ಸಂಪಾದಕೀಯ | ಜಾಗತಿಕ ಆತಂಕ; ಯೂಕ್ರೇನ್ ಮೇಲೆ ರಷ್ಯಾ ದಾಳಿ

Editorial
Published on

ಯಾವುದು ಆಗಬಾರದೆಂದು ಜಗತ್ತು ಬಯಸುತ್ತಿತ್ತೋ ಅದು ಕೊನೆಗೂ ಆಗಿಯೇಬಿಟ್ಟಿದೆ. ಯೂಕ್ರೇನ್ ಮೇಲೆ ರಷ್ಯಾ ದಾಳಿಮಾಡಿದ್ದು, ಯುದ್ಧ ತುರುಸು ಪಡೆಯುತ್ತಿದೆ. ಇದರೊಂದಿಗೆ, ಇದು ಮೂರನೇ ಮಹಾಯುದ್ಧಕ್ಕೆ ಮುನ್ನುಡಿಯಾಗಬಹುದಾ ಎಂಬ ಆತಂಕವೂ ಗೋಚರಿಸಿದೆ. ಸಮರದ ಪರಿಣಾಮ ಅದಾಗಲೇ ಕಂಡುಬಂದಿದ್ದು, ಕಚ್ಚಾತೈಲ, ಚಿನ್ನ ಇತ್ಯಾದಿ ದರಗಳು ಸರ›ನೆ ಏರಿವೆ. ಭಾರತದ ಮೇಲೂ ಈಗಾಗಲೇ ಪರಿಣಾಮವಾಗಿದೆ. ಒಂದು ಕಾಲದಲ್ಲಿ ರಷ್ಯಾದ ವ್ಯಾಪ್ತಿಯಲ್ಲಿದ್ದ, ಅಲ್ಲಿ ಕಮ್ಯೂನಿಸ್ಟ್ ಕೋಟೆ ಕುಸಿದ ನಂತರ ಸ್ವತಂತ್ರ ದೇಶಗಳಾದವುಗಳ ಪೈಕಿ ಯೂಕ್ರೇನ್ ಸಹ ಒಂದು. ಆ ದೇಶ ಕ್ರಮೇಣವಾಗಿ ಆ ವಲಯದ ಇತರ ಕೆಲ ದೇಶಗಳಂತೆ ಅಮೆರಿಕ ಮತ್ತದರ ಸಹಯೋಗಿಗಳ ಪಶ್ಚಿಮದ ಪ್ರಭಾವಕ್ಕೊಳಗಾದಾಗ, ರಷ್ಯಾಗೆ ಸಹಜವಾಗಿಯೇ ಆತಂಕವಾಯಿತು; ಸುರಕ್ಷತೆ ದೃಷ್ಟಿಯಿಂದ ಇದು ಅದಕ್ಕೆ ಸಮ್ಮತವಾದ ಬೆಳವಣಿಗೆಯಾಗಿರಲಿಲ್ಲ. ಅಧ್ಯಕ್ಷ ವ್ಲಾದಿಮಿರ್ ಪುತಿನ್ ಅವರಂತೂ, ಯೂಕ್ರೇನ್ ರಷ್ಯಾದಿಂದ ಹೊರಹೋದುದನ್ನೇ ಮಾನ್ಯಮಾಡದವರು. ಅಲ್ಲದೆ, ಆ ದೇಶ ಅಮೆರಿಕ ನೇತೃತ್ವದ ನ್ಯಾಟೋ ಕೂಟಕ್ಕೆ ಸೇರಬಾರದೆಂದು ಅವರು ಬಲವಾಗಿ ಆಗ್ರಹಿಸುತ್ತಿದ್ದರು. ಹಾಗೇನಾದರೂ ಆದಲ್ಲಿ ಯೂಕ್ರೇನ್ ಮೇಲೆ ದಾಳಿ ನಡೆಸುವುದಾಗಿ ಎಚ್ಚರಿಸಿದ್ದರು.

ಹೀಗಿದ್ದರೂ ಆ ದೇಶ ನ್ಯಾಟೋಕ್ಕೆ ದಿನೇದಿನೆ ಹತ್ತಿರವಾಗುವುದನ್ನು ಕಂಡು ಪುತಿನ್ ಸಮರ ಆರಂಭಿಸಿಯೇಬಿಟ್ಟಿದ್ದಾರೆ. ಸಮರದ ಮೊದಲನೆಯ ದಿನವೇ ಎರಡೂ ಕಡೆ ಸಾವುನೋವು ಸಂಭವಿಸಿವೆ. ಯೂಕ್ರೇನಿನಲ್ಲಿ ಭಾರತದ ಹಲವರು ನೆಲೆಸಿದ್ದು, ಅವರನ್ನು ಭಾರತಕ್ಕೆ ಕರೆತರಲು ಕೇಂದ್ರ ಸರ್ಕಾರ ವಿಮಾನ ಕಳಿಸಿತ್ತಾದರೂ, ವಾಯುಮಾರ್ಗ ಬಂದ್ ಆಗಿದ್ದರಿಂದಾಗಿ ಅದು ಸಾಧ್ಯವಾಗಲಿಲ್ಲ; ಈಗ ಪರ್ಯಾಯ ಮಾರ್ಗಗಳನ್ನು ಹುಡುಕಲಾಗುತ್ತಿದೆ. ಕರ್ನಾಟಕದ ಕೆಲವರು ವಿದ್ಯಾಭ್ಯಾಸಕ್ಕೆಂದು ಯೂಕ್ರೇನಿನಲ್ಲಿದ್ದ್ದು, ಅವರ ಸುರಕ್ಷತೆ ಬಗ್ಗೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆಯೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಈ ಯುದ್ಧದಿಂದಾಗಿ ಇಡೀ ವಿಶ್ವ ಕಳವಳಕ್ಕೆ ಈಡಾಗಲು ಸಕಾರಣಗಳಿವೆ. ಏಕೆಂದರೆ ಯೂಕ್ರೇನ್ ಪರವಾಗಿ ಅಮೆರಿಕ ನೇತೃತ್ವದ ನ್ಯಾಟೊ ಇದ್ದು, ಆ ದೇಶಗಳು ಯಾವ ಪಾತ್ರ ವಹಿಸುತ್ತವೆಂಬುದು ಈ ಸಮರದ ಒಟ್ಟಾರೆ ದಿಕ್ಕುದೆಸೆಯನ್ನು ನಿರ್ಧರಿಸುತ್ತದೆ. ಸೇನಾಬಲದ ನೆಲೆಯಲ್ಲಿ ನೋಡಿದರೆ ರಷ್ಯಾದೆದುರು ಯೂಕ್ರೇನ್ ಯಾವ ಲೆಕ್ಕಕ್ಕೂ ಇಲ್ಲ. ಆದರೆ ನ್ಯಾಟೊ ಬೆನ್ನಿಗೆ ಇರುವುದರಿಂದ ಆದು ಧೈರ್ಯದ ಮಾತಾಡುತ್ತಿದೆ. ಈಗ ಜಗತ್ತಿನ ಯಾವ ಭಾಗದಲ್ಲಿ ಯುದ್ಧವಾದರೂ ಅದು ಆ ಎರಡು ಪಕ್ಷಕ್ಕೆ ಮಾತ್ರ ಸಂಬಂಧಿಸಿದ್ದಾಗಿರುವುದಿಲ್ಲ. ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಹಲವು ದೇಶಗಳು ಭಾಗವಹಿಸುತ್ತವೆ. ಹೀಗಾಗಿ ಸಮರ ತುರುಸು ಭೌಗೋಳಿಕವಾಗಿ ಅಲ್ಲಿಗೆ ಮಾತ್ರ ಸೀಮಿತವಾಗುತ್ತದೆಂದು ಹೇಳಲಾಗದು. ಅಲ್ಲದೆ, ಬಹುತೇಕ ಎಲ್ಲ ದೇಶಗಳ ನಡುವೆ ವ್ಯಾಪಾರವಹಿವಾಟು ಇರುವುದರಿಂದ ಅದರ ಪರಿಣಾಮ ಸಹ ಜಾಗತಿಕವಾಗಿ ಆಗುತ್ತದೆ. ಈಗ ಆಗಿರುವುದೂ ಅದೇ. ಸಮರ ಶುರುವಾದ ಒಂದೇ ದಿನದಲ್ಲಿ ಷೇರು ಮಾರುಕಟ್ಟೆ ಕುಸಿದರೆ, ಚಿನ್ನದ ದರ ಏರಿದೆ, ಕಚ್ಚಾತೈಲದ ಬೆಲೆಯೂ ಹೆಚ್ಚಿದೆ. ಹೀಗಾಗಿ ಯುದ್ಧ ವಿಪರೀತಕ್ಕೆ ಹೋಗದಂತೆ ನೋಡಿಕೊಳ್ಳುವ ವಿವೇಚನೆಯನ್ನು ನಾಯಕರು ಪ್ರದರ್ಶಿಸಿ, ಪರಸ್ಪರ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬೇಕೆಂಬುದು ವಿಶ್ವದ ಜನರ ನಿರೀಕ್ಷೆ-ಅಪೇಕ್ಷೆ. ಆದರೆ ಸಮರೋನ್ಮಾದಲ್ಲಿರುವವರಿಗೆ ಈ ಅಳಲು ಕಿವಿಗೆ ಬಿದ್ದೀತೆ ಎಂಬುದು ಪ್ರಶ್ನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net