ ರಾಜ್ಯಗಳಲ್ಲಿ ವ್ಯವಸ್ಥಿತವಾಗಿ ಹಬ್ಬಿರುವುದು ಗೋಚರಿಸುತ್ತದೆ. ಈ ಉಪಟಳಕ್ಕೆ ಕಡಿವಾಣ ಹಾಕಲು ವಿವಿಧ ರಾಜ್ಯಗಳ ಪೊಲೀಸರು ಮತ್ತು ಗುಪ್ತಚರ ಸಂಸ್ಥೆಗಳ ಸಮನ್ವಯ ಹಾಗೂ ಸಂಘಟಿತ ಕ್ರಮ ಅಗತ್ಯ.
ಮಂಗಳೂರು ಸ್ಪೋಟದ ಹೊಣೆಯನ್ನು ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್ ಎಂಬ ಉಗ್ರ ಸಂಘಟನೆ ಹೊತ್ತುಕೊಂಡಿದೆ. ಕದ್ರಿ ದೇವಸ್ಥಾನ ತನ್ನ ಟಾರ್ಗೆಟ್ ಆಗಿದ್ದು, ನಿಮ್ಮ ಸಂಭ್ರಮ ಕ್ಷಣಿಕವಾಗಿದ್ದು ಸದ್ಯದಲ್ಲೇ ತಕ್ಕ ಪರಿಣಾಮ ಎದುರಿಸಲಿದ್ದೀರಿ ಎಂದು ಪೊಲೀಸರಿಗೆ ಜಾಲತಾಣದಲ್ಲಿ ಈ ಸಂಘಟನೆ ನೀಡಿರುವ ಎಚ್ಚರಿಕೆಯನ್ನು ಹಗುರವಾಗಿ ಪರಿಗಣಿಸಲಾಗದು. ಏಕೆಂದರೆ, ಆಟೋರಿಕ್ಷಾದಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣವು ಭಯೋತ್ಪಾದನೆಯ ಕೃತ್ಯವೇ ಆಗಿದ್ದು, ವ್ಯವಸ್ಥಿತ ಜಾಲ ಹಾಗೂ ತರಬೇತಿ ಇಲ್ಲದೆ ಇಂತಹ ಬಾಂಬ್ ತಯಾರಿಸುವುದು ಸುಲಭವಲ್ಲ. ಭಯೋತ್ಪಾದಕರು ಇನ್ನಷ್ಟು ದಾಳಿಗಳನ್ನು ನಡೆಸುವ ಸಾಧ್ಯತೆ ತಳ್ಳಿಹಾಕಲಾಗದು. ಕೊಯಮತ್ತೂರಿನ ಕೆಲವರೊಂದಿಗೆ ಶಾರೀಕ್ ನಂಟು ಇರುವುದು ಹಾಗೂ ಕರಾವಳಿಯ ಮೂರು ದೇಗುಲಗಳಲ್ಲಿ ಈತ ಸ್ಫೋಟ ನಡೆಸಲು ಸಂಚು ರೂಪಿಸಿದ್ದ ಎಂಬ ಮಾಹಿತಿಯೂ ಬೆಳಕಿಗೆ ಬಂದಿದೆ.
ಇನ್ನು ಶಾರೀಕ್ ಸಹೋದರಿಯ ಖಾತೆಗೆ ಲಕ್ಷಾಂತರ ರೂಪಾಯಿ ಹಣ ಹರಿದುಬಂದಿದ್ದು, ವಿದೇಶದಿಂದಲೇ ದೊಡ್ಡ ಪ್ರಮಾಣದಲ್ಲಿ ಹಣ ರವಾನಿಸಲಾಗುತ್ತಿತ್ತು ಎಂಬ ಅನುಮಾನವೂ ವ್ಯಕ್ತವಾಗಿದೆ. ಗುರು ಯಾಸೀನ್, ಸ್ನೇಹಿತ ಮಾಝ್ ಬಂಧನದ ಸೇಡಿಗೆ ಪ್ರತೀಕಾರ ತೀರಿಸಿಕೊಳ್ಳಲು ಶಾರೀಕ್ ಹೀಗೆ ಮಾಡಿದ್ದ ಎಂಬ ಸಂಗತಿಗಳೂ ಬೆಳಕಿಗೆ ಬರುತ್ತಿವೆ. ವಿವಿಧ ರಾಜ್ಯಗಳು ಮಾತ್ರವಲ್ಲದೆ, ವಿದೇಶಗಳಿಗೂ ಈ ಉಗ್ರರ ನಂಟು ಬೆಸೆದಿರುವ ಸಾಧ್ಯತೆಗಳಿವೆ. ಭಯೋತ್ಪಾದನೆ ಮಟ್ಟ ಹಾಕಲು ಕೇಂದ್ರದಲ್ಲಿ ರಾಷ್ಟ್ರೀಯ ತನಿಖಾ ದಳ ಕಾರ್ಯನಿರ್ವಹಿಸುತ್ತಿದೆ. ಹಲವು ರಾಜ್ಯಗಳಲ್ಲಿ ಭಯೋತ್ಪಾದನೆ ನಿಗ್ರಹ ದಳಗಳನ್ನು ಅಸ್ತಿತ್ವಕ್ಕೆ ತರಲಾಗಿದೆ. ಭಯೋತ್ಪಾದನೆ ನಿಯಂತ್ರಣದಲ್ಲಿ ಈ ಎಲ್ಲ ತನಿಖಾ ಸಂಸ್ಥೆಗಳ ಸಮನ್ವಯ ಹಾಗೂ ಸಂಘಟಿತ ಯತ್ನ ಪ್ರಮುಖ ಪಾತ್ರ ವಹಿಸುತ್ತದೆ.