

ರಾಜ್ಯ ವಿಧಾನಸಭೆ ಚುನಾವಣೆಯು ಮೇ ತಿಂಗಳಲ್ಲಿ ನಡೆಯಬಹುದಾಗಿದೆ. ನಾಲ್ಕೇ ತಿಂಗಳು ಉಳಿದಿರುವುದರಿಂದ ಚುನಾವಣೆ ಕಾವು ಜೋರಾಗತೊಡಗಿದೆ. ಪ್ರಮುಖ ಪಕ್ಷಗಳ ನಾಯಕರು ಮತದಾರರ ಮನವೊಲಿಸಲು ಹರಸಾಹಸಪಡುತ್ತಿದ್ದಾರೆ. ಇಂತಹ ಪ್ರಯತ್ನಗಳಲ್ಲಿ ಪ್ರಮುಖವಾದುದು ಉಚಿತ ಕೊಡುಗೆಗಳ ಭರವಸೆ ಹಾಗೂ ಹಣಕಾಸು ನೆರವಿನ ಆಶ್ವಾಸನೆ. ಆದರೆ, ಈ ಭರವಸೆ ಹಾಗೂ ಆಶ್ವಾಸನೆಗಳನ್ನು ನೀಡಿದವರು ಅಧಿಕಾರಕ್ಕೆ ಬಂದು ಅವುಗಳನ್ನು ಈಡೇರಿಸುವಂತಾದರೆ ತೆರಿಗೆದಾರರ ಮೇಲೆ ಭಾರಿ ಕರ ಭಾರ ಬೀಳುವುದು ಖಚಿತ. ಸರ್ಕಾರದ ಸಾಲದ ಹೊರೆಯೂ ಜಾಸ್ತಿಯಾಗುವುದು ನಿಶ್ಚಿತ.
ಕರ್ನಾಟಕದಲ್ಲಿ ದೀರ್ಘಕಾಲ ಆಡಳಿತ ನಡೆಸಿರುವ ಕಾಂಗ್ರೆಸ್ನ್ನು ಮರಳಿ ಅಧಿಕಾರಕ್ಕೆ ತರಲು ಆ ಪಕ್ಷದ ನಾಯಕರು ಶ್ರಮ ಹಾಕುತ್ತಿದ್ದಾರೆ. ಮತದಾರರನ್ನು ಸೆಳೆಯಲು ಭರ್ಜರಿ ಆಶ್ವಾಸನೆಗಳನ್ನು ನೀಡುತ್ತಿದ್ದಾರೆ. ರಾಜ್ಯದ ಪ್ರತಿಯೊಂದು ಕುಟುಂಬದ ಯಜಮಾನಿಗೆ ಮನೆ ವೆಚ್ಚ ನಿರ್ವಹಣೆಗಾಗಿ ಪ್ರತಿ ತಿಂಗಳು 2 ಸಾವಿರ ರೂಪಾಯಿ ನೀಡುವ ‘ಗೃಹಲಕ್ಷಿ್ಮೕ’ ಯೋಜನೆ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಪ್ರಕಟಿಸಿದೆ. ಒಂದು ವೇಳೆ ಆ ಪಕ್ಷ ಅಧಿಕಾರಕ್ಕೆ ಬಂದು ಯೋಜನೆ ಜಾರಿಗೊಳಿಸಿದರೆ, ಇದಕ್ಕೆ 36,000 ಕೋಟಿ ರೂಪಾಯಿ ಬೇಕಾಗುತ್ತದೆ. ಕಳೆದ ಬಜೆಟ್ನ ಒಟ್ಟು ಮೊತ್ತ 2 ಲಕ್ಷ 65 ಸಾವಿರ ಕೋಟಿ ರೂಪಾಯಿ. ಇದನ್ನು ಪರಿಗಣಿಸಿದರೆ, ಬಜೆಟ್ನಲ್ಲಿನ ಶೇ. 7-8ರಷ್ಟು ಹಣವನ್ನು ಗೃಹಲಕ್ಷಿ್ಮೕ ಯೋಜನೆಯೊಂದಕ್ಕೇ ಮೀಸಲಿಡಬೇಕಾಗುತ್ತದೆ. ಇದಲ್ಲದೆ, ಪ್ರತಿ ಮನೆಗೆ 200 ಯುನಿಟ್ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಯೋಜನೆ ಜಾರಿಗೊಳಿಸುವುದಾಗಿಯೂ ಕಾಂಗ್ರೆಸ್ ಘೋಷಿಸಿದೆ. ಆಡಳಿತ ಪಕ್ಷವಾದ ಬಿಜೆಪಿ ಕೂಡ ಹಿಂದೆ ಬಿದ್ದಿಲ್ಲ. ಸ್ತ್ರೀ ಸಾಮರ್ಥ್ಯ ಯೋಜನೆಯನ್ನು ಬರುವ ಬಜೆಟ್ನಲ್ಲಿಯೇ ಘೋಷಿಸಲು ಸಜ್ಜಾಗುತ್ತಿದೆ. ಮಹಿಳೆಯರು ಕುಟುಂಬ ನಿರ್ವಹಣೆ ನಡೆಸಲು 1ರಿಂದ 2 ಸಾವಿರ ರೂ. ನೆರವು ನೀಡುವುದು ಹಾಗೂ ಸ್ತ್ರೀಶಕ್ತಿ ಸಂಘಗಳಿಗೆ 5 ಲಕ್ಷ ರೂ.ವರೆಗೆ ಸಹಾಯ ಒದಗಿಸುವುದು ಇದರಲ್ಲಿದೆ. ಮುಂದಿನ ದಿನಗಳಲ್ಲಿ ಆಶ್ವಾಸನೆಗಳು ಇನ್ನಷ್ಟು ಹೆಚ್ಚುವುದು ನಿರೀಕ್ಷಿತ.
ಕೆಲ ದಿನಗಳ ಹಿಂದೆ ಹಿಮಾಚಲ ಪ್ರದೇಶ ಚುನಾವಣೆ ಸಂದರ್ಭದಲ್ಲಿ, ಹಳೆಯ ಪಿಂಚಣಿ ಯೋಜನೆ ಮರುಜಾರಿಗೊಳಿಸುವ ಭರವಸೆಯನ್ನು ಕಾಂಗ್ರೆಸ್ ನೀಡಿತ್ತು. ಆ ರಾಜ್ಯದಲ್ಲಿ ಸರ್ಕಾರಿ ನೌಕರರ ಸಂಖ್ಯೆ ಸಾಕಷ್ಟು ಇರುವುದರಿಂದ ಈ ಭರವಸೆ ಮಹತ್ವ ಪಡೆದುಕೊಂಡು ಆ ಪಕ್ಷ ಗೆಲುವು ಕೂಡ ಸಾಧಿಸಿತು. ಅಚ್ಚರಿಯೆಂದರೆ, ಕಾಂಗ್ರೆಸ್ ನೇತೃತ್ವದ ಮನಮೋಹನ್ ಸಿಂಗ್ ಸರ್ಕಾರವು ನೂತನ ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ಎಲ್ಲ ರಾಜ್ಯಗಳಲ್ಲಿ ಜಾರಿಗೊಳಿಸಲು ಶ್ರಮಿಸಿತ್ತು. ಜನರನ್ನು ಕೈಚಾಚುವಂತೆ ಮಾಡುವ ಉಚಿತ ಕೊಡುಗೆಗಳ ಬದಲಾಗಿ ಜನರ ಕೈಗಳನ್ನು ಬಲಗೊಳಿಸುವ ಯೋಜನೆಗಳನ್ನು ಜಾರಿಗೊಳಿಸಬೇಕು; ಉದ್ಯೋಗ ಸೃಷ್ಟಿಗೆ ಪೂರಕ ವಾತಾವರಣ ನಿರ್ವಿುಸಿ ತಲಾದಾಯ ಹೆಚ್ಚಿಸುವ ಕ್ರಮ ಕೈಗೊಳ್ಳಬೇಕು ಎಂಬುದು ತಜ್ಞರ ಅನಿಸಿಕೆ. ಪ್ರಧಾನಿ ನರೇಂದ್ರ ಮೋದಿ ಸಹ ಉಚಿತ ಕೊಡುಗೆಗಳ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಭರವಸೆಗಳ ಆರ್ಥಿಕ ಪರಿಣಾಮ, ಜಾರಿಯ ಸಾಧ್ಯಾಸಾಧ್ಯತೆ, ಜನರ ಮೇಲಾಗುವ ಪರಿಣಾಮ ಇತ್ಯಾದಿ ಎಲ್ಲವನ್ನೂ ಅಳೆದುತೂಗುವ ವಿವೇಚನೆಯನ್ನು ಜನಪ್ರತಿನಿಧಿಗಳು ತೋರಬೇಕಿದೆ.